Skip to content
Opens in a new window
Listen to this chapter • 6:35

[1] ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ನನಗೆ ಏಳು ಬಲಿಪೀಠಗಳನ್ನು ಕಟ್ಟಿ, ನನಗೆ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು.

[2] ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿದನು. ಬಾಲಾಕನು ಮತ್ತು ಬಿಳಾಮನು ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಬಲಿಪೀಠದ ಮೇಲೆ ಅರ್ಪಿಸಿದರು.

[3] ಆಗ ಬಿಳಾಮನು ಬಾಲಾಕನಿಗೆ, “ನೀನು ನಿನ್ನ ದಹನಬಲಿಯ ಹತ್ತಿರ ನಿಂತುಕೋ, ನಾನು ಸ್ವಲ್ಪ ದೂರಹೋಗಿ ಬರುತ್ತೇನೆ. ಯೆಹೋವ ದೇವರು ನನಗೆ ದರ್ಶನ ಕೊಡಬಹುದು, ಅವರು ನನಗೆ ಸೂಚಿಸುವ ಸಂಗತಿಗಳನ್ನು ನಿನಗೆ ತಿಳಿಸುವೆನು,” ಎಂದು ಹೇಳಿ, ಒಂದು ಎತ್ತರವಾದ ಸ್ಥಳಕ್ಕೆ ಹೋದನು.

[4] ಆಗ ದೇವರು ಬಿಳಾಮನನ್ನು ಸಂಧಿಸಿದರು. ಬಿಳಾಮನು ಅವರಿಗೆ, “ನಾನು ಏಳು ಬಲಿಪೀಠಗಳನ್ನು ಸಿದ್ಧಮಾಡಿ, ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದ್ದೇನೆ,” ಎಂದನು.

[5] ಯೆಹೋವ ದೇವರು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ, ನಾನು ಹೇಳಿದ್ದನ್ನು ತಿಳಿಸು,” ಎಂದರು.

[6] ಆಗ ಅವನು ಬಾಲಾಕನ ಬಳಿಗೆ ತಿರುಗಿಬಂದನು. ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು.

[7] ಆಗ ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬಾಲಾಕನು ನನ್ನನ್ನು ಅರಾಮಿನಿಂದಲೂ, ಮೋವಾಬಿನ ಅರಸನು ಪೂರ್ವ ಪರ್ವತಗಳಿಂದಲೂ ಕರೆಯಿಸಿ, ‘ನನಗೋಸ್ಕರ ಯಾಕೋಬನನ್ನು ಶಪಿಸಿ ಬಾ, ಇಸ್ರಾಯೇಲನ್ನು ಎದುರಿಸುವುದಕ್ಕೆ ಬಾ,’ ಎಂದು ನನಗೆ ಹೇಳಿದ್ದಾನೆ.

[8] ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವ ದೇವರು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?

[9] ಬೆಟ್ಟಗಳ ತುದಿಯಿಂದ ಅವರನ್ನು ನೋಡುತ್ತೇನೆ. ಎತ್ತರದ ಗುಡ್ಡಗಳಿಂದ ಅವರನ್ನು ದೃಷ್ಟಿಸಿದ್ದೇನೆ. ನಾನು ಆ ಪ್ರತ್ಯೇಕವಾಗಿ ವಾಸಿಸುವ ಜನರನ್ನು ನೋಡುತ್ತೇನೆ. ಆ ಜನಾಂಗವು ತಾನು ಇತರ ಜನಾಂಗಗಳಂತೆ ಸಾಧಾರಣವೆಂದು ಎಣಿಸುವುದಿಲ್ಲ.

[10] ಧೂಳಿನಷ್ಟು ಅಸಂಖ್ಯವಾದ ಯಾಕೋಬರನ್ನು ಎಣಿಸುವುದಕ್ಕೂ, ಇಸ್ರಾಯೇಲಿನ ನಾಲ್ಕನೆಯ ಒಂದು ಪಾಲನ್ನು ಲೆಕ್ಕ ಮಾಡುವುದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು. ನನ್ನ ಅಂತ್ಯವು ಅವರಂತೆಯೇ ಆಗಲಿ.”

[11] ಆಗ ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಯಿಸಿದೆನು, ನೀನು ಅವರನ್ನು ಶಪಿಸದೆ ಸಂಪೂರ್ಣವಾಗಿ ಆಶೀರ್ವದಿಸಿದೆ,” ಎಂದನು.

[12] ಅದಕ್ಕೆ ಅವನು ಉತ್ತರವಾಗಿ, “ಯೆಹೋವ ದೇವರು ನನ್ನ ಬಾಯಿಯೊಳಗೆ ಇಡುವ ಮಾತನ್ನೇ ನಾನು ನುಡಿಯಬೇಕಲ್ಲವೇ?” ಎಂದನು.

[13] ಬಾಲಾಕನು ಅವನಿಗೆ, “ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ, ಅವರನ್ನೆಲ್ಲಾ ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವೆ. ಅಲ್ಲಿಂದ ಅವರನ್ನು ನನಗೋಸ್ಕರ ಶಪಿಸು,” ಎಂದನು.

[14] ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾದ ತುದಿಗೆ ಚೋಫೀಮ್ ಬಯಲಿಗೆ ಕರೆದುಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.

[15] ಆಗ ಅವನು ಬಾಲಾಕನಿಗೆ, “ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ. ನಾನು ಅಲ್ಲಿ ಯೆಹೋವ ದೇವರನ್ನು ಎದುರುಗೊಳ್ಳುವೆನು,” ಎಂದನು.

[16] ಆಗ ಯೆಹೋವ ದೇವರು ಬಿಳಾಮನ ಎದುರಿಗೆ ಬಂದು ಅವನ ಬಾಯಿಯೊಳಗೆ ವಾಕ್ಯವನ್ನಿಟ್ಟು, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.

[17] ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು. ಬಾಲಾಕನು ಅವನಿಗೆ, “ಯೆಹೋವ ದೇವರು ಏನು ಹೇಳಿದ್ದಾರೆ,” ಎಂದನು.

[18] ಅವನು ಪದ್ಯರೂಪವಾಗಿ ಹೇಳಿದ್ದೇನೆಂದರೆ: “ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.

[19] ದೇವರು ಮನುಷ್ಯನಂತೆ ಸುಳ್ಳಾಡುವವರಲ್ಲ. ನರಪುತ್ರರಂತೆ ಮನಸ್ಸನ್ನು ಬದಲಾಯಿಸಿಕೊಳ್ಳುವವರಲ್ಲ. ಅವರು ನುಡಿದದ್ದನ್ನು ಮಾಡದಿರುವರೇ? ವಾಗ್ದಾನ ಮಾಡಿದ್ದನ್ನು ಅವರು ನೆರವೇರಿಸದಿರುವರೇ?

[20] ಆಶೀರ್ವದಿಸುವುದಕ್ಕೆ ನಾನು ಅಪ್ಪಣೆ ಹೊಂದಿದ್ದೇನೆ. ಅವರು ಆಶೀರ್ವದಿಸಿದ ನಂತರ ನಾನು ಅದನ್ನು ಬದಲಾಯಿಸಲಾರೆನು.

[21] “ಯೆಹೋವ ದೇವರು ಯಾಕೋಬನಲ್ಲಿ ಆಪತ್ತನ್ನು ಕಾಣಲಿಲ್ಲ. ಇಸ್ರಾಯೇಲಿನಲ್ಲಿ ವಿಪತ್ತನ್ನು ನೋಡಲಿಲ್ಲ. ಅವರ ದೇವರಾದ ಯೆಹೋವ ದೇವರು ಅವರ ಸಂಗಡ ಇದ್ದಾರೆ. ಅರಸನ ಜಯಧ್ವನಿಯು ಅವರಲ್ಲಿ ಉಂಟು.

[22] ದೇವರು ಅವರನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ. ಅವರಿಗೆ ಕಾಡುಕೋಣದಂಥ ಬಲವುಂಟು.

[23] ನಿಶ್ಚಯವಾಗಿ ಯಾಕೋಬನಲ್ಲಿ ಕಣಿಕೇಳುವದು ಇಲ್ಲ. ಇಸ್ರಾಯೇಲರಲ್ಲಿ ಶಕುನನೋಡುವದು ಇಲ್ಲ. ‘ನೋಡಿರಿ, ದೇವರು ಎಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ,’ ಎಂದು ಯಾಕೋಬನ ವಿಷಯವಾಗಿಯೂ, ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.

[24] ಇಗೋ, ಜನಾಂಗವು ದೊಡ್ಡ ಸಿಂಹದ ಹಾಗೆ ಏಳುವುದು. ಸಿಂಹದ ಮರಿಯ ಹಾಗೆ ಎದ್ದೇಳುವುದು. ಅದು ಬೇಟೆಯನ್ನು ತಿಂದು, ಹತರಾದವರ ರಕ್ತವನ್ನು ಕುಡಿಯುವವರೆಗೆ ಮಲಗದು.”

[25] ಆಗ ಬಾಲಾಕನು ಬಿಳಾಮನಿಗೆ, “ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ,” ಎಂದನು.

[26] ಆದರೆ ಬಿಳಾಮನು ಉತ್ತರವಾಗಿ, “ಬಾಲಾಕನಿಗೆ ಯೆಹೋವ ದೇವರು ಹೇಳುವುದನ್ನೆಲ್ಲಾ ನಾನು ಮಾಡುವೆನೆಂದು ನಿನಗೆ ಹೇಳಲಿಲ್ಲವೋ?” ಎಂದನು.

[27] ಆಗ ಬಾಲಾಕನು ಬಿಳಾಮನಿಗೆ, “ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸುವುದು ಒಂದು ವೇಳೆ ದೇವರಿಗೆ ಯುಕ್ತವಾಗಿದ್ದೀತು,” ಎಂದನು.

[28] ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿಯ ತುದಿಗೆ ಕರೆದುಕೊಂಡು ಹೋದನು.

[29] ಬಿಳಾಮನು ಬಾಲಾಕನಿಗೆ, “ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಇಲ್ಲಿ ನನಗೆ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು,” ಎಂದನು.

[30] ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ, ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ, ಒಂದೊಂದು ಟಗರನ್ನೂ ಅರ್ಪಿಸಿದನು.

ಅರಣ್ಯಕಾಂಡ — Chapters