[1] ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು:
[2] “ಇಸ್ರಾಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು.
[3] ಇಸ್ರಾಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು ಅಂದರೆ, ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚಾದ ವಯಸ್ಸುಳ್ಳ ಎಲ್ಲರನ್ನು ಸೈನ್ಯಸೈನ್ಯವಾಗಿ ನೀನು ಮತ್ತು ಆರೋನನು ಪಟ್ಟಿಮಾಡಬೇಕು.
[4] ಪ್ರತಿಯೊಂದು ಗೋತ್ರದ ಒಬ್ಬೊಬ್ಬ ಮುಖ್ಯಸ್ಥನು ನಿಮಗೆ ಸಹಾಯಕನಾಗಿರಲಿ.
[5] “ನಿಮಗೆ ಸಹಾಯ ಮಾಡಬೇಕಾದ ಪುರುಷರ ಹೆಸರುಗಳು: “ರೂಬೇನ್ ಗೋತ್ರದಿಂದ ಶೆದೇಯೂರನ ಮಗ ಎಲೀಚೂರ್,
[6] ಸಿಮೆಯೋನ್ ಗೋತ್ರದಿಂದ ಚುರೀಷದ್ದೈಯನ ಮಗ ಶೆಲುಮೀಯೇಲ್,
[7] ಯೆಹೂದ ಗೋತ್ರದಿಂದ ಅಮ್ಮೀನಾದಾಬನ ಮಗ ನಹಶೋನ್,
[8] ಇಸ್ಸಾಕರ್ ಗೋತ್ರದಿಂದ ಚೂವಾರನ ಮಗ ನೆತನೆಯೇಲ್,
[9] ಜೆಬುಲೂನ್ ಗೋತ್ರದಿಂದ ಹೇಲೋನನ ಮಗ ಎಲೀಯಾಬ್,
[10] ಯೋಸೇಫನ ಗೋತ್ರದಲ್ಲಿ, ಎಫ್ರಾಯೀಮ್‌ನಿಂದ ಅಮ್ಮೀಹೂದನ ಮಗ ಎಲೀಷಾಮಾ, ಮನಸ್ಸೆ ಗೋತ್ರದಿಂದ ಪೆದಾಚೂರನ ಮಗನಾದ ಗಮಲಿಯೇಲ್,
[11] ಬೆನ್ಯಾಮೀನ್ ಗೋತ್ರದಿಂದ ಗಿದ್ಯೋನಿನ ಮಗನಾದ ಅಬೀದಾನ,
[12] ದಾನ್ ಗೋತ್ರದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್,
[13] ಆಶೇರ್ ಗೋತ್ರದಿಂದ ಒಕ್ರಾನನ ಮಗ ಪಗೀಯೇಲ್,
[14] ಗಾದ್ ಗೋತ್ರದಿಂದ ದೆವುಯೇಲನ ಮಗ ಎಲ್ಯಾಸಾಫ್,
[15] ನಫ್ತಾಲಿ ಗೋತ್ರದಿಂದ ಏನಾನನ ಮಗ ಅಹೀರನು.”
[16] ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.
[17] ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆ ಮತ್ತು ಆರೋನನು ತಮ್ಮ ಜೊತೆ ತೆಗೆದುಕೊಂಡರು.
[18] ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಜನರು ತಮ್ಮ ಗೋತ್ರ ಮತ್ತು ಕುಟುಂಬಗಳ ಅನುಸಾರವಾಗಿ ತಮ್ಮ ವಂಶಾವಳಿಯನ್ನು ನೊಂದಾಯಿಸಿದರು. ಹಾಗೂ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಾದ ವಯಸ್ಸಿನವರ ಹೆಸರುಗಳನ್ನು ಒಬ್ಬೊಬ್ಬರಾಗಿ ಪಟ್ಟಿಮಾಡಲಾಯಿತು.
[19] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.
[20] ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[21] ರೂಬೇನನ ಗೋತ್ರದಲ್ಲಿ ಎಣಿಕೆಯಾದವರು 46,500 ಜನರು.
[22] ಸಿಮೆಯೋನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[23] ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದವರು 59,300 ಜನರು.
[24] ಗಾದನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[25] ಗಾದನ ಗೋತ್ರದಲ್ಲಿ ಎಣಿಕೆಯಾದವರು 45,650 ಜನರು.
[26] ಯೆಹೂದ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[27] ಯೆಹೂದ ಗೋತ್ರದಲ್ಲಿ ಎಣಿಕೆಯಾದವರು 74,600 ಜನರು.
[28] ಇಸ್ಸಾಕಾರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[29] ಇಸ್ಸಾಕಾರನ ಗೋತ್ರದಲ್ಲಿ ಎಣಿಕೆಯಾದವರು 54,400 ಜನರು.
[30] ಜೆಬುಲೂನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[31] ಜೆಬುಲೂನ್ ಗೋತ್ರದಲ್ಲಿ ಎಣಿಕೆಯಾದವರು 57,400 ಜನರು.
[32] ಯೋಸೇಫನ ಮಕ್ಕಳಾದ ಎಫ್ರಾಯೀಮನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[33] ಎಫ್ರಾಯೀಮನ ಗೋತ್ರದಲ್ಲಿ ಎಣಿಕೆಯಾದವರು 40,500 ಜನರು.
[34] ಮನಸ್ಸೆಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[35] ಮನಸ್ಸೆಯ ಗೋತ್ರದಲ್ಲಿ ಎಣಿಕೆಯಾದವರು 32,200 ಜನರು.
[36] ಬೆನ್ಯಾಮೀನ್ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[37] ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.
[38] ದಾನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[39] ದಾನನ ಗೋತ್ರದಲ್ಲಿ ಎಣಿಕೆಯಾದವರು 62,700 ಜನರು.
[40] ಆಶೇರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[41] ಆಶೇರನ ಗೋತ್ರದಲ್ಲಿ ಎಣಿಕೆಯಾದವರು 41,500 ಜನರು.
[42] ನಫ್ತಾಲಿಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
[43] ನಫ್ತಾಲಿಯ ಗೋತ್ರದಲ್ಲಿ ಎಣಿಕೆಯಾದವರು 53,400 ಜನರು.
[44] ಮೋಶೆ, ಆರೋನ್ ಮತ್ತು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರು.
[45] ಹೀಗೆ ಇಸ್ರಾಯೇಲರಲ್ಲಿ ಎಣಿಕೆಯಾದವರೆಲ್ಲರೂ ಅವರ ಕುಟುಂಬಗಳ ಪ್ರಕಾರ ಇಪ್ಪತ್ತು ವರ್ಷದವರೂ, ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳವರೂ, ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಶಕ್ತರಾದವರೂ ಆಗಿದ್ದರು.
[46] ಎಣಿಕೆಯಾದವರು ಒಟ್ಟು 6,03,550 ಮಂದಿಯಾಗಿದ್ದರು.
[47] ಲೇವಿಯರ ತಂದೆಗಳ ಗೋತ್ರವನ್ನು ಇತರರೊಂದಿಗೆ ಎಣಿಸಲಿಲ್ಲ.
[48] ಇದಲ್ಲದೆ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ:
[49] “ನೀವು ಲೇವಿಯ ಕುಲವನ್ನು ಎಣಿಸಬಾರದು ಅಥವಾ ಇತರ ಇಸ್ರಾಯೇಲರ ಜನಗಣತಿಯಲ್ಲಿ ಅವರನ್ನು ಸೇರಿಸಬಾರದು.
[50] ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.
[51] ದೇವದರ್ಶನ ಗುಡಾರವು ಹೊರಡುವಾಗ ಲೇವಿಯರು ಅದನ್ನು ತೆಗೆಯಲಿ. ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ. ಬೇರೆ ಯಾವನಾದರೂ ಸಮೀಪಿಸಿದರೆ ಅವನು ಸಾಯಬೇಕು.
[52] ಇಸ್ರಾಯೇಲರು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಧ್ವಜದ ಬಳಿ ಇಳಿದುಕೊಳ್ಳಬೇಕು.
[53] ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”
[54] ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.