[1] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[2] “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ, ಅವರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಕಾನಾನ್ ದೇಶದೊಳಗೆ ಬರುವಾಗ, ನಿಮಗೆ ಸೊತ್ತಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು.
[3] “ ‘ನಿಮ್ಮ ದಕ್ಷಿಣ ಕಡೆಯು ಚಿನ್ ಮರುಭೂಮಿಯಿಂದ ಎದೋಮಿಗೆ ಅನುಸಾರವಾಗಿರಬೇಕು. ನಿಮ್ಮ ದಕ್ಷಿಣ ಮೇರೆಯು, ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
[4] ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ, ಚಿನ್‌ಗೆ ಹಾದು, ಕಾದೇಶ್ ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು, ಅಲ್ಲಿಂದ ಹಚರದ್ದಾರಿಗೆ ಹೊರಟು, ಅಚ್ಮೋನಿಗೆ ಹಾದು ಹೋಗಬೇಕು.
[5] ಅಚ್ಮೋನಿನಿಂದ ಈಜಿಪ್ಟಿನ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.
[6] ಪಶ್ಚಿಮದಲ್ಲಿ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು. ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವುದು.
[7] ನಿಮ್ಮ ಉತ್ತರ ಮೇರೆ ಯಾವುದೆಂದರೆ ನೀವು ದೊಡ್ಡ ಸಮುದ್ರದಿಂದ ಹೋರ್ ಪರ್ವತದವರೆಗೂ,
[8] ಸಾಲು ಮಾಡಿಕೊಂಡು ಹೋರ್ ಪರ್ವತದಿಂದ ನೀವು ಲೆಬೊ ಹಮಾತಿನ ಪ್ರದೇಶದವರೆಗೆ ಸಾಲು ಮಾಡಿರಿ. ಮೇರೆಯು ಚೆದಾದಿಗೆ ಹೊರಟು
[9] ಜಿಫ್ರೋನಿಗೆ ಹೋಗಿ, ಹಚರ್ ಏನಾನಿನಲ್ಲಿ ಮುಗಿಯಲಿ. ಇದು ನಿಮ್ಮ ಉತ್ತರ ಮೇರೆ.
[10] ಪೂರ್ವದ ಮೇರೆಗೋಸ್ಕರ ಹಚರ್ ಏನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ.
[11] ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಾಕ್ಕೆ ಇಳಿದು, ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ.
[12] ಅಲ್ಲಿಂದ ಮೇರೆಯು ಯೊರ್ದನ್ ನದಿಗೆ ಅನುಸಾರವಾಗಿ ಇಳಿದು, ಉಪ್ಪಿನ ಸಮುದ್ರದಲ್ಲಿ ಮುಗಿಯುವುದು. “ ‘ಇದು ಅದರ ಸುತ್ತಮುತ್ತಲ ಮೇರೆಗಳ ಪ್ರಕಾರ ನಿಮ್ಮ ದೇಶವಾಗಿರಬೇಕು.’ ”
[13] ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿ, “ನೀವು ಚೀಟುಹಾಕಿ ಸ್ವಾಧೀನಪಡಿಸಿಕೊಳ್ಳಬೇಕಾದ ದೇಶವು ಒಂಬತ್ತುವರೆ ಗೋತ್ರಗಳಿಗೆ ಕೊಡಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ ದೇಶವು ಇದೇ.
[14] ಏಕೆಂದರೆ ರೂಬೇನ್ಯರ ಮಕ್ಕಳ ಗೋತ್ರವೂ, ಗಾದನ ಮಕ್ಕಳ ಗೋತ್ರವೂ, ಮನಸ್ಸೆಯ ಅರ್ಧ ಗೋತ್ರವೂ ತಮ್ಮ ಪಿತೃಗಳ ಮನೆಯ ಪ್ರಕಾರವಾಗಿ ತಮ್ಮ ಸೊತ್ತನ್ನು ಪಡೆದುಕೊಂಡಿದ್ದಾರೆ.
[15] ಎರಡೂವರೆ ಗೋತ್ರಗಳು ತಮ್ಮ ಸೊತ್ತನ್ನು ಯೊರ್ದನಿನ ಈಚೆಯಲ್ಲಿ ಯೆರಿಕೋವಿಗೆ ಸೂರ್ಯನು ಉದಯಿಸುವ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ,” ಎಂದನು.
[16] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[17] “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಇವೇ. ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ
[18] ದೇಶದ ಸೊತ್ತನ್ನು ಹಂಚುವುದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತೆಗೆದುಕೊಳ್ಳಿರಿ.
[19] “ಈ ಜನರ ಹೆಸರುಗಳು ಇವೇ. “ಯೆಹೂದನ ಕುಟುಂಬದಿಂದ ಯೆಫುನ್ನೆಯ ಮಗ ಕಾಲೇಬನೂ,
[20] ಸಿಮೆಯೋನನ ಮಕ್ಕಳ ಗೋತ್ರದಿಂದ ಅಮ್ಮೀಹೂದನ ಮಗ ಶಮುವೇಲನೂ,
[21] ಬೆನ್ಯಾಮೀನನ ಗೋತ್ರದಿಂದ ಕಿಸ್ಲೋನನ ಮಗ ಎಲೀದಾದ್,
[22] ದಾನನ ಮಕ್ಕಳ ಗೋತ್ರದ ಪ್ರಧಾನನು, ಯೊಗ್ಲೀಯ ಮಗ ಬುಕ್ಕೀ,
[23] ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಏಫೋದನ ಮಗ ಹನ್ನೀಯೇಲನೂ,
[24] ಎಫ್ರಾಯೀಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗ ಕೆಮೂಯೇಲನೂ,
[25] ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗ ಎಲೀಚಾಫಾನ್,
[26] ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗ ಪಲ್ಟೀಯೇಲನೂ,
[27] ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗ ಅಹೀಹೂದನೂ,
[28] ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅಮ್ಮೀಹೂದನ ಮಗ ಪೆದಹೇಲನೂ.”
[29] ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಸೊತ್ತನ್ನು ಹಂಚುವುದಕ್ಕೆ ಯೆಹೋವ ದೇವರು ನೇಮಿಸಿದ ಮನುಷ್ಯರು ಇವರೇ.