[1] ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು.
[2] ಆದ್ದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆ ಮತ್ತು ಯಾಜಕನಾದ ಎಲಿಯಾಜರನ ಬಳಿಗೂ ಸಭೆಯ ಪ್ರಧಾನರಿಗೂ ಬಳಿಗೂ ಬಂದು ಮಾತನಾಡಿ:
[3] “ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು,
[4] ಯೆಹೋವ ದೇವರು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪ್ರದೇಶವು ಪಶುಗಳ ಮೇವಿಗೆ ಸೂಕ್ತವಾಗಿದೆ. ನಿಮ್ಮ ಸೇವಕರಿಗೂ ಪಶುಗಳು ಉಂಟು.
[5] ಆದ್ದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯೆಯು ಸಿಕ್ಕಿದ್ದಾದರೆ, ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು. ನಮ್ಮನ್ನು ಯೊರ್ದನ್ ನದಿಯ ಆಚೆಗೆ ತೆಗೆದುಕೊಂಡು ಹೋಗಬೇಡಿರಿ,” ಎಂದರು.
[6] ಆಗ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲಿ ಕುಳಿತಿರಬೇಕೋ?
[7] ಯೆಹೋವ ದೇವರು ಅವರಿಗೆ ಕೊಟ್ಟ ದೇಶಕ್ಕೆ ಹೋಗುವುದಕ್ಕೆ ನೀವು ಇಸ್ರಾಯೇಲರ ಹೃದಯಗಳನ್ನು ಅಧೈರ್ಯಪಡಿಸುವುದು ಏಕೆ?
[8] ನಾನು ದೇಶವನ್ನು ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ಅವರನ್ನು ಕಳುಹಿಸಿದಾಗ, ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
[9] ಹೇಗೆಂದರೆ ಅವರು ಎಷ್ಕೋಲೆಂಬ ಹಳ್ಳದವರೆಗೆ ಬಂದು, ದೇಶವನ್ನು ನೋಡಿದಾಗ, ಇಸ್ರಾಯೇಲರ ಹೃದಯವನ್ನು ಯೆಹೋವ ದೇವರು ಅವರಿಗೆ ಕೊಟ್ಟ ದೇಶದ ಒಳಗೆ ಹೋಗದ ಹಾಗೆ ಅಧೈರ್ಯಪಡಿಸಿದನು.
[10] ಯೆಹೋವ ದೇವರು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವರಾಗಿ ಪ್ರಮಾಣಮಾಡಿ,
[11] ಅವರು ನನ್ನನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸದೆ ಇರುವುದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶವನ್ನು ಈಜಿಪ್ಟಿನೊಳಗಿಂದ ಹೊರಬಂದ ಇಪ್ಪತ್ತು ವರ್ಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ
[12] ಯೆಹೋವ ದೇವರನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸಿದ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಬೇರಾರೂ ನೋಡುವುದಿಲ್ಲ.
[13] ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು.
[14] “ನಿಮ್ಮ ಪಿತೃಗಳ ಬದಲಾಗಿ ಬಂದಿರುವ ನೀವು, ಪಾಪಿಗಳಾಗಿ ಇಸ್ರಾಯೇಲ್ ಕುರಿತು ಯೆಹೋವ ದೇವರ ಕೋಪವನ್ನೂ ಮತ್ತಷ್ಟು ಹೆಚ್ಚಿಸುತ್ತಿದ್ದೀರಲ್ಲಾ.
[15] ಏಕೆಂದರೆ ನೀವು ದೇವರ ಕಡೆಯಿಂದ ತೊಲಗಿದರೆ, ದೇವರು ಅವರನ್ನು ಮರುಭೂಮಿಯಲ್ಲಿಯೇ ಇರಿಸಿಬಿಡುವನು. ನೀವು ಈ ಸಮಸ್ತ ಜನರ ನಾಶಕ್ಕೆ ನೀವೇ ಕಾರಣರಾಗುವಿರಿ,” ಎಂದು ಹೇಳಿದನು.
[16] ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ, ನಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು.
[17] ಆದರೆ ನಾವು ಇಸ್ರಾಯೇಲರ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವವರೆಗೆ ಯುದ್ಧಕ್ಕೆ ಸಿದ್ಧರಾಗಿ ಓಡುವೆವು. ನಮ್ಮ ಸ್ತ್ರೀಯರು ಮತ್ತು ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು.
[18] ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಸೊತ್ತನ್ನು ಹೊಂದಿಕೊಳ್ಳುವವರೆಗೆ, ನಾವು ನಮ್ಮ ಮನೆಗಳಿಗೆ ತಿರುಗುವುದಿಲ್ಲ.
[19] ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸೊತ್ತನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಸೊತ್ತು ನಮಗೆ ಯೊರ್ದನ್ ನದಿಯ ಈಚೆ ಪೂರ್ವದಿಕ್ಕಿನಲ್ಲಿ ಬಂತು,” ಎಂದನು.
[20] ಮೋಶೆಯು ಅವರಿಗೆ, “ನೀವು ಈ ಕಾರ್ಯವನ್ನು ಮಾಡಿದರೆ, ನೀವು ಯೆಹೋವ ದೇವರ ಮುಂದೆ ಯುದ್ಧಕ್ಕೆ ಸಿದ್ಧವಾಗಿದ್ದರೆ,
[21] ನಿಮ್ಮಲ್ಲಿ ಸಿದ್ಧವಾದವರೆಲ್ಲರೂ ಯೆಹೋವ ದೇವರು ತಮ್ಮ ಶತ್ರುಗಳನ್ನು ತಮ್ಮ ಸನ್ನಿಧಿಯಿಂದ ಹೊರಡಿಸುವವರೆಗೆ, ಯೆಹೋವ ದೇವರ ಮುಂದೆ ಯೊರ್ದನ್ ನದಿಯನ್ನು ದಾಟಿದರೆ,
[22] ದೇಶವು ಯೆಹೋವ ದೇವರ ಮುಂದೆ ವಶವಾದ ತರುವಾಯ, ನೀವು ಯೆಹೋವ ದೇವರ ಮತ್ತು ಇಸ್ರಾಯೇಲರ ದೃಷಿಯಲ್ಲಿ ನಿರಪರಾಧಿಗಳಾಗಿದ್ದು, ಈ ದೇಶವು ಯೆಹೋವ ದೇವರ ಮುಂದೆ ನಿಮ್ಮ ಸೊತ್ತಾಗುವುದು.
[23] “ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಯೆಹೋವ ದೇವರ ವಿರೋಧವಾಗಿ ಪಾಪಮಾಡಿದವರಾಗುವಿರಿ, ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವುದೆಂದು ತಿಳಿದುಕೊಳ್ಳಿರಿ.
[24] ನಿಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿ, ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ,” ಎಂದು ಹೇಳಿದನು.
[25] ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ, “ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು.
[26] ನಮ್ಮ ಮಕ್ಕಳೂ, ನಮ್ಮ ಹೆಂಡತಿಯರೂ, ನಮ್ಮ ಸಂಪತ್ತೂ ನಮ್ಮ ಪಶುಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ.
[27] ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರೂ ನಮ್ಮ ಒಡೆಯನು ಹೇಳಿದ ಪ್ರಕಾರ ಯೆಹೋವ ದೇವರ ಮುಂದೆ ಯುದ್ಧಕ್ಕೆ ದಾಟಿಹೋಗುವರು,” ಎಂದರು.
[28] ಆಗ ಮೋಶೆಯು ಅವರ ವಿಷಯವಾಗಿ ಯಾಜಕನಾದ ಎಲಿಯಾಜರನಿಗೂ, ನೂನನ ಮಗ ಯೆಹೋಶುವನಿಗೂ, ಇಸ್ರಾಯೇಲರ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದರು.
[29] ಮೋಶೆಯು ಅವರಿಗೆ, “ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಎಲ್ಲರೂ ಯುದ್ಧಕ್ಕೆ ಸಿದ್ಧವಾಗಿದ್ದು, ನಿಮ್ಮ ಸಂಗಡ ಯೊರ್ದನ್ ನದಿಯನ್ನು ಯೆಹೋವ ದೇವರ ಮುಂದೆ ದಾಟಿದರೆ, ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸೊತ್ತಾಗಿ ಕೊಡಬೇಕು.
[30] ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟಿ ಬಾರದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿಯೇ ಸೊತ್ತನ್ನು ಹೊಂದಿಕೊಳ್ಳಬೇಕು,” ಎಂದನು.
[31] ಆಗ ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಉತ್ತರವಾಗಿ, “ಯೆಹೋವ ದೇವರು ನಿನ್ನ ಸೇವಕರಿಗೆ ಹೇಳಿದ್ದಂತೆಯೇ ನಾವು ಮಾಡುವೆವು.
[32] ನಾವು ಯುದ್ಧಕ್ಕೆ ಸಿದ್ಧವಾಗಿ ಯೆಹೋವ ದೇವರ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು. ಆದರೆ ಯೊರ್ದನ್ ನದಿಯ ಈಚೆಯಲ್ಲಿರುವ ನಮ್ಮ ಸೊತ್ತಿನ ಭಾಗವೇ ನಮಗಿರಲಿ,” ಎಂದು ಹೇಳಿದರು.
[33] ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಅರಸನಾದ ಓಗನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅದರ ಭೂಮಿಯನ್ನೂ, ಅದರ ಮೇರೆಗಳಲ್ಲಿ ಸುತ್ತಮುತ್ತಲ ಪಟ್ಟಣಗಳನ್ನೂ ಕೊಟ್ಟನು.
[34] ಗಾದನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್,
[35] ಅಟ್ರೋತ್ಷೋಫಾನ್, ಯಜ್ಜೇರ್, ಯೊಗ್ಬೆಹಾ,
[36] ಬೇತ್ ನಿಮ್ರಾ ಮತ್ತು ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ, ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದರು.
[37] ರೂಬೇನನ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್,
[38] ನೆಬೋ, ಬಾಳ್ ಮೆಯೋನ್ ಎಂದು ಬೇರೆ ಈ ಹೆಸರು ಹೊಂದಿದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ, ತಾವು ಕಟ್ಟಿದ ಪಟ್ಟಣಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.
[39] ಮನಸ್ಸೆಯ ಮಗ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ, ಅದನ್ನು ತೆಗೆದುಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು.
[40] ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗ ಮಾಕೀರನಿಗೆ ಕೊಟ್ಟಿದ್ದರಿಂದ, ಅವನು ಅದರಲ್ಲಿ ವಾಸಿಸಿದನು.
[41] ಆದರೆ ಮನಸ್ಸೆಯ ಮಗ ಯಾಯೀರನು ಹೋಗಿ, ಅವರ ನಗರಗಳನ್ನು ತೆಗೆದುಕೊಂಡು, ಅವುಗಳಿಗೆ ಯಾಯೀರನ ಹಳ್ಳಿಗಳೆಂದು ಹೆಸರಿಟ್ಟನು.
[42] ನೋಬಹನು ಹೋಗಿ ಕೆನಾತ್ ಎಂಬ ಪಟ್ಟಣವನ್ನೂ, ಅದರ ಗ್ರಾಮಗಳನ್ನೂ ತೆಗೆದುಕೊಂಡು, ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂಬ ಹೆಸರಿಟ್ಟನು.