Skip to content
Opens in a new window
Listen to this chapter • 5:24

[1] ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ವರ್ಷದ ಮೊದಲನೆಯ ತಿಂಗಳಿನಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಯ ಸಂಗಡ ಮಾತನಾಡಿ ಹೀಗೆ ಹೇಳಿದರು:

[2] “ಇಸ್ರಾಯೇಲರು ಪಸ್ಕವನ್ನು ನೇಮಿಸಿದ ಸಮಯದಲ್ಲಿ ಆಚರಿಸಬೇಕು.

[3] ಈ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಅದನ್ನು ಆಚರಿಸಬೇಕು. ಅದರ ಆಜ್ಞಾವಿಧಿಗಳ ಪ್ರಕಾರವಾಗಿಯೂ, ಅದರ ಎಲ್ಲಾ ನಿಯಮಗಳ ಪ್ರಕಾರವಾಗಿಯೂ ಅದನ್ನು ಆಚರಿಸಿರಿ.”

[4] ಆಗ ಮೋಶೆಯು ಪಸ್ಕವನ್ನು ಆಚರಿಸುವುದಕ್ಕೆ ಇಸ್ರಾಯೇಲರ ಸಂಗಡ ಮಾತನಾಡಿದನು.

[5] ಅವರು ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆ ಸೀನಾಯಿ ಮರುಭೂಮಿಯಲ್ಲಿ ಪಸ್ಕವನ್ನು ಆಚರಿಸಿದರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ, ಇಸ್ರಾಯೇಲರು ಮಾಡಿದರು.

[6] ಆದರೆ ಕೆಲವು ಜನರು ಮನುಷ್ಯನ ಶವವನ್ನು ಮುಟ್ಟಿದ್ದರಿಂದ ಅಶುದ್ಧರಾಗಿ ಆ ದಿವಸದಲ್ಲಿ ಪಸ್ಕಹಬ್ಬವನ್ನು ಆಚರಿಸಲಾಗಲಿಲ್ಲ ಅದಕ್ಕೆ ಅದೇ ದಿನ ಅವರು ಮೋಶೆ ಮತ್ತು ಆರೋನರ ಬಳಿಗೆ ಬಂದು

[7] ಮೋಶೆಯ ಸಂಗಡ ಮಾತನಾಡಿ, “ನಾವು ಮನುಷ್ಯನ ಶವದ ಸೋಂಕಿನಿಂದ ಅಶುದ್ಧರಾಗಿದ್ದೇವೆ. ಆದ್ದರಿಂದ ನಾವು ಇಸ್ರಾಯೇಲರೊಡನೆ ನೇಮಕವಾದ ಸಮಯದಲ್ಲಿ ಯೆಹೋವ ದೇವರಿಗೆ ಬಲಿಯನ್ನು ಅರ್ಪಿಸಲು ನಮಗೆ ಏಕೆ ಅಡ್ಡಿಯಾಗಬೇಕು,” ಎಂದರು.

[8] ಮೋಶೆ ಅವರಿಗೆ, “ಸ್ವಲ್ಪ ಕಾಯಿರಿ, ಯೆಹೋವ ದೇವರು ನಿಮ್ಮ ವಿಷಯದಲ್ಲಿ ಏನು ಆಜ್ಞಾಪಿಸುತ್ತಾರೋ ನಾನು ಕೇಳುತ್ತೇನೆ,” ಎಂದನು.

[9] ಯೆಹೋವ ದೇವರು ಮೋಶೆ ಸಂಗಡ ಮಾತನಾಡಿ ಅವನಿಗೆ,

[10] ನೀನು ಇಸ್ರಾಯೇಲರಿಗೆ, “ನಿಮ್ಮಲ್ಲಿಯೂ, ನಿಮ್ಮ ಸಂತತಿಯಲ್ಲಿಯೂ ಯಾವನಾದರೂ ಶವದ ಸೋಂಕಿನಿಂದ ಅಶುದ್ಧನಾಗಿದ್ದರೂ, ಇಲ್ಲವೆ ದೂರ ಪ್ರಯಾಣದಲ್ಲಿದ್ದರೂ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕು.

[11] ಆದರೆ ಅಂಥವರು ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದ ಸಂಜೆಯಲ್ಲಿ ಆಚರಿಸಲಿ. ಆ ಕುರಿಯನ್ನು ಹುಳಿಯಿಲ್ಲದ ರೊಟ್ಟಿಗಳ ಸಂಗಡ ಕಹಿಯಾದ ಸೊಪ್ಪುಗಳೊಂದಿಗೆ ಊಟಮಾಡಬೇಕು.

[12] ಅವರು ಅದರಿಂದ ಮರುದಿವಸಕ್ಕೆ ಏನನ್ನೂ ಉಳಿಸಬಾರದು. ಅದರಲ್ಲಿ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು, ಪಸ್ಕದ ಸಮಸ್ತ ಕಟ್ಟಳೆಗಳ ಪ್ರಕಾರವಾಗಿ ಅದನ್ನು ಆಚರಿಸಬೇಕು.

[13] ಆದರೆ ಒಬ್ಬ ಮನುಷ್ಯನೂ ಆಚಾರವಾಗಿ ಶುದ್ಧನಾದವನು, ಪ್ರಯಾಣ ಮಾಡದವನಾಗಿದ್ದು ಪಸ್ಕವನ್ನು ಆಚರಿಸಲು ತಪ್ಪಿದರೆ, ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು. ಅವನು ಯೆಹೋವ ದೇವರ ಅರ್ಪಣೆಯನ್ನು ಅದರ ಸಮಯದಲ್ಲಿ ತರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.

[14] “ಪರದೇಶಿಯಾದವನು ನಿಮ್ಮ ಸಂಗಡ ಇದ್ದು, ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸಬೇಕೆಂದು ಬಯಸಿದರೆ, ಅದರ ಆಜ್ಞಾವಿಧಿಗಳ ಪ್ರಕಾರವೇ ಆಚರಿಸಲಿ. ಸ್ಥಳೀಯ ಮೂಲದ ಇಸ್ರಾಯೇಲರಿಗೂ ಮತ್ತು ನಿಮ್ಮ ನಡುವೆ ವಾಸಿಸುವ ಪರದೇಶಸ್ತನಿಗೂ ಒಂದೇ ನಿಯಮ ಇರಬೇಕು,” ಎಂದು ಹೇಳಿದರು.

[15] ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರವನ್ನು ಮುಚ್ಚಿತು. ಸಂಜೆಯಿಂದ ಮುಂಜಾನೆಯವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು.

[16] ಈ ಪ್ರಕಾರ ಯಾವಾಗಲೂ, ಮೇಘವು ರಾತ್ರಿಯಲ್ಲಿ ಬೆಂಕಿಯಂತೆ ಅದನ್ನು ಮುಚ್ಚುತ್ತಿತ್ತು.

[17] ಆ ಮೇಘವು ಗುಡಾರದ ಮೇಲಿನಿಂದ ಹೋದಾಗ, ಇಸ್ರಾಯೇಲರು ಪ್ರಯಾಣ ಮಾಡುತ್ತಿದ್ದರು, ಮೇಘವು ನೆಲಸಿದ ಸ್ಥಳದಲ್ಲಿ ಇಸ್ರಾಯೇಲರು ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಿದ್ದರು.

[18] ಯೆಹೋವ ದೇವರ ಆಜ್ಞೆಯ ಪ್ರಕಾರ ಇಸ್ರಾಯೇಲರು ಪ್ರಯಾಣಮಾಡಿದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಗುಡಾರಗಳನ್ನು ಹಾಕಿದರು. ಮೇಘವು ಗುಡಾರದ ಮೇಲೆ ನೆಲಸಿರುವ ಕಾಲವೆಲ್ಲಾ ಅವರು ತಮ್ಮ ಗುಡಾರಗಳಲ್ಲಿ ವಾಸಿಸಿದರು.

[19] ಮೇಘವು ದೇವದರ್ಶನದ ಗುಡಾರದ ಮೇಲೆ ಅನೇಕ ದಿವಸಗಳು ತಡಮಾಡಿದಾಗ, ಇಸ್ರಾಯೇಲರು ಯೆಹೋವ ದೇವರ ಅಪ್ಪಣೆಯನ್ನು ಅನುಸರಿಸಿ ಪ್ರಯಾಣ ಮಾಡದೆ ಇರುತ್ತಿದ್ದರು.

[20] ಇದಲ್ಲದೆ ಮೇಘವು ಗುಡಾರದ ಮೇಲೆ ಸ್ವಲ್ಪ ದಿವಸಗಳು ಇರುವಾಗ, ಅವರು ಯೆಹೋವ ದೇವರ ಆಜ್ಞೆಯ ಪ್ರಕಾರ ಇಳಿದುಕೊಳ್ಳುತ್ತಿದ್ದರು. ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಿದ್ದರು.

[21] ಮೇಘವು ಸಂಜೆಯಿಂದ ಮುಂಜಾನೆಯವರೆಗೆ ಇದ್ದು, ಬೆಳಿಗ್ಗೆ ಮೇಲಕ್ಕೆ ಎದ್ದಾಗ, ಅವರು ಪ್ರಯಾಣ ಮಾಡುತ್ತಿದ್ದರು, ಹಗಲುರಾತ್ರಿ ಇದ್ದು ಮೇಘವು ಮೇಲಕ್ಕೇರಿದಾಗ ಅವರು ಪ್ರಯಾಣ ಮಾಡುತ್ತಿದ್ದರು.

[22] ಆ ಮೇಘವು ಎರಡು ದಿವಸಗಳಾದರೂ, ಒಂದು ತಿಂಗಳಾದರೂ, ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾಯೇಲರು ಪ್ರಯಾಣ ಮಾಡದೆ ಅಲ್ಲೇ ಇಳಿದುಕೊಳ್ಳುತ್ತಿದ್ದರು. ಅದು ಮೇಲೆ ಎದ್ದಾಗ ಮಾತ್ರ ಅವರು ಪ್ರಯಾಣ ಮಾಡುತ್ತಿದ್ದರು.

[23] ಯೆಹೋವ ದೇವರ ಆಜ್ಞೆಯ ಪ್ರಕಾರ ಅವರು ಇಳಿದುಕೊಳ್ಳುತ್ತಾ, ಯೆಹೋವ ದೇವರ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಯೆಹೋವ ದೇವರು ಆಜ್ಞಾಪಿಸಿದಂತೆ ಯೆಹೋವ ದೇವರ ಅಪ್ಪಣೆಯನ್ನು ಕೈಗೊಳ್ಳುತ್ತಿದ್ದರು.

ಅರಣ್ಯಕಾಂಡ — Chapters