[1] ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಬಾಬೆಲಿನ ಮೇಲೂ, ಲೇಬ್ ಕಾಮೈ ದೇಶದವರ ಮೇಲೂ ನಾಶನದ ಗಾಳಿಯನ್ನು ಬೀಸಮಾಡುವೆನು.
[2] ಅನ್ಯಜನರನ್ನು ಬಾಬಿಲೋನಿಗೆ ಕಳುಹಿಸುವೆನು, ಅವರು ಅದನ್ನು ತೂರುವರು. ಆ ದೇಶವನ್ನು ಬಟ್ಟಬರಿದು ಮಾಡುವರು; ನಿಯಮಿತ ವಿಪತ್ಕಾಲದಲ್ಲಿ ಅದನ್ನು ಮುತ್ತುವರಷ್ಟೆ.
[3] ಧನುರ್ಧಾರಿಗಳಿಗೂ, ಕವಚಸನ್ನದ್ಧರಿಗೂ ಬಿಲ್ಲುಗಾರರು ಬಾಣವನ್ನೆಸೆಯಲಿ. ಬಾಬೆಲಿನ ಯುವಕರನ್ನು ಉಳಿಸದಿರಿ; ಅದರ ಸೈನ್ಯವನ್ನೆಲ್ಲಾ ನಿಶ್ಶೇಷಮಾಡಿರಿ.
[4] ಕಸ್ದೀಯರು ತಮ್ಮ ದೇಶದಲ್ಲಿ ಹತರಾಗಿ ಬೀಳುವರು, ಬಾಬೆಲಿನ ಬೀದಿಗಳಲ್ಲಿ ಇರಿಯಲ್ಪಟ್ಟು ಮಣ್ಣುಪಾಲಾಗುವರು.
[5] ಇಸ್ರಾಯೇಲರ ಸದಮಲಸ್ವಾಮಿಗೆ ಆತನ ಜನರು ಮಾಡಿದ ಅಪರಾಧವು ತಮ್ಮ ದೇಶದಲ್ಲಿ ತುಂಬಿದ್ದರೂ, ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಸ್ರಾಯೇಲನ್ನಾಗಲಿ ಅಥವಾ ಯೆಹೂದವನ್ನಾಗಲಿ ತ್ಯಜಿಸಲಿಲ್ಲ.
[6] ನೀವು ಬಾಬೆಲಿನೊಳಗಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ; ಅದಕ್ಕೆ ಉಂಟಾಗುವ ದಂಡನೆಗೆ ಒಳಗಾಗಬೇಡಿರಿ. ಯೆಹೋವನು ಮುಯ್ಯಿತೀರಿಸುವ ಕಾಲ ಬಂದಿದೆ; ಆತನು ಬಾಬಿಲೋನಿಗೆ ಪ್ರತಿಕಾರ ಮಾಡುವನು.
[7] ಬಾಬೆಲು ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆಯ ಹಾಗಿತ್ತು; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು; ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.
[8] ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಗೋಳಾಡಿರಿ; ಅದರ ನೋವನ್ನು ನೀಗಿಸುವುದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು.
[9] ಬಾಬೆಲನ್ನು ಸ್ವಸ್ಥಮಾಡುವುದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ; ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ; ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
[10] ಯೆಹೋವನು ನಮ್ಮ ನ್ಯಾಯವನ್ನು ವ್ಯಕ್ತಪಡಿಸಿದ್ದಾನೆ; ನಮ್ಮ ದೇವರಾದ ಯೆಹೋವನು ನಡೆಸಿದ ಕಾರ್ಯವನ್ನು ಚೀಯೋನಿನಲ್ಲಿ ಪ್ರಕಟಿಸೋಣ ಬನ್ನಿರಿ!
[11] ಯೆಹೋವನು ಬಾಬೆಲನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಮೇದ್ಯರ ಅರಸರು ಅದನ್ನು ನಾಶಮಾಡುವಂತೆ ಅವರ ಮನಸ್ಸನ್ನು ಪ್ರೇರೇಪಿಸಿದ್ದಾನೆ. ಆ ನಾಶನವು ಯೆಹೋವನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತಿಕಾರವೇ; ಮೇದ್ಯರೇ, ಬಾಣಗಳನ್ನು ಮಸೆಯಿರಿ, ಗುರಾಣಿಗಳನ್ನು ಸನ್ನದ್ಧ ಮಾಡಿರಿ!
[12] ಬಾಬೆಲ್ ಕೋಟೆಗೆ ಎದುರಾಗಿ ಧ್ವಜವನ್ನೆತ್ತಿರಿ, ಪಹರೆಯನ್ನು ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ, ಹೊಂಚುಗಾರರನ್ನು ಗೊತ್ತುಮಾಡಿರಿ; ಯೆಹೋವನು ಬಾಬೆಲಿನವರ ವಿಷಯದಲ್ಲಿ ನುಡಿದದ್ದನ್ನು ನೆನಪಿಸಿಕೊಂಡು ನೆರವೇರಿಸಿದ್ದಾನೆ.
[13] ಆಹಾ, ಬಹುಜಲಾಶ್ರಯಗಳ ಮಧ್ಯೆ ನಿವಾಸಿನಿಯಾಗಿರುವ ನಗರವೇ, ಧನಭರಿತಪುರವೇ, ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು.
[14] ಸೇನಾಧೀಶ್ವರನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು, ‘ಖಂಡಿತವಾಗಿ ನಾನು ನಿನ್ನನ್ನು ಮಿಡತೆಗಳಷ್ಟು ಅಸಂಖ್ಯ ಜನರಿಂದ ತುಂಬಿಸುವೆನು, ಅವರು ನಿನ್ನ ಮೇಲೆ ಜಯಘೋಷಮಾಡುವರು.
[15] ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ವಿಸ್ತರಿಸಿದ್ದಾನೆ.
[16] ಆತನ ಗರ್ಜನೆಗೆ ಆಕಾಶದಿಂದ ನೀರು ಬೋರ್ಗರೆದು ಸುರಿಯುತ್ತದೆ; ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.
[17] ಎಲ್ಲರೂ ತಿಳಿವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು; ಅವನು ಎರಕಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ.
[18] ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ; ದಂಡನೆಯಾಗುವಾಗ ಅಳಿದುಹೋಗುವವು.
[19] ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು; ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ಹೆಸರು.
[20] ಬಾಬೆಲೇ, ನೀನು ನನಗೆ ಗದೆಯು ಮತ್ತು ಶಸ್ತ್ರವು, ನಾನು ನಿನ್ನಿಂದ ಜನಾಂಗಗಳನ್ನು ಒಡೆದುಬಿಡುತ್ತೇನೆ;
[21] ನಿನ್ನಿಂದ ರಾಜ್ಯಗಳನ್ನು ಅಳಿಸುತ್ತೇನೆ; ನಿನ್ನಿಂದ ಕುದುರೆಯನ್ನೂ ಮತ್ತು ಸವಾರನನ್ನೂ ಅಳಿಸಿಬಿಡುತ್ತೇನೆ; ನಿನ್ನಿಂದ ರಥವನ್ನೂ, ಸಾರಥಿಯನ್ನೂ ನಾಶಮಾಡುತ್ತೇನೆ;
[22] ನಿನ್ನಿಂದ ಸ್ತ್ರೀಪುರುಷರನ್ನು ನಾಶಮಾಡುತ್ತೇನೆ; ನಿನ್ನಿಂದ ಬಾಲಕರನ್ನು ಮತ್ತು ವೃದ್ಧರನ್ನು ನಾಶ ಮಾಡುತ್ತೇನೆ; ನಿನ್ನಿಂದ ಯುವತೀ ಮತ್ತು ಯುವಕರನ್ನು ನಾಶಮಾಡುವೆನು;
[23] ನಿನ್ನಿಂದ ಕುರುಬನನ್ನೂ ಹಾಗು ಹಿಂಡನ್ನೂ ನಾಶಮಾಡುತ್ತೇನೆ; ನಿನ್ನಿಂದ ರೈತನನ್ನೂ ಹಾಗೂ ನೊಗದ ಎತ್ತುಗಳನ್ನೂ ನಾಶಮಾಡುವೆನು; ನಿನ್ನಿಂದ ದೇಶಾಧಿಪತಿಗಳನ್ನೂ ಮತ್ತು ನಾಡ ಒಡೆಯರನ್ನೂ ನಾಶಮಾಡುವೆನು;
[24] ಆದರೆ ಕಸ್ದೀಯರೂ ಚೀಯೋನಿನಲ್ಲಿ ಮಾಡಿದ ಎಲ್ಲಾ ಹಾನಿಗೆ ಪ್ರತಿಯಾಗಿ, ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಬಾಬಿಲೋನಿಗೆ ಮುಯ್ಯಿತೀರಿಸುವೆನು’” ಎಂದು ಯೆಹೋವನು ಅನ್ನುತ್ತಾನೆ.
[25] ಯೆಹೋವನು ಇಂತೆನ್ನುತ್ತಾನೆ, “ಆಹಾ, ಲೋಕವನ್ನೆಲ್ಲಾ ಹಾಳುಮಾಡುವ ನಾಶಕರ ಪರ್ವತವೇ, ನಾನು ನಿನ್ನ ವಿರುದ್ಧನಾಗಿದ್ದೇನೆ; ನಾನು ನಿನ್ನ ಮೇಲೆ ಕೈಮಾಡಿ ನಿನ್ನನ್ನು ಮೇಲಿನಿಂದ ಕೆಳಕ್ಕೆ ಉರುಳಿಸುವೆನು, ಸುಟ್ಟ ಬೆಟ್ಟವನ್ನಾಗಿ ಮಾಡುವೆನು.
[26] ಮೂಲೆಗಲ್ಲಿಗಾಗಲಿ ಅಥವಾ ಅಸ್ತಿವಾರಕ್ಕಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು, ನೀನು ನಿತ್ಯನಾಶಕ್ಕೆ ಗುರಿಯಾಗುವಿ, ಇದು ಯೆಹೋವನ ನುಡಿ” ಎಂಬುದೇ.
[27] “ದೇಶದಲ್ಲಿ ಧ್ವಜವನ್ನೆತ್ತಿರಿ, ರಾಜ್ಯಗಳಲ್ಲೆಲ್ಲಾ ಕೊಂಬೂದಿರಿ, ಜನಾಂಗಗಳನ್ನು ಸಿದ್ಧಮಾಡಿರಿ, ಬಾಬೆಲಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿರಿ, ಸೋಲಿಸಲು ಸೇನಾಧಿಪತಿಯನ್ನು ನೇಮಿಸಿರಿ, ಅಶ್ವಬಲವನ್ನು ಬಿರುಸಾದ ಮಿಡತೆಯ ದಂಡಿನೋಪಾದಿಯಲ್ಲಿ ಬರಮಾಡಿರಿ.
[28] ಜನಾಂಗಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಅಧೀನದಲ್ಲಿರುವ ಸಂಪೂರ್ಣ ದೇಶದವರು, ಇವರೆಲ್ಲರನ್ನೂ ಅದರ ವಿರುದ್ಧವಾಗಿ ಎಬ್ಬಿಸಿರಿ.
[29] ದೇಶವೆಲ್ಲಾ ನೊಂದು ನಡುಗುತ್ತದೆ; ಏಕೆಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.
[30] ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆದು ಹೆಂಗಸರಂತೆ ಬಲಹೀನರಾಗಿ ತಮ್ಮ ಕೋಟೆಗಳಲ್ಲಿ ನಿಂತಿದ್ದಾರೆ; ಅದರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ, ಅವರ ಅಗುಳಿಗಳು ಮುರಿದುಹೋಗಿವೆ.
[31] ಮುಂದೂತನು ಮತ್ತು ದೂತರೂ ಓಡಿ ಓಡಿ ಒಬ್ಬರಿಗೊಬ್ಬರು ಎದುರುಬದುರಾಗಿ, ಅರಸನ ಬಳಿ ಬಂದು, ‘ರಾಜಧಾನಿಯನ್ನು ಎಲ್ಲಾ ಕಡೆಯಲ್ಲಿಯೂ ಆಕ್ರಮಿಸಿದ್ದಾರೆ,
[32] ಹಾಯ್ಗಡಗಳನ್ನು ಹಿಡಿದಿದ್ದಾರೆ, ಜೊಂಡು ಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ, ರಣವೀರರು ಬೆಚ್ಚಿಬಿದ್ದಿದ್ದಾರೆ’ ಎಂದು ತಿಳಿಸುವರು.”
[33] ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ; ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವುದು.
[34] ಯೆಹೂದವು ಹೀಗೆ ಪ್ರಲಾಪಿಸುತ್ತದೆ, ‘ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ತಿಂದುಹಾಕಿದ್ದಾನೆ, ಒಡೆದುಬಿಟ್ಟಿದ್ದಾನೆ, ಬರಿಪಾತ್ರೆಯನ್ನಾಗಿ ಕುಕ್ಕಿದ್ದಾನೆ, ಘಟಸರ್ಪದ ಹಾಗೆ ನನ್ನನ್ನು ನುಂಗಿದ್ದಾನೆ, ನನ್ನ ರುಚಿಪದಾರ್ಥಗಳಿಂದ ಹೊಟ್ಟೆತುಂಬಿಸಿಕೊಂಡಿದ್ದಾನೆ, ನನ್ನನ್ನು ಗಂಗಾಳದಂತೆ ತೊಳೆದುಬಿಟ್ಟಿದ್ದಾನೆ.
[35] ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬಿಲೋನಿಗೆ ತಟ್ಟಲಿ’ ಎಂದು ಚೀಯೋನಿನವರು ಅನ್ನುತ್ತಾರೆ; ‘ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ’ ಎಂದು ಯೆರೂಸಲೇಮಿನವರು ಹೇಳುತ್ತಾರೆ.”
[36] ಆದ್ದರಿಂದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನು ನಿನ್ನ ಪರವಾಗಿ ವ್ಯಾಜ್ಯವಾಡಿ, ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು; ಅದರ ಸರೋವರವು ಬತ್ತುವಂತೆಯೂ, ಅದರ ಪ್ರವಾಹವು ಒಣಗುವಂತೆಯೂ ಮಾಡುವೆನು.
[37] ಆಗ ಬಾಬೆಲ್ ಹಾಳುದಿಬ್ಬಗಳಿಂದ ತುಂಬುವುದು ಮತ್ತು ನರಿಗಳ ಬೀಡಾಗಿರುವುದು; ಅದು ನಿರ್ಜನವಾಗಿ ಪರಿಹಾಸ್ಯಕ್ಕೆ ಗುರಿಯಾಗುವುದು.
[38] ಆ ದೇಶದವರು ಪ್ರಾಯದ ಸಿಂಹಗಳಂತೆ ಒಟ್ಟಿಗೆ ಗರ್ಜಿಸುತ್ತಿದ್ದಾರೆ, ಸಿಂಹದ ಮರಿಗಳ ಹಾಗೆ ಗುರುಗುಟ್ಟುತ್ತಿದ್ದಾರೆ.
[39] ಅವರು ಹೊಟ್ಟೆಬಾಕರು, ನಾನು ಅವರಿಗೆ ಔತಣವನ್ನು ಸಿದ್ಧಪಡಿಸುವೇನು, ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರುವ ಮಟ್ಟಿಗೆ ಕುಡಿಸುವೆನು. ಇದು ಯೆಹೋವನ ನುಡಿ” ಎಂಬುದೇ.
[40] “ನಾನು ಅವರನ್ನು ಕುರಿ, ಟಗರು ಮತ್ತು ಹೋತಗಳ ಹಾಗೆ ವಧ್ಯಸ್ಥಾನಕ್ಕೆ ಬರಮಾಡುವೆನು.
[41] ಆಹಾ, ಶೇಷಕ್ ಶತ್ರುವಶವಾಯಿತು, ಲೋಕಪ್ರಸಿದ್ಧವಾದ ಪಟ್ಟಣವು ಹಿಡಿಯಲ್ಪಟ್ಟಿದೆ, ಬಾಬೆಲ್ ಜನಾಂಗಗಳ ಬೆರಗಿಗೆ ಈಡಾಗಿದೆ!
[42] ಸಮುದ್ರವು ಬಾಬೆಲಿನ ಮೇಲೆ ನುಗ್ಗಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ.
[43] ಅದರ ಪಟ್ಟಣಗಳು ಕಾಡು, ಕಗ್ಗಾಡು, ಬೆಗ್ಗಾಡೂ ಆಗಿವೆ. ಆ ದೇಶದಲ್ಲಿ ಯಾರೂ ವಾಸಿಸರು, ಯಾವ ಮನುಷ್ಯನೂ ಹಾದು ಹೋಗನು.
[44] ನಾನು ಬಾಬೆಲಿನಲ್ಲಿ ಬೇಲ್ ದೇವತೆಯನ್ನು ದಂಡಿಸಿ, ಅದು ನುಂಗಿದ್ದನ್ನು ಅದರ ಬಾಯೊಳಗಿಂದ ಕಕ್ಕಿಸುವೆನು; ಪ್ರವಾಹಪ್ರವಾಹವಾಗಿ ಬಾಬಿಲೋನಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಮೇಲೆ ಬರುವುದಿಲ್ಲ; ಇದಲ್ಲದೆ ಬಾಬೆಲಿನ ಪೌಳಿಗೋಡೆಯು ಬಿದ್ದುಹೋಗುವುದು.
[45] ನನ್ನ ಜನರೇ, ನೀವೆಲ್ಲರೂ ಬಾಬೆಲಿನೊಳಗಿಂದ ಹೊರಟು ಯೆಹೋವನ ರೋಷಾಗ್ನಿಯಿಂದ ತಪ್ಪಿಸಿಕೊಳ್ಳಿರಿ.
[46] ನಿಮ್ಮ ಎದೆಯು ಕುಂದದಿರಲಿ, ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಯು ನಿಮ್ಮನ್ನು ಹೆದರಿಸದಿರಲಿ; ಒಂದು ವರ್ಷ ಒಂದು ಸುದ್ದಿಯು, ಮತ್ತೊಂದು ವರ್ಷ ಮತ್ತೊಂದು ಸುದ್ದಿಯು ಹರಡುತ್ತಿರುವವು; ಬಲಾತ್ಕಾರವು ದೇಶದಲ್ಲಿ ಪ್ರಬಲವಾಗುವುದು, ಅಧಿಕಾರಿಯು ಅಧಿಕಾರಿಗೆ ವಿರೋಧಿಯಾಗುವನು.
[47] ಇದರಿಂದ ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ ಎಂದು ತಿಳಿದುಕೊಳ್ಳಿರಿ. ಆ ದೇಶವೆಲ್ಲಾ ನಾಚಿಕೆಪಡುವುದು; ಅದರ ಪ್ರಜೆಗಳು ಅದರೊಳಗೆ ಹತರಾಗಿ ಬೀಳುವರು.
[48] ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶವನ್ನು ನೋಡಿ ಹರ್ಷಧ್ವನಿಗೈಯುವವು; ಏಕೆಂದರೆ ಹಾಳುಮಾಡುವವರು ಉತ್ತರ ದಿಕ್ಕಿನಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ.”
[49] “ಹತರಾದ ಇಸ್ರಾಯೇಲರೇ, ಬಾಬೆಲಿನ ಹಿತಕ್ಕಾಗಿ ಲೋಕದಲ್ಲೆಲ್ಲಾ ಬಹು ಜನರು ಹೇಗೆ ಹತರಾದರೋ, ಹಾಗೆಯೇ ಬಾಬೆಲೂ ಹತವಾಗುವುದು.
[50] ಖಡ್ಗಕ್ಕೆ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ; ದೂರದಲ್ಲಿಯೂ ಯೆಹೋವನನ್ನು ಸ್ಮರಿಸಿರಿ, ಯೆರೂಸಲೇಮಿನ ಹಂಬಲ ನಿಮ್ಮ ಮನಸ್ಸಿನಲ್ಲಿ ಹುಟ್ಟಲಿ.
[51] ನಾವು ನಿಂದೆಯನ್ನು ಕೇಳಿ ನಾಚಿಕೆಗೊಂಡೆವು, ‘ಯೆಹೋವನ ಆಲಯದ ಪವಿತ್ರಸ್ಥಾನಗಳನ್ನು ಮ್ಲೇಚ್ಛರು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಮುಚ್ಚಿಕೊಂಡಿದೆ’ ಎಂಬುದಾಗಿ ಅಂದುಕೊಳ್ಳುತ್ತಿರೋ?
[52] ಹೀಗಿರಲು ಯೆಹೋವನು ಇಂತೆನ್ನುತ್ತಾನೆ, ‘ಇಗೋ, ನಾನು ಬಾಬೆಲಿನ ಬೊಂಬೆಗಳನ್ನು ದಂಡಿಸುವ ದಿನಗಳು ಬರುತ್ತವೆ; ಆಗ ಆ ದೇಶದಲ್ಲೆಲ್ಲಾ ಗಾಯಪಟ್ಟವರು ನರಳಾಡುವರು.
[53] ಬಾಬೆಲ್ ಆಕಾಶದ ತನಕ ಬೆಳೆದು ಎತ್ತರವಾಗಿಯೂ ಮತ್ತು ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ, ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.’ ಇದು ಯೆಹೋವನ ನುಡಿ.”
[54] “ಆಹಾ, ಬಾಬೆಲಿನಿಂದ ಮೊರೆಯೂ, ಕಸ್ದೀಯರ ದೇಶದಿಂದ ಮಹಾನಾಶದ ಶಬ್ದವೂ ಕೇಳಿ ಬರುತ್ತದೆ!
[55] ಯೆಹೋವನು ಬಾಬೆಲನ್ನು ಹಾಳುಮಾಡುತ್ತಿದ್ದಾನಲ್ಲಾ, ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತಾನೆ; ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ತರಂಗತರಂಗವಾಗಿ ಬಂದ ಶತ್ರುಗಳು ಘೋಷಿಸುತ್ತಾರೆ, ಕೂಗಿ ಆರ್ಭಟಿಸುತ್ತಾರೆ;
[56] ಹಾಳುಮಾಡುವವನು ಬಾಬೆಲಿನ ಮೇಲೆ ಬಿದ್ದಿದ್ದಾನೆ, ಅದರ ಶೂರರು ಸೆರೆಯಾಗಿದ್ದಾರೆ, ಅವರ ಬಿಲ್ಲುಗಳು ಮುರಿದುಹೋಗಿವೆ; ಏಕೆಂದರೆ ಯೆಹೋವನು ಮುಯ್ಯಿತೀರಿಸುವ ದೇವರು, ಆತನು ಪ್ರತಿಕ್ರಿಯಿಸದೆ ಬಿಡುವುದಿಲ್ಲ.
[57] ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರುವ ಮಟ್ಟಿಗೆ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನೆಂಬ ಹೆಸರಿನ ರಾಜಾಧಿರಾಜನು ಅನ್ನುತ್ತಾನೆ.”
[58] ಸೇನಾಧೀಶ್ವರನಾದ ಯೆಹೋವನು, “ಬಾಬೆಲಿನ ಗಾತ್ರವಾದ ಪೌಳಿಗೋಡೆಯು ಸಂಪೂರ್ಣವಾಗಿ ನೆಲಸಮವಾಗುವುದು. ಅದರ ಉನ್ನತದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವವು; ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥ, ಜನಗಳು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು” ಎಂದು ನುಡಿಯುತ್ತಾನೆ.
[59] ಮಹ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದಾಗ ಪ್ರವಾದಿಯಾದ ಯೆರೆಮೀಯನು ಅವನಿಗೆ ಕೊಟ್ಟ ಅಪ್ಪಣೆ. (ಸೆರಾಯನು ಯಾರೆಂದರೆ ಸೇನೆಯ ಪ್ರಧಾನ ಅಧಿಕಾರಿ.)
[60] ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲಾ ಕೇಡಿನ ವಿಷಯವನ್ನು ಅಂದರೆ ಬಾಬೆಲಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲಾ ಸಂಗತಿಗಳನ್ನು ಒಂದು ಗ್ರಂಥವನ್ನಾಗಿ ಬರೆದನು.
[61] ಅವನು ಸೆರಾಯನಿಗೆ ಹೀಗೆ ಹೇಳಿದನು, “ನೋಡು, ನೀನು ಬಾಬಿಲೋನಿಗೆ ಸೇರಿದ ಮೇಲೆ ಈ ಮಾತುಗಳನ್ನೆಲ್ಲಾ ಓದಿ ಹೇಳಿ,
[62] ‘ಯೆಹೋವನೇ, ನೀನು ಈ ಸ್ಥಳವನ್ನು ನಿರ್ಮೂಲಮಾಡಬೇಕೆಂದು ಉದ್ದೇಶಿಸಿ, ಇದು ಜನರಿಗೂ ಪಶುಗಳಿಗೂ ನೆಲೆಯಾಗದೆ ಸದಾ ಹಾಳಾಗಿಯೇ ಇರಲಿ ಎಂದು ನುಡಿದಿದ್ದೀಯಲ್ಲಾ’ ಎಂಬುದಾಗಿ ಅರಿಕೆಮಾಡಬೇಕು.
[63] ನೀನು ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ, ಯೂಫ್ರೆಟಿಸ್ ನದಿಯ ಮಧ್ಯದೊಳಗೆ ಹಾಕಿ,
[64] ಯೆಹೋವನು ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಆ ಪಟ್ಟಣವೂ ಹೀಗೆಯೇ ಮುಳುಗುವುದು, ಮತ್ತೆ ಏಳದು” ಎಂದು ಹೇಳು ಎಂದನು. ಜನರು ಆಯಾಸಗೊಂಡು ದುಡಿದದ್ದು ಬೆಂಕಿಗೆ ತುತ್ತಾಗುವುದು ಎಂಬ ಮಾತಿನವರೆಗೆ ಯೆರೆಮೀಯನ ಪ್ರವಾದನೆಯಾಯಿತು.