[1] ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
[2] “ಇಸ್ರಾಯೇಲರ ಸಂಗಡ ನೀನು ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ಒಬ್ಬನು ಪ್ರತ್ಯೇಕವಾಗಿ ಯೆಹೋವ ದೇವರಿಗೆ ಹರಕೆಮಾಡಿ ಪ್ರತಿಷ್ಠಿಸಿಕೊಂಡರೆ, ನೀನು ನೇಮಿಸಿದ ಕ್ರಯದ ಪ್ರಕಾರ ಜನರು ಕೊಡಬೇಕು.
[3] ನೀನು ನೇಮಿಸಬೇಕಾದ ಕ್ರಯವು ಯಾವುದೆಂದರೆ, ಇಪ್ಪತ್ತರಿಂದ ಅರವತ್ತು ವಯಸ್ಸುಳ್ಳ ಪುರುಷನಿಗೆ ನೀನು ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಐವತ್ತು ಶೆಕೆಲ್ ಆಗಿರಬೇಕು.
[4] ಹೆಣ್ಣಾಗಿದ್ದರೆ, ನೀನು ನೇಮಿಸುವ ಕ್ರಯವು ಮೂವತ್ತು ಶೆಕೆಲ್ ಆಗಿರಬೇಕು.
[5] ಐದರಿಂದ ಇಪ್ಪತ್ತು ವಯಸ್ಸುಳ್ಳ ಪುರುಷನ ಕ್ರಯವು ಇಪ್ಪತ್ತು ಶೆಕೆಲ್, ಸ್ತ್ರೀ ಕ್ರಯವು ಹತ್ತು ಶೆಕೆಲ್ ಆಗಿರಬೇಕು.
[6] ಒಂದು ತಿಂಗಳಿಂದ ಐದು ವಯಸ್ಸುಳ್ಳ ಹುಡುಗನ ಕ್ರಯವು ಐದು ಶೆಕೆಲ್, ಹುಡುಗಿಯ ಕ್ರಯವು ಮೂರು ಶೆಕೆಲ್ ಆಗಿರಬೇಕು.
[7] ಅರವತ್ತು ವರುಷವೂ, ಅದಕ್ಕೂ ಹೆಚ್ಚಾದ ಪ್ರಾಯವುಳ್ಳ ಪುರುಷನಾಗಿದ್ದರೆ, ನೀನು ನೇಮಿಸುವ ಕ್ರಯವು ಹದಿನೈದು ಶೆಕೆಲ್, ಸ್ತ್ರೀಗೆ ಹತ್ತು ಶೆಕೆಲ್ ಆಗಿರಬೇಕು.
[8] ಆದರೆ ನೀನು ನೇಮಿಸಿದ ಕ್ರಯವನ್ನು ಕೊಡದಷ್ಟು ಅವನು ಬಡವನಾಗಿದ್ದರೆ, ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು. ಪ್ರಮಾಣ ಮಾಡಿದವನ ಸಂಪತ್ತಿಗೆ ತಕ್ಕಂತೆ ಯಾಜಕನು ಅವನಿಗೆ ಕ್ರಯವನ್ನು ನಿರ್ಣಯಿಸಬೇಕು.
[9] “ ‘ಆದರೆ ಯೆಹೋವ ದೇವರಿಗೆ ಸಮರ್ಪಿಸಬೇಕಾದ ಪಶುಗಳ ಜಾತಿಯಲ್ಲಿ ಯಾವುದಾಗಿದ್ದರೂ, ಅವುಗಳಲ್ಲಿ ಯೆಹೋವ ದೇವರಿಗೆ ಕೊಡುವಂಥದ್ದು ಪರಿಶುದ್ಧವಾಗಿರಬೇಕು.
[10] ಅದನ್ನು ಒಳ್ಳೆಯದಕ್ಕೆ ಕೆಟ್ಟದ್ದನ್ನಾಗಲಿ, ಕೆಟ್ಟದ್ದಕ್ಕೆ ಒಳ್ಳೆಯದನ್ನಾಗಲಿ ಬದಲು ಮಾಡಬಾರದು, ಮಾರ್ಪಡಿಸಲೂಬಾರದು. ಅವನು ಗೊತ್ತುಮಾಡಿದ ಒಂದು ಪಶುವಿಗೆ ಮತ್ತೊಂದನ್ನು ಬದಲು ಮಾಡಿದರೆ, ಅದು ಮತ್ತು ಅದರ ಬದಲಾಗಿಟ್ಟ ಪಶು ಇವೆರಡೂ ಯೆಹೋವ ದೇವರಿಗೆ ಪರಿಶುದ್ಧವಾಗಿರಬೇಕು.
[11] ಅದು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಪಶುವು ಅಶುದ್ಧವಾಗಿದ್ದರೆ, ಆ ಪಶುವನ್ನು ಅವನು ಯಾಜಕನ ಮುಂದೆ ನಿಲ್ಲಿಸಬೇಕು.
[12] ಆಗ ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಅದಕ್ಕೆ ಕ್ರಯ ಕಟ್ಟಬೇಕು. ಯಾಜಕನು ನಿರ್ಧರಿಸಿದ ಕ್ರಯವೇ ಅಂತಿಮ ಕ್ರಯವಾಗಿರಬೇಕು.
[13] ಹರಕೆ ಮಾಡುವವನು ಅದನ್ನು ಹೇಗಾದರೂ ವಿಮೋಚಿಸಬೇಕೆಂದಿದ್ದರೆ, ನೀನು ನಿರ್ಧರಿಸಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಪಾಲನ್ನು ಅದಕ್ಕೆ ಕೂಡಿಸಬೇಕು.
[14] “ ‘ಒಬ್ಬನು ತನ್ನ ಮನೆಯನ್ನು ಯೆಹೋವ ದೇವರಿಗೆ ಪರಿಶುದ್ಧವಾಗಿರಲೆಂದು ಪ್ರತಿಷ್ಠೆಪಡಿಸಿದರೆ, ಯಾಜಕನು ಅದು ಒಳ್ಳೆಯದೋ, ಕೆಟ್ಟದ್ದೋ ಎಂದು ಪರೀಕ್ಷಿಸಿ ಕ್ರಯವನ್ನು ಕಟ್ಟಬೇಕು. ಯಾಜಕನು ನಿರ್ಧರಿಸಿದ ಬೆಲೆಯೇ ಸ್ಥಿರವಾಗಿರಬೇಕು.
[15] ಆದರೆ ಪ್ರತಿಷ್ಠೆ ಪಡಿಸಿದವನು ತನ್ನ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೇ ಒಂದು ಭಾಗ ಹಣವನ್ನು ಕೊಡಲಿ, ಆಗ ಅದು ಅವನದಾಗಿರುವುದು.
[16] “ ‘ಒಬ್ಬನು ತನ್ನ ಸ್ವಾಸ್ತ್ಯದ ಹೊಲದಲ್ಲಿ ಏನಾದರೂ ಯೆಹೋವ ದೇವರಿಗೆ ಪ್ರತಿಷ್ಠಿಸಿದರೆ, ಅದರ ಬೀಜದ ಪ್ರಕಾರ ಕ್ರಯ ಕಟ್ಟಬೇಕು. ಒಂದು ಓಮೆರ್ ಜವೆಗೋಧಿಯನ್ನು, ಬೀಜಕ್ಕೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಡಬೇಕಾಗುವುದು.
[17] ಜೂಬಿಲಿ ಸಂವತ್ಸರ ಮೊದಲುಗೊಂಡು ಅವನು ತನ್ನ ಹೊಲವನ್ನು ಪ್ರತಿಷ್ಠಿಸಿದರೆ, ನೀನು ಕಟ್ಟುವ ಕ್ರಯದ ಪ್ರಕಾರ ಅದು ಸ್ಥಿರವಾಗಿರಬೇಕು.
[18] ಆದರೆ ಜೂಬಿಲಿ ಸಂವತ್ಸರವಾದ ಮೇಲೆ ತನ್ನ ಹೊಲವನ್ನು ಪ್ರತಿಷ್ಠೆ ಮಾಡಿದರೆ, ಜೂಬಿಲಿ ಸಂವತ್ಸರದವರೆಗೆ ಮಿಕ್ಕ ವರ್ಷಗಳ ಲೆಕ್ಕದ ಪ್ರಕಾರ ಯಾಜಕನು ಅವನಿಗೆ ಹಣವನ್ನು ನಿರ್ಧರಿಸಿ, ಕಟ್ಟಿದ ಕ್ರಯದಿಂದ ಕಳೆಯಬೇಕು.
[19] ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿದವನು ಅದನ್ನು ಅವನು ವಿಮೋಚಿಸಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಒಂದು ಪಾಲನ್ನು ಕೊಡಬೇಕು. ಆಗ ಅದು ಸ್ಥಿರವಾಗಿರುವುದು.
[20] ಆದರೆ ಅವನು ಹೊಲವನ್ನು ವಿಮೋಚಿಸದೆ ಹೋದರೆ, ಇಲ್ಲವೆ ಮತ್ತೊಬ್ಬನಿಗೆ ಆ ಹೊಲವನ್ನು ಮಾರಿದ್ದರೆ, ಅದನ್ನು ಅನಂತರ ವಿಮೋಚಿಸಕೂಡದು.
[21] ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಬಿಡುಗಡೆಯಾಗುವಾಗ ಆ ಹೊಲವು ಯೆಹೋವ ದೇವರಿಗೆ ಪವಿತ್ರವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು, ಅದು ಯಾಜಕನಿಗೆ ಸಲ್ಲಬೇಕು.
[22] “ ‘ಆದರೆ ತನ್ನ ಹೊಲಗಳಲ್ಲಿ ಅಂದರೆ ಪಿತ್ರಾರ್ಜಿತ ಭೂಮಿಗೆ ಸೇರದಂಥ ಹೊಲವನ್ನು ಯೆಹೋವ ದೇವರಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ,
[23] ಯಾಜಕನು ಅವನಿಗೆ ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದವರೆಗೂ ಎಣಿಸಬೇಕು. ಅವನು ಆ ದಿವಸದಲ್ಲಿ ಕಟ್ಟಿದ ಕ್ರಯವನ್ನು ಯೆಹೋವ ದೇವರಿಗೆ ಮೀಸಲಾದದ್ದು ಎಂದು ಭಾವಿಸಿ ಕೊಡಬೇಕು.
[24] ಆ ಹೊಲವು ಯಾರಿಗೆ ಸ್ವಂತವಾಗಿದ್ದು, ಯಾರಿಂದ ಕೊಂಡುಕೊಳ್ಳಲಾಗಿದೆಯೋ ಅದು ಜೂಬಿಲಿ ವರ್ಷದಲ್ಲಿ ಅವರಿಗೇ ಹಿಂದಕ್ಕೆ ಕೊಡಬೇಕು.
[25] ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಇಪ್ಪತ್ತು ಗೇರಾ ತೂಕದ ಶೆಕೆಲ್ ಮೇರೆಗೆ ನೀವು ಕ್ರಯವನ್ನು ನಿಗದಿಮಾಡಬೇಕು.
[26] “ ‘ಪಶುಗಳ ಚೊಚ್ಚಲ ಮರಿ ಯೆಹೋವ ದೇವರದಾದ್ದರಿಂದ ಅದನ್ನೂ ಹರಕೆಯಾಗಿ ಕೊಡಬಾರದು. ಅದು ಎತ್ತಾಗಲಿ ಇಲ್ಲವೆ ಕುರಿಯಾಗಲಿ, ಅದು ಯೆಹೋವ ದೇವರದೇ.
[27] ಆದರೆ ಅದು ಅಶುದ್ಧ ಪಶುಗಳಲ್ಲಿ ಹುಟ್ಟಿದ್ದಾಗಿದ್ದರೆ, ಹರಕೆ ಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆಹೋದರೆ ಅದನ್ನು ಕಟ್ಟಿದ ಕ್ರಯದ ಪ್ರಕಾರ ಮಾರಬೇಕು.
[28] “ ‘ಯಾರಾದರೂ ಮನುಷ್ಯನನ್ನಾಗಲಿ, ಪಶುವನ್ನಾಗಲಿ, ಪಿತ್ರಾರ್ಜಿತ ಹೊಲವನ್ನಾಗಲಿ ತನಗಿದ್ದ ಬೇರೆ ಯಾವುದನ್ನಾಗಲಿ ಒಬ್ಬ ಮನುಷ್ಯನು ಯೆಹೋವ ದೇವರಿಗಾಗಿ ಮೀಸಲಾಗಿಟ್ಟಿದ್ದರೆ, ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು. ಮೀಸಲಾಗಿರುವ ಪ್ರತಿಯೊಂದೂ ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.
[29] “ ‘ಯೆಹೋವ ದೇವರಿಗೆಂದು ಮೀಸಲಾದದನ್ನು ಯಾರೂ ಕ್ರಯಕೊಟ್ಟು ವಿಮೋಚಿಸಬಾರದು. ಅಂಥವನಿಗೆ ಮರಣವೇ ಆಗಬೇಕು.
[30] “ ‘ಭೂಮಿಯ ಬೀಜದಲ್ಲಾಗಲಿ, ಮರದ ಫಲದಲ್ಲಾಗಲಿ ಹತ್ತನೆಯ ಒಂದು ಪಾಲೆಲ್ಲಾ ಯೆಹೋವ ದೇವರದೇ. ಅದು ಯೆಹೋವ ದೇವರಿಗೆ ಪರಿಶುದ್ಧವಾದದ್ದು.
[31] ಯಾವನಾದರೂ ತನ್ನ ಹತ್ತನೆಯ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ, ಅದಕ್ಕಿಂತ ಹೆಚ್ಚಾಗಿ ಅದರ ಐದನೆಯ ಒಂದು ಪಾಲನ್ನು ಕೊಡಬೇಕು.
[32] ಇದಲ್ಲದೆ ದನಕುರಿಗಳಲ್ಲಿಯೂ, ಕುರುಬನು ಎಣಿಸುವ ಪಶುಗಳಲ್ಲಿಯೂ ಹತ್ತನೆಯ ಪಾಲು, ಹತ್ತರಲ್ಲಿ ಒಂದು ಯೆಹೋವ ದೇವರಿಗೆ ಪರಿಶುದ್ಧವಾಗಿರುವುದು.
[33] ಆ ಪಶು ಒಳ್ಳೆಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸಬಾರದು. ಅವನು ಅದನ್ನು ಬದಲಾಯಿಸಬಾರದು. ಯಾರಾದರೂ ಅದನ್ನು ಬದಲಾಯಿಸಿದ್ದಾದರೆ, ಆಗ ಎರಡೂ ಪಶುಗಳು ಯೆಹೋವ ದೇವರಿಗೆ ಸೇರುತ್ತದೆ, ಅದು ಪರಿಶುದ್ಧವಾಗಿರುತ್ತದೆ ಅದನ್ನು ವಿಮೋಚಿಸಬಾರದು.’ ”
[34] ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲರಿಗಾಗಿ ಕೊಟ್ಟ ಆಜ್ಞೆಗಳು ಇವೇ.