[1] ಯೆಹೋವ ದೇವರು ಮೋಶೆಗೆ:
[2] “ಆರೋನನ ಸಂಗಡ ಮಾತನಾಡಿ ಅವನಿಗೆ ಹೀಗೆ ಹೇಳಬೇಕು, ‘ನೀನು ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳೂ ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಪ್ರಕಾಶಕೊಡುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.”
[3] ಆರೋನನು ಹಾಗೆಯೇ ಮಾಡಿ, ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಕೊಡುವಂತೆ ಅದರ ದೀಪಗಳನ್ನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಹಚ್ಚಿದನು.
[4] ದೀಪಸ್ತಂಭವೂ ಅದರ ಬುಡಭಾಗವೂ, ಪುಷ್ಪಾಲಂಕಾರಗಳೂ ಬಂಗಾರದ ನಕಾಸಿ ಕೆಲಸದಿಂದ ಹೊಡೆದು ಮಾಡಲಾಗಿತ್ತು. ಯೆಹೋವ ದೇವರು ಮೋಶೆಗೆ ತೋರಿಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿದನು.
[5] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
[6] “ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡು ಅವರನ್ನು ಪ್ರತ್ಯೇಕಿಸಿ ಶುದ್ಧಮಾಡು.
[7] ಅವರನ್ನು ಶುದ್ಧಮಾಡುವುದಕ್ಕೆ ಅವರಿಗೆ ಮಾಡಬೇಕಾದದ್ದೇನೆಂದರೆ ಶುದ್ಧೀಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಅವರು ಸರ್ವಾಂಗ ಕ್ಷೌರ ಮಾಡಿಸಿಕೊಳ್ಳಲಿ. ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧ ಮಾಡಿಕೊಳ್ಳಬೇಕು.
[8] ಅವರು ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು, ಅದರೊಂದಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ದೋಷಪರಿಹಾರಕ ಬಲಿಗಾಗಿ ಮತ್ತೊಂದು ಹೋರಿಯನ್ನೂ ನೀನು ತೆಗೆದುಕೋ.
[9] ಆಗ ನೀನು ಲೇವಿಯರನ್ನು ದೇವದರ್ಶನದ ಗುಡಾರದ ಮುಂದೆ ಕರೆತಂದು, ಇಸ್ರಾಯೇಲರ ಸಮೂಹವನ್ನೆಲ್ಲಾ ಒಟ್ಟುಗೂಡಿಸಬೇಕು.
[10] ನೀನು ಲೇವಿಯರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕರೆತಂದಾಗ, ಇಸ್ರಾಯೇಲರು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
[11] ಲೇವಿಯರು ಇಸ್ರಾಯೇಲರ ಪರವಾಗಿ ಯೆಹೋವ ದೇವರ ಸೇವೆಯನ್ನು ಮಾಡುವುದಕ್ಕೆ ಸಿದ್ಧರಾಗುವಂತೆ ಆರೋನನು ಅವರನ್ನು ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಬೇಕು.
[12] “ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ ಯೆಹೋವ ದೇವರಿಗೆ ಒಂದು ಹೋರಿಯನ್ನು ದೋಷಪರಿಹಾರಕ ಬಲಿಗಾಗಿಯೂ ಮತ್ತೊಂದು ಹೋರಿಯನ್ನು ದಹನಬಲಿಗಾಗಿಯೂ ಸಮರ್ಪಿಸಬೇಕು.
[13] ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಪುತ್ರರ ಮುಂದೆಯೂ ನಿಲ್ಲಿಸಿ, ಅವರನ್ನು ಯೆಹೋವ ದೇವರಿಗೆ ನೈವೇದ್ಯದಂತೆ ಸಮರ್ಪಿಸಬೇಕು.
[14] ಹೀಗೆ ನೀನು ಲೇವಿಯರನ್ನು ಇಸ್ರಾಯೇಲರೊಳಗಿಂದ ಪ್ರತ್ಯೇಕಿಸಬೇಕು, ಆಗ ಲೇವಿಯರು ನನ್ನವರಾಗುವರು.
[15] “ಅದರ ತರುವಾಯ ಲೇವಿಯರು ಸೇವೆ ಮಾಡವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸುವರು. ಆಗ ನೀನು ಅವರನ್ನು ಶುದ್ಧೀಮಾಡಿ, ನೈವೇದ್ಯದಂತೆ ಸಮರ್ಪಿಸಬೇಕು.
[16] ಏಕೆಂದರೆ ಅವರು ಇಸ್ರಾಯೇಲರಲ್ಲಿ ನನಗೆ ಸಂಪೂರ್ಣವಾಗಿ ಸಮರ್ಪಿತರಾದವರು. ಚೊಚ್ಚಲು ಮಕ್ಕಳಿಗೆ ಬದಲಾಗಿ, ಅಂದರೆ ಇಸ್ರಾಯೇಲರ ಜೇಷ್ಠಪುತ್ರರಿಗೆ ಬದಲಾಗಿ ನಾನು ಅವರನ್ನೇ ನನಗೋಸ್ಕರ ತೆಗೆದುಕೊಂಡಿದ್ದೇನೆ.
[17] ಏಕೆಂದರೆ ಇಸ್ರಾಯೇಲರಲ್ಲಿ ಮನುಷ್ಯರಾದರೂ ಪಶುಗಳಾದರೂ ಜೇಷ್ಠರಾದದ್ದೆಲ್ಲಾ ನನ್ನದೇ. ನಾನು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹರಿಸಿದಾಗ ಇಸ್ರಾಯೇಲರಲ್ಲಿ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತ್ಯೇಕಿಸಿಕೊಂಡೆನು.
[18] ಇಸ್ರಾಯೇಲರಲ್ಲಿರುವ ಎಲ್ಲಾ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನು ನಾನು ತೆಗೆದುಕೊಂಡೆನು.
[19] ಅವರು ದೇವದರ್ಶನದ ಗುಡಾರದಲ್ಲಿ ಇಸ್ರಾಯೇಲರ ಸೇವೆಯನ್ನು ಮಾಡುವುದಕ್ಕೂ ಇಸ್ರಾಯೇಲರಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲರು ಸಮೀಪಿಸುವಾಗ ಇಸ್ರಾಯೇಲರೊಳಗೆ ವ್ಯಾಧಿಯು ಇರದಂತೆ ನಾನು ಲೇವಿಯರನ್ನು ಇಸ್ರಾಯೇಲರೊಳಗಿಂದ ಆರೋನನಿಗೂ, ಅವನ ಪುತ್ರರಿಗೂ ದಾನವಾಗಿ ಕೊಟ್ಟಿದ್ದೇನೆ.”
[20] ಆಗ ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆಯೂ ಆರೋನನೂ ಮತ್ತು ಇಸ್ರಾಯೇಲರ ಸಮೂಹದವರೆಲ್ಲರೂ ಮಾಡಿದರು.
[21] ಲೇವಿಯರು ತಮ್ಮನ್ನು ಶುದ್ಧಿಮಾಡಿಕೊಂಡು, ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಯೆಹೋವ ದೇವರ ಮುಂದೆ ನೈವೇದ್ಯದಂತೆ ಅರ್ಪಿಸಿದನು. ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು.
[22] ತರುವಾಯ ಲೇವಿಯರು ದೇವದರ್ಶನದ ಗುಡಾರದಲ್ಲಿ ಆರೋನನ ಮುಂದೆಯೂ, ಅವನ ಪುತ್ರರ ಮುಂದೆಯೂ ಅವರ ಸೇವೆ ಮಾಡುವುದಕ್ಕೆ ಒಳಗೆ ಪ್ರವೇಶಿಸಿದರು. ಯೆಹೋವ ದೇವರು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದರೋ, ಹಾಗೆಯೇ ಮಾಡಿದನು.
[23] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
[24] “ಲೇವಿಯರಿಗೆ ಸಂಬಂಧಪಟ್ಟದ್ದು ಇದಾಗಿದೆ: ಇಪ್ಪತ್ತೈದು ವರ್ಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ದೇವದರ್ಶನದ ಗುಡಾರದ ಸೇವೆಗಾಗಿ ಒಳಗೆ ಸೇರಬೇಕು.
[25] ಆದರೆ ಐವತ್ತು ವರ್ಷದವರಾದ ನಂತರ ಸೇವೆಯನ್ನು ಬಿಟ್ಟು ನಿವೃತ್ತರಾಗಬೇಕು ಮತ್ತು ತದನಂತರ ಕೆಲಸಮಾಡಬಾರದು.
[26] ಆದರೆ ಅವರು ದೇವದರ್ಶನದ ಗುಡಾರದಲ್ಲಿ ಅಪ್ಪಣೆಯನ್ನು ಕೈಗೊಂಡು ತಮ್ಮ ಸಹೋದರರೊಂದಿಗೆ ಕೆಲಸಮಾಡಲಿ, ಆದರೆ ಅವರು ಸೇವೆಯನ್ನು ತಾವಾಗಿ ಮಾಡಬಾರದು. ಈ ಪ್ರಕಾರ ನೀನು ಲೇವಿಯರಿಗೆ ಕರ್ತವ್ಯಗಳನ್ನು ಆಜ್ಞಾಪಿಸಬೇಕು,” ಎಂಬುದು.