Skip to content
Opens in a new window
Listen to this chapter • 3:34

[1] ಆಗ ಇಸ್ರಾಯೇಲರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ, ಅವರು ಮೋವಾಬಿನ ಪುತ್ರಿಯರ ಸಂಗಡ ಜಾರತ್ವ ಮಾಡಲಾರಂಭಿಸಿದರು.

[2] ಆ ಮಹಿಳೆಯರು ಇಸ್ರಾಯೇಲರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು. ಇವರು ತಿಂದು ಅವರ ದೇವರುಗಳಿಗೆ ಅಡ್ಡಬಿದ್ದರು.

[3] ಹೀಗೆ ಇಸ್ರಾಯೇಲರು ಬಾಳ್ ಪೆಯೋರಿನೊಂದಿಗೆ ತಾವೇ ಕೂಡಿ ಪೂಜಿಸಿದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಗೊಂಡರು.

[4] ಆಗ ಯೆಹೋವ ದೇವರು ಮೋಶೆಗೆ, “ಯೆಹೋವ ದೇವರ ಕೋಪಾಗ್ನಿಯು ಇಸ್ರಾಯೇಲಿನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥರೆಲ್ಲರನ್ನು ತೆಗೆದುಕೊಂಡು, ಅವರನ್ನು ಹಗಲು ಹೊತ್ತಿನಲ್ಲಿ ಯೆಹೋವ ದೇವರ ಮುಂದೆ ಕೊಂದುಹಾಕು.”

[5] ಆದ್ದರಿಂದ ಮೋಶೆ ಇಸ್ರಾಯೇಲಿನ ನ್ಯಾಯಾಧಿಪತಿಗಳಿಗೆ, “ನಿಮ್ಮಲ್ಲಿ ಒಬ್ಬೊಬ್ಬನೂ ಬಾಳ್ ಪೆಯೋರಿನೊಂದಿಗೆ ಕೂಡಿ ಪೂಜಿಸಿರುವ ನಿನ್ನ ಜನರನ್ನು ಕೊಲ್ಲಬೇಕು,” ಎಂದನು.

[6] ಆಗ ಇಸ್ರಾಯೇಲರಲ್ಲಿ ಒಬ್ಬನು ಮೋಶೆಗೆ ಹಾಗೂ ದೇವದರ್ಶನ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲರ ಸಮಸ್ತ ಸಮೂಹಕ್ಕೂ ಕಾಣುವ ಹಾಗೆ ಒಬ್ಬ ಮಿದ್ಯಾನ್ ಮಹಿಳೆಯನ್ನು ಕರೆತಂದನು.

[7] ಕೂಡಲೆ ಮಾಹಾಯಾಜಕ ಆರೋನನ ಮಗನಾಗಿದ್ದ ಎಲಿಯಾಜರನ ಮಗ ಫೀನೆಹಾಸನು ಅದನ್ನು ನೋಡಿ, ಜನರ ಮಧ್ಯದಿಂದ ಎದ್ದು, ತನ್ನ ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು,

[8] ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ, ಇಸ್ರಾಯೇಲಿನವನನ್ನೂ ಆ ಮಹಿಳೆಯನ್ನೂ ಒಂದೇ ಬಾರಿಗೆ ಇಬ್ಬರ ಹೊಟ್ಟೆಯನ್ನು ತಿವಿದನು. ಹೀಗೆ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು.

[9] ಆದರೂ, ವ್ಯಾಧಿಯಿಂದ ಸತ್ತವರು 24,000 ಮಂದಿಯಾಗಿದ್ದರು.

[10] ಯೆಹೋವ ದೇವರು ಮೋಶೆಗೆ,

[11] “ಯಾಜಕನಾದ ಆರೋನನ ಮೊಮ್ಮಗನೂ, ಎಲಿಯಾಜರನ ಮಗ ಫೀನೆಹಾಸನು ಇಸ್ರಾಯೇಲರಲ್ಲಿ ನನಗೋಸ್ಕರ ಆಸಕ್ತನಾಗಿದ್ದು, ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ, ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿಬಿಟ್ಟಿದ್ದಾನೆ.

[12] ಆದಕಾರಣ, ನಾನು ಅವನೊಂದಿಗೆ ನನ್ನ ಸಮಾಧಾನದ ಒಡಂಬಡಿಕೆಯನ್ನು ಮಾಡುತ್ತೇನೆ ಎಂದು ಹೇಳು.

[13] ಅವನು ತನ್ನ ದೇವರ ಗೌರವವನ್ನು ಕಾಪಾಡಲು ಆಸಕ್ತನಾಗಿದ್ದು, ಇಸ್ರಾಯೇಲರಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ, ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆ ಮಾಡಿದ್ದೇನೆ,” ಎಂದರು.

[14] ಮಿದ್ಯಾನ್ ಸ್ತ್ರೀಯ ಸಂಗಡ ಹತನಾದ ಆ ಇಸ್ರಾಯೇಲಿನವನ ಹೆಸರು ಜಿಮ್ರಿ, ಅವನು ಸಿಮೆಯೋನ್ ಕುಲದವರಲ್ಲಿ ಗೋತ್ರದ ಮುಖ್ಯಸ್ಥನಾಗಿದ್ದ ಸಾಲೂ ಎಂಬುವನ ಮಗನು.

[15] ಹತಳಾದ ಆ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ, ಅವಳು ಮಿದ್ಯಾನ್ಯರ ಪ್ರಜೆಯ ಮುಖ್ಯಸ್ಥನೂ ಮನೆಗೆ ಯಜಮಾನನೂ ಆಗಿರುವ ಚೂರ್ ಎಂಬವನ ಮಗಳಾಗಿದ್ದಳು.

[16] ಯೆಹೋವ ದೇವರು ಮೋಶೆಗೆ,

[17] “ಮಿದ್ಯಾನ್ಯರನ್ನು ವೈರಿ ಎಂದು ತಿಳಿದು ಹೊಡೆಯಬೇಕು.

[18] ಅವರು ಪೆಯೋರಿನ ವಿಷಯದಲ್ಲಿಯೂ, ಪೆಯೋರಿಗೋಸ್ಕರ ವ್ಯಾಧಿಯ ದಿವಸದಲ್ಲಿ ಹತಳಾದ ತಮ್ಮ ಸಹೋದರಿಯಾಗಿಯೂ, ಮಿದ್ಯಾನ್ಯರ ಪ್ರಧಾನನ ಮಗಳಾಗಿಯೂ, ಇದ್ದ ಕೊಜ್ಬೀಯ ವಿಷಯದಲ್ಲಿಯೂ ನಿಮಗೆ ಮಾಡಿದ ಮೋಸಗಳಿಂದ ನಿಮಗೆ ಉಪದ್ರವ ಕೊಡುತ್ತಾರೆ,” ಎಂದರು.

ಅರಣ್ಯಕಾಂಡ — Chapters