Skip to content
Opens in a new window
Listen to this chapter • 6:21

[1] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,

[2] “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’

[3] ನೀನು ಅವರಿಗೆ ಹೇಳಬೇಕಾದದ್ದು: ‘ನೀವು ಯೆಹೋವ ದೇವರಿಗೆ ಅರ್ಪಿಸಬೇಕಾದ ಅರ್ಪಣೆ ಏನೆಂದರೆ, ನಿಯಮಿತವಾಗಿ ಪ್ರತಿದಿನ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನು ದಹನಬಲಿಯಾಗಿ ಅರ್ಪಿಸಬೇಕು.

[4] ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.

[5] ಧಾನ್ಯ ಅರ್ಪಣೆಗಾಗಿ ಸುಮಾರು ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ ಸಮರ್ಪಿಸಬೇಕು.

[6] ಇದು ಸೀನಾಯಿ ಪರ್ವತದಲ್ಲಿ ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.

[7] ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.

[8] ಎರಡನೆಯ ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಬೆಳಿಗ್ಗೆ ಮಾಡಿದಂತೆಯೇ, ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.

[9] “ ‘ಆದರೆ ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನೂ, ಓಲಿವ್ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಗೋಧಿಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.

[10] ನಿತ್ಯ ದಹನಬಲಿಯ ಹೊರತು, ಪ್ರತಿ ಸಬ್ಬತ್ ದಿನಕ್ಕೆ ತಕ್ಕ ದಹನಬಲಿಯೂ ಅದರ ಪಾನದ ಅರ್ಪಣೆಯೂ ಇದೇ.

[11] “ ‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,

[12] ಒಂದೊಂದು ಹೋರಿಗೆ ಧಾನ್ಯ ಅರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ ಹಿಟ್ಟನ್ನೂ,

[13] ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.

[14] ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.

[15] ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.

[16] “ ‘ಆದರೆ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನವು ಯೆಹೋವ ದೇವರ ಪಸ್ಕಹಬ್ಬವಾಗಿರಬೇಕು.

[17] ಆ ತಿಂಗಳ ಹದಿನೈದನೆಯ ದಿನವು ಹಬ್ಬವಾಗಿದೆ. ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.

[18] ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.

[19] ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.

[20] ಅವುಗಳ ಧಾನ್ಯ ಸಮರ್ಪಣೆಯನ್ನೂ, ಎಣ್ಣೆ ಕಲಸಿದ ಐದು ಕಿಲೋಗ್ರಾಂ ಹಿಟ್ಟನ್ನು ಒಂದೊಂದು ಹೋರಿಗೆ, ಹತ್ತನೇ ಎರಡು ಭಾಗ ಟಗರಿಗೂ ಅರ್ಪಿಸಬೇಕು.

[21] ಮತ್ತು ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಸುಮಾರು ಒಂದುವರೆ ಕಿಲೋಗ್ರಾಂ ಅರ್ಪಿಸಬೇಕು.

[22] ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.

[23] ನಿತ್ಯ ದಹನಬಲಿಯಾಗಿರುವ ಮುಂಜಾನೆಯ ದಹನಬಲಿಯ ಹೊರತಾಗಿ ಇವುಗಳನ್ನು ನೀವು ಅರ್ಪಿಸಬೇಕು.

[24] ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೆ ಪ್ರತಿದಿನವೂ ಯೆಹೋವ ದೇವರಿಗೆ ಸುವಾಸನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು. ಅದನ್ನೂ ಅದಕ್ಕೆ ತಕ್ಕ ಪಾನಾರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.

[25] ಏಳನೆಯ ದಿವಸದಲ್ಲಿ ಪರಿಶುದ್ಧವಾದ ಸಭೆ ಕೂಡಬೇಕು. ಆ ದಿನದಲ್ಲಿ ನೀವು ದೈನಂದಿನ ಉದ್ಯೋಗವನ್ನೂ ಮಾಡಬೇಡಿರಿ.

[26] “ ‘ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಯೆಹೋವ ದೇವರಿಗೆ ನಿಮ್ಮ ವಾರಗಳಲ್ಲಿ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸುವಾಗ, ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡದೆ ಪವಿತ್ರ ಸಭೆ ಕೂಡಬೇಕು.

[27] ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,

[28] ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಸುಮಾರು ಐದು ಕಿಲೋಗ್ರಾಂ ಹಿಟ್ಟನ್ನು ಪ್ರತಿಯೊಂದು ಹೋರಿಗೆ, ಸುಮಾರು ಮೂರುವರೆ ಕಿಲೋಗ್ರಾಂ ಟಗರಿಗೂ

[29] ಏಳು ಕುರಿಮರಿಗಳಲ್ಲಿ ಸುಮಾರು ಒಂದುವರೆ ಕಿಲೋಗ್ರಾಂ,

[30] ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಒಂದು ಹೋತವನ್ನು ಸಮರ್ಪಿಸಬೇಕು.

[31] ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.

ಅರಣ್ಯಕಾಂಡ — Chapters