Skip to content
Opens in a new window
Listen to this chapter • 5:16

[1] ಆದರೆ ಇಸ್ರಾಯೇಲನ್ನು ಆಶೀರ್ವದಿಸುವುದಕ್ಕೆ ಯೆಹೋವ ದೇವರ ದೃಷ್ಟಿಗೆ ಒಳ್ಳೆಯದೆಂದು ಬಿಳಾಮನು ನೋಡಿದಾಗ, ಅವನು ಮುಂಚಿನ ಹಾಗೆ ಶಕುನವನ್ನು ಕಂಡುಕೊಳ್ಳುವುದಕ್ಕೆ ಹೋಗದೆ, ತನ್ನ ಮುಖವನ್ನು ಮರುಭೂಮಿಯ ಕಡೆಗೆ ತಿರುಗಿಸಿಕೊಂಡನು.

[2] ಬಿಳಾಮನು ತನ್ನ ಕಣ್ಣೆತ್ತಿ ಇಸ್ರಾಯೇಲರು ಅವರವರ ಗೋತ್ರಗಳ ಪ್ರಕಾರ ತಮ್ಮ ಡೇರೆಗಳಲ್ಲಿ ವಾಸವಾಗಿರುವುದನ್ನು ನೋಡಿದಾಗ, ದೇವರಾತ್ಮ ಪ್ರೇರಿತನಾಗಿ

[3] ಹೀಗೆ ಪ್ರವಾದಿಸಿದನು: “ಇದು ಬೆಯೋರನ ಮಗ ಬಿಳಾಮನ ಪ್ರವಾದನೆ: ಸ್ಪಷ್ಟ ಕಣ್ಣುಳ್ಳವನು ನುಡಿದದ್ದು.

[4] ದೇವರ ಮಾತುಗಳನ್ನು ಕೇಳಿದವನೂ, ಸರ್ವಶಕ್ತರ ದರ್ಶನವನ್ನು ನೋಡಿದವನೂ, ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು:

[5] “ಯಾಕೋಬೇ, ನಿನ್ನ ಡೇರೆಗಳೂ; ಇಸ್ರಾಯೇಲರೇ, ನಿಮ್ಮ ಗುಡಾರಗಳೂ ಉತ್ತಮವಾಗಿವೆ!

[6] “ಅವು ಕಣಿವೆಗಳ ಹಾಗೆ ವಿಸ್ತರಿಸಿವೆ. ನದಿತೀರದಲ್ಲಿರುವ ತೋಟಗಳ ಹಾಗೆಯೂ, ಯೆಹೋವ ದೇವರು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.

[7] ಅವರ ತೊಟ್ಟಿಗಳಿಂದ ನೀರು ಹರಿಯುವಂತೆ ಮಾಡುವರು. ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. “ಅವರ ಅರಸನು ಅಗಾಗ್ ರಾಜನಿಗಿಂತಲೂ ಉನ್ನತವಾಗಿರುವನು. ಅವರ ರಾಜ್ಯವು ಅಭಿವೃದ್ಧಿ ಹೊಂದುವುದು.

[8] “ದೇವರು ಅವರನ್ನು ಈಜಿಪ್ಟಿನಿಂದ ಹೊರಗೆ ತಂದನು. ಈ ಕಾಡುಕೋಣದಂತೆ ಬಲ ಅವರಿಗೆ ಉಂಟು. ಅವರು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು, ಅವರ ಎಲುಬುಗಳನ್ನು ಚೂರುಮಾಡಿ, ತಮ್ಮ ಬಾಣಗಳಿಂದ ಗಾಯಮಾಡುವನು.

[9] ಅವರು ಸಿಂಹದ ಹಾಗೆಯೂ, ಸಿಂಹಣಿ ಹಾಗೆಯೂ ಬಾಗಿ ಮಲಗುತ್ತಾನೆ. ಅವನನ್ನು ಎಬ್ಬಿಸುವವನು ಯಾರು? “ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದ ಉಂಟಾಗಲಿ. ಶಪಿಸುವವನಿಗೆ ಶಾಪ ಉಂಟಾಗಲಿ.”

[10] ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು, ಚಪ್ಪಾಳೆ ಹೊಡೆದು ಬಿಳಾಮನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಈ ಮೂರು ಸಾರಿಯೂ ಆಶೀರ್ವದಿಸಿದೆ.

[11] ಈಗ ನಿನ್ನ ಸ್ಥಳಕ್ಕೆ ಓಡಿಹೋಗು. ನಾನು ನಿನ್ನನ್ನು ಬಹು ಗೌರವಿಸಬೇಕೆಂದಿದ್ದೆ. ಆದರೆ ಇಗೋ, ಯೆಹೋವ ದೇವರು ನಿನಗೆ ಘನತೆ ಬಾರದಂತೆ ತಡೆದಿದ್ದಾನೆ,” ಎಂದನು.

[12] ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ,

[13] ‘ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಬಂಗಾರಗಳನ್ನು ಕೊಟ್ಟರೂ, ನನ್ನ ಹೃದಯದಿಂದ ಒಳ್ಳೆಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡುವುದಕ್ಕೆ ಯೆಹೋವ ದೇವರ ಆಜ್ಞೆಯನ್ನು ಮೀರಲಾರೆನು. ಯೆಹೋವ ದೇವರು ಏನು ಹೇಳುತ್ತಾರೋ, ಅದನ್ನೇ ಹೇಳುವೆನೆಂದು ನಾನು ಹೇಳಲಿಲ್ಲವೋ’? ಈಗ, ನನ್ನ ಜನರ ಬಳಿಗೆ ಹೋಗುತ್ತೇನೆ.

[14] ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ, ಅದನ್ನು ನಿನಗೆ ತಿಳಿಸುವೆನು,” ಎಂದನು.

[15] ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬೆಯೋರನ ಮಗ ಬಿಳಾಮನು ಹೇಳಿದ್ದು: ಸ್ಪಷ್ಟ ಕಣ್ಣುಳ್ಳ ಮನುಷ್ಯನು ನುಡಿದದ್ದು.

[16] ದೇವರ ಮಾತುಗಳನ್ನು ಕೇಳಿದವನೂ, ಮಹೋನ್ನತನ ಜ್ಞಾನವನ್ನು ತಿಳಿದವನೂ, ಸರ್ವಶಕ್ತರ ದರ್ಶನವನ್ನು ನೋಡಿದವನೂ, ಪರವಶನಾಗಿದ್ದು ತೆರೆದ ಕಣ್ಣುಳ್ಳವನೂ ಹೇಳಿದ್ದು:

[17] “ನಾನು ಅವನನ್ನು ನೋಡುವೆನು, ಈಗಲ್ಲ. ಅವನನ್ನು ದೃಷ್ಟಿಸುವೆನು, ಸಮೀಪದಲ್ಲಿ ಅಲ್ಲ. ಯಾಕೋಬನಿಂದ ನಕ್ಷತ್ರ ಉದಯಿಸುವುದು. ಇಸ್ರಾಯೇಲನಿಂದ ರಾಜದಂಡ ಏಳುವುದು. ಅದು ಮೋವಾಬಿನ ಮೂಲೆಗಳನ್ನು ಹೊಡೆದು, ಸೇಥನ ಎಲ್ಲಾ ಮಕ್ಕಳನ್ನು ಸಂಹರಿಸುವುದು.

[18] ಎದೋಮು ಸ್ವಾಧೀನವಾಗುವುದು; ಸೇಯೀರನವರು ತನ್ನ ಶತ್ರುಗಳಿಗೆ ಸ್ವಾಧೀನವಾಗುವುದು; ಇಸ್ರಾಯೇಲು ಪರಾಕ್ರಮ ಕಾರ್ಯಮಾಡುವುದು,

[19] ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು, ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು.”

[20] ಅನಂತರ ಬಿಳಾಮನು ಅಮಾಲೇಕ್ಯರನ್ನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಜನಾಂಗಗಳಲ್ಲಿ ಮೊದಲನೆಯವನೇ ಅಮಾಲೇಕ್ಯನು, ಆದರೆ ಅವನು ಕೊನೆಗೆ ನಾಶವಾಗುವನು.”

[21] ಬಳಿಕ ಕೇನ್ಯರನ್ನು ಅವನು ನೋಡಿ ಪದ್ಯರೂಪವಾಗಿ ಹೇಳಿದ್ದೇನೆಂದರೆ: “ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.

[22] ಆದರೂ ಅಸ್ಸೀರಿಯರು ನಿನ್ನನ್ನು ಸೆರೆಹಿಡಿಯುವಷ್ಟರಲ್ಲೇ ನೀವು ಕೇನ್ಯರೂ ಹಾಳಾಗುವರು.”

[23] ಇದಲ್ಲದೆ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಅಯ್ಯೋ! ದೇವರು ಇದನ್ನು ಮಾಡುವಾಗ ಯಾರು ಬದುಕುವರು?

[24] ಕಿತ್ತೀಮೆಂಬ ತೀರದಿಂದ ಹಡಗುಗಳು ಬಂದು, ಅಸ್ಸೀರಿಯರನ್ನೂ, ಏಬೆರ್ ಜನರನ್ನೂ ಸೋಲಿಸುವುವು. ಅವನು ಸಹ ಸದಾಕಾಲಕ್ಕೂ ನಾಶವಾಗುವನು.”

[25] ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರುಗಿಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.

ಅರಣ್ಯಕಾಂಡ — Chapters