Skip to content
Opens in a new window
Listen to this chapter • 8:32

[1] ಯೆಹೋವ ದೇವರು ಆರೋನನಿಗೆ, “ನೀನೂ, ನಿನ್ನ ಪುತ್ರರೂ, ನಿನ್ನ ಪಿತೃಗಳ ಮನೆಯವರೂ ಪರಿಶುದ್ಧ ಸ್ಥಳಕ್ಕೆ ವಿರೋಧವಾಗಿ ನಡೆಯುವ ಕಾರ್ಯಗಳ ಜವಾಬ್ದಾರಿ ವಹಿಸಬೇಕು. ಯಾಜಕತ್ವಕ್ಕೆ ವಿರೋಧವಾಗಿ ನಡೆಯುವ ಅಕ್ರಮಗಳಿಗೆ ನೀನು ಮತ್ತು ನಿನ್ನ ಪುತ್ರರು ಮಾತ್ರ ಹೊಣೆಯಾಗಿರುತ್ತೀರಿ.

[2] ನಿನ್ನ ಗೋತ್ರದ ಮೂಲಪುರುಷನಾದ ಲೇವಿ ವಂಶದವರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಏಕೆಂದರೆ ಅವರು ನಿನ್ನ ಕೂಡ ಇದ್ದು, ನಿನಗೆ ಸೇವೆಮಾಡಬೇಕು. ಆದರೆ ನೀನು ಮತ್ತು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷಿ ಗುಡಾರದ ಮುಂದೆ ಸೇವೆಮಾಡಬೇಕು.

[3] ಅವರು ನಿನಗೂ ದೇವದರ್ಶನದ ಗುಡಾರದ ಕಾರ್ಯಗಳಿಗೂ ಜವಾಬ್ದಾರರಾಗಿರುವರು. ಆದರೆ ಪರಿಶುದ್ಧಸ್ಥಳದ ಸಲಕರಣೆಗಳ ಹತ್ತಿರವಾಗಲಿ, ಬಲಿಪೀಠದ ಹತ್ತಿರವಾಗಲಿ ಅವರು ಬರಬಾರದು, ಬಂದರೆ ಅವರು ಮಾತ್ರವಲ್ಲ ನೀವೂ ಸಹ ಸಾಯುವಿರಿ.

[4] ಆದರೆ ಅವರು ನಿನ್ನ ಸಹಾಯಕರಾಗಿದ್ದು, ದೇವದರ್ಶನದ ಗುಡಾರದ ಎಲ್ಲಾ ಕಾರ್ಯಗಳಿಗೂ ಅದನ್ನು ಕಾಪಾಡುವುದಕ್ಕೂ ಜವಾಬ್ದಾರರಾಗಿರುವರು. ಬೇರೆ ಕುಲದವರು ನಿಮ್ಮ ಸಮೀಪಕ್ಕೆ ಬರಬಾರದು.

[5] “ಇಸ್ರಾಯೇಲರ ಮೇಲೆ ಇನ್ನು ಮುಂದೆ ಎಂದಿಗೂ ನನ್ನ ಕೋಪಾಗ್ನಿಯು ಬಾರದ ಹಾಗೆ ಪರಿಶುದ್ಧ ಸ್ಥಳವನ್ನು ಮತ್ತು ಬಲಿಪೀಠವನ್ನು ನೀವೇ ನೋಡಿಕೊಳ್ಳಬೇಕು.

[6] ನಾನು ನಿಮ್ಮ ಸಹೋದರರಾದ ಲೇವಿಯರನ್ನು ಇಸ್ರಾಯೇಲರೊಳಗಿಂದ ತೆಗೆದುಕೊಂಡಿದ್ದೇನೆ. ದೇವದರ್ಶನ ಗುಡಾರದ ಸೇವೆಯನ್ನು ಮಾಡುವುದಕ್ಕೆ ಅವರು ಯೆಹೋವ ದೇವರಿಗಾಗಿ ನಿಮಗೆ ಕಾಣಿಕೆಯಾಗಿ ಸಮರ್ಪಿತರಾಗಿದ್ದಾರೆ.

[7] ಆದ್ದರಿಂದ ನೀನು ನಿನ್ನ ಪುತ್ರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ತೆರೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವ ಸೇವೆಯನ್ನು ನಿಮಗೆ ದಾನವಾಗಿ ಕೊಟ್ಟಿದ್ದೇನೆ. ಪರಕೀಯನು ಸಮೀಪಕ್ಕೆ ಬಂದರೆ ಮರಣಶಿಕ್ಷೆಯಾಗಬೇಕು,” ಎಂದರು.

[8] ಯೆಹೋವ ದೇವರು ಮಾತನಾಡಿ ಆರೋನನಿಗೆ, “ನನಗೆ ಕೊಡುವ ಎಲ್ಲಾ ಕಾಣಿಕೆಗಳ ಮೇಲೆ ನಿನ್ನನ್ನು ನೇಮಿಸಿದ್ದೇನೆ. ಇಸ್ರಾಯೇಲರು ನನಗೆ ಸಮರ್ಪಿಸುವ ಎಲ್ಲಾ ಪರಿಶುದ್ಧವಾದ ಕಾಣಿಕೆಗಳನ್ನೆಲ್ಲಾ ನಿನಗೂ ನಿನ್ನ ಮಕ್ಕಳಿಗೂ ಶಾಶ್ವತ ಪಾಲನ್ನು ನೀಡುತ್ತೇನೆ,” ಎಂದರು.

[9] ದಹನಬಲಿಗೆ ಒಳಗಾಗದ ಮಹಾಪರಿಶುದ್ಧವಾದ ವಸ್ತುಗಳು ನಿನಗೆ ಕಾಣಿಕೆಯಾಗಿ ಸಲ್ಲಬೇಕು ಯಾವುವೆಂದರೆ ಇಸ್ರಾಯೇಲರು ನನಗೆ ಸಮರ್ಪಿಸುವ ಧಾನ್ಯ, ದೋಷಪರಿಹಾರಕ ಬಲಿಗಳು ಮತ್ತು ಪ್ರಾಯಶ್ಚಿತ್ತ ಬಲಿಗಳು, ಇವುಗಳಲ್ಲಿ ದಹನವಾಗದೆ ಉಳಿದವುಗಳು ಮಹಾಪರಿಶುದ್ಧವಾದದರಿಂದ ನಿನಗೂ ನಿನ್ನ ಪುತ್ರರಿಗೂ ಸೇರಬೇಕು.

[10] ಮಹಾಪರಿಶುದ್ಧ ಸ್ಥಳದಲ್ಲಿ ನೀನು ಅದನ್ನು ತಿನ್ನಬೇಕು. ಪುರುಷರು ಅದನ್ನು ತಿನ್ನಬಹುದು. ಅದು ನಿನಗೆ ಪರಿಶುದ್ಧವಾಗಿರುವುದೆಂದು ಪರಿಗಣಿಸಬೇಕು.

[11] “ಅವರು ಕೊಟ್ಟ ಅರ್ಪಣೆಯೂ ಇಸ್ರಾಯೇಲರು ನೈವೇದ್ಯವಾಗಿ ನಿವಾಳಿಸುವ ಎಲ್ಲಾ ಸಮರ್ಪಣೆಗಳೂ ನಿನ್ನದಾಗಿರುವುವು. ಅವುಗಳನ್ನು ನಾನು ನಿನಗೂ, ನಿನ್ನ ಪುತ್ರಪುತ್ರಿಯರಿಗೂ ಶಾಶ್ವತ ನಿಯಮವಾಗಿ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.

[12] “ಜನರು ಯೆಹೋವ ದೇವರಿಗೆ ಸಮರ್ಪಿಸುವ ಪ್ರಥಮ ಫಲಗಳನ್ನು ಅಂದರೆ ಎಲ್ಲಾ ಉತ್ತಮವಾದ ಎಣ್ಣೆಯೂ ಉತ್ತಮವಾದ ಹೊಸ ದ್ರಾಕ್ಷಾರಸ, ಧಾನ್ಯವೂ ನಿನಗೆ ಕೊಟ್ಟಿದ್ದೇನೆ.

[13] ಅವರು ಯೆಹೋವ ದೇವರಿಗೆ ತರುವ ಅವರ ದೇಶದಲ್ಲಿರುವ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವುವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನೂ ಅದನ್ನು ತಿನ್ನಬಹುದು.

[14] “ಇಸ್ರಾಯೇಲರು ಯೆಹೋವ ದೇವರಿಗೆ ಹರಕೆಮಾಡಿ ಸಮರ್ಪಿಸಿದ ಪ್ರತಿಯೊಂದೂ ನಿನ್ನದಾಗಿದೆ.

[15] ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ ಯೆಹೋವ ದೇವರಿಗೆ ಸಮರ್ಪಿಸುವ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು. ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಅಪವಿತ್ರವಾದ ಗಂಡು ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.

[16] ಅವು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗ, ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ಗೇರಾ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ವಿಮೋಚಿಸಿಕೊಳ್ಳಬೇಕು.

[17] “ಆದರೆ ಆಕಳಿನ ಚೊಚ್ಚಲನ್ನಾದರೂ ಕುರಿಯ ಚೊಚ್ಚಲನ್ನಾದರೂ ಮೇಕೆಯ ಚೊಚ್ಚಲನ್ನಾದರೂ ನೀನು ಬಿಟ್ಟುಬಿಡಬಾರದು. ಅವು ಪರಿಶುದ್ಧವಾಗಿವೆ, ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸಬೇಕು, ಅವುಗಳ ಕೊಬ್ಬನ್ನು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ ಮಾಡಬೇಕು.

[18] ನೈವೇದ್ಯವಾಗಿ ನಿವಾಳಿಸುವ ಎದೆಯೂ ಬಲಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನದಾಗಿರಬೇಕು.

[19] ಇಸ್ರಾಯೇಲರು ಯೆಹೋವ ದೇವರಿಗೆ ನೈವೇದ್ಯ ಮಾಡುವ ಪರಿಶುದ್ಧವಾದ ಬಲಿಗಳನ್ನೆಲ್ಲಾ ನಿನಗೂ ನಿನ್ನ ಪುತ್ರಪುತ್ರಿಯರಿಗೂ ಕ್ರಮ ಪ್ರಕಾರವಾದ ಭಾಗವಾಗಿ ಕೊಟ್ಟಿದ್ದೇನೆ. ಇದು ಯೆಹೋವ ದೇವರ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ಶಾಶ್ವತವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು,” ಎಂದರು.

[20] ಯೆಹೋವ ದೇವರು ಆರೋನನಿಗೆ, “ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು, ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು. ನಾನೇ ಇಸ್ರಾಯೇಲರ ಮಧ್ಯದಲ್ಲಿ ನಿನ್ನ ಪಾಲೂ ನಿನ್ನ ಸ್ವಾಸ್ತ್ಯವೂ ಆಗಿದ್ದೇನೆ.

[21] “ಅವರು ದೇವದರ್ಶನ ಗುಡಾರದ ಸೇವೆಯನ್ನೂ ಮಾಡುವುದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾಯೇಲರಲ್ಲಿ ಹತ್ತನೆಯ ಭಾಗವನ್ನು ಸೊತ್ತಾಗಿ ಕೊಟ್ಟಿದ್ದೇನೆ.

[22] ಇನ್ನು ಮೇಲೆ ಇಸ್ರಾಯೇಲರು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ದೇವದರ್ಶನದ ಗುಡಾರದ ಸಮೀಪಕ್ಕೆ ಬರಬಾರದು.

[23] ಆದರೆ ಲೇವಿಯರೇ ದೇವದರ್ಶನ ಗುಡಾರದ ಸೇವೆಯನ್ನು ಮಾಡಬೇಕು. ಅವರು ಅಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರಬೇಕು. ಇದು ನಿಮ್ಮ ಸಂತತಿಗಳಿಗೆ ಶಾಶ್ವತ ಕಟ್ಟಳೆಯಾಗಿದೆ, ಇಸ್ರಾಯೇಲರ ಮಧ್ಯದಲ್ಲಿ ಲೇವಿಯರಿಗೆ ಸ್ವಾಸ್ತ್ಯ ಇರಬಾರದು.

[24] ಇಸ್ರಾಯೇಲರು ಯೆಹೋವ ದೇವರಿಗೆ ಬಲಿಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ. ಆದಕಾರಣ, ‘ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸೊತ್ತು ಇರಬಾರದು ಎಂದು ನಾನು ಅವರಿಗೆ ಹೇಳಿದ್ದೇನೆ,’ ” ಎಂದರು.

[25] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,

[26] “ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ಇಸ್ರಾಯೇಲರಿಂದ ನೀವು ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯದರಿಂದ ಒಂದು ಪಾಲನ್ನು ಪ್ರತ್ಯೇಕಿಸಿ ಯೆಹೋವ ದೇವರಿಗೆ ಸಮರ್ಪಿಸಬೇಕು.

[27] ಈ ನಿಮ್ಮ ಸಮರ್ಪಣೆಯನ್ನು ಕಣದ ಧಾನ್ಯದ ಹಾಗೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುವುದು.

[28] ಈ ಪ್ರಕಾರ ನೀವು ಸಹ ಇಸ್ರಾಯೇಲರ ಕಡೆಯಿಂದ ತೆಗೆದುಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯ ಒಂದು ಭಾಗವನ್ನು ಯೆಹೋವ ದೇವರಿಗೆ ಕಾಣಿಕೆಯಾಗಿ ಅರ್ಪಿಸಬೇಕು, ನೀವು ಅದರಿಂದ ಯೆಹೋವ ದೇವರ ಯಾಜಕನಾದ ಆರೋನನಿಗೆ ಕೊಡಬೇಕು.

[29] ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಅದರ ಒಂದೊಂದರ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಯೆಹೋವ ದೇವರಿಗೆ ಸಮರ್ಪಣೆಯಾಗಿ ಅರ್ಪಿಸಬೇಕು.’

[30] “ನೀನು ಲೇವಿಯರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಅದರಲ್ಲಿ ಉತ್ತಮವಾದದ್ದನ್ನು ಸಮರ್ಪಿಸಿದ ನಂತರ ಉಳಿದವುಗಳನ್ನು ಕಣದಲ್ಲಿನ ದವಸದಂತೆಯೂ ದ್ರಾಕ್ಷಿತೊಟ್ಟಿಯ ರಸದಂತೆಯೂ ಪರಿಗಣಿಸಲಾಗುತ್ತದೆ.

[31] ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಏಕೆಂದರೆ ದೇವದರ್ಶನದ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ಅದು ನಿಮಗೆ ಪ್ರತಿಫಲವಾಗಿದೆ.

[32] ಆದಕಾರಣ ನೀವು ಅದರಲ್ಲಿ ಉತ್ತಮವಾದದ್ದನ್ನು ಅರ್ಪಿಸಿದಾಗ, ಅದರ ದೆಸೆಯಿಂದ ಯಾವ ದೋಷಕ್ಕೂ ನೀವು ಗುರಿಯಾಗುವುದಿಲ್ಲ. ಇಸ್ರಾಯೇಲರು ಸಮರ್ಪಿಸುವ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ನೀವು ಸಾಯುವುದಿಲ್ಲ,’ ” ಎಂದರು.

ಅರಣ್ಯಕಾಂಡ — Chapters