[1] ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[2] “ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಜನರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು,” ಎಂದರು.
[3] ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಪಾರಾನ್ ಮರುಭೂಮಿಯಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾಯೇಲರ ಮುಖ್ಯಸ್ಥರಾಗಿದ್ದರು.
[4] ಅವರ ಹೆಸರುಗಳು ಯಾವುವೆಂದರೆ: ರೂಬೇನನ ಗೋತ್ರದ ಜಕ್ಕೂರನ ಮಗ ಶಮ್ಮೂವ,
[5] ಸಿಮೆಯೋನ್ ಗೋತ್ರದ ಹೋರಿಯನ ಮಗ ಶಾಫಾಟನು,
[6] ಯೆಹೂದ ಗೋತ್ರದ ಯೆಫುನ್ನೆಯ ಮಗ ಕಾಲೇಬನು,
[7] ಇಸ್ಸಾಕಾರ್ ಗೋತ್ರದ ಯೋಸೇಫನ ಮಗ ಇಗಾಲ್,
[8] ಎಫ್ರಾಯೀಮ್ ಗೋತ್ರದ ನೂನನ ಮಗ ಹೋಶೇಯ,
[9] ಬೆನ್ಯಾಮೀನ್ ಗೋತ್ರದ ರಾಫೂವನ ಮಗ ಪಲ್ಟೀ,
[10] ಜೆಬುಲೂನ್ ಗೋತ್ರದ ಸೋದೀಯ ಮಗ ಗದ್ದೀಯೇಲ್,
[11] ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗ ಗದ್ದೀ,
[12] ದಾನನ ಗೋತ್ರದ ಗೆಮಲ್ಲೀಯನ ಮಗ ಅಮ್ಮಿಯೇಲ್,
[13] ಆಶೇರ್ ಗೋತ್ರದ ಮೀಕಾಯೇಲನ ಮಗ ಸೆತೂರ್,
[14] ನಫ್ತಾಲಿ ಗೋತ್ರದ ವಾಪೆಸೀಯನ ಮಗ ನಹಬೀ.
[15] ಗಾದನ ಗೋತ್ರದ ಮಾಕೀಯನ ಮಗ ಗೆಯೂಯೇಲ್.
[16] ದೇಶವನ್ನು ಸಂಚರಿಸಿ ನೋಡುವುದಕ್ಕಾಗಿ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ಯೆಹೋಶುವ ಎಂದು ಹೆಸರಿಟ್ಟನು.
[17] ಮೋಶೆ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ನೆಗೆವ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ,
[18] ಆ ದೇಶವು ಎಂಥಾದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳವರೋ, ಬಲಹೀನರೋ? ಸ್ವಲ್ಪ ಜನರೋ, ಬಹಳ ಜನರೋ? ಎಂದೂ,
[19] ಅವರು ವಾಸಿಸುವ ದೇಶವು ಎಂಥಾದ್ದೋ? ಅದು ಒಳ್ಳೆಯದಾಗಿದೆಯೋ, ಕೆಟ್ಟದ್ದಾಗಿದೆಯೋ? ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ? ಅವರು ವಾಸಿಸುವುದು ಡೇರೆಗಳಲ್ಲಿಯೋ, ಬಲವಾದ ಕೋಟೆಗಳಲ್ಲಿಯೋ? ಎಂದೂ,
[20] ಆ ಭೂಮಿಯು ಎಂಥಾದ್ದೋ? ಸಾರವಾದದ್ದೋ? ನಿಸ್ಸಾರವಾದದ್ದೋ? ಮರಗಳುಳ್ಳದ್ದೋ? ಇಲ್ಲದಿರುವುದೋ? ಎಂದು ನೋಡಿರಿ. ನೀವು ಧೈರ್ಯವುಳ್ಳವರಾಗಿದ್ದು, ಆ ಭೂಮಿಯ ಫಲವನ್ನು ತರಬೇಕು,” ಎಂದನು. ಆ ಕಾಲವು ಪ್ರಥಮ ದ್ರಾಕ್ಷಿ ಹಣ್ಣುಗಳ ಕಾಲವಾಗಿತ್ತು.
[21] ಆಗ ಅವರು ಏರಿಹೋಗಿ ಚಿನ್ ಎಂಬ ಮರುಭೂಮಿಯಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನವರೆಗೂ ದೇಶವನ್ನು ಸಂಚರಿಸಿ ನೋಡಿದರು.
[22] ಅವರು ನೆಗೆವನ್ನು ದಾಟಿ ಹೆಬ್ರೋನಿನವರೆಗೆ ಬಂದರು. ಅಲ್ಲಿ ಅನಾಕನ ಮಕ್ಕಳಾದ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳು ಮೊದಲು ನಿರ್ಮಿಸಲಾಗಿತ್ತು.
[23] ಅವರು ಎಷ್ಕೋಲ್ ಹಳ್ಳದವರೆಗೂ ಬಂದು, ಅಲ್ಲಿ ದ್ರಾಕ್ಷಿ ಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು, ಅದನ್ನು ಅಡ್ಡ ಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು. ಇದಲ್ಲದೆ ದಾಳಿಂಬೆ, ಅಂಜೂರ ಹಣ್ಣುಗಳನ್ನು ತೆಗೆದುಕೊಂಡು ಹೋದರು.
[24] ಇಸ್ರಾಯೇಲರು ಅಲ್ಲಿ ದ್ರಾಕ್ಷಿ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು.
[25] ಅವರು ದೇಶವನ್ನು ಸಂಚರಿಸಿ ನೋಡಿ, ನಲವತ್ತು ದಿವಸಗಳಾದ ಮೇಲೆ ತಿರುಗಿ ಬಂದರು.
[26] ಅವರು ಹೋಗಿ ಮೋಶೆ ಆರೋನರ ಬಳಿಗೂ, ಇಸ್ರಾಯೇಲರ ಸಮಸ್ತ ಸಭೆಯ ಬಳಿಗೂ ಪಾರಾನ್ ಮರುಭೂಮಿಯಲ್ಲಿರುವ ಕಾದೇಶಿಗೂ ಬಂದು, ಅವರಿಗೂ, ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ, ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
[27] ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ. ಅದರ ಫಲವು ಇವೇ.
[28] ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು. ಪಟ್ಟಣಗಳು ಭದ್ರವಾಗಿಯೂ, ಬಹಳ ದೊಡ್ಡದಾಗಿಯೂ ಇವೆ. ಅನಾಕನ ಮಕ್ಕಳನ್ನು ನಾವು ಅಲ್ಲಿ ಕಂಡೆವು.
[29] ಅಮಾಲೇಕ್ಯರು ದೇಶದ ನೆಗೆವನಲ್ಲಿ ವಾಸವಾಗಿದ್ದಾರೆ. ಹಿತ್ತಿಯರೂ ಯೆಬೂಸಿಯರೂ ಅಮೋರಿಯರೂ ಪರ್ವತಗಳಲ್ಲಿಯೂ; ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸವಾಗಿದ್ದಾರೆ,” ಎಂದರು.
[30] ನಂತರ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ, “ನಾವು ತಕ್ಷಣವೇ ಏರಿಹೋಗಿ ಅದನ್ನು ಸ್ವಾಧೀನ ಮಾಡಿಕೊಳ್ಳೋಣ. ಏಕೆಂದರೆ ಅದನ್ನು ಜಯಿಸಲು ನಾವು ನಿಜವಾಗಿಯೂ ಶಕ್ತರಾಗಿದ್ದೇವೆ,” ಎಂದನು.
[31] ಆದರೆ ಅವನ ಸಂಗಡ ಹೋದ ಜನರು, “ಆ ಜನರ ಬಳಿಗೆ ಹೋಗುವುದಕ್ಕೆ ನಮ್ಮಿಂದಾಗುವುದಿಲ್ಲ, ಅವರು ನಮಗಿಂತ ಬಲಿಷ್ಠರಾಗಿದ್ದಾರೆ,” ಎಂದರು.
[32] ಅವರು ಸಂಚರಿಸಿ ನೋಡಿದಂಥ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿ ಬಂದ ದೇಶವು ತನ್ನಲ್ಲಿ ವಾಸವಾಗಿರುವವರನ್ನೇ ತಿಂದುಬಿಡುವ ದೇಶವಾಗಿದೆ. ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾ ಶರೀರದ ಮನುಷ್ಯರು.
[33] ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ ವಂಶದವರಾದ ಮಹಾಶರೀರವುಳ್ಳ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳ ಹಾಗೆ ಇದ್ದೆವು. ಅವರ ದೃಷ್ಟಿಗೂ ನಾವು ಹಾಗೆಯೇ ಕಾಣಿಸಿದೆವು,” ಎಂದರು.