[1] ಯೆಹೋವ ದೇವರು ಯೆರಿಕೋವಿಗೆ ಎದುರಾಗಿ ಯೊರ್ದನಿನ ಬಳಿಯಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,
[2] “ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿಯರಿಗೆ ವಾಸಮಾಡುವುದಕ್ಕೆ ಕೆಲವು ಪಟ್ಟಣಗಳನ್ನು ಕೊಡಬೇಕು. ಪಟ್ಟಣಗಳ ಸುತ್ತಮುತ್ತಲಿರುವ ಹುಲ್ಲುಗಾವಲು ಪ್ರದೇಶಗಳನ್ನು ನೀವು ಲೇವಿಯರಿಗೆ ಕೊಡಬೇಕು.
[3] ನಂತರ ಅವರು ವಾಸಮಾಡುವದಕ್ಕೆ ಪಟ್ಟಣಗಳು, ಅವರು ಹೊಂದಿರುವ ಪಶುಗಳಿಗೋಸ್ಕರವೂ ಮತ್ತು ಅವರ ಎಲ್ಲಾ ಇತರ ಪ್ರಾಣಿಗಳಿಗೂ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿರುತ್ತಾರೆ.
[4] “ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣಗಳ ಉಪನಗರಗಳು, ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು.
[5] ನೀವು ಪಟ್ಟಣದ ಹೊರಗೆ ಪೂರ್ವದಲ್ಲಿ ಎರಡು ಸಾವಿರ ಮೊಳ, ದಕ್ಷಿಣದಲ್ಲಿ ಎರಡು ಸಾವಿರ ಮೊಳ, ಪಶ್ಚಿಮದಲ್ಲಿ ಎರಡು ಸಾವಿರ ಮೊಳ, ಉತ್ತರದಲ್ಲಿ ಎರಡು ಸಾವಿರ ಮೊಳ ಅಳೆಯಬೇಕು. ಮಧ್ಯದಲ್ಲಿ ಪಟ್ಟಣವಿರಬೇಕು. ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
[6] “ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯ ಹತ್ಯೆ ಮಾಡಿದವನು ಅಲ್ಲಿಗೆ ಓಡುವ ಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು. ಅವುಗಳ ಹೊರತು ನೀವು ನಲವತ್ತೆರಡು ಪಟ್ಟಣಗಳನ್ನು ಕೊಡಬೇಕು.
[7] ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು, ಅವುಗಳ ಉಪನಗರಗಳ ಸಂಗಡ ನಲವತ್ತೆಂಟು ಪಟ್ಟಣಗಳಾಗಿರಬೇಕು.
[8] ನೀವು ಇಸ್ರಾಯೇಲರ ಸ್ವಾಧೀನದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ, ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತೆಗೆದುಕೊಳ್ಳಬೇಕು. ಒಬ್ಬೊಬ್ಬನು ತಾನು ಹೊಂದುವ ಸೊತ್ತಿಗನುಸಾರವಾಗಿ ತನ್ನ ಪಟ್ಟಣಗಳೊಳಗಿಂದ ಲೇವಿಯರಿಗೆ ಕೊಡಬೇಕು,” ಎಂದು ಹೇಳಿದರು.
[9] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[10] “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,
[11] ಕೈತಪ್ಪಿ ಒಬ್ಬನನ್ನು ಕೊಂದರೆ, ನೀವು ಓಡಿಹೋಗುವ ಹಾಗೆ ನಿಮಗೆ ಆಶ್ರಯಕ್ಕಾಗಿ ಪಟ್ಟಣಗಳನ್ನು ನೇಮಿಸಬೇಕು.
[12] ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವವರೆಗೂ ಸೇಡು ತೀರಿಸುವವನ ದೆಸೆಯಿಂದ ಸಾಯದಂತೆ ಅವು ನಿಮಗೆ ಆಶ್ರಯದ ಪಟ್ಟಣಗಳಾಗಿರಬೇಕು.
[13] ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು.
[14] ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನು ಮತ್ತು ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನು ಆಶ್ರಯದ ಪಟ್ಟಣಗಳಾಗಿ ಕೊಡಬೇಕು.
[15] ಕೈತಪ್ಪಿ ಪ್ರಾಣಹತ್ಯೆ ಮಾಡುವವರೆಲ್ಲರೂ, ಅಲ್ಲಿಗೆ ಓಡಿಹೋಗುವುದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲರಿಗೂ, ಪರಕೀಯರಿಗಾಗಿ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
[16] “ ‘ಒಬ್ಬನು ಕಬ್ಬಿಣದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ, ಅವನು ಕೊಲೆಪಾತಕನು. ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
[17] ಒಬ್ಬನು ಸಾಯುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ, ಅವನು ಕೊಲೆಪಾತಕನು. ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
[18] ಇಲ್ಲವೆ ಯಾರಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದುಕೊಂದರೆ, ಆ ವ್ಯಕ್ತಿಯು ಕೊಲೆಗಾರ; ಆ ಕೊಲೆಪಾತಕನಿಗೆ ನಿಜವಾಗಿಯೂ ಮರಣಶಿಕ್ಷೆಯಾಗಬೇಕು.
[19] ರಕ್ತಪಾತಕ್ಕೆ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ಕೊಲ್ಲಬೇಕು. ಅವನು ಕೊಲೆಪಾತಕನನ್ನು ನೋಡಿದಾಗ, ಅವನನ್ನೂ ಕೊಲ್ಲಬೇಕು.
[20] ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ, ಇಲ್ಲವೆ ನೂಕುವುದರಿಂದಲಾದರೂ, ಸಮಯ ನೋಡಿಕೊಂಡು ಅವನ ಮೇಲೆ ಯಾವುದನ್ನಾದರೂ ಬಲವಾಗಿ ಎಸೆದರೆ,
[21] ಇಲ್ಲವೆ ಹಗೆತನ ಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ, ಹೊಡೆದವನನ್ನು ನಿಜವಾಗಿ ಸಾಯಿಸಬೇಕು. ರಕ್ತಪಾತಕ್ಕೆ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆಪಾತಕನನ್ನು ಕೊಲ್ಲಬೇಕು.
[22] “ ‘ಆದರೆ ಶತ್ರುತ್ವವಿಲ್ಲದೆ ಆಕಸ್ಮಿಕವಾಗಿ ಅವನನ್ನು ನೂಕುವುದರಿಂದಲಾದರೂ, ಸಮಯ ಸಾಧಿಸದೆ ಯಾವುದಾದರೊಂದು ವಸ್ತುವನ್ನು ಅವನ ಮೇಲೆ ಎಸೆದರೆ,
[23] ಇಲ್ಲವೆ ಶತ್ರುತ್ವವಿಲ್ಲದೆ ಅವನ ಕೇಡನ್ನು ಹುಡುಕದೆ ಅವನನ್ನು ನೋಡದೆ ಮರಣವಾಗುವಂತೆ ಯಾವುದಾದರೊಂದು ಕಲ್ಲನ್ನು ಅವನು ಸಾಯುವ ಹಾಗೆ ಅವನ ಮೇಲೆ ಬೀಳ ಮಾಡಿದರೆ,
[24] ಆಗ ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ, ರಕ್ತಪಾತಕ್ಕೆ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು.
[25] ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸುವವನ ಕೈಯಿಂದ ತಪ್ಪಿಸಿ, ಅವನು ಓಡಿ ಹೋದ ಆಶ್ರಯದ ಪಟ್ಟಣಕ್ಕೆ ತಿರುಗಿ ಸೇರಿಸಬೇಕು. ಅಲ್ಲೇ ಅವನು ಪರಿಶುದ್ಧ ಎಣ್ಣೆಯಿಂದ ಅಭಿಷೇಕ ಹೊಂದಿದ ಮಹಾಯಾಜಕನು ಸಾಯುವವರೆಗೂ ವಾಸಮಾಡಲಿ.
[26] “ ‘ಆದರೆ ಕೊಲೆಪಾತಕನು ತಾನು ಓಡಿ ಹೋದ ಆಶ್ರಯದ ಪಟ್ಟಣದ ಮೇರೆಯನ್ನು ಯಾವ ಸಮಯದಲ್ಲಾದರೂ ಮೀರಿ ಹೊರಟರೆ,
[27] ರಕ್ತಕ್ಕೆ ಸೇಡು ತೀರಿಸುವವನು ಅವನನ್ನು ತನ್ನ ಆಶ್ರಯದ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಲೆಪಾತಕನನ್ನು ಕೊಂದರೆ, ಅವನಿಗೆ ರಕ್ತಾಪರಾಧವಿಲ್ಲ.
[28] ಏಕೆಂದರೆ ಅವನು ತನ್ನ ಆಶ್ರಯದ ಪಟ್ಟಣದ ಮಹಾಯಾಜಕನು ಸಾಯುವವರೆಗೂ ವಾಸಮಾಡಬೇಕಾಗಿತ್ತು. ಮಹಾಯಾಜಕನ ಮರಣದ ತರುವಾಯ ಕೊಲೆಪಾತಕನು ತನ್ನ ಸೊತ್ತಿರುವ ದೇಶಕ್ಕೆ ಹೋಗಬಹುದು.
[29] “ ‘ಹೀಗೆ ಇವು ನಿಮ್ಮ ಸಮಸ್ತ ನಿವಾಸಿಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಯಾಗಿರಬೇಕು.
[30] “ ‘ಪ್ರಾಣಹತ್ಯೆ ಮಾಡಿದ ಕೊಲೆಪಾತಕನನ್ನು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆಯನ್ನು ವಿಧಿಸಬೇಕು. ಒಬ್ಬನೇ ಸಾಕ್ಷಿಯು ಒಂದು ಪ್ರಾಣಕ್ಕೆ ವಿರೋಧವಾಗಿ ಸಾಯುವ ಹಾಗೆ ಸಾಕ್ಷಿ ಕೊಡಬಾರದು.
[31] “ ‘ಸಾಯತಕ್ಕ ಕೊಲೆಪಾತಕನ ಪ್ರಾಣಕ್ಕೋಸ್ಕರ ಈಡನ್ನು ತೆಗೆದುಕೊಳ್ಳಬೇಡಿರಿ. ಏಕೆಂದರೆ ಅವನು ನಿಜವಾಗಿಯೂ ಸಾಯಬೇಕು.
[32] “ ‘ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿಗೋಸ್ಕರ ಅವನು ತಿರುಗಿಬಂದು ಮಹಾಯಾಜಕನು ಸಾಯುವವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತೆಗೆದುಕೊಳ್ಳಬೇಡಿರಿ.
[33] “ ‘ಹೀಗೆ ನೀವು ವಾಸಿಸುವ ದೇಶವನ್ನು ನೀವು ಅಪವಿತ್ರ ಮಾಡಬೇಡಿರಿ. ಏಕೆಂದರೆ ದೇಶವನ್ನು ಅಪವಿತ್ರ ಮಾಡುವಂಥಾದ್ದು ರಕ್ತವೇ. ಹತರಾದವರ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.
[34] ಆದ್ದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧ ಮಾಡಬೇಡಿರಿ. ಏಕೆಂದರೆ ನಾನು ಅದರೊಳಗೆ ವಾಸಿಸುತ್ತೇನೆ. ಯೆಹೋವ ದೇವರಾಗಿರುವ ನಾನೇ ಇಸ್ರಾಯೇಲರ ಮಧ್ಯದಲ್ಲಿ ವಾಸಿಸುತ್ತೇನೆ,’ ” ಎಂದರು.