[1] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[2] “ನೀನು ಇಸ್ರಾಯೇಲರಿಂದ ಮಿದ್ಯಾನ್ಯರಿಗೆ ಮುಯ್ಯನ್ನು ತೀರಿಸಬೇಕು. ತರುವಾಯ ನೀನು ನಿನ್ನ ಪೂರ್ವಜರ ಬಳಿಗೆ ಸೇರಬೇಕು,” ಎಂದರು.
[3] ಆಗ ಮೋಶೆಯು ಜನರ ಸಂಗಡ ಮಾತನಾಡಿ, “ನಿಮ್ಮೊಳಗಿಂದ ಜನರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಲಿ. ಅವರು ಮಿದ್ಯಾನ್ಯರಿಗೆ ವಿರೋಧವಾಗಿ ಹೋಗಿ, ಯೆಹೋವ ದೇವರ ಪ್ರತೀಕಾರವನ್ನು ಅವರಿಗೆ ತೀರಿಸಬೇಕು.
[4] ಇಸ್ರಾಯೇಲರ ಸಮಸ್ತ ಗೋತ್ರಗಳೊಳಗೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯನ್ನು ಯುದ್ಧಕ್ಕೆ ಕಳುಹಿಸಬೇಕು,” ಎಂದನು.
[5] ಆಗ ಇಸ್ರಾಯೇಲರ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿ ಯುದ್ಧಕ್ಕೆ ಸಿದ್ಧವಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು.
[6] ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿರುವ ಅವರನ್ನೂ ಯಾಜಕನಾದ ಎಲಿಯಾಜರನ ಮಗ ಫೀನೆಹಾಸನನ್ನೂ ಪರಿಶುದ್ಧ ಸಲಕರಣೆಗಳ ಸಂಗಡವೂ ಸೂಚಿಸುವದಕ್ಕೋಸ್ಕರ ತುತೂರಿಗಳ ಸಂಗಡವೂ ಯುದ್ಧಕ್ಕೆ ಕಳುಹಿಸಿದನು.
[7] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಮಿದ್ಯಾನ್ಯರ ಮೇಲೆ ಯುದ್ಧಮಾಡಿ,
[8] ಗಂಡಸರೆಲ್ಲರನ್ನು ಕೊಂದುಹಾಕಿದರು. ಈ ಹತರಾದವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದುಹಾಕಿದರು. ಅವರು ಮಿದ್ಯಾನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗ ಬಿಳಾಮನನ್ನೂ ಖಡ್ಗದಿಂದ ಕೊಂದುಹಾಕಿದರು.
[9] ಇಸ್ರಾಯೇಲರು ಮಿದ್ಯಾನ್ಯರ ಸ್ತ್ರೀಯರನ್ನೂ, ಅವರ ಮಕ್ಕಳನ್ನೂ ಸೆರೆಹಿಡಿದು, ಅವರ ಸಮಸ್ತ ಪಶುಗಳನ್ನೂ, ಅವರ ಸಮಸ್ತ ಹಿಂಡುಗಳನ್ನೂ, ಅವರ ಸಮಸ್ತ ಸಲಕರಣೆಗಳನ್ನೂ ಸುಲಿಗೆ ಮಾಡಿದರು.
[10] ಅವರು ವಾಸಮಾಡಿದ ಸಮಸ್ತ ಪಟ್ಟಣಗಳನ್ನೂ, ಅವರ ಸಮಸ್ತ ಕೋಟೆಗಳನ್ನೂ ಬೆಂಕಿಯಿಂದ ಸುಟ್ಟರು.
[11] ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಸಮಸ್ತ ಸುಲಿಗೆಯನ್ನೂ, ಸಮಸ್ತ ಲೂಟಿಯನ್ನೂ ತೆಗೆದುಕೊಂಡರು.
[12] ಅವರು ಸೆರೆಯವರನ್ನೂ, ಲೂಟಿಯನ್ನೂ, ಸುಲಿಗೆಯನ್ನೂ ಮೋಶೆ, ಯಾಜಕನಾದ ಎಲಿಯಾಜರನು, ಇಸ್ರಾಯೇಲರ ಸಭೆ ಇವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬಯಲುಗಳಲ್ಲಿ ಇದ್ದ ಪಾಳೆಯದೊಳಗೆ ತಂದರು.
[13] ಮೋಶೆಯೂ, ಯಾಜಕನಾದ ಎಲಿಯಾಜರನೂ, ಸಮೂಹದ ಪ್ರಧಾನರೆಲ್ಲರೂ ಅವರಿಗೆ ಎದುರಾಗಿ ಪಾಳೆಯದ ಹೊರಗೆ ಹೋದರು.
[14] ಆದರೆ ಮೋಶೆಯು ಯುದ್ಧದಿಂದ ಬಂದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಆಗಿರುವ ಪಾಳೆಯದ ಮೇಲೆ ಕೋಪಮಾಡಿಕೊಂಡರು.
[15] ಮೋಶೆಯು ಅವರಿಗೆ, “ಹೆಂಗಸರನ್ನೆಲ್ಲಾ ಉಳಿಸಿದರೋ?
[16] ಇವರೇ ಬಿಳಾಮನ ಮಾತಿನಿಂದ ಪೆಯೋರನ ಕಾರ್ಯದಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡುವುದಕ್ಕೆ ಇಸ್ರಾಯೇಲರಿಗೆ ಕಾರಣವಾಗಿದ್ದರು. ಯೆಹೋವ ದೇವರ ಸಭೆಯೊಳಗೆ ಇವರಿಂದಲೇ ವ್ಯಾಧಿಯಾಯಿತು.
[17] ಆದಕಾರಣ ಈಗ ಬಾಲಕರನ್ನೂ, ಎಲ್ಲಾ ಪುರುಷನನ್ನು ಅರಿತಿರುವ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ.
[18] ಆದರೆ ಪುರುಷನನ್ನು ಅರಿಯದ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗಾಗಿ ಉಳಿಸಿಕೊಳ್ಳಿರಿ.
[19] “ಇದಲ್ಲದೆ ನಿಮ್ಮಲ್ಲಿ ಪ್ರಾಣ ತೆಗೆದವರು ಮತ್ತು ಶವವನ್ನು ಮುಟ್ಟಿದವರು ಏಳು ದಿವಸ ಪಾಳೆಯದ ಹೊರಗೆ ಇರಬೇಕು. ನೀವೂ, ನಿಮ್ಮ ಸೆರೆಯವರೂ ಮೂರನೆಯ ಹಾಗೂ ಏಳನೆಯ ದಿವಸಗಳಲ್ಲಿ ನಿಮ್ಮನ್ನು ಶುದ್ಧ ಮಾಡಿಕೊಳ್ಳಬೇಕು.
[20] ಎಲ್ಲಾ ಬಟ್ಟೆಗಳನ್ನೂ, ಎಲ್ಲಾ ಚರ್ಮದ ಸಲಕರಣೆಗಳನ್ನೂ, ಮೇಕೆ ಕೂದಲಿಂದ ಮಾಡಿದ್ದೆಲ್ಲವನ್ನೂ, ಕಟ್ಟಿಗೆ ಸಲಕರಣೆಗಳೆಲ್ಲವನ್ನೂ ಶುದ್ಧಮಾಡಬೇಕು,” ಎಂದು ಹೇಳಿದನು.
[21] ಯಾಜಕನಾದ ಎಲಿಯಾಜರನು ಯುದ್ಧಕ್ಕೆ ಹೋದ ಪಾಳೆಯದ ಜನರಿಗೆ, “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ನ್ಯಾಯದ ಕಟ್ಟಳೆಯು ಇದೇ:
[22] ಬೆಂಕಿ ತಾಳುವ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು
[23] ನೀವು ಬೆಂಕಿಯಿಂದ ದಾಟಿಸಬೇಕು. ಆಗ ಅವು ಶುದ್ಧವಾಗುವುವು. ಶುದ್ಧೀಕರಣದ ನೀರಿನಲ್ಲಿ ಅದ್ದಿ ಶುದ್ಧಮಾಡಬೇಕು. ಆಗ ಅವು ಶುದ್ಧವಾಗುವುವು. ಆದರೆ ಬೆಂಕಿ ತಾಳದ ಸಮಸ್ತವನ್ನು ನೀವು ನೀರಿನಿಂದ ತೊಳೆಯಬೇಕು.
[24] ಏಳನೆಯ ದಿವಸದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಒಗೆದುಕೊಂಡು ಶುದ್ಧರಾಗಬೇಕು. ತರುವಾಯ ಪಾಳೆಯದೊಳಗೆ ಬರಬೇಕು,” ಎಂದು ಹೇಳಿದನು.
[25] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[26] “ನೀನೂ, ಯಾಜಕನಾದ ಎಲಿಯಾಜರನೂ, ಕುಲಾಧಿಪತಿಗಳೂ ಸೈನಿಕರ ಕೈಗೆ ಸಿಕ್ಕಿರುವ ಮನುಷ್ಯರನ್ನೂ ಪಶುಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿರಿ.
[27] ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಭಟರಿಗೂ, ಸಮಸ್ತ ಸಭೆಗೂ ಎರಡು ಪಾಲನ್ನು ಮಾಡಬೇಕು.
[28] ಜನರಿಂದಲೂ, ಪಶುಗಳಿಂದಲೂ, ಕತ್ತೆಗಳಿಂದಲೂ, ಕುರಿಗಳಿಂದಲೂ ಐನೂರರಲ್ಲಿ ಒಂದು ಪ್ರಾಣವನ್ನು ಯುದ್ಧಕ್ಕೆ ಹೊರಟ ಯುದ್ಧಭಟರ ಕಡೆಯಿಂದ ಯೆಹೋವ ದೇವರಿಗೆ ಕಪ್ಪವಾಗಿ ಎತ್ತಬೇಕು.
[29] ಅವರ ಅರ್ಧ ಪಾಲಿನಿಂದ ಅದನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಅರ್ಪಣೆಯಾಗಿ, ಯಾಜಕನಾದ ಎಲಿಯಾಜರನಿಗೆ ಕೊಡಬೇಕು.
[30] ಇಸ್ರಾಯೇಲರ ಅರ್ಧ ಪಾಲಿನಿಂದ ಜನರಿಂದಲೂ, ಕತ್ತೆಗಳಿಂದಲೂ, ಮಂದೆಗಳಿಂದಲೂ, ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತೆಗೆದುಕೊಂಡು, ಅವುಗಳನ್ನು ಯೆಹೋವ ದೇವರ ಗುಡಾರವನ್ನು ನಿರ್ವಹಿಸುವ ಲೇವಿಯರಿಗೆ ಕೊಡಬೇಕು,” ಎಂದರು.
[31] ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿದರು.
[32] ಯುದ್ಧಭಟರು ತೆಗೆದುಕೊಂಡು ಬಂದ ಲೂಟಿಯಲ್ಲಿ ಉಳಿದ ಸುಲಿಗೆ ಎಷ್ಟೆಂದರೆ 6,75,000 ಕುರಿಗಳು.
[33] 72,000 ಪಶುಗಳು;
[34] ಕತ್ತೆಗಳು 61,000;
[35] ಪುರುಷರನ್ನು ಅರಿಯದ ಸ್ತ್ರೀಯರು 32,000 ಮಂದಿ.
[36] ಯುದ್ಧಕ್ಕೆ ಹೊರಟವರ ಅರ್ಧ ಭಾಗದ ಲೆಕ್ಕವಿದು: 3,37,500 ಕುರಿಗಳಿಂದ
[37] ಯೆಹೋವ ದೇವರಿಗೆ ಕೊಡಲಾದ ಕಪ್ಪವು 675;
[38] ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ ಯೆಹೋವ ದೇವರಿಗೆ ಉಂಟಾದ ಕಪ್ಪವು 72 ದನಕರುಗಳು;
[39] 30,500 ಕತ್ತೆಗಳು; ಅವುಗಳಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 61;
[40] 16,000 ಜನರು, ಅವರಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 32 ಜನ.
[41] ಮೋಶೆಯು ಯೆಹೋವ ದೇವರಿಗೆ ಪಡೆಯುವ ಕಪ್ಪವನ್ನು ಯಾಜಕನಾದ ಎಲಿಯಾಜರನಿಗೆ ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಕೊಟ್ಟನು.
[42] ಮೋಶೆಯು ಯುದ್ಧಕ್ಕೆ ಹೋದ ಜನರಿಂದ ತೆಗೆದುಕೊಂಡು ಇಸ್ರಾಯೇಲರಿಗೆ ಹಂಚಿದ ಅರ್ಧ ಭಾಗದ ವಿವರ:
[43] ಕುರಿಗಳಿಂದ ಸಭೆಯ ಅರ್ಧ 3, 37,500 ಕುರಿಗಳು;
[44] 36,000 ಪಶುಗಳು;
[45] 30,500 ಕತ್ತೆಗಳು;
[46] 16,000 ಜನರು;
[47] ಮೋಶೆಯು ಇಸ್ರಾಯೇಲರ ಅರ್ಧದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಐವತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋವ ದೇವರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
[48] ಆಗ ಸೈನ್ಯದ ಅಧಿಕಾರಿಗಳಾದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು,
[49] ಮೋಶೆಗೆ ಅವರು, “ನಿನ್ನ ಸೇವಕರಾದ ನಾವು ನಮ್ಮ ಕೈಯಲ್ಲಿದ್ದ ಯುದ್ಧಭಟರ ಲೆಕ್ಕವನ್ನು ತೆಗೆದುಕೊಂಡೆವು. ಅವರೊಳಗೆ ಒಬ್ಬನಾದರೂ ಕಡಿಮೆಯಾಗಲಿಲ್ಲ.
[50] ಆದ್ದರಿಂದ ಯೆಹೋವ ದೇವರ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ವಸ್ತುಗಳಾದ ಸರಪಣಿಗಳನ್ನೂ, ಕಡಗಗಳನ್ನೂ, ಉಂಗುರಗಳನ್ನೂ, ವಾಲೆಗಳನ್ನೂ, ಪದಕಗಳನ್ನೂ ಯೆಹೋವ ದೇವರಿಗೆ ಕಾಣಿಕೆಯಾಗಿ ತಂದಿದ್ದೇವೆ,” ಎಂದು ಹೇಳಿದರು.
[51] ಮೋಶೆಯೂ, ಯಾಜಕನಾದ ಎಲಿಯಾಜರನೂ ವಿಚಿತ್ರ ಕೆಲಸವಾಗಿರುವ ಬಂಗಾರವನ್ನೆಲ್ಲಾ ಅದರಿಂದ ತೆಗೆದುಕೊಂಡರು.
[52] ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವ ದೇವರಿಗೆ ಅರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್‌ಗಳು.
[53] ಯುದ್ಧದ ಜನರು ಒಬ್ಬೊಬ್ಬನು ಸ್ವಂತವಾಗಿ ಸುಲಿದುಕೊಂಡಿದ್ದನು.
[54] ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತೆಗೆದುಕೊಂಡು, ಯೆಹೋವ ದೇವರ ಸಮ್ಮುಖದಲ್ಲಿ ಇಸ್ರಾಯೇಲರಿಗೆ ಜ್ಞಾಪಕಕ್ಕಾಗಿ ದೇವದರ್ಶನ ಗುಡಾರದೊಳಗೆ ತಂದರು.