Skip to content
Opens in a new window
Listen to this chapter • 7:07

[1] ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,

[2] “ಚರ್ಮರೋಗವಿರುವವರೆಲ್ಲರನ್ನು, ಮೇಹಸ್ರಾವವುಳ್ಳವರೆಲ್ಲರನ್ನು ಮತ್ತು ಹೆಣದ ಸೋಂಕಿನಿಂದ ಅಶುದ್ಧರಾದವರೆಲ್ಲರನ್ನು ಪಾಳೆಯದೊಳಗಿಂದ ಹೊರಗೆ ಕಳುಹಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.

[3] ಸ್ತ್ರೀ ಪುರುಷವೆಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನು ಹೊರಹಾಕಬೇಕು. ನಾನು ಅವರ ಮಧ್ಯದಲ್ಲಿ ವಾಸಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಪಾಳೆಯದ ಹೊರಗೆ ಕಳುಹಿಸಬೇಕು,” ಎಂಬುದೆ.

[4] ಆಗ ಇಸ್ರಾಯೇಲರು ಹಾಗೆ ಮಾಡಿ, ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರ ಇಸ್ರಾಯೇಲರು ಮಾಡಿದರು.

[5] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[6] “ಇಸ್ರಾಯೇಲರಿಗೆ ಹೀಗೆ ಹೇಳು: ‘ಪುರುಷನಾದರೂ ಸ್ತ್ರೀಯಾದರೂ ಮತ್ತೊಬ್ಬರಿಗೆ ಮೋಸಮಾಡಿ ಯೆಹೋವ ದೇವರಿಗೆ ಅಪನಂಬಿಗಸ್ತರಾದರೆ, ಆ ವ್ಯಕ್ತಿ ಅಪರಾಧಿ.

[7] ಅವನು ಮಾಡಿದ ಪಾಪವನ್ನು ಅರಿಕೆ ಮಾಡಬೇಕು. ಅವನ ಅಪರಾಧದ ಬದಲುಕೊಟ್ಟು, ಅದರ ಸಂಗಡ ಅದರ ಐದನೆಯ ಪಾಲನ್ನು ಕೂಡಿಸಿ, ಯಾರಿಗೆ ಅಪರಾಧ ಮಾಡಿದರೋ, ಅವರಿಗೆ ಕೊಡಬೇಕು.

[8] ಆದರೆ ಅಪರಾಧಕ್ಕೆ ಬದಲು ಕೊಡುವುದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಅದು ಯೆಹೋವ ದೇವರಿಗೆ ಸೇರಬೇಕು. ಅದು ದೋಷಪರಿಹಾರಕ್ಕಾಗಿ ಅರ್ಪಿಸಲಾಗುವ ಪ್ರಾಯಶ್ಚಿತ್ತದ ಟಗರು, ಇವೆರಡೂ ಯಾಜಕನಿಗೆ ಸೇರಬೇಕು.

[9] ಇಸ್ರಾಯೇಲರು ತರುವ ಸಕಲ ಪರಿಶುದ್ಧವಾದ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು.

[10] ಪ್ರತಿ ಮನುಷ್ಯನ ಪರಿಶುದ್ಧವಾದ ಕಾಣಿಕೆಗಳು ಅವನದಾಗಿಯೇ ಆಗಿರುತ್ತವೆ. ಆದರೆ ಯಾಜಕನಿಗೆ ಕೊಟ್ಟದ್ದು ಯಾಜಕರದಾಗುತ್ತದೆ,’ ” ಎಂದು ಹೇಳಿದರು.

[11] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,

[12] “ಇಸ್ರಾಯೇಲರಿಗೆ ಹೀಗೆ ಹೇಳು, ‘ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ಅಪನಂಬಿಗಸ್ತಳಾಗಿದ್ದರೆ,

[13] ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು, ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬುದು ಗುಪ್ತವಾಗಿದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ, ಅವಳನ್ನು ಹಿಡಿಯದೇ ಇದ್ದರೆ,

[14] ಆಕೆ ಅಶುದ್ಧಳಾಗಿದ್ದಾಳೆಂದು ಆಕೆಯ ಮೇಲೆ ಅಸೂಯೆಗೊಂಡು ಸಂಶಯಪಟ್ಟರೆ, ಆಕೆ ಅಶುದ್ಧಳಾಗದಿದ್ದರೂ, ಆಕೆಯೊಡನೆ ಅಸೂಯೆ ಸಂಶಯ ಹೊಂದಿದರೆ, ಆಗ

[15] ಆ ಮನುಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತರಬೇಕು. ಅವಳಿಗೋಸ್ಕರ ಕಾಣಿಕೆಯಾಗಿ ಒಂದು ಓಮರ್ ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕಬಾರದು. ಏಕೆಂದರೆ ಅದು ಸಂಶಯವನ್ನು ಸೂಚಿಸುವುದಕ್ಕೂ ಅಪರಾಧವನ್ನು ಹೊರಪಡಿಸುವುದಕ್ಕೂ ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ.

[16] “ ‘ಯಾಜಕನು ಅವಳನ್ನು ಸಮೀಪಕ್ಕೆ ಕರೆದು, ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಬೇಕು.

[17] ಆಗ ಯಾಜಕನು ಪವಿತ್ರ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದುಕೊಳ್ಳಬೇಕು. ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತೆಗೆದುಕೊಂಡು, ಆ ನೀರಿನೊಳಗೆ ಹಾಕಬೇಕು.

[18] ಯಾಜಕನು ಆ ಸ್ತ್ರೀಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಿ, ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು, ಅವಳ ಕೈಗಳಲ್ಲಿ ಸಂಶಯ ಸೂಚಿಸುವ ಕಾಣಿಕೆಯಾದ ನೈವೇದ್ಯದ ಹಿಟ್ಟನ್ನು ಇಡಬೇಕು. ಯಾಜಕನ ಕೈಯಲ್ಲಿ ಶಾಪತರುವ ಕಹಿಯಾದ ನೀರು ಇರಬೇಕು.

[19] ಯಾಜಕನು ಅವಳನ್ನು ಪ್ರಮಾಣ ಮಾಡಿಸಿ, ಸ್ತ್ರೀಗೆ ಹೇಳಬೇಕಾದದ್ದು, “ಮದುವೆಯಾಗಿ ಗಂಡನೊಂದಿಗೆ ಸಂಸಾರ ನಡೆಸುವಾಗ, ಒಬ್ಬ ಪರಪುರುಷನು ನಿನ್ನ ಸಂಗಡ ಮಲಗಿರದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೆ ಇದ್ದರೆ, ಶಾಪವನ್ನು ಉಂಟುಮಾಡುವ ಈ ನೀರು ನಿನಗೆ ಯಾವ ಹಾನಿಮಾಡುವುದಿಲ್ಲ.

[20] ಆದರೆ ನೀನು ನಿನ್ನ ಗಂಡನನ್ನು ಬಿಟ್ಟು, ಜಾರತ್ವ ಮಾಡಿ ಅಶುದ್ಧಳಾಗಿದ್ದರೆ, ನಿನ್ನ ಗಂಡನನ್ನು ಬಿಟ್ಟು, ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ,

[21] ಯೆಹೋವ ದೇವರು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವನು. ನಿನ್ನ ಜನರು ನಿನ್ನನ್ನು ಶಪಿಸುವರು, ತಿರಸ್ಕರಿಸುವರು.

[22] ಶಪಿಸುವಂಥ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ತೊಡೆಯನ್ನು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ ಎಂದು ಹೇಳಬೇಕು, ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣ ಮಾಡಿಸಬೇಕು.” “ ‘ಅದಕ್ಕೆ ಆ ಸ್ತ್ರೀಯು, “ಆಮೆನ್, ಆಮೆನ್,” ಎಂದು ಹೇಳಬೇಕು.

[23] “ ‘ಇದಲ್ಲದೆ ಯಾಜಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ತೊಳೆದು,

[24] ಆ ಸ್ತ್ರೀಗೆ ಶಪಿಸುವಂಥಹ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವುದು.

[25] ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ಸಂಶಯ ಸೂಚಕ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನೈವೇದ್ಯ ಮಾಡಿ, ಬಲಿಪೀಠದ ಸಮೀಪಕ್ಕೆ ತರಬೇಕು.

[26] ಆಗ ಯಾಜಕನು ಜ್ಞಾಪಕಾರ್ಥವಾಗಿ ಕಾಣಿಕೆಯಿಂದ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಸುಟ್ಟು, ಸ್ತ್ರೀಗೆ ಆ ನೀರನ್ನು ಕುಡಿಸಬೇಕು.

[27] ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ, ಶಪಿಸುವ ನೀರು ಆಕೆಯೊಳಗೆ ಸೇರಿ ಕಹಿಯಾಗುವುದು. ಅವಳ ಹೊಟ್ಟೆ ಉಬ್ಬಿ, ಅವಳ ತೊಡೆ ಕ್ಷೀಣವಾಗುವುದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು.

[28] ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ, ಅವಳು ನಿರಪರಾಧಿಯಾಗಿದ್ದು ಸಂತಾನವನ್ನು ಪಡೆಯುವಳು.

[29] “ ‘ಸಂಶಯ ಪರಿಹಾರದ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವ ಮಾಡಿ, ಅಶುದ್ಧಳಾಗಿದ್ದರೆ,

[30] ಅಥವಾ ಪುರುಷನು ಸಂಶಯಗೊಂಡು ಅವನು ತನ್ನ ಹೆಂಡತಿ ಮೇಲೆ ರೋಷಗೊಂಡಿದ್ದರೆ, ಅವನು ತನ್ನ ಹೆಂಡತಿಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಲಿ. ಆಗ ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆಗಳ ಪ್ರಕಾರ ಮಾಡುವನು.

[31] ಆಗ ಗಂಡನು ನಿರಪರಾಧಿಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’ ”

ಅರಣ್ಯಕಾಂಡ — Chapters