[1] ನಂತರ ಇಸ್ರಾಯೇಲರು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾಬಿನ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಇಳಿದುಕೊಂಡರು.
[2] ಆದರೆ ಚಿಪ್ಪೋರನ ಮಗ ಬಾಲಾಕನು ಇಸ್ರಾಯೇಲರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ನೋಡಿದನು.
[3] ಇದಲ್ಲದೆ ಮೋವಾಬಿನವರು, ಇಸ್ರಾಯೇಲರು ಬಹಳ ಜನರಾಗಿರುವುದರಿಂದ ಅವರಿಗೆ ಬಹಳವಾಗಿ ಅಂಜಿದರು. ಮೋವಾಬಿನವರು ಇಸ್ರಾಯೇಲರಿಗೆ ದಿಗಿಲುಪಟ್ಟರು.
[4] ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ, ಈಗ ಈ ಸಮೂಹವು ನಮ್ಮ ಸುತ್ತಲಿರುವುದನ್ನೆಲ್ಲಾ ಮೇಯುವುದು,” ಎಂದನು. ಆ ಕಾಲದಲ್ಲಿ ಚಿಪ್ಪೋರನ ಮಗ ಬಾಲಾಕನು ಮೋವಾಬ್ಯರ ಅರಸನಾಗಿದ್ದನು.
[5] ಇವನು ಸ್ವಜನರ ನಾಡಾದ ಯೂಫ್ರೇಟೀಸ್ ನದಿಯ ತೀರದಲ್ಲಿರುವ ಪೆತೋರೂರಿಗೆ ದೂತರನ್ನು ಕಳುಹಿಸಿ, ಬೆಯೋರನ ಮಗ ಬಿಳಾಮನನ್ನೂ ಕರೆಯಿಸಿ, “ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ. ಅದು ದೇಶವನ್ನೆಲ್ಲಾ ಆವರಿಸಿಕೊಂಡು, ನನಗೆದುರಾಗಿ ವಾಸಿಸುತ್ತಿದೆ.
[6] ಅವರು ನನಗಿಂತ ಬಲವುಳ್ಳವರಾಗಿದ್ದರಿಂದ ಈಗ ನೀನು ದಯಮಾಡಿ ಬಂದು, ಈ ಜನರನ್ನು ನನಗಾಗಿ ಶಪಿಸು. ಆಗ ನಾನು ಅವರನ್ನು ಗೆದ್ದು, ದೇಶದೊಳಗಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ಏಕೆಂದರೆ ನೀನು ಯಾವನನ್ನು ಆಶೀರ್ವದಿಸುತ್ತೀಯೋ, ಅವನು ಆಶೀರ್ವಾದ ಹೊಂದಿರುವನು; ನೀನು ಯಾವನನ್ನು ಶಪಿಸುತ್ತೀಯೋ, ಅವನು ಶಾಪಗ್ರಸ್ತನಾಗಿರುವನು; ಎಂದು ನಾನು ಬಲ್ಲೆನು,” ಎಂದು ಹೇಳಿ ಕಳುಹಿಸಿದನು.
[7] ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಗಳನ್ನು ತೆಗೆದುಕೊಂಡು ಹೋದರು. ಅವರು ಬಿಳಾಮನ ಬಳಿಗೆ ಬಂದು, ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು.
[8] ಅವನು ಅವರಿಗೆ, “ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ. ಯೆಹೋವ ದೇವರು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು,” ಎಂದು ಹೇಳಿದನು. ಆದಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳಿದುಕೊಂಡರು.
[9] ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು?” ಎಂದರು.
[10] ಬಿಳಾಮನು ದೇವರಿಗೆ, “ಚಿಪ್ಪೋರನ ಮಗನಾಗಿಯೂ ಮೋವಾಬಿನ ಅರಸನಾಗಿಯೂ ಇರುವ ಬಾಲಾಕನು ನನ್ನ ಬಳಿಗೆ ಹೇಳಿ ಕಳುಹಿಸಿದ್ದೇನೆಂದರೆ:
[11] ‘ಇಗೋ, ಈಜಿಪ್ಟ್ ದೇಶದಿಂದ ಹೊರಟಿರುವ ಒಂದು ಜನಾಂಗವು ದೇಶವನ್ನೆಲ್ಲಾ ಆವರಿಸಿಕೊಂಡಿದೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ಒಂದು ವೇಳೆ ಅವರ ಸಂಗಡ ಯುದ್ಧಮಾಡಿ ಹೊರಗೆ ಹಾಕುವುದಕ್ಕೆ ನನ್ನಿಂದ ಸಾಧ್ಯವಾಗಬಹುದು,’ ಎಂದು ಹೇಳಿ ಕಳುಹಿಸಿದ್ದಾನೆ,” ಎಂದನು.
[12] ಆಗ ದೇವರು ಬಿಳಾಮನಿಗೆ, “ನೀನು ಅವರ ಸಂಗಡ ಹೋಗಬೇಡ, ನೀನು ಆ ಜನರನ್ನು ಶಪಿಸಬೇಡ, ಏಕೆಂದರೆ ಅವರು ನನ್ನಿಂದ ಆಶೀರ್ವಾದ ಹೊಂದಿದವರು,” ಎಂದರು.
[13] ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ, “ನಿಮ್ಮ ದೇಶಕ್ಕೆ ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಲಿಲ್ಲ,” ಎಂದನು.
[14] ಆದಕಾರಣ ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು, “ಬಿಳಾಮನು ನಮ್ಮ ಸಂಗಡ ಬರಲಿಲ್ಲ,” ಎಂದರು.
[15] ಆದರೆ ಬಾಲಾಕನು ತಿರುಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಧಾನರನ್ನು ಕಳುಹಿಸಿದನು.
[16] ಅವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗ ಬಾಲಾಕನು ಹೀಗೆ ಹೇಳುತ್ತಾನೆ: ನೀನು ದಯಮಾಡಿ ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬಾರದು.
[17] ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಹೇಳುವುದನ್ನೆಲ್ಲಾ ನಾನು ಮಾಡುವೆನು. ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು,” ಎಂದನು.
[18] ಬಿಳಾಮನು ಪ್ರತ್ಯುತ್ತರವಾಗಿ ಬಾಲಾಕನ ಸೇವಕರಿಗೆ, “ಬಾಲಾಕನು ನನಗೆ ತನ್ನ ಮನೆ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾಗಿರುವ ಯೆಹೋವ ದೇವರ ಮಾತನ್ನು ಮೀರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು.
[19] ಆದರೆ ಈಗ ಯೆಹೋವ ದೇವರು ನನಗೆ ಮತ್ತೇನು ಹೇಳುವರೆಂದು ನಾನು ತಿಳಿದುಕೊಳ್ಳುವ ಹಾಗೆ, ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ,” ಎಂದನು.
[20] ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ, “ಈ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿದ್ದರೆ, ನೀನು ಎದ್ದು ಅವರ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವ ಮಾತಿನಂತೆಯೇ ನೀನು ಮಾಡಬೇಕು,” ಎಂದರು.
[21] ಬಿಳಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಯನ್ನು ಹತ್ತಿ, ಮೋವಾಬಿನ ಪ್ರಧಾನರ ಸಂಗಡ ಹೋದನು.
[22] ಆದರೆ ಅವನು ಹೋದದ್ದರಿಂದ ದೇವರಿಗೆ ಕೋಪ ಬಂದಿತು. ಯೆಹೋವ ದೇವರ ದೂತನು ಅವನಿಗೆ ಎದುರಾಳಿಯಾಗಿ ಮಾರ್ಗದಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು. ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
[23] ಕತ್ತೆಯು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಅವನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ, ಮಾರ್ಗದಿಂದ ವಾರೆಯಾಗಿ ಹೊಲದೊಳಗೆ ಹೋಯಿತು. ಆಗ ಬಿಳಾಮನು ಕತ್ತೆಯನ್ನು ಮಾರ್ಗದೊಳಗೆ ತಿರುಗಿಸುವುದಕ್ಕೆ ಅದನ್ನು ಹೊಡೆದನು.
[24] ಆದರೆ ಯೆಹೋವ ದೇವರ ದೂತನು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ಹಾದಿಯಲ್ಲಿ ಎರಡೂ ಕಡೆಯಲ್ಲಿ ಗೋಡೆ ಇದ್ದಲ್ಲಿ ನಿಂತನು.
[25] ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡು, ಬಿಳಾಮನ ಕಾಲನ್ನು ಗೋಡೆಗೆ ಒತ್ತಿ ಹಾಕಿತು. ಅವನು ಅದನ್ನು ಮತ್ತೆ ಹೆಚ್ಚಾಗಿ ಹೊಡೆದನು.
[26] ಆಗ ಯೆಹೋವ ದೇವರ ದೂತನು ಮುಂದೆ ಹೋಗಿ ಬಲಕ್ಕೂ ಎಡಕ್ಕೂ ತಿರುಗುವುದಕ್ಕೆ ಮಾರ್ಗವಿಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ನಿಂತನು.
[27] ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು. ಆದಕಾರಣ ಬಿಳಾಮನು ಕೋಪಿಸಿಕೊಂಡು ಕತ್ತೆಯನ್ನು ಬೆತ್ತದಿಂದ ಹೊಡೆದನು.
[28] ಆಗ ಯೆಹೋವ ದೇವರು ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ಈಗ ನನ್ನನ್ನು ಮೂರು ಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು?” ಎಂದು ಕೇಳಿತು.
[29] ಬಿಳಾಮನು ಕತ್ತೆಗೆ, “ನೀನು ನನಗೆ ಹಾಸ್ಯಮಾಡಿದೆಯಲ್ಲಾ? ನನ್ನ ಕೈಯಲ್ಲಿ ಖಡ್ಗ ಇದ್ದಿದ್ದರೆ, ನಾನು ಈಗಲೇ ನಿನ್ನನ್ನು ಕೊಂದು ಹಾಕುತ್ತಿದ್ದೆ,” ಎಂದನು.
[30] ಕತ್ತೆಯು ಬಿಳಾಮನಿಗೆ, “ಈ ದಿವಸದವರೆಗೂ ನೀನು ಯಾವಾಗಲೂ ಸವಾರಿಮಾಡುತ್ತಿದ್ದ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ರೀತಿ ಮಾಡಿದೆನೋ?” ಎಂದು ಪ್ರಶ್ನಿಸಿತು. ಅದಕ್ಕವನು, “ಇಲ್ಲ,” ಎಂದನು.
[31] ಆಗ ಯೆಹೋವ ದೇವರು ಬಿಳಾಮನ ಕಣ್ಣುಗಳನ್ನು ತೆರೆದರು. ಅವನು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಆತನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ ಬೋರಲು ಬಿದ್ದನು.
[32] ಯೆಹೋವ ದೇವರ ದೂತನು ಅವನಿಗೆ, “ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಏಕೆ? ಇಗೋ, ನಿನ್ನ ಮಾರ್ಗವು ನನ್ನ ಮುಂದೆ ವಕ್ರವಾಗಿರುವುದರಿಂದ ನಾನು ನಿನ್ನನ್ನು ತಡೆಯುವುದಕ್ಕೆ ಬಂದಿದ್ದೇನೆ.
[33] ಆ ಕತ್ತೆ ನನ್ನನ್ನು ನೋಡಿ, ನನ್ನ ಮುಂದೆ ಈಗ ಮೂರು ಸಾರಿ ಓರೆಯಾಗಿ ಹೋಯಿತು. ಅದು ನನ್ನ ಮುಂದೆ ಓರೆಯಾಗಿ ಹೋಗದಿದ್ದರೆ, ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದುಹಾಕಿ ಕತ್ತೆಯನ್ನು ಉಳಿಸುತ್ತಿದ್ದೆನು,” ಎಂದನು.
[34] ಆಗ ಬಿಳಾಮನು ಯೆಹೋವ ದೇವರ ದೂತನಿಗೆ, “ನಾನು ಪಾಪಮಾಡಿದ್ದೇನೆ. ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ. ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ, ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ,” ಎಂದನು.
[35] ಆದರೆ ಯೆಹೋವ ದೇವರ ದೂತನು ಬಿಳಾಮನಿಗೆ, “ಈ ಮನುಷ್ಯರ ಸಂಗಡ ಹೋಗು ಆದರೆ ನಾನು ನಿನಗೆ ಹೇಳುವುದನ್ನೇ ಹೇಳಬೇಕೇ ಹೊರತು ಬೇರೆ ಯಾವದನ್ನೂ ಹೇಳಬಾರದು,” ಎಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.
[36] ಬಿಳಾಮನು ಬಂದನೆಂದು ಬಾಲಾಕನು ಕೇಳಿದಾಗ, ಅವನು ಕಡೆಯ ಮೇರೆಯಲ್ಲಿರುವ ಅರ್ನೋನ್ ಹೊಳೆಯ ತೀರದಲ್ಲಿದ್ದ ಮೋವಾಬಿನ ಪಟ್ಟಣಕ್ಕೆ ಬರಮಾಡಿಕೊಳ್ಳಲು ಹೊರಟನು.
[37] ಬಾಲಾಕನು ಬಿಳಾಮನಿಗೆ, “ನಾನು ನಿನಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಲಿಲ್ಲವೋ? ನೀನು ನನ್ನ ಬಳಿಗೆ ಏಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯವುಳ್ಳವನಲ್ಲವೋ?” ಎಂದನು.
[38] ಬಿಳಾಮನು ಬಾಲಾಕನಿಗೆ, “ಇಗೋ, ನಾನು ನಿನ್ನ ಬಳಿಗೆ ಬಂದಿದ್ದೇನೆ. ಆದರೆ ಈಗ ನಿನಗೆ ಇಷ್ಟವಾಗುವಂಥದ್ದನ್ನು ಹೇಳುವುದು ನನಗೆ ಸಾಧ್ಯವಿಲ್ಲ? ದೇವರು ನನ್ನಿಂದ ಆಡಿಸಿದ ಮಾತನ್ನೇ ಹೇಳುವೆನು,” ಎಂದನು.
[39] ಆಗ ಬಿಳಾಮನು ಬಾಲಾಕನ ಸಂಗಡ ಹೋದನು. ಇಬ್ಬರು ಕಿರ್ಯತ್ ಹುಚೋತಿಗೆ ಬಂದರು.
[40] ಬಾಲಾಕನು ಎತ್ತುಗಳನ್ನೂ ಕುರಿಗಳನ್ನೂ ಅರ್ಪಿಸಿದನು. ಅದರಲ್ಲಿ ಸ್ವಲ್ಪವನ್ನು ಬಿಳಾಮನಿಗೂ ಅವನ ಸಂಗಡ ಇದ್ದ ಪ್ರಭುಗಳಿಗೂ ಕಳುಹಿಸಿದನು.
[41] ಮರುದಿವಸದಲ್ಲಿ ಬಾಲಾಕನು ಬಿಳಾಮನನ್ನು ಕರೆದುಕೊಂಡು ಬಾಮೋತ್ ಬಾಳ್ ದೇವತೆಯ ಎತ್ತರವಾದ ಸ್ಥಳಕ್ಕೆ ಹತ್ತಿ, ಅಲ್ಲಿಂದ ಅವನು ಇಸ್ರಾಯೇಲ್ ಜನರ ಒಂದು ಭಾಗವನ್ನು ತೋರಿಸಿದನು.