Skip to content
Opens in a new window
Listen to this chapter • 4:42

[1] ಯೋಸೇಫನ ಮಗನಾದ ಮನಸ್ಸೆಯ ಕುಟುಂಬಗಳಿಗೆ ಸೇರಿದ ಚಲ್ಪಹಾದ ಎಂಬುವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫೆರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಪುತ್ರಿಯರಿದ್ದರು.

[2] ಇವರು ಸಭೆಯ ಗುಡಾರದ ಬಾಗಿಲಿನ ಹತ್ತಿರದಲ್ಲಿದ್ದ ಮೋಶೆ, ಯಾಜಕನಾದ ಎಲಿಯಾಜರ್, ಪ್ರಧಾನರು ಮತ್ತು ಸಮಸ್ತ ಸಭೆಯವರ ಮುಂದೆ ಬಂದು ನಿಂತು ಅವರಿಗೆ,

[3] “ನಮ್ಮ ತಂದೆಯು ಮರುಭೂಮಿಯಲ್ಲಿ ಸತ್ತನು. ಅವನು ಕೋರಹನ ಗುಂಪಿನಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ಕೂಡಿಕೊಂಡವರ ಗುಂಪಿನೊಳಗಿರದೆ, ತನ್ನ ಪಾಪದಲ್ಲಿಯೇ ಸತ್ತನು. ಅವನಿಗೆ ಪುತ್ರರು ಇರಲಿಲ್ಲ.

[4] ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವುದರಿಂದ, ಅವನ ಹೆಸರನ್ನು ತನ್ನ ಕುಟುಂಬದಿಂದ ಏಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಮಗೆ ಕೊಡು,” ಎಂದರು.

[5] ಮೋಶೆಯು ಅವರ ವ್ಯಾಜ್ಯವನ್ನು ಯೆಹೋವ ದೇವರ ಮುಂದೆ ತಂದನು.

[6] ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,

[7] ಚಲ್ಪಹಾದನ ಪುತ್ರಿಯರು ಹೇಳಿದ್ದು ಸರಿ, ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಿಶ್ಚಯವಾಗಿ ಕೊಡಬೇಕು, ಅವರ ತಂದೆಯ ಸೊತ್ತನ್ನು ಅವರಿಗೆ ಸೇರಿಸಬೇಕು.

[8] “ಇಸ್ರಾಯೇಲರ ಸಂಗಡ ಮಾಡನಾಡಿ ನೀನು ಹೇಳಬೇಕಾದದ್ದೇನೆಂದರೆ: ‘ಒಬ್ಬನು ಮಗನಿಲ್ಲದೆ ಸತ್ತರೆ, ನೀವು ಅವನ ಸೊತ್ತನ್ನು ಅವನ ಮಗಳಿಗೆ ಸೇರಿಸಬೇಕು.

[9] ಅವನಿಗೆ ಸಹೋದರರು ಇಲ್ಲದಿದ್ದರೆ, ನೀವು ಅವನ ಸೊತ್ತನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.

[10] ಆದರೆ ಅವನ ತಂದೆಗೆ ಸಹೋದರರು ಇಲ್ಲದಿದ್ದರೆ,

[11] ಅವನ ಕುಟುಂಬದೊಳಗೆ ಅವನಿಗೆ ಹೆಚ್ಚಾಗಿ ಸಮೀಪವಾದ ಬಂಧುವಿಗೆ ಅವನ ಸೊತ್ತನ್ನು ಕೊಡಬೇಕು. ಅವನೇ ಅದನ್ನು ಪಡೆದುಕೊಳ್ಳಲಿ. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇದು ಇಸ್ರಾಯೇಲರಿಗೆ ನ್ಯಾಯದ ಕಟ್ಟಳೆಯಾಗಿರಬೇಕು,’ ” ಎಂದು ಹೇಳಿದರು.

[12] ಆಗ ಯೆಹೋವ ದೇವರು ಮೋಶೆಗೆ, “ನೀನು ಈ ಅಬಾರೀಮ್ ಪರ್ವತದ ಮೇಲೆ ಏರಿ, ನಾನು ಇಸ್ರಾಯೇಲರಿಗೆ ಕೊಟ್ಟ ದೇಶವನ್ನು ನೋಡು.

[13] ಅದನ್ನು ನೋಡಿದ ಮೇಲೆ, ನಿನ್ನ ಸಹೋದರನಾದ ಆರೋನನ ಪ್ರಕಾರ ನೀನೂ ಸಹ ನಿನ್ನ ಜನರ ಬಳಿಗೆ ಸೇರುತ್ತೀ.

[14] ಏಕೆಂದರೆ ನೀವು ಚಿನ್ ಎಂಬ ಮರುಭೂಮಿಯಲ್ಲಿ, ಇಸ್ರಾಯೇಲ್ ಜನಸಮೂಹದವರು ನನ್ನೊಡನೆ ವಾಗ್ವಾದ ಮಾಡಿದಾಗ ಅವರ ಮುಂದೆ ನೀರಿನ ಬಳಿಯಲ್ಲಿ ನನ್ನನ್ನು ಗೌರವಿಸದೆ, ನನ್ನ ಆಜ್ಞೆಯನ್ನು ಮೀರಿದಿರಿ. ಆ ನೀರು ಎಂದರೆ ಚಿನ್ ಎಂಬ ಮರುಭೂಮಿಯ ಕಾದೇಶಿನಲ್ಲಿರುವ ಮೆರೀಬಾದ ನೀರು,” ಎಂದರು.

[15] ಮೋಶೆಯು ಯೆಹೋವ ದೇವರ ಸಂಗಡ ಮಾತನಾಡಿ,

[16] “ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವ ದೇವರು ಈ ಜನಸಮೂಹದ ಮೇಲೆ ಒಬ್ಬ ಮನುಷ್ಯನನ್ನು ನೇಮಿಸಿ ಇಡಲಿ.

[17] ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.

[18] ಆಗ ಯೆಹೋವ ದೇವರು ಮೋಶೆಗೆ, “ಪವಿತ್ರಾತ್ಮವುಳ್ಳವನಾಗಿರುವ ನೂನನ ಮಗ ಯೆಹೋಶುವನನ್ನು ತೆಗೆದುಕೊಂಡು, ನಿನ್ನ ಕೈಯನ್ನು ಅವನ ಮೇಲೆ ಇಟ್ಟು,

[19] ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ, ಅವರಿಗೆದುರಾಗಿ ಅವನನ್ನು ನೇಮಿಸು.

[20] ಇಸ್ರಾಯೇಲರ ಸಮಸ್ತ ಸಭೆಯು ಅವನಿಗೆ ವಿಧೇಯರಾಗುವಂತೆ, ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.

[21] ಅವನು ಯಾಜಕನಾದ ಎಲಿಯಾಜರನ ಮುಂದೆ ನಿಲ್ಲಬೇಕು. ಎಲಿಯಾಜರನು ಯೆಹೋವ ದೇವರ ಮುಂದೆ ಊರೀಮ್ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನ ಆಜ್ಞೆಯ ಪ್ರಕಾರವೇ ಅವನು ಮತ್ತು ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲರ ಸಮೂಹವೂ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದರು.

[22] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಮಾಡಿ, ಯೆಹೋಶುವನನ್ನು ತೆಗೆದುಕೊಂಡು, ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ, ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ,

[23] ಅವನ ಮೇಲೆ ತನ್ನ ಕೈಗಳನ್ನು ಇಟ್ಟು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನನ್ನು ನೇಮಿಸಿದನು.

ಅರಣ್ಯಕಾಂಡ — Chapters