[1] ಯೆಹೋವ ದೇವರು ಮಾತನಾಡಿ ಮೋಶೆ ಮತ್ತು ಆರೋನನಿಗೆ ಹೇಳಿದ್ದೇನೆಂದರೆ:
[2] “ಇಸ್ರಾಯೇಲರು ಒಬ್ಬೊಬ್ಬರಾಗಿ ಕುಟುಂಬಗಳ ಗುರುತುಗಳ ಪ್ರಕಾರ ತಮ್ಮ ತಮ್ಮ ದಂಡಿನ ಧ್ವಜಗಳ ಬಳಿಯಲ್ಲಿ ಇಳಿದುಕೊಳ್ಳಬೇಕು. ಅವರು ದೇವದರ್ಶನ ಗುಡಾರದ ಎದುರಿನಲ್ಲಿ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.”
[3] ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ, ಸೂರ್ಯೋದಯದ ಕಡೆಗೆ ಯೆಹೂದ ದಂಡಿನ ಧ್ವಜದ ಬಳಿಯಲ್ಲಿ ತಮ್ಮ ಸೈನ್ಯಗಳ ಪ್ರಕಾರ ಇಳಿದುಕೊಳ್ಳಬೇಕು. ಯೆಹೂದ ಮಕ್ಕಳಿಗೆ ಅಮ್ಮೀನಾದಾಬನ ಮಗ ನಹಶೋನನು ಸೈನ್ಯಾಧಿಪತಿ.
[4] ಅವನ ಸೈನಿಕರ ಸಂಖ್ಯೆ 74,600 ಮಂದಿ.
[5] ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಗೋತ್ರದವರು. ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗ ನೆತನೆಯೇಲ್ ಎಂಬ ಸೈನ್ಯಾಧಿಪತಿ.
[6] ಅವನ ಸೈನಿಕರ ಸಂಖ್ಯೆ 54,400 ಮಂದಿ.
[7] ಅವನ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ಯನ ಗೋತ್ರದವರು. ಜೆಬುಲೂನ್ಯನ ಮಕ್ಕಳಿಗೆ ಹೇಲೋನನ ಮಗ ಎಲೀಯಾಬನು ಸೈನ್ಯಾಧಿಪತಿ.
[8] ಅವನ ಸೈನಿಕರ ಸಂಖ್ಯೆ 57,400 ಮಂದಿ.
[9] ಯೆಹೂದನ ಪಾಳೆಯದಲ್ಲಿ ಎಣಿಸಲಾದ ಅವರ ಸೈನಿಕರ ಸಂಖ್ಯೆ 1,86,400 ಮಂದಿ. ಅವರು ಮೊದಲು ಹೊರಡತಕ್ಕವರು.
[10] ದಕ್ಷಿಣ ದಿಕ್ಕಿನಲ್ಲಿ: ರೂಬೇನ್ ಕುಲದ ದಂಡಿಗೆ ಸೇರಿದವರು ಅವರವರ ಸೈನ್ಯಗಳ ಪ್ರಕಾರ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ರೂಬೇನನ ಮಕ್ಕಳಿಗೆ ಶೆದೇಯೂರನ ಮಗ ಎಲೀಚೂರನು ಸೈನ್ಯಾಧಿಪತಿ.
[11] ಅವನ ಸೈನಿಕರ ಸಂಖ್ಯೆ 46,500 ಮಂದಿ.
[12] ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನನ ಗೋತ್ರದವರು. ಸಿಮೆಯೋನನ ಮಕ್ಕಳಿಗೆ ಚುರೀಷದ್ದೈಯನ ಮಗನಾದ ಶೆಲುಮೀಯೇಲನು ಸೈನ್ಯಾಧಿಪತಿ.
[13] ಅವನ ಸೈನಿಕರ ಸಂಖ್ಯೆ 59,300 ಮಂದಿ.
[14] ತರುವಾಯ ಗಾದ್ ಗೋತ್ರದವರು. ಗಾದನ ಮಕ್ಕಳಿಗೆ ದೆವುಯೇಲನ ಮಗ ಎಲ್ಯಾಸಾಫನು ಸೈನ್ಯಾಧಿಪತಿ.
[15] ಅವನ ಸೈನಿಕರ ಸಂಖ್ಯೆ 45,650 ಮಂದಿ.
[16] ರೂಬೇನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
[17] ತರುವಾಯ ದೇವದರ್ಶನ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ, ತಮ್ಮ ತಮ್ಮ ಕಡೆಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
[18] ಎಫ್ರಾಯೀಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವುದು: ಎಫ್ರಾಯೀಮನ ಮಕ್ಕಳಿಗೆ ಅಮ್ಮೀಹೂದನ ಮಗ ಎಲೀಷಾಮಾನು ಸೈನ್ಯಾಧಿಪತಿ.
[19] ಅವನ ಸೈನಿಕರ ಸಂಖ್ಯೆ 40,500 ಮಂದಿ.
[20] ಅವರ ಬಳಿಯಲ್ಲಿ ಮನಸ್ಸೆ ಗೋತ್ರದವರು. ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗ ಗಮಲಿಯೇಲನು ಸೈನ್ಯಾಧಿಪತಿ.
[21] ಅವನ ಸೈನಿಕರ ಸಂಖ್ಯೆ 32,200 ಮಂದಿ.
[22] ತರುವಾಯ ಬೆನ್ಯಾಮೀನ್ ಗೋತ್ರದವರು. ಬೆನ್ಯಾಮೀನನ ಮಕ್ಕಳಿಗೆ ಗಿದ್ಯೋನಿಯ ಮಗ ಅಬೀದಾನನು ಸೈನ್ಯಾಧಿಪತಿ.
[23] ಅವನ ಸೈನಿಕರ ಸಂಖ್ಯೆ 35,400 ಮಂದಿ.
[24] ಎಫ್ರಾಯೀಮನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,08,100 ಮಂದಿ. ಇವರು ಮೂರನೆಯವರಾಗಿ ಹೊರಡತಕ್ಕವರು.
[25] ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವರು: ದಾನನ ಮಕ್ಕಳಿಗೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸೈನ್ಯಾಧಿಪತಿ.
[26] ಅವನ ಸೈನಿಕರ ಸಂಖ್ಯೆ 62,700 ಮಂದಿ.
[27] ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಆಶೇರ್ ಗೋತ್ರದವರು. ಆಶೇರನ ಮಕ್ಕಳಿಗೆ ಒಕ್ರಾನನ ಮಗ ಪಗೀಯೇಲನು ಸೈನ್ಯಾಧಿಪತಿ.
[28] ಅವನ ಸೈನಿಕರ ಸಂಖ್ಯೆ 41,500 ಮಂದಿ.
[29] ತರುವಾಯ ನಫ್ತಾಲಿ ಗೋತ್ರದವರು. ನಫ್ತಾಲಿ ಮಕ್ಕಳಿಗೆ ಏನಾನನ ಮಗ ಅಹೀರನು ಸೈನ್ಯಾಧಿಪತಿ.
[30] ಅವನ ಸೈನಿಕರ ಸಂಖ್ಯೆ 53,400 ಮಂದಿ.
[31] ದಾನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,57,600 ಮಂದಿ. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯ ದಂಡಾಗಿ ಹೊರಡತಕ್ಕದ್ದು.
[32] ಇಸ್ರಾಯೇಲರಲ್ಲಿ ತಮ್ಮ ಕುಟುಂಬಗಳ ಪ್ರಕಾರವಾಗಿ ಎಣಿಕೆಯಾದವರು ಇವರೇ. ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 6,03,550 ಮಂದಿ.
[33] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲರೊಳಗೆ ಎಣಿಕೆಯಾಗಲಿಲ್ಲ.
[34] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಎಲ್ಲವನ್ನೂ ಮಾಡಿದರು. ಹಾಗೆಯೇ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ಕುಟುಂಬಗಳ ಪ್ರಕಾರವೂ ಪಾಳೆಯವನ್ನು ಹಾಕಿಕೊಳ್ಳುತ್ತಾ ಮುಂದುವರಿಯುತ್ತಿದ್ದರು.