Skip to content
Opens in a new window
Listen to this chapter • 7:04

[1] ಮೋಶೆ ಆರೋನರ ನಾಯಕತ್ವದಲ್ಲಿ ಈಜಿಪ್ಟ್ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲರ ಪ್ರಯಾಣದ ಹಂತಗಳ ವಿವರ ಇಲ್ಲಿವೆ.

[2] ಮೋಶೆಯು ಯೆಹೋವ ದೇವರ ಆಜ್ಞೆಯ ಪ್ರಕಾರ ಅವರ ಪ್ರಯಾಣದಲ್ಲಿ ತಂಗಿದ್ದ ಸ್ಥಳಗಳ ವಿವರಗಳನ್ನು ಬರೆದನು.

[3] ಅವರ ಪ್ರಯಾಣಗಳ ವಿವರಗಳು ಯಾವುವೆಂದರೆ: ಅವರು ಮೊದಲನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪಸ್ಕಹಬ್ಬದ ಮರುದಿನ ಇಸ್ರಾಯೇಲರು ಸಮಸ್ತ ಈಜಿಪ್ಟನವರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟು ಹೋದರು.

[4] ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು.

[5] ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.

[6] ಸುಕ್ಕೋತಿನಿಂದ ಹೊರಟು ಮರುಭೂಮಿಯ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.

[7] ಏತಾಮಿನಿಂದ ಹೊರಟು ಬಾಲ್ಜೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು, ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.

[8] ಪೀಹಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಮರುಭೂಮಿಗೆ ದಾಟಿದರು. ಆಗ ಅವರು ಮೂರು ದಿವಸದ ಪ್ರಯಾಣಮಾಡಿ ಏತಾಮೆಂಬ ಮರುಭೂಮಿಯಲ್ಲಿ ನಡೆದು ಮಾರಾದಲ್ಲಿ ಇಳಿದರು.

[9] ಮಾರಾದಿಂದ ಹೊರಟು ಏಲೀಮಿಗೆ ಬಂದರು. ಎಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು.

[10] ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದುಕೊಂಡರು.

[11] ಕೆಂಪು ಸಮುದ್ರದಿಂದ ಹೊರಟು ಸೀನೆಂಬ ಮರುಭೂಮಿಯಲ್ಲಿ ಇಳಿದುಕೊಂಡು,

[12] ಸೀನೆಂಬ ಮರುಭೂಮಿಯಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು.

[13] ದೊಫ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.

[14] ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.

[15] ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.

[16] ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.

[17] ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.

[18] ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.

[19] ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.

[20] ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.

[21] ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.

[22] ರಿಸ್ಸದಿಂದ ಹೊರಟು ಕೆಹೇಲಾತಾನಲ್ಲಿ ಇಳಿದುಕೊಂಡರು.

[23] ಕೆಹೇಲಾತಾನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು.

[24] ಶೆಫೆರ್ ಪರ್ವತದಿಂದ ಹೊರಟು ಹರಾದಾದಲ್ಲಿ ಇಳಿದುಕೊಂಡರು.

[25] ಹರಾದಾದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.

[26] ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.

[27] ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.

[28] ತೆರಹದಿಂದ ಹೊರಟು ಮಿತ್ಕಾದಲ್ಲಿ ಇಳಿದುಕೊಂಡರು.

[29] ಮಿತ್ಕಾದಿಂದ ಹೊರಟು ಹಷ್ಮೋನಾದಲ್ಲಿ ಇಳಿದುಕೊಂಡರು.

[30] ಹಷ್ಮೋನಾದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.

[31] ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.

[32] ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು.

[33] ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.

[34] ಯೊಟ್ಬಾತದಿಂದ ಹೊರಟು ಅಬ್ರೋನಾದಲ್ಲಿ ಇಳಿದುಕೊಂಡರು.

[35] ಅಬ್ರೋನಾದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.

[36] ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.

[37] ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂತ್ಯದಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.

[38] ಆಗ ಯಾಜಕನಾದ ಆರೋನನು ಯೆಹೋವ ದೇವರ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ, ಅಲ್ಲಿ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನಿಧನ ಹೊಂದಿದನು.

[39] ಆರೋನನು ಹೋರ್ ಗುಡ್ಡದಲ್ಲಿ ಮರಣಹೊಂದಿದಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.

[40] ಆಗ ಕಾನಾನ್ ದೇಶದ ನೆಗೆವನಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಇಸ್ರಾಯೇಲರು ಬರುವುದನ್ನು ಕೇಳಿದನು.

[41] ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.

[42] ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.

[43] ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.

[44] ಓಬೋತಿನಿಂದ ಹೊರಟು ಮೋವಾಬಿನ ಮೇರೆಯಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.

[45] ಇಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು.

[46] ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.

[47] ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೆಬೋವಿನ ಪೂರ್ವದಲ್ಲಿರುವ ಅಬಾರೀಮ್ ಬೆಟ್ಟಗಳಲ್ಲಿ ಇಳಿದುಕೊಂಡರು.

[48] ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋವಿಗೆ ಎದುರಾಗಿ ಯೊರ್ದನ್ ನದಿಯ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಇಳಿದುಕೊಂಡರು.

[49] ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ ಯೆಷೀಮೋತಿನಿಂದ ಮೋವಾಬಿನ ಬಯಲುಗಳಲ್ಲಿರುವ ಆಬೇಲ್ ಶಿಟ್ಟೀಮಿನ ಪರ್ಯಂತರದವರೆಗೂ ಇಳಿದುಕೊಂಡರು.

[50] ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,

[51] “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,

[52] ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ, ಅವರ ಚಿತ್ರಗಳನ್ನೂ ಅವರು ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ, ಅವರ ಸಮಸ್ತ ಪವಿತ್ರ ಸ್ಥಳಗಳನ್ನೂ ಹಾಳುಮಾಡಬೇಕು.

[53] ನೀವು ಆ ದೇಶವನ್ನು ತೆಗೆದುಕೊಂಡು ಅದರಲ್ಲಿ ವಾಸಮಾಡಿರಿ. ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.

[54] ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟುಹಾಕಿ, ಸ್ವಾಧೀನಮಾಡಿ ಹಂಚಿಕೊಳ್ಳಬೇಕು. ಹೆಚ್ಚಾದವರಿಗೆ ಸೊತ್ತನ್ನು ಹೆಚ್ಚಿಸಿ, ಕಡಿಮೆಯಾದವರಿಗೆ ಸೊತ್ತನ್ನು ಕಡಿಮೆ ಮಾಡಬೇಕು. ಒಬ್ಬೊಬ್ಬನಿಗೆ ಚೀಟು ಎಲ್ಲಿ ಬೀಳುವುದೋ, ಅದೇ ಅವನಿಗಾಗಬೇಕು. ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.

[55] “ ‘ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿಗಳನ್ನು ಹೊರಡಿಸದಿದ್ದರೆ, ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ, ನಿಮ್ಮ ಪಕ್ಕೆಗಳಲ್ಲಿ ಕಂಟಕಗಳಾಗಿಯೂ ಇರುವರು. ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.

[56] ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.’ ”

ಅರಣ್ಯಕಾಂಡ — Chapters