[1] ಯೆಹೋವ ದೇವರು ಮೋಶೆ ಹಾಗೂ ಆರೋನನ ಸಂಗಡ ಮಾತನಾಡಿ,
[2] “ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು.
[3] ನೀವು ಅದನ್ನು ಯಾಜಕನಾದ ಎಲಿಯಾಜರನಿಗೆ ಕೊಡಬೇಕು. ಅವನು ಅದನ್ನು ಪಾಳೆಯದ ಹೊರಗೆ ತೆಗೆದುಕೊಂಡುಹೋಗಿ, ತನ್ನ ಮುಂದೆ ವಧೆಮಾಡಿಸಬೇಕು.
[4] ಯಾಜಕನಾದ ಎಲಿಯಾಜರನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು, ಅದನ್ನು ಏಳು ಸಾರಿ ದೇವದರ್ಶನ ಗುಡಾರದ ಮುಂಭಾಗಕ್ಕೆ ನೇರವಾಗಿ ಚಿಮುಕಿಸಬೇಕು.
[5] ಹಸುವನ್ನು ಅವನ ಎದುರಿನಲ್ಲಿಯೇ ಸುಡಿಸಬೇಕು. ಅದರ ತೊಗಲನ್ನೂ ಮಾಂಸವನ್ನೂ ರಕ್ತವನ್ನೂ ಮತ್ತು ಅದರ ಸಗಣಿಯ ಕೂಡ ಸುಡಬೇಕು.
[6] ಯಾಜಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಹಸುವಿನ ದಹನದಲ್ಲಿ ಹಾಕಬೇಕು.
[7] ಆಗ ಯಾಜಕನು ತನ್ನ ವಸ್ತ್ರಗಳನ್ನು ತೊಳೆದುಕೊಂಡು, ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಗೆ ಬರಬಹುದು. ಆದರೂ ಯಾಜಕನು ಸಂಜೆಯವರೆಗೂ ಅಶುದ್ಧನಾಗಿರುವನು.
[8] ಅದನ್ನು ಸುಡುವವನು ತನ್ನ ವಸ್ತ್ರಗಳನ್ನು ನೀರಿನಲ್ಲಿ ತೊಳೆದುಕೊಂಡು, ಸ್ನಾನಮಾಡಬೇಕು. ಅವನೂ ಸಹ ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು.
[9] “ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ, ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನವಾಗಿಡಬೇಕು. ಅದು ದೋಷಪರಿಹಾರಕವಾದುದು. ಆದ್ದರಿಂದ ಶುದ್ಧೀಕರಣ ನೀರನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲೇ ಇಟ್ಟಿರಬೇಕು.
[10] ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು, ಸಂಜೆಯವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲರಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಶಾಶ್ವತ ಕಟ್ಟಳೆಯಾಗಿದೆ.
[11] “ಮನುಷ್ಯನ ಶವವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರುವನು.
[12] ಅವನು ಇದರಿಂದ ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿಕೊಂಡು ಏಳನೆಯ ದಿವಸದಲ್ಲಿ ಶುದ್ಧನಾಗಬೇಕು. ಆದರೆ ಅವನು ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧಮಾಡಿಕೊಳ್ಳದಿದ್ದರೆ, ಏಳನೆಯ ದಿವಸದಲ್ಲಿ ಶುದ್ಧನಾಗಲಾರನು.
[13] ಸತ್ತ ಮನುಷ್ಯನ ಶವವನ್ನು ಮುಟ್ಟಿ, ಶುದ್ಧಮಾಡಿಕೊಳ್ಳದವನು ಯೆಹೋವ ದೇವರ ಗುಡಾರವನ್ನು ಅಪವಿತ್ರಪಡಿಸುತ್ತಾನೆ, ಅಂಥವನನ್ನು ಇಸ್ರಾಯೇಲಿನವರೊಳಗಿಂದ ತೆಗೆದುಹಾಕಬೇಕು, ಶುದ್ಧೀಕರಣದ ನೀರು ಅವನ ಮೇಲೆ ಚಿಮುಕಿಸದ ಕಾರಣ ಅವನು ಅಶುದ್ಧನಾಗಿದ್ದಾನೆ. ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇರುವುದು.
[14] “ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು.
[15] ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರುವುವು.
[16] “ಇದಲ್ಲದೆ ಬಯಲಿನಲ್ಲಿ ಖಡ್ಗದಿಂದ ಹತನಾದ ವ್ಯಕ್ತಿಯನ್ನು ಮುಟ್ಟಿದವರೂ ಅಥವಾ ಬೇರೆ ಯಾವ ಮನುಷ್ಯನ ಶವವಾಗಲಿ, ಮನುಷ್ಯನ ಎಲುಬನ್ನಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರೆಲ್ಲರೂ ಏಳು ದಿವಸ ಅಪವಿತ್ರರಾಗಿರುವರು.
[17] “ಅಪವಿತ್ರನಾದವನನ್ನು ಶುದ್ಧಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯನ್ನು ತೆಗೆದುಕೊಂಡು, ಒಂದು ಪಾತ್ರೆಯೊಳಗಿಟ್ಟು, ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು.
[18] ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಆ ಡೇರೆಯ ಮೇಲೆಯೂ, ಸಮಸ್ತ ಸಲಕರಣೆಗಳ ಮೇಲೆಯೂ, ಅದರಲ್ಲಿರುವ ಜನರ ಮೇಲೆಯೂ ಚಿಮುಕಿಸಬೇಕು. ಹಾಗೆಯೇ ಎಲುಬನ್ನಾಗಲಿ, ಹತನಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ, ಸಮಾಧಿಯನ್ನಾಗಲಿ ಮುಟ್ಟಿದವರ ಮೇಲೆಯೂ ಚಿಮುಕಿಸಬೇಕು.
[19] ಪವಿತ್ರನಾದವನು ಅಪವಿತ್ರನಾದವನ ಮೇಲೆ ಮೂರನೆಯ ದಿವಸದಲ್ಲಿಯೂ, ಏಳನೆಯ ದಿವಸದಲ್ಲಿಯೂ ಅದನ್ನು ಚಿಮುಕಿಸಲಿ. ಏಳನೆಯ ದಿವಸದಲ್ಲಿ ಅವನು ತನ್ನನ್ನು ಪವಿತ್ರ ಮಾಡಿಕೊಂಡು, ತನ್ನ ವಸ್ತ್ರಗಳನ್ನು ತೊಳೆದುಕೊಂಡು, ನೀರಿನಲ್ಲಿ ಸ್ನಾನ ಮಾಡಲಿ. ಹೀಗೆ ಸಂಜೆಯಲ್ಲಿ ಪವಿತ್ರನಾಗುವನು.
[20] ಆದರೆ ಅಪವಿತ್ರನಾಗಿದ್ದು, ತನ್ನನ್ನು ಶುದ್ಧಪಡಿಸಿಕೊಳ್ಳದವನು ಸಭೆಯ ಮಧ್ಯದಿಂದ ತೆಗೆದುಹಾಕಬೇಕು ಏಕೆಂದರೆ ಅವನು ಯೆಹೋವ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ. ನೀರು ಅವನ ಮೇಲೆ ಚಿಮಿಕಿಸಿಕೊಳ್ಳದ ಕಾರಣ ಅವನು ಅಪವಿತ್ರನೇ.
[21] ಇದು ಅವರಿಗೆ ಶಾಶ್ವತ ಕಟ್ಟಳೆಯಾಗಿರಬೇಕು. “ಶುದ್ಧೀಕರಣದ ನೀರನ್ನು ಚಿಮುಕಿಸುವವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಂಜೆಯವರೆಗೆ ಅಪವಿತ್ರನಾಗಿರುವನು.
[22] ಇದಲ್ಲದೆ ಅಪವಿತ್ರನಾದವನು ಮುಟ್ಟುವಂಥಾದ್ದೆಲ್ಲ ಅಪವಿತ್ರವಾಗುವುದು, ಅವನನ್ನು ಮುಟ್ಟಿದವನು ಸಂಜೆಯವರೆಗೆ ಅಪವಿತ್ರನಾಗಿರುವನು,” ಎಂದು ಹೇಳಿದರು.