[1] ಯೆಹೋವ ದೇವರು ಮೋಶೆಗೆ,
[2] “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ, ‘ನಾನು ನಿಮಗೆ ಕೊಡುವ ನಿಮ್ಮ ನಿವಾಸಗಳ ದೇಶಕ್ಕೆ ಬಂದಾಗ,
[3] ಯೆಹೋವ ದೇವರಿಗೆ ಪಶುಗಳಿಂದಾದರೂ ಕುರಿಗಳಿಂದಾದರೂ ಸುವಾಸನೆಯನ್ನುಂಟುಮಾಡುವ ದಹನಬಲಿಯಾಗಲಿ, ಹರಕೆಯನ್ನು ಈಡೇರಿಸುವ ಬಲಿಯನ್ನಾಗಲಿ, ಉಚಿತವಾದ ಸಮರ್ಪಣೆಯಾಗಲಿ, ನಿಮ್ಮ ಪವಿತ್ರ ಹಬ್ಬಗಳಲ್ಲಿಯಾಗಲಿ ಯೆಹೋವ ದೇವರಿಗೆ ಬೆಂಕಿಯಿಂದ ಅರ್ಪಿಸಲಾಗಲಿ.
[4] ಅದರೊಂದಿಗೆ ಯೆಹೋವ ದೇವರಿಗೆ ತನ್ನ ಬಲಿಯನ್ನು ಅರ್ಪಿಸುವಾಗ ಧಾನ್ಯ ಅರ್ಪಣೆಗಾಗಿ ಸುಮಾರು ಒಂದುವರೆ ಕಿಲೋಗ್ರಾಂ ಗೋಧಿ ಹಿಟ್ಟನ್ನು ಒಂದು ಲೀಟರ್ ಓಲಿವ್ ಎಣ್ಣೆಗೆ ಬೆರೆಸಲಾಗುತ್ತದೆ.
[5] ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡ ಒಂದು ಕುರಿಗೋಸ್ಕರ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
[6] “ ‘ಟಗರನ್ನು ಅರ್ಪಿಸುವಾಗ ಅದರೊಂದಿಗೆ ಧಾನ್ಯ ಅರ್ಪಣೆಗಾಗಿ ಸುಮಾರು ಒಂದೂವರೆ ಲೀಟರ್ ಓಲಿವ್ ಎಣ್ಣೆ ಬೆರೆಸಿದ ಮೂರು ಕಿಲೋಗ್ರಾಂ ನಯವಾದ ಹಿಟ್ಟನ್ನು ನೀನು ಸಿದ್ಧಮಾಡಬೇಕು.
[7] ಪಾನದ ಸಮರ್ಪಣೆಯಾಗಿ ಯೆಹೋವ ದೇವರಿಗೆ ಸುವಾಸನೆಗಾಗಿ ಒಂದು ಲೀಟರ್ ದ್ರಾಕ್ಷಾರಸವನ್ನು ಅರ್ಪಿಸಬೇಕು.
[8] “ ‘ನೀನು ಯೆಹೋವ ದೇವರಿಗೆ ದಹನಬಲಿಗಾಗಿ ಇಲ್ಲವೆ ಪ್ರಮಾಣವನ್ನು ಈಡೇರಿಸುವ ಬಲಿಗಾಗಿ ಇಲ್ಲವೆ ಸಮಾಧಾನದ ಬಲಿಗಳಿಗಾಗಿ ಹೋರಿಯನ್ನು ನೀನು ಸಿದ್ಧಮಾಡುವಾಗ,
[9] ನೀವು ಆ ಹೋರಿಯೊಂದಿಗೆ ಧಾನ್ಯ ಸಮರ್ಪಣೆಯಾಗಿ ಸುಮಾರು ಎರಡು ಲೀಟರ್ ಓಲಿವ್ ಎಣ್ಣೆ ಬೆರೆಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು ಅರ್ಪಿಸಬೇಕು.
[10] ಇದಲ್ಲದೆ, ಪಾನದ್ರವ್ಯಕ್ಕಾಗಿ ಒಂದುವರೆ ಲೀಟರ್ ದ್ರಾಕ್ಷಾರಸವನ್ನು ಸಮರ್ಪಿಸಬೇಕು. ಇದು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಯಾಗುವುದು.
[11] ಹೀಗೆ ಒಂದು ಹೋರಿ, ಟಗರು, ಕುರಿಮರಿ, ಮೇಕೆ, ಇವುಗಳಲ್ಲಿ ಪ್ರತಿಯೊಂದು ಬಲಿಪ್ರಾಣಿಯ ಸಂಗಡ ಈ ಪ್ರಕಾರ ಮಾಡತಕ್ಕದ್ದು.
[12] ನೀವು ಸಿದ್ಧಪಡಿಸಿದ ಬಲಿಗಳ ಲೆಕ್ಕದ ಪ್ರಕಾರ ನೀವು ಒಂದೊಂದನ್ನು ಅದರ ಲೆಕ್ಕದ ಪ್ರಕಾರ ಮಾಡತಕ್ಕದ್ದು.
[13] “ ‘ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಅರ್ಪಿಸುವಾಗ ಸ್ಥಳೀಯ ಮೂಲದ ಇಸ್ರಾಯೇಲರೆಲ್ಲರೂ ಇವುಗಳನ್ನು ಈ ರೀತಿಯಾಗಿಯೇ ಮಾಡಬೇಕು.
[14] ನಿಮ್ಮ ಸಂಗಡ ಪ್ರಯಾಣ ಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ, ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಸಮರ್ಪಿಸಿದಾಗ, ನೀವು ಹೇಗೆ ಮಾಡುತ್ತೀರೋ ಹಾಗೆಯೇ ಅವನು ಮಾಡಲಿ.
[15] ನಿಮಗೂ ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಕಟ್ಟಳೆ ಇರಬೇಕು. ಯೆಹೋವ ದೇವರ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು.
[16] ನಿಮಗೂ, ನಿಮ್ಮ ಕೂಡ ಪ್ರಯಾಣ ಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು,’ ” ಎಂದರು.
[17] ಯೆಹೋವ ದೇವರು ಮೋಶೆಗೆ,
[18] “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ: ‘ನಾನು ನಿಮ್ಮನ್ನು ಕರೆದುಕೊಂಡುಹೋಗುವ ದೇಶಕ್ಕೆ ನೀವು ಸೇರಿದನಂತರ,
[19] ಆ ದೇಶದ ಆಹಾರವನ್ನು ತಿನ್ನುವಾಗ, ನೀವು ಅದರಲ್ಲಿ ಸ್ವಲ್ಪವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು.
[20] ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮ ಫಲವನ್ನು ಕಾಣಿಕೆಯಾಗಿ ಅರ್ಪಿಸುವಂತೆ ಕಣಕದಿಂದ ಮಾಡುವ ನಿಮ್ಮ ಪ್ರಥಮ ಬೀಸಿದ ಹಿಟ್ಟಿನ ರೊಟ್ಟಿಯನ್ನು ಸಮರ್ಪಿಸಬೇಕು.
[21] ನೀವು ಮತ್ತು ನಿಮ್ಮ ಸಂತತಿಯವರು ನಿಮ್ಮ ಕಣದಿಂದ ಮಾಡಿದ ಪ್ರಥಮ ರೊಟ್ಟಿಯನ್ನು ಯೆಹೋವ ದೇವರಿಗೆ ಸಮರ್ಪಿಸಬೇಕು.
[22] “ ‘ನೀವು ತಪ್ಪಿ ಯೆಹೋವ ದೇವರು ಮೋಶೆಗೆ ಹೇಳಿದ ಈ ಸಕಲ ಆಜ್ಞೆಗಳ ಪ್ರಕಾರ ಮಾಡದಿದ್ದರೆ,
[23] ನಿಮಗೆ ಆಜ್ಞೆಗಳನ್ನು ಕೊಟ್ಟ ದಿವಸ ಮೊದಲುಗೊಂಡು, ನಿಮ್ಮ ಸಂತತಿಗಳವರೆಗೂ ಯೆಹೋವ ದೇವರು ಮೋಶೆಯ ಕೈಯಿಂದ ನಿಮಗೆ ಆಜ್ಞಾಪಿಸಿದ ಪ್ರಕಾರ ನೀವು ಮಾಡದೆ ಹೋದರೆ,
[24] ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ, ಸಭೆಯು ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ಒಂದು ಎಳೆಯ ಹೋರಿಯನ್ನು ಕ್ರಮದ ಪ್ರಕಾರ ಅದರ ಧಾನ್ಯ ಸಮರ್ಪಣೆಯನ್ನೂ, ಪಾನದ ಸಮರ್ಪಣೆಯನ್ನೂ, ಪಾಪ ಪರಿಹಾರಕ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.
[25] ಯಾಜಕನು ಇಸ್ರಾಯೇಲರ ಸಮಸ್ತ ಸಭೆಗೋಸ್ಕರ ಅವರಿಗೆ ಕ್ಷಮೆಯಾಗುವ ಹಾಗೆ ಪ್ರಾಯಶ್ಚಿತ್ತ ಮಾಡಬೇಕು. ಏಕೆಂದರೆ ಅದು ತಿಳಿಯದೆ ಮಾಡಲಾಗಿತ್ತು. ಆದರೂ ಅವರು ಯೆಹೋವ ದೇವರಿಗೆ ದಹನಬಲಿಯಾಗಿ ತಮ್ಮ ಸಮರ್ಪಣೆಯನ್ನೂ, ತಮ್ಮ ತಪ್ಪಿಗೋಸ್ಕರ ಪಾಪ ಪರಿಹಾರಕ ಬಲಿಯನ್ನೂ ಯೆಹೋವ ದೇವರ ಮುಂದೆ ತರಬೇಕು.
[26] ಆಗ ಇಸ್ರಾಯೇಲರ ಸಮಸ್ತ ಸಮೂಹದವರಿಗೂ, ಅವರೊಳಗೆ ಪರಕೀಯನಾಗಿ ಪ್ರವಾಸಿಯಾಗಿರುವವನಿಗೂ ಅದು ಕ್ಷಮಾಪಣೆಯಾಗುವುದು. ಏಕೆಂದರೆ ಎಲ್ಲರೂ ತಿಳುವಳಿಕೆ ಇಲ್ಲದವರಾಗಿದ್ದರು.
[27] “ ‘ಯಾವನಾದರೂ ಒಬ್ಬನು ತಿಳಿಯದೆ ಪಾಪ ಮಾಡುವುದಾದರೆ, ಪಾಪ ಪರಿಹಾರಕ ಬಲಿಗಾಗಿ ಒಂದು ವರ್ಷದ ಮೇಕೆಯನ್ನು ತರಬೇಕು.
[28] ತಿಳಿಯದೆ ಪಾಪ ಮಾಡಿದವನಿಗೋಸ್ಕರ ಯಾಜಕನು ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅದು ಪಾಪಕ್ಷಮಾಪಣೆಯಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
[29] ಸ್ಥಳೀಯ ಮೂಲದ ಇಸ್ರಾಯೇಲರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ನಿಯಮ ಇರಬೇಕು.
[30] “ ‘ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ, ಪರಕೀಯನಾಗಲಿ ಬೇಕೆಂದು ಪಾಪಮಾಡಿದರೆ, ಅವನು ಯೆಹೋವ ದೇವರನ್ನು ನಿಂದಿಸಿದ್ದಾನೆ. ಆ ಮನುಷ್ಯನನ್ನು ಸ್ವಜನರಿಂದ ತೆಗೆದುಹಾಕಬೇಕು.
[31] ಅವನು ಯೆಹೋವ ದೇವರ ವಾಕ್ಯವನ್ನು ಅವಮಾನ ಮಾಡಿ, ಅವರ ಆಜ್ಞೆಗಳನ್ನು ಮೀರಿದ್ದರಿಂದ, ಆ ಮನುಷ್ಯನನ್ನು ನಿಶ್ಚಯವಾಗಿ ತೆಗೆದುಹಾಕಬೇಕು. ಅವನ ಅಕ್ರಮವು ಅವನ ಮೇಲೆ ಇರುವುದು,’ ” ಎಂದರು.
[32] ಇಸ್ರಾಯೇಲರು ಮರುಭೂಮಿಯಲ್ಲಿದ್ದಾಗ, ಅವರು ಸಬ್ಬತ್ ದಿನದಲ್ಲಿ ಸೌದೆಯನ್ನು ಕೂಡಿಸುವ ಒಬ್ಬನನ್ನು ಕಂಡರು.
[33] ಆಗ ಸೌದೆ ಕೂಡಿಸುವುದನ್ನು ಕಂಡುಕೊಂಡವರು ಅವನನ್ನು ಮೋಶೆ ಆರೋನರ ಬಳಿಗೆ ಮತ್ತು ಸಮಸ್ತ ಸಮುದಾಯದ ಬಳಿಗೆ ತಂದು,
[34] ಅವನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ, ಅವನನ್ನು ಕಾವಲಲ್ಲಿ ಇಟ್ಟರು.
[35] ಆಗ ಯೆಹೋವ ದೇವರು ಮೋಶೆಗೆ, “ಆ ಮನುಷ್ಯನು ಖಂಡಿತವಾಗಿಯೂ ಸಾಯಲೇಬೇಕು, ಸಭೆಯೆಲ್ಲಾ ಪಾಳೆಯದ ಹೊರಗೆ ಅವನನ್ನು ಕಲ್ಲೆಸೆದು ಕೊಲ್ಲಬೇಕು,” ಎಂದರು.
[36] ಆಗ ಸಮೂಹದವರೆಲ್ಲಾ ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆ ಅವನನ್ನು ಕಲ್ಲೆಸೆದು ಕೊಂದರು.
[37] ಯೆಹೋವ ದೇವರು ಮೋಶೆಗೆ,
[38] “ನೀನು ಇಸ್ರಾಯೇಲರಿಗೆ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಅವರು ತಮ್ಮ ತಲತಲಾಂತರಗಳಲ್ಲಿ ತಮ್ಮ ವಸ್ತ್ರಗಳ ಸೆರಗುಗಳ ಅಂಚಿನಲ್ಲಿ ಗೊಂಡೆಗಳನ್ನು ಮಾಡಿಕೊಳ್ಳಬೇಕು. ಸೆರಗಿನ ಗೊಂಡೆಗಳ ಮೇಲೆ ನೀಲಿ ದಾರವನ್ನು ಹಾಕಬೇಕು.
[39] ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು, ಅದನ್ನು ನೋಡುವಾಗ, ಯೆಹೋವ ದೇವರ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರಮಾಡಿ, ನಿಮ್ಮ ಹೃದಯ ಹಾಗೂ ಇಚ್ಛೆಗನುಸಾರ ನಿಮ್ಮ ಕಣ್ಣುಗಳು ಜಾರತ್ವ ಮಾಡುವಂತೆ ಹಿಂಬಾಲಿಸದೆ ಇರುವಿರಿ.
[40] ನೀವು ನನ್ನ ಆಜ್ಞೆಗಳನ್ನೆಲ್ಲಾ ನೆನಸಿ, ಅವುಗಳ ಪ್ರಕಾರಮಾಡಿ, ನಿಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು.
[41] ನಾನು ನಿಮ್ಮ ದೇವರಾಗುವದಕ್ಕೆ ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”