Skip to content
Opens in a new window
Listen to this chapter • 11:03

[1] ವ್ಯಾಧಿಯ ತರುವಾಯ ಯೆಹೋವ ದೇವರು ಮೋಶೆಗೂ, ಆರೋನನ ಮಗನೂ, ಯಾಜಕನೂ ಆಗಿರುವ ಎಲಿಯಾಜರನ ಸಂಗಡ ಮಾತನಾಡಿ,

[2] “ಇಸ್ರಾಯೇಲರ ಸಮಸ್ತ ಸಮೂಹದವರಲ್ಲಿ ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಯುದ್ಧಕ್ಕೆ ಹೋಗುವುದಕ್ಕೆ ಶಕ್ತರಾದವರೆಲ್ಲರನ್ನು ಜನಗಣತಿ ಮಾಡಿ ಅವರ ಗೋತ್ರಗಳ ಪ್ರಕಾರ ತೆಗೆದುಕೊಳ್ಳಿರಿ,” ಎಂದರು.

[3] ಆಗ ಮೋಶೆಯೂ ಯಾಜಕನಾದ ಎಲಿಯಾಜರನೂ ಮೋವಾಬಿನ ಬಯಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ,

[4] “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇಪ್ಪತ್ತು ವರ್ಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.” ಈಜಿಪ್ಟ್ ದೇಶದಿಂದ ಹೊರಟು ಬಂದಿದ್ದ ಇಸ್ರಾಯೇಲರು ಇವರು:

[5] ಇಸ್ರಾಯೇಲನ ಚೊಚ್ಚಲ ಮಗ ರೂಬೇನನೂ, ರೂಬೇನನ ಮಕ್ಕಳೂ; ಹನೋಕನೂ, ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;

[6] ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ಮೀಯಿಂದ ಕರ್ಮೀಯರ ಕುಟುಂಬ.

[7] ಇವೇ ರೂಬೇನ್ಯರ ಕುಟುಂಬಗಳು. ಇವರಲ್ಲಿ ಎಣಿಕೆಯಾದವರ ಸಂಖ್ಯೆ 43,730 ಪುರುಷರು.

[8] ಪಲ್ಲೂವಿನ ಪುತ್ರ ಎಲೀಯಾಬನು.

[9] ಎಲೀಯಾಬನ ಪುತ್ರರು ನೆಮೂಯೇಲ್, ದಾತಾನ್, ಅಬೀರಾಮ್. ಈ ದಾತಾನನೂ, ಅಬೀರಾಮನೂ ಜನರಲ್ಲಿ ಪ್ರಸಿದ್ಧರಾಗಿದ್ದು; ಕೋರಹನ ಗುಂಪಿನಲ್ಲಿದ್ದು; ಯೆಹೋವ ದೇವರಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು.

[10] ಭೂಮಿಯು ತನ್ನ ಬಾಯಿಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು. ಹಾಗೆಯೇ ಆ ಗುಂಪಿನವರಲ್ಲಿ ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು. ಹೀಗೆ ಇಸ್ರಾಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು. ಅವರು ದೃಷ್ಟಾಂತವಾದರು.

[11] ಆದರೂ ಕೋರಹನ ಮಕ್ಕಳು ಸಾಯಲಿಲ್ಲ.

[12] ಕುಟುಂಬಗಳ ಪ್ರಕಾರ ಸಿಮೆಯೋನನ ಪುತ್ರರು. ನೆಮೂಯೇಲನಿಂದ ನೆಮೂಯೇಲ್ಯರ ಕುಟುಂಬ; ಯಾಮೀನನಿಂದ ಯಾಮೀನ್ಯರ ಕುಟುಂಬ; ಯಾಕೀನನಿಂದ ಯಾಕೀನ್ಯರ ಕುಟುಂಬ;

[13] ಜೆರಹನ ವಂಶಸ್ಥರಾದ ಜೆರಹಿಯರು, ಸೌಲನಿಂದ ಸೌಲ್ಯರ ಕುಟುಂಬ;

[14] ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 22,200 ಪುರುಷರು.

[15] ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯಿಂದ ಹಗ್ಗೀಯರ ಕುಟುಂಬ ಶೂನೀಯಿಂದ ಶೂನೀಯರ ಕುಟುಂಬ;

[16] ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,

[17] ಅರೋದನಿಂದ ಅರೋದ್ಯರ ಕುಟುಂಬ; ಅರೇಲೀಯಿಂದ ಅರೇಲೀಯರ ಕುಟುಂಬ.

[18] ಗಾದನ ಮಕ್ಕಳ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 40,500 ಪುರುಷರು.

[19] ಯೆಹೂದನ ಪುತ್ರರು: ಏರ್, ಓನಾನನೂ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು.

[20] ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು. ಶೇಲಹನಿಂದ ಶೇಲಾನ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹಿಯರ ಕುಟುಂಬ;

[21] ಪೆರೆಚನ ಪುತ್ರರು, ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ. ಹಾಮೂಲನಿಂದ ಹಾಮೂಲ್ಯರು ಕುಟುಂಬ

[22] ಯೆಹೂದನ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 76,500 ಪುರುಷರು.

[23] ಕುಟುಂಬಗಳ ಪ್ರಕಾರ ಇಸ್ಸಾಕಾರನ ಪುತ್ರರು. ತೋಲನ ವಂಶಸ್ಥರಾದ ತೋಲಾಯರು, ಪುವ್ವನಿಂದ ಪೂನ್ಯರ ಕುಟುಂಬ;

[24] ಯಾಶೂಬನಿಂದ ಯಾಶೂಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ.

[25] ಇಸ್ಸಾಕಾರನ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 64,300 ಪುರುಷರು.

[26] ಜೆಬುಲೂನನ ಪುತ್ರರು: ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನಿಂದ ಯಹಲೇಲ್ಯರ ಕುಟುಂಬ.

[27] ಜೆಬುಲೂನ್ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 60,500 ಪುರುಷರು.

[28] ಕುಟುಂಬಗಳ ಪ್ರಕಾರ ಯೋಸೇಫನ ಪುತ್ರರು: ಮನಸ್ಸೆ, ಎಫ್ರಾಯೀಮ್.

[29] ಮನಸ್ಸೆಯ ಪುತ್ರರು: ಮಾಕೀರನಿಂದ ಮಾಕೀರ್ಯರ ಕುಟುಂಬ; ಮಾಕೀರನು ಗಿಲ್ಯಾದನನ್ನು ಪಡೆದನು. ಗಿಲ್ಯಾದನಿಂದ ಗಿಲ್ಯಾದ್ಯರ ಕುಟುಂಬ.

[30] ಗಿಲ್ಯಾದನ ಪುತ್ರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ;

[31] ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ, ಶೆಕೆಮನಿಂದ ಶೆಕೆಮ್ಯರ ಕುಟುಂಬ;

[32] ಶೆಮೀದಾಯನಿಂದ ಶೆಮೀದಾಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ.

[33] ಹೇಫೆರನ ಮಗ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಪುತ್ರಿಯರು ಇದ್ದರು. ಚಲ್ಪಹಾದನ ಪುತ್ರಿಯರ ಹೆಸರುಗಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.

[34] ಮನಸ್ಸೆಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 52,700 ಪುರುಷರು.

[35] ಕುಟುಂಬಗಳ ಪ್ರಕಾರ ಎಫ್ರಾಯೀಮನ ಪುತ್ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನಿಯರ ಕುಟುಂಬ.

[36] ಶೂತೆಲಹನ ಪುತ್ರರು: ಏರಾನನಿಂದ ಏರಾನ್ಯರ ಕುಟುಂಬ.

[37] ಎಫ್ರಾಯೀಮನ ಪುತ್ರರ ಎಫ್ರಾಯೀಮನ ಪುತ್ರರುಗಳು ಇವೇ. ಅವರಲ್ಲಿ ಲೆಕ್ಕಿತರಾದವರ ಸಂಖ್ಯೆ 32,500. ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.

[38] ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು: ಬೆಳಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;

[39] ಶೂಫಾಮನಿಂದ ಶೂಫಾಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ.

[40] ಬೆಳಗನ ಪುತ್ರರು ಆರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ.

[41] ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು ಇವರೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 45,600.

[42] ಕುಟುಂಬಗಳ ಪ್ರಕಾರ ದಾನನ ಪುತ್ರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ; ಕುಟುಂಬಗಳ ಪ್ರಕಾರ ದಾನನ ಕುಟುಂಬಗಳು ಇವೇ.

[43] ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 64,400.

[44] ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನನಿಂದ ಇಮ್ನಾಹರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ.

[45] ಬೆರೀಯನ ಕುಮಾರರು: ಹೆಬೆರನಿಂದ ಹೆಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.

[46] ಆಶೇರನ ಮಗಳ ಹೆಸರು ಸೆರಹ.

[47] ಲೆಕ್ಕಾನುಸಾರವಾದ ಆಶೇರನ ಪುತ್ರರ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 53,400.

[48] ಕುಟುಂಬಗಳ ಪ್ರಕಾರ ನಫ್ತಾಲಿಯ ಪುತ್ರರು: ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀಯ ವಂಶಸ್ಥರಾದ ಗೂನೀಯರು,

[49] ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.

[50] ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರು 45,400.

[51] ಇಸ್ರಾಯೇಲರಲ್ಲಿ ಲೆಕ್ಕಿತರಾದವರ ಸಂಖ್ಯೆ 6,01,730.

[52] ಯೆಹೋವ ದೇವರು ಮೋಶೆಗೆ,

[53] “ಇವರಿಗೆ ನಾಡನ್ನು ಹೆಸರುಗಳ ಲೆಕ್ಕದ ಪ್ರಕಾರ ಸೊತ್ತಾಗಿ ಹಂಚಿಕೊಡು.

[54] ಹೆಚ್ಚು ಮಂದಿಯುಳ್ಳ ಗೋತ್ರಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಗೋತ್ರಕ್ಕೆ ಕಡಿಮೆಯಾಗಿಯೂ ಕೊಡು. ಹೀಗೆ ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸೊತ್ತನ್ನು ಹಂಚಿಕೊಡು.

[55] ಇದಲ್ಲದೆ ಚೀಟು ಹಾಕುವುದರಿಂದ ದೇಶವನ್ನು ಪಾಲುಮಾಡಬೇಕು. ತಮ್ಮ ಗೋತ್ರಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ತಮ್ಮ ಪಾಲನ್ನು ಪಡೆಯಬೇಕು.

[56] ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿಯ ಪ್ರಕಾರ ಪಾಲಾಗಬೇಕು.”

[57] ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ. ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೊಹಾತನಿಂದ ಕೊಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.

[58] ಲೇವಿಯರ ಕುಟುಂಬಗಳು ಇವೇ. ಲಿಬ್ನೀಯರ ಕುಟುಂಬ; ಹೆಬ್ರೋನಿಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹೀಯರ ಕುಟುಂಬ. ಕೊಹಾತನು ಅಮ್ರಾಮನನ್ನು ಪಡೆದನು.

[59] ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಈಜಿಪ್ಟಿನಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.

[60] ಆರೋನನಿಗೆ ನಾದಾಬನೂ ಅಬೀಹೂ ಎಲಿಯಾಜರನೂ ಈತಾಮಾರನೂ ಹುಟ್ಟಿದರು.

[61] ಆದರೆ ನಾದಾಬನೂ ಅಬೀಹೂ ಯೆಹೋವ ದೇವರ ಮುಂದೆ ಆಜ್ಞಾಪಿಸದೇ ಇದ್ದ ಬೇರೆ ಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು.

[62] ಇವರಲ್ಲಿ ಲೆಕ್ಕಿತರಾದವರು ಒಂದು ತಿಂಗಳೂ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 23,000 ಆಗಿತ್ತು. ಇವರಿಗೆ ಇಸ್ರಾಯೇಲರಲ್ಲಿ ಸೊತ್ತು ದೊರೆಯದ ಕಾರಣ ಅವರು ಇಸ್ರಾಯೇಲರೊಳಗೆ ಲೆಕ್ಕಿತರಾಗಲಿಲ್ಲ.

[63] ಇವರನ್ನು ಮೋಶೆಯೂ ಯಾಜಕನಾದ ಎಲಿಯಾಜರನೂ ಇಸ್ರಾಯೇಲರಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು.

[64] ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಎಣಿಸಿದಾಗ, ಎಣಿಕೆಯಾದವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.

[65] ಏಕೆಂದರೆ ಅವರು ಮರುಭೂಮಿಯಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರು. ಈ ಪ್ರಕಾರ ಯೆಫುನ್ನೆಯ ಮಗ ಕಾಲೇಬನೂ ನೂನನ ಮಗ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನೂ ಉಳಿಯಲಿಲ್ಲ.

ಅರಣ್ಯಕಾಂಡ — Chapters