[1] ಯೆಹೋವ ದೇವರು ಸೀನಾಯಿ ಪರ್ವತದಲ್ಲಿ ಮೋಶೆಯ ಸಂಗಡ ಮಾತನಾಡಿದ ದಿವಸದಲ್ಲಿ ಆರೋನನ ಮತ್ತು ಮೋಶೆಯ ಸಂತತಿಗಳು ಇವೇ.
[2] ಆರೋನನ ಮಕ್ಕಳುಗಳ ಹೆಸರುಗಳು: ಚೊಚ್ಚಲ ಮಗನು ನಾದಾಬ್, ತರುವಾಯ ಅಬೀಹೂ, ಎಲಿಯಾಜರ್ ಮತ್ತು ಈತಾಮಾರ್.
[3] ಯಾಜಕರಾಗಿ ಅಭಿಷೇಕ ಹೊಂದಿದ ಆರೋನನ ಮಕ್ಕಳುಗಳ ಹೆಸರುಗಳು ಇವೇ, ಇವರೇ ಯಾಜಕೋದ್ಯೋಗ ಮಾಡುವುದಕ್ಕೆ ಪ್ರತಿಷ್ಠಿತರಾದವರು.
[4] ಆದರೆ ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸದೇ ಇದ್ದ ಬೇರೆ ಬೆಂಕಿಯನ್ನು ಅರ್ಪಿಸಿದಾಗ, ಯೆಹೋವ ದೇವರ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ. ಹೀಗೆ ಎಲಿಯಾಜರನು, ಈತಾಮಾರನು ತಮ್ಮ ತಂದೆ ಆರೋನನ ಎದುರಿನಲ್ಲಿ ಯಾಜಕ ಉದ್ಯೋಗವನ್ನು ಮಾಡಿದರು.
[5] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
[6] “ಲೇವಿಯ ಗೋತ್ರವನ್ನು ಹತ್ತಿರ ಕರೆದು, ಯಾಜಕನಾದ ಆರೋನನ ಮುಂದೆ ನಿಲ್ಲಿಸು. ಅವರು ಅವನಿಗೆ ಸಹಾಯ ಮಾಡಲಿ.
[7] ಇದಲ್ಲದೆ ಅವರು ದೇವದರ್ಶನದ ಗುಡಾರದ ಬಳಿಯಲ್ಲಿದ್ದು ದೇವದರ್ಶನದ ಗುಡಾರದ ಸೇವೆಮಾಡುತ್ತಾ ಆರೋನನಿಗಾಗಿಯೂ ಸಮಸ್ತ ಸಮೂಹದವರಿಗಾಗಿಯೂ ಕರ್ತವ್ಯಗಳನ್ನು ನಿರ್ವಹಿಸಬೇಕು.
[8] ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು.
[9] ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸು. ಇಸ್ರಾಯೇಲರೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲಾದವರು ಇವರೇ.
[10] ಇದಲ್ಲದೆ ಯಾಜಕ ಉದ್ಯೋಗವನ್ನು ನಡೆಸುವುದಕ್ಕಾಗಿ ಆರೋನನನ್ನೂ ಅವನ ಪುತ್ರರನ್ನೂ ನೇಮಿಸಬೇಕು. ಪರಕೀಯನು ಸಮೀಪಿಸಿದರೆ ಸಾಯಬೇಕು.”
[11] ಯೆಹೋವ ದೇವರು ಮೋಶೆಗೆ ಹೀಗೆಂದರು:
[12] “ಪ್ರತಿಯೊಬ್ಬ ಇಸ್ರಾಯೇಲಿನ ಮಹಿಳೆಯ ಜೇಷ್ಠ ಮಗನಿಗೆ ಬದಲಾಗಿ ಇಸ್ರಾಯೇಲರೊಳಗಿಂದ ಲೇವಿಯರನ್ನು ತೆಗೆದುಕೊಂಡಿದ್ದೇನೆ. ಲೇವಿಯರು ನನಗೆ ಸೇರಿದವರು.
[13] ಏಕೆಂದರೆ ಜೇಷ್ಠರಾದವರೆಲ್ಲರೂ ನನ್ನವರೇ. ನಾನು ಈಜಿಪ್ಟ್ ದೇಶದಲ್ಲಿ ಜೇಷ್ಠರಾದವುಗಳನ್ನೆಲ್ಲಾ ಹೊಡೆದ ದಿವಸದಲ್ಲಿ ನಾನು ಇಸ್ರಾಯೇಲರಲ್ಲಿ ಪುರುಷರಾಗಲಿ, ಪಶುಗಳಾಗಲಿ ಚೊಚ್ಚಲಾದ ಪ್ರತಿಯೊಂದನ್ನು ನನಗಾಗಿ ಪ್ರತ್ಯೇಕಿಸಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಯೆಹೋವ ದೇವರು.”
[14] ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ ಹೇಳಿದ್ದೇನೆಂದರೆ:
[15] “ಲೇವಿಯರನ್ನು ಕುಟುಂಬಗಳಾಗಿಯೂ, ಗೋತ್ರಗಳಾಗಿಯೂ ಎಣಿಕೆ ಮಾಡು. ಒಂದು ತಿಂಗಳು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು,” ಎಂದರು.
[16] ಆಗ ಮೋಶೆಯು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು.
[17] ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್ ಮತ್ತು ಮೆರಾರೀ.
[18] ಗೇರ್ಷೋನ್ ಗೋತ್ರದವರು: ಲಿಬ್ನೀ ಹಾಗೂ ಶಿಮ್ಮೀ.
[19] ಕೊಹಾತನ ಗೋತ್ರದವರು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
[20] ಮೆರಾರೀಯ ಗೋತ್ರದವರು: ಮಹ್ಲೀ ಮತ್ತು ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರವಾಗಿ ಇವರೇ ಲೇವಿ ವಂಶದವರು.
[21] ಗೇರ್ಷೋನ್ ವಂಶಕ್ಕೆ ಸೇರಿದ ಲಿಬ್ನೀಯ ಕುಟುಂಬವೂ ಶಿಮ್ಮೀಯ ಕುಟುಂಬದವರೂ ಇದ್ದರು.
[22] ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಅವರ ಎಲ್ಲಾ ಗಂಡಸರ ಸಂಖ್ಯೆಯ ಪ್ರಕಾರ ಎಣಿಕೆಯಾದವರು 7,500 ಮಂದಿ.
[23] ಗೇರ್ಷೋನ್ಯರ ಕುಟುಂಬಗಳು ದೇವದರ್ಶನದ ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳಿದುಕೊಳ್ಳಬೇಕು.
[24] ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥನು ಲಾಯೇಲನ ಮಗ ಎಲ್ಯಾಸಾಫ್.
[25] ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾದವುಗಳು ಯಾವವೆಂದರೆ: ಗುಡಾರ, ಅದರ ಮೇಲಿನ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ,
[26] ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂತಹ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
[27] ಅಮ್ರಾಮಿಯರು, ಇಚ್ಹಾರರು, ಹೆಬ್ರೋನಿಯರು, ಉಜ್ಜೀಯೇಲರು; ಇವು ಕೊಹಾತನ ಕುಟುಂಬಗಳು.
[28] ಕೊಹಾತ್ಯರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 8,600 ಮಂದಿ. ಇವರು ಪರಿಶುದ್ಧ ಸ್ಥಳವನ್ನು ನೋಡಿಕೊಳ್ಳುತ್ತಿದ್ದರು.
[29] ಕೊಹಾತ್ಯರ ಗೋತ್ರಗಳವರು ಪರಿಶುದ್ಧ ಸ್ಥಳವನ್ನು ಕಾಯುವ ಜವಾಬ್ದಾರಿಕೆ ಹೊಂದಿದ್ದರು. ಅವರು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳಿದುಕೊಳ್ಳಬೇಕು.
[30] ಉಜ್ಜೀಯೇಲನ ಪುತ್ರನಾದ ಎಲೀಚಾಫಾನನು ಕೊಹಾತ್ಯರ ಕುಟುಂಬಗಳ ನಾಯಕನು.
[31] ಅವರು ನೋಡಿಕೊಳ್ಳಬೇಕಾಗಿದ್ದವುಗಳು ಯಾವವೆಂದರೆ: ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ಪರದೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
[32] ಇದಲ್ಲದೆ ಯಾಜಕನಾಗಿರುವ ಆರೋನನ ಮಗ ಎಲಿಯಾಜರನು ಲೇವಿಯರ ಮತ್ತೊಬ್ಬ ನಾಯಕನಾಗಿದ್ದನು. ಪರಿಶುದ್ಧಸ್ಥಳದ ಜವಾಬ್ದಾರಿಕೆಯುಳ್ಳವನ ಮೇಲೆ ವಿಚಾರಕನು ಅವನೇ.
[33] ಮೆರಾರೀಯ ಮಹ್ಲೀಯರ ಹಾಗೂ ಮೂಷೀಯರ ಗೋತ್ರಗಳಿಗೆ ಸಂಬಂಧಪಟ್ಟವನು. ಇವು ಮೆರಾರೀ ಗೋತ್ರಗಳು.
[34] ಅವರಲ್ಲಿ ಎಣಿಕೆಯಾದವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 6,200 ಮಂದಿ.
[35] ಅಬೀಹೈಲನ ಮಗ ಜುರೀಯೇಲನು ಮೆರಾರೀ ಗೋತ್ರದ ಮುಖ್ಯಸ್ಥನು. ಅವರು ದೇವದರ್ಶನ ಗುಡಾರದ ಬಳಿಯಲ್ಲಿ ಉತ್ತರ ದಿಕ್ಕಿನ ಕಡೆಗೆ ಇಳಿದುಕೊಳ್ಳಬೇಕು.
[36] ಮೆರಾರೀ ಗೋತ್ರದವರು ದೇವದರ್ಶನ ಗುಡಾರದ ಹಲಗೆ, ಅಗುಳಿ, ಕಂಬ, ಕುಣಿಕೆ, ಅದರ ಎಲ್ಲಾ ಸಲಕರಣೆಗಳು, ಅದರ ಎಲ್ಲಾ ಸೇವೆಯೂ
[37] ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಅವುಗಳ ಗೂಟಗಳೂ ಅವುಗಳ ಹಗ್ಗಗಳೂ ಇವೆಲ್ಲವುಗಳ ಮೇಲ್ವಿಚಾರಣೆ ಮಾಡಬೇಕು.
[38] ದೇವದರ್ಶನ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ದೇವದರ್ಶನದ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳಿದುಕೊಳ್ಳುವವರು ಮೋಶೆ, ಆರೋನ್ ಮತ್ತು ಅವನ ಪುತ್ರರು. ಇವರು ಇಸ್ರಾಯೇಲರಿಗಾಗಿ ಪರಿಶುದ್ಧಸ್ಥಳದ ಮೇಲ್ವಿಚಾರಣೆ ಮಾಡುವವರು. ಬೇರೆ ಯಾರಾದರೂ ಸಮೀಪಿಸಿದರೆ, ಅವರಿಗೆ ಮರಣಶಿಕ್ಷೆ ಆಗಬೇಕು.
[39] ಮೋಶೆಯೂ ಆರೋನನೂ ಯೆಹೋವ ದೇವರ ಆಜ್ಞೆಯ ಪ್ರಕಾರ, ಕುಟುಂಬಗಳ ಪ್ರಕಾರ ಲೆಕ್ಕಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 22,000 ಮಂದಿ.
[40] ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಇಸ್ರಾಯೇಲರಲ್ಲಿರುವ ಜೇಷ್ಠಪುತ್ರರಲ್ಲಿ ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ.
[41] ಇಸ್ರಾಯೇಲರಲ್ಲಿರುವ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲರ ಪಶುಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನೂ ನನಗೋಸ್ಕರ ತೆಗೆದುಕೋ, ‘ನಾನೇ ಯೆಹೋವ ದೇವರು,’ ” ಎಂದರು.
[42] ಯೆಹೋವ ದೇವರು ತನಗೆ ಆಜ್ಞಾಪಿಸಿದಂತೆ ಮೋಶೆ ಇಸ್ರಾಯೇಲರಲ್ಲಿ ಜೇಷ್ಠರಾಗಿರುವುದೆಲ್ಲವನ್ನು ಎಣಿಸಿದನು.
[43] ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಜೇಷ್ಠರಾದವರೆಲ್ಲರ ಒಟ್ಟು ಸಂಖ್ಯೆ 22,273 ಮಂದಿ.
[44] ಯೆಹೋವ ದೇವರು ಮೋಶೆಗೆ ಪುನಃ ಹೇಳಿದ್ದೇನೆಂದರೆ,
[45] “ಇಸ್ರಾಯೇಲರಲ್ಲಿ ಜೇಷ್ಠರಾದವರೆಲ್ಲರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಗಳಿಗೆ ಬದಲಾಗಿ ಲೇವಿಯರ ಪಶುಗಳನ್ನು ತೆಗೆದುಕೋ. ಲೇವಿಯರು ನನ್ನವರಾಗಿರುವರು. ನಾನೇ ಯೆಹೋವ ದೇವರು.
[46] ಇಸ್ರಾಯೇಲರ ಜೇಷ್ಠರಾದವರಲ್ಲಿ ಲೇವಿಯರಿಗಿಂತ ಹೆಚ್ಚಾಗಿರುವ 273 ಮಂದಿಯ ವಿಮೋಚನೆಯ ಕ್ರಯವಾಗಿ
[47] ಒಬ್ಬೊಬ್ಬನಿಗೆ ಐದು ಶೆಕೆಲ್ ತೆಗೆದುಕೋ. ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, ಅಂದರೆ ಇಪ್ಪತ್ತು ಗೇರಾ ತೂಕದ ಶೆಕೆಲ್ ಈ ಪ್ರಕಾರವಾಗಿ ಇದನ್ನು ತೆಗೆದುಕೊಳ್ಳಬೇಕು.
[48] ಅವರೊಳಗೆ ಹೆಚ್ಚಾಗಿರುವವರ ವಿಮೋಚನೆಯ ಕ್ರಯವನ್ನು ಆರೋನನಿಗೂ ಅವನ ಮಕ್ಕಳಿಗೂ ನೀನು ಕೊಡಬೇಕು.”
[49] ಹೀಗೆ ಮೋಶೆಯು ಲೇವಿಯರಿಂದ ವಿಮೋಚಿಸಲಾದವರಿಗೆ ಹೆಚ್ಚು ಜನರ ವಿಮೋಚನೆಯ ಕ್ರಯವಾದ ಹಣವನ್ನು ತೆಗೆದುಕೊಂಡನು.
[50] ಇಸ್ರಾಯೇಲರಲ್ಲಿ ಜೇಷ್ಠರಾದವರಿಂದ ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ ನಿಗದಿಯಾದ 1,365 ಶೆಕೆಲ್‌ಗಳನ್ನು ತೆಗೆದುಕೊಂಡನು.
[51] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ವಿಮೋಚನೆಯ ಹಣವನ್ನು ಆರೋನನಿಗೂ, ಅವನ ಪುತ್ರರಿಗೂ ಕೊಟ್ಟನು.