Skip to content
Opens in a new window
Listen to this chapter • 9:10

[1] ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು.

[2] ಇಸ್ರಾಯೇಲರೆಲ್ಲರು ಮೋಶೆಗೂ ಆರೋನನಿಗೂ ವಿರೋಧವಾಗಿ ಗೊಣಗುಟ್ಟಿದರು. ಅವರು, “ನಾವು ಈಜಿಪ್ಟ್ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಮರುಭೂಮಿಯಲ್ಲಾದರೂ ಸತ್ತಿದ್ದರೆ ಚೆನ್ನಾಗಿತ್ತು.

[3] ನಾವು ಖಡ್ಗದಿಂದ ಕೊಲೆಯಾಗುವ ಹಾಗೆಯೂ ನಮ್ಮ ಹೆಂಡತಿಯರು ಮಕ್ಕಳು ಸುಲಿಗೆಯಾಗುವ ಹಾಗೆಯೂ ಯೆಹೋವ ದೇವರು ನಮ್ಮನ್ನು ಈ ದೇಶಕ್ಕೆ ಏಕೆ ಬರಮಾಡಿದ್ದಾರೆ? ಈಜಿಪ್ಟ್ ದೇಶಕ್ಕೆ ನಾವು ತಿರುಗಿ ಹೋಗುವುದು ನಮಗೆ ಒಳ್ಳೆಯದಲ್ಲವೋ?

[4] ನಾವು ನಾಯಕನನ್ನು ನೇಮಿಸಿಕೊಂಡು ಈಜಿಪ್ಟ್ ದೇಶಕ್ಕೆ ಹಿಂದಿರುಗೋಣ ಬನ್ನಿರಿ,” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.

[5] ಆಗ ಮೋಶೆಯೂ ಆರೋನನೂ ಇಸ್ರಾಯೇಲರ ಸಮಸ್ತ ಜನರ ಕೂಟದ ಮುಂದೆ ಅಡ್ಡಬಿದ್ದರು.

[6] ಇದಲ್ಲದೆ ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,

[7] ಇಸ್ರಾಯೇಲರ ಸಮಸ್ತ ಜನಸಮೂಹಕ್ಕೆ, “ಸಂಚರಿಸಿ ನೋಡುವುದಕ್ಕೆ ನಾವು ದಾಟಿಹೋದ ದೇಶವು ಅತ್ಯುತ್ತಮವಾದ ದೇಶವೇ.

[8] ಯೆಹೋವ ದೇವರು ನಮ್ಮನ್ನು ಇಷ್ಟಪಟ್ಟರೆ ಹಾಲೂ ಜೇನೂ ಹರಿಯುವ ದೇಶವಾಗಿರುವ ಆ ದೇಶಕ್ಕೆ ನಮ್ಮನ್ನು ಬರಮಾಡಿ, ಅದನ್ನು ನಮಗೆ ಕೊಡುವರು.

[9] ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು.

[10] ಆಗ ಸಭೆಯವರೆಲ್ಲರೂ ಅವರಿಗೆ ಕಲ್ಲೆಸೆಯಬೇಕೆಂದಿದ್ದರು. ಯೆಹೋವ ದೇವರ ಮಹಿಮೆಯು ದೇವದರ್ಶನ ಗುಡಾರದಲ್ಲಿ ಇಸ್ರಾಯೇಲರಿಗೆಲ್ಲಾ ಪ್ರತ್ಯಕ್ಷವಾಯಿತು.

[11] ಆಗ ಯೆಹೋವ ದೇವರು ಮೋಶೆಗೆ, “ಈ ಜನರು ಎಷ್ಟರವರೆಗೆ ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ಮಾಡಿದ ಸಕಲ ಸೂಚಕಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಎಷ್ಟು ಮಾತ್ರಕ್ಕು ನಂಬದೆ ಇರುವರು?

[12] ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲ ಮಾಡುವೆನು. ನಿನ್ನನ್ನು ಅವರಿಗಿಂತ ದೊಡ್ಡದಾದ ಮತ್ತು ಬಲವುಳ್ಳ ಜನಾಂಗವನ್ನಾಗಿ ಮಾಡುವೆನು,” ಎಂದರು.

[13] ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ!

[14] ಅವರು ಈ ದೇಶದ ನಿವಾಸಿಗಳಿಗೆ ಅದನ್ನು ಹೇಳುವರು. ನೀವು ಈ ಜನರ ಸಂಗಡ ಇದ್ದೀಯೆಂದೂ, ಯೆಹೋವ ದೇವರಾದ ನೀವೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀರಿ ಎಂದೂ ನೀವು ಹಗಲು ಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀರಿ ಎಂದೂ ನೀವಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಎಂದೂ ಅವರು ಈಗಾಗಲೇ ಕೇಳಿದ್ದಾರೆ.

[15] ಈಗ ನೀವು ಈ ಜನರನ್ನೆಲ್ಲಾ ಕೊಂದುಹಾಕಿದರೆ, ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳು ನಿಮ್ಮ ವಿಷಯದಲ್ಲಿ,

[16] ಯೆಹೋವ ದೇವರು ಈ ಜನರನ್ನು ಅವರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶಕ್ಕೆ ತರಲಾರದ ಕಾರಣ ಅವರನ್ನು ಮರುಭೂಮಿಯಲ್ಲಿ ಕೊಂದುಹಾಕಿದರು,” ಎಂದು ಹೇಳುವರು.

[17] “ಈಗ ನೀವು ಹೇಳಿದ ಪ್ರಕಾರ ಯೆಹೋವ ದೇವರ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.

[18] ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ?

[19] ನಿಮ್ಮ ಪ್ರೀತಿಯು ದೊಡ್ಡದಾಗಿರುವ ಪ್ರಕಾರವೂ ನೀವು ಈಜಿಪ್ಟಿನಿಂದ ಇಲ್ಲಿಯವರೆಗೆ ಈ ಜನರ ಪಾಪಗಳನ್ನು ಮನ್ನಿಸಿದ ಪ್ರಕಾರ ಈಗಲೂ ಈ ಜನರ ಪಾಪವನ್ನು ಮನ್ನಿಸಿರಿ,” ಎಂದು ಬೇಡಿಕೊಂಡನು.

[20] ಆಗ ಯೆಹೋವ ದೇವರು, “ನಿನ್ನ ಮಾತಿನ ಪ್ರಕಾರ ಮನ್ನಿಸಿದ್ದೇನೆ.

[21] ಆದರೆ ನನ್ನ ಜೀವದಾಣೆ, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು.

[22] ಏಕೆಂದರೆ ನನ್ನ ಮಹಿಮೆಯನ್ನೂ, ಈಜಿಪ್ಟ್ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ ನಾನು ಮಾಡಿದ ಸೂಚಕಕಾರ್ಯಗಳನ್ನೂ ನೋಡಿದ ಈ ಸಕಲ ಜನರು, ನನ್ನನ್ನು ಈಗ ಹತ್ತು ಸಾರಿ ಪರೀಕ್ಷಿಸಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,

[23] ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ.

[24] ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ಬೇರೆ ಆತ್ಮವಿದ್ದುದರಿಂದಲೂ, ಅವನು ಹೃದಯಪೂರ್ವಕವಾಗಿ ನನ್ನನ್ನು ಹಿಂಬಾಲಿಸಿದ್ದುದರಿಂದಲೂ ಅವನು ಸಂಚರಿಸಿ ಬಂದ ಆ ದೇಶಕ್ಕೆ ಅವನನ್ನು ಸೇರಿಸುವೆನು. ಅವನ ಸಂತಾನವು ಅದನ್ನು ಸ್ವಾಧೀನಪಡಿಸಿಕೊಳ್ಳುವುದು.

[25] ಅಮಾಲೇಕ್ಯರೂ, ಕಾನಾನ್ಯರೂ ತಗ್ಗಿನಲ್ಲಿ ವಾಸ ಮಾಡುತ್ತಿರುವುದರಿಂದ ನಾಳೆ ನೀವು ತಿರುಗಿಕೊಂಡು, ಕೆಂಪುಸಮುದ್ರದ ಮಾರ್ಗವಾಗಿ ಮರುಭೂಮಿಗೆ ಹೊರಡಿರಿ,” ಎಂದರು.

[26] ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,

[27] “ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ.

[28] ಆದ್ದರಿಂದ ನೀನು ಅವರಿಗೆ, ‘ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.

[29] ಈ ಮರುಭೂಮಿಯಲ್ಲಿ ನನಗೆ ವಿರೋಧವಾಗಿ ಗೊಣಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸತ್ತು ಹೋಗುವಿರಿ.

[30] ಯೆಫುನ್ನೆಯ ಮಗ ಕಾಲೇಬನೂ, ನೂನನ ಮಗ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡುವುದಕ್ಕೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವೆಲ್ಲರೂ ಬಾರದೆ ಇರುವಿರಿ.

[31] ಆದರೆ ಸೆರೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು, ನೀವು ಅಲಕ್ಷ್ಯಮಾಡಿದ ದೇಶವನ್ನು ಅವರು ಅನುಭವಿಸುವರು.

[32] ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಮರುಭೂಮಿಯಲ್ಲಿ ಬೀಳುವುವು.

[33] ಇದಲ್ಲದೆ ನಿಮ್ಮ ಮಕ್ಕಳು ನಲವತ್ತು ವರುಷ ಮರುಭೂಮಿಯಲ್ಲಿ ಅಲೆದಾಡಿ, ನಿಮ್ಮ ಹೆಣಗಳು ಮರುಭೂಮಿಯಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಅಪನಂಬಿಗಸ್ತಿಕೆಯನ್ನು ಅನುಭವಿಸುವಿರಿ.

[34] ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.

[35] ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು.

[36] ದೇಶವನ್ನು ಪರೀಕ್ಷಿಸುವುದಕ್ಕೆ ಮೋಶೆಯ ಅಪ್ಪಣೆಯ ಮೇರೆಗೆ ಹಿಂದಿರುಗಿ, ಆ ದೇಶದ ವಿಷಯವಾಗಿ ಕೆಟ್ಟ ಸುದ್ದಿಯನ್ನು ಎಬ್ಬಿಸಿ, ಸಮಸ್ತ ಸಭೆಯನ್ನು ಮೋಶೆಗೆ ವಿರೋಧವಾಗಿ ಗೊಣಗುಟ್ಟುವಂತೆ ಮಾಡಿದರು.

[37] ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವ ದೇವರ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.

[38] ಆದರೆ ದೇಶವನ್ನು ಪರೀಕ್ಷಿಸುವುದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ಉಳಿದರು.

[39] ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು.

[40] ಮರುದಿವಸ ಬೆಳಿಗ್ಗೆ ಅವರು ಎದ್ದು, ಬೆಟ್ಟದ ತುದಿಯ ಮೇಲಕ್ಕೆ ಏರಿ, “ಇಗೋ, ಯೆಹೋವ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವುದಕ್ಕೆ ಇದ್ದೇವೆ. ನಾವು ಪಾಪಮಾಡಿದ್ದೇವೆ,” ಎಂದರು.

[41] ಆಗ ಮೋಶೆಯು, “ನೀವು ಏಕೆ ಹೀಗೆ ಯೆಹೋವ ದೇವರ ಆಜ್ಞೆಯನ್ನು ಮೀರುತ್ತೀರಿ? ಅದು ಸಫಲವಾಗುವುದಿಲ್ಲ.

[42] ಯೆಹೋವ ದೇವರು ನಿಮ್ಮ ಸಂಗಡ ಇಲ್ಲ ಅದಕ್ಕಾಗಿ ನಿಮ್ಮ ಶತ್ರುಗಳು ನಿಮ್ಮನ್ನು ಪರಾಜಯಗೊಳಿಸದಂತೆ ಏರಿ ಹೋಗಬೇಡಿರಿ.

[43] ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿರುವುದರಿಂದ ನೀವು ಅವರ ಖಡ್ಗಕ್ಕೆ ತುತ್ತಾಗುವಿರಿ. ನೀವು ಯೆಹೋವ ದೇವರ ಕಡೆಯಿಂದ ತಿರುಗಿದ ಕಾರಣ, ಆತನು ನಿಮ್ಮ ಸಂಗಡ ಇರುವುದಿಲ್ಲ,” ಎಂದನು.

[44] ಆದರೆ ಅವರು ಹಟಮಾಡಿ, ಬೆಟ್ಟದ ತುದಿಯ ಮೇಲೆ ಏರಿಹೋದರು. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.

[45] ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ ಅಟ್ಟಿಬಿಟ್ಟರು.

ಅರಣ್ಯಕಾಂಡ — Chapters