Skip to content
Opens in a new window
Listen to this chapter • 4:47

[1] ಯೆಹೋವನು ಹೀಗೆನ್ನುತ್ತಾನೆ, “ಆ ಕಾಲದಲ್ಲಿ ಯೆಹೂದದ ಅರಸರು, ಅಧಿಪತಿಗಳು, ಯಾಜಕರು, ಪ್ರವಾದಿಗಳು, ಯೆರೂಸಲೇಮಿನ ನಿವಾಸಿಗಳು, ಇವರೆಲ್ಲರ ಎಲುಬುಗಳನ್ನು ಸಮಾಧಿಗಳೊಳಗಿಂದ ತೆಗೆದುಬಿಡುವರು.

[2] ಅನಂತರ ಅವರು ಅದನ್ನು ತಾವು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ ಪೂಜಿಸಿದ ಸೂರ್ಯ, ಚಂದ್ರ ತಾರಾಗಣಗಳ ಎದುರಿಗೆ ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಹೂಣಿಡುವುದಿಲ್ಲ; ಅವು ಭೂಮಿಯ ಮೇಲೆ ಗೊಬ್ಬರವಾಗುವವು.

[3] ನಾನು ಯಾವ ಸ್ಥಳಗಳಿಗೆ ಈ ದುಷ್ಟ ವಂಶದವರನ್ನು ಅಟ್ಟಿಬಿಟ್ಟಿದ್ದೆನೋ ಅಲ್ಲಿ ಉಳಿದವರೆಲ್ಲರೂ ಜೀವಿಸುವುದಕ್ಕಿಂತ ಮರಣವು ಲೇಸೆಂದು ಅದನ್ನು ಬಯಸುವರು” ಇದು ಯೆಹೋವನ ನುಡಿ.

[4] ನೀನು ಅವರಿಗೆ ಹೀಗೆ ಹೇಳಬೇಕು, “ಯೆಹೋವನು ಇಂತೆನ್ನುತ್ತಾನೆ, ಬಿದ್ದವರು ಏಳದಿರುವರೋ? ಬಿಟ್ಟುಹೋದವನು ತಿರುಗಿ ಬರುವುದಿಲ್ಲವೋ?

[5] ಈ ಜನರು, ಯೆರೂಸಲೇಮ್ ಎಂದಿಗೂ ಹಿಂದಿರುಗದಂತೆ ಬಿಟ್ಟುಹೋದದ್ದೇಕೆ? ಮೋಸವನ್ನೇ ಪಟ್ಟಾಗಿ ಹಿಡಿದಿದ್ದಾರೆ, ತಿರುಗಿ ಬರುವುದಿಲ್ಲ.

[6] ನಾನು ಕಿವಿಗೊಟ್ಟು ಕೇಳುವಾಗ ಅವರು ಯಥಾರ್ಥವಾಗಿ ಮಾತನಾಡಿಕೊಳ್ಳುತ್ತಿರಲಿಲ್ಲ; ಯಾರು ತನ್ನ ಅಧರ್ಮದ ವಿಷಯವಾಗಿ ಪಶ್ಚಾತ್ತಾಪಪಟ್ಟು ‘ಆಹಾ, ನಾನು ಎಂಥಾ ಕೆಲಸ ಮಾಡಿದೆ’ ಎಂದುಕೊಳ್ಳುತ್ತಿರಲಿಲ್ಲ; ಯುದ್ಧದಲ್ಲಿ ರಭಸವಾಗಿ ಓಡುವ ಕುದುರೆಯಂತೆ ಪ್ರತಿಯೊಬ್ಬನೂ ತನ್ನ ತನ್ನ ಮಾರ್ಗಕ್ಕೆ ತ್ವರೆಪಡುತ್ತಾನೆ.

[7] ಆಕಾಶದಲ್ಲಿ ಹಾರುವ ಬಕವೂ ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿಯೂ, ಬಾನಕ್ಕಿಯೂ, ಕೊಕ್ಕರೆಯೂ ತಮ್ಮ ಗಮನಾಗಮನ ಸಮಯಗಳನ್ನು ಗಮನಿಸುತ್ತವೆ. ಆದರೆ ನನ್ನ ಜನರಾದರೋ ಯೆಹೋವನ ನಿಯಮವನ್ನು ತಿಳಿಯರು.

[8] ಹೀಗಿರಲು ‘ನಾವು ಜ್ಞಾನಿಗಳು, ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿಯೇ ಇದೆ’ ಎಂದು ನೀವು ಅಂದುಕೊಳ್ಳುವುದು ಹೇಗೆ? ಆಹಾ, ಶಾಸ್ತ್ರಿಗಳ ಸುಳ್ಳು ಲೇಖನಿಯು ಅದನ್ನು ಸುಳ್ಳಾಗಿ ಮಾಡಿದೆ.

[9] ಜ್ಞಾನಿಗಳು ಆಶಾಭಂಗಪಟ್ಟು ಬೆಚ್ಚಿಬಿದ್ದು ಸಿಕ್ಕಿಕೊಂಡಿದ್ದಾರೆ. ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು.

[10] ಅವರ ಜ್ಞಾನವು ಎಷ್ಟರದು? ಆದುದರಿಂದ ನಾನು ಇವರ ಹೆಂಡತಿಯರನ್ನು ಅನ್ಯರಿಗೂ ಮತ್ತು ಇವರ ಹೊಲಗದ್ದೆಗಳನ್ನು ಆಕ್ರಮಿಸುವವರಿಗೂ ಕೊಟ್ಟುಬಿಡುವೆನು. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳಿಂದ ಯಾಜಕರವರೆಗೆ ಸಕಲರೂ ಮೋಸಮಾಡುತ್ತಾರೆ.

[11] ಸಮಾಧಾನವಿಲ್ಲದ್ದಿದ್ದರೂ, ‘ಸಮಾಧಾನ’ ಎಂದು ಹೇಳಿ ನನ್ನ ಪ್ರಜೆಯೆಂಬಾಕೆಯ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.

[12] ಅಸಹ್ಯ ಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ. ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇ ಹೋಗುವರು ಎಂದು ಯೆಹೋವನು ನುಡಿಯುತ್ತಾನೆ.

[13] ನಾನು ಇವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಿಬಿಡುವೆನು. ದ್ರಾಕ್ಷಿಯ ಬಳ್ಳಿಯಲ್ಲಿಯೂ, ಅಂಜೂರದ ಮರದಲ್ಲಿಯೂ ಹಣ್ಣಿರುವುದಿಲ್ಲ, ಎಲೆಯು ಬಾಡುವುದು; ನಾನು ಹಾಳುಮಾಡುವವರನ್ನು ಅವರಿಗೆ ನೇಮಿಸುವೆನು” ಇದು ಯೆಹೋವನ ನುಡಿ.

[14] ಆ ಕಾಲದಲ್ಲಿ ಜನರು, “ಸುಮ್ಮನೆ ಕುಳಿತಿರುವುದೇಕೆ? ಕೂಡಿಕೊಳ್ಳಿರಿ, ಕೋಟೆಕೊತ್ತಲಗಳ ಪಟ್ಟಣಗಳಲ್ಲಿ ಸೇರಿ ಅಲ್ಲೇ ನಾಶವಾಗೋಣ. ನಾವು ನಮ್ಮ ದೇವರಾದ ಯೆಹೋವನಿಗೆ ಪಾಪಮಾಡಿದ್ದರಿಂದ ಆತನು ನಮ್ಮನ್ನು ನಾಶನಕ್ಕೆ ಗುರಿಮಾಡಿ ಕಹಿಯಾದ ನೀರನ್ನು ಕುಡಿಸಿದ್ದಾನಷ್ಟೆ.

[15] ನಾವು ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮಕಾಲವನ್ನು ಎದುರುನೋಡಿದೆವು, ಹಾ, ಅಂಜಿಕೆಯೇ!

[16] ವೈರಿಯ ಕುದುರೆಗಳ ಬುಸುಗಾಟವು ದಾನನಿಂದ ಕೇಳಿಬರುತ್ತದೆ; ತುರಂಗಗಳ (ಯುದ್ಧದ ಕುದುರೆ) ಕೆನೆತದ ಶಬ್ದಕ್ಕೆ ದೇಶವೆಲ್ಲಾ ಕಂಪಿಸುತ್ತದೆ. ಶತ್ರುಗಳು ಬಂದರು, ಸೀಮೆಯನ್ನೂ, ಅದರಲ್ಲಿರುವ ಸಮಸ್ತವನ್ನೂ, ಪಟ್ಟಣವನ್ನೂ, ಪಟ್ಟಣದ ನಿವಾಸಿಗಳನ್ನೂ ನುಂಗಿಬಿಟ್ಟರು” ಎಂದು ಹೇಳುವರು.

[17] ಅದಕ್ಕೆ ಯೆಹೋವನು, “ಇಗೋ, ನಾನು ನಿಮ್ಮ ಮೇಲೆ ಹಾವುಗಳನ್ನು, ಮಂತ್ರಕ್ಕೆ ಅಧೀನವಾಗದ ನಾಗಗಳನ್ನು ಬಿಡುವೆನು; ಅವು ನಿಮ್ಮನ್ನು ಕಚ್ಚುವವು” ಎಂದು ನುಡಿದಿದ್ದಾನೆ.

[18] ಅಯ್ಯೋ, ನನ್ನ ದುಃಖಕ್ಕೆ ಕೊನೆಯಿಲ್ಲವೇ? ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ.

[19] ಆಹಾ, ನನ್ನ ಪ್ರಜೆಯೆಂಬಾಕೆಯು, “ಯೆಹೋವನು ಚೀಯೋನಿನಲ್ಲಿಲ್ಲವೋ, ಅದರ ರಾಜನು ಅಲ್ಲಿ ವಾಸವಾಗಿಲ್ಲವೋ?” ಎಂದು ಮೊರೆಯಿಡುವ ಶಬ್ದವು ದೂರದೇಶದಿಂದ ಕೇಳಿಸುತ್ತದೆ. ಅದಕ್ಕೆ ಯೆಹೋವನು, “ಇವರು ತಮ್ಮ ವಿಗ್ರಹಗಳಿಂದಲೂ, ಅನ್ಯದೇವತೆಗಳ ಶೂನ್ಯರೂಪಗಳಿಂದಲೂ ಏಕೆ ನನ್ನನ್ನು ಕೆಣಕಿದ್ದಾರೆ” ಎಂದು ನುಡಿಯುತ್ತಾನೆ.

[20] ಸುಗ್ಗಿ ತೀರಿತು, ಹಣ್ಣಿನ ಕಾಲ ಮುಗಿಯಿತು, ನಮಗೆ ಉದ್ಧಾರವೇ ಆಗಲಿಲ್ಲ.

[21] ನನ್ನ ಪ್ರಜೆಯೆಂಬಾಕೆಯ ವೇದನೆಯಿಂದ ನನಗೆ ಮನೋಯಾತನೆಯಾಯಿತು, ನಾನು ಶೋಕಿಸಿದೆನು, ಭಯವು ನನ್ನನ್ನು ಹಿಡಿದಿದೆ.

[22] ಗಿಲ್ಯಾದಿನಲ್ಲಿ ಔಷಧವಿಲ್ಲವೋ? ಅಲ್ಲಿ ವೈದ್ಯನು ಸಿಕ್ಕನೋ? ನನ್ನ ಪ್ರಜೆಯೆಂಬಾಕೆಗೆ ಏಕೆ ಗುಣವಾಗಲಿಲ್ಲ?

ಯೆರೆಮೀಯನು — Chapters