[1] ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆಹೋವನಿಂದ ಯೆರೆಮೀಯನಿಗೆ ಈ ಅಪ್ಪಣೆಯಾಯಿತು.
[2] “ಇದೇ ಯೆಹೋವನ ನುಡಿ, ನೀನು ಕಣ್ಣಿಗಳನ್ನೂ ಮತ್ತು ನೊಗಗಳನ್ನು ಮಾಡಿ ನಿನ್ನ ಹೆಗಲಿಗೆ ಹಾಕಿಕೊಂಡು,
[3] ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಯೆರೂಸಲೇಮಿನಲ್ಲಿ ಬಂದಿರುವ ರಾಯಭಾರಿಗಳ ಮೂಲಕ ಅವುಗಳನ್ನು ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನ್ಯರ ರಾಜ, ತೂರಿನ ರಾಜ, ಚೀದೋನಿನ ರಾಜ, ಇವರಿಗೆ ಕಳುಹಿಸು.
[4] ನೀನು ಆ ರಾಯಭಾರಿಗಳಿಗೆ, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ನಿಮ್ಮ ಒಡೆಯರಿಗೆ ನೀವು ಹೀಗೆ ಅರಿಕೆಮಾಡುವಂತೆ ಅಪ್ಪಣೆಕೊಟ್ಟಿದ್ದಾನೆ ಎಂಬುದಾಗಿ ಹೇಳಿ ಅವರು ತಮ್ಮ ತಮ್ಮ ಒಡೆಯರಿಗೆ ತಿಳಿಸಬೇಕಾದ ಈ ಮಾತುಗಳನ್ನು ಅವರಿಗೆ ಆಜ್ಞಾಪಿಸು.’
[5] ‘ನಾನೇ ಕೈ ನೀಡಿ ನನ್ನ ಮಹಾ ಶಕ್ತಿಯಿಂದ ಲೋಕವನ್ನೂ ಭೂಮಿಯ ಮೇಲಣ ಮಾನವರನ್ನೂ ಪಶುಗಳನ್ನೂ ಸೃಷ್ಟಿಸಿದ್ದೇನೆ; ಈ ನನ್ನ ಸೃಷ್ಟಿಯನ್ನು ನನಗೆ ಸರಿತೋಚಿದವನಿಗೇ ಕೊಡಬಲ್ಲೆನು.
[6] ಈಗ ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನ ಕೈವಶಮಾಡಿದ್ದೇನೆ; ಅವನ ಸೇವೆಗಾಗಿ ಭೂಜಂತುಗಳನ್ನೂ ಕೊಟ್ಟಿದ್ದೇನೆ.
[7] ಅವನ ದೇಶಕ್ಕೆ ಕಾಲವು ಸಮೀಪಿಸುವ ತನಕ ಸಕಲ ಜನಾಂಗಗಳು ಅವನಿಗೂ, ಅವನ ಮಗನಿಗೂ ಮತ್ತು ಮೊಮ್ಮಗನಿಗೂ ಅಡಿಯಾಳಾಗಿ ಬಿದ್ದಿರುವವು; ಆ ಮೇಲೆ ಅನೇಕ ಜನಾಂಗಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.
[8] ಯಾವ ಜನಾಂಗ, ಯಾವ ರಾಜ್ಯ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲಿಕ್ಕೂ, ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಡಲಿಕ್ಕೂ ಒಪ್ಪದೆ ಇರುವನೋ ಆ ಜನಾಂಗವನ್ನು ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸುತ್ತಾ ಬಂದು, ಕಡೆಯಲ್ಲಿ ಅವನ ಕೈಯಿಂದಲೇ ನಿರ್ಮೂಲ ಮಾಡಿಸುವೆನು’ ಇದು ಯೆಹೋವನ ನುಡಿ.
[9] ‘ನೀವು ಬಾಬೆಲಿನ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿನವರು, ಕಣಿಯವರು, ಮಾಟದವರು, ಇವರಿಗೆ ಕಿವಿಗೊಡಲೇಬಾರದು.
[10] ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ; ನೀವು ನನ್ನಿಂದ ಅಟ್ಟಲ್ಪಟ್ಟು ದೇಶಭ್ರಷ್ಟರಾಗಿ ಅಳಿದುಹೋಗುವುದಕ್ಕೆ ಅವರ ದುರ್ಬೋಧನೆಯು ಆಸ್ಪದವಾಗುವುದು.
[11] ಯಾವ ಜನಾಂಗವು ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಟ್ಟು ಅವನ ಅಡಿಯಾಳಾಗುವುದೋ, ಆ ಜನಾಂಗದವರನ್ನು ನಾನು ಅವರ ದೇಶದಲ್ಲಿ ನೆಲೆಗೊಳಿಸುವೆನು; ಅವರು ಅಲ್ಲಿ ಭೂಮಿಯನ್ನು ವ್ಯವಸಾಯಮಾಡಿ ವಾಸಿಸುವರು. ಯೆಹೋವನೇ ಇದನ್ನು ನುಡಿದಿದ್ದಾನೆ.”
[12] ಇದಲ್ಲದೆ ನಾನು ಆ ಎಲ್ಲಾ ಮಾತುಗಳನ್ನು ಅನುಸರಿಸಿ ಯೆಹೂದದ ಅರಸನಾದ ಚಿದ್ಕೀಯನಿಗೂ ಹೀಗೆ ನುಡಿದೆನು, “ಬಾಬೆಲಿನ ಅರಸನ ನೊಗಕ್ಕೆ ಹೆಗಲುಕೊಟ್ಟು ಅವನಿಗೂ ಅವನ ಜನರಿಗೂ ಅಡಿಯಾಳಾಗಿರಿ, ಆಗ ಬದುಕುವಿರಿ.
[13] ನೀನೂ ನಿನ್ನ ಜನರೂ ಖಡ್ಗ ಕ್ಷಾಮ ಮತ್ತು ವ್ಯಾಧಿಗಳಿಂದ ಏಕೆ ಸಾಯಬೇಕು? ಬಾಬೆಲಿನ ಅರಸನ ಅಡಿಯಾಳಾಗಲು ಒಪ್ಪದ ಜನಾಂಗಕ್ಕೆ ಈ ಗತಿಯಾಗುವುದೆಂದು ಯೆಹೋವನು ನುಡಿದಿದ್ದಾನಷ್ಟೆ.
[14] ‘ನೀವು ಬಾಬೆಲಿನ ಅರಸನ ಅಡಿಯಾಳಾಗುವುದಿಲ್ಲ’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.
[15] ಯೆಹೋವನು ಇಂತೆನ್ನುತ್ತಾನೆ, ‘ನಾನು ಅವರನ್ನು ಕಳುಹಿಸಲಿಲ್ಲ; ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತಾರೆ. ನೀವೂ, ನಿಮಗೆ ಪ್ರವಾದಿಸುವ ಪ್ರವಾದಿಗಳೂ ನನ್ನಿಂದ ಅಟ್ಟಲ್ಪಟ್ಟು ಅಳಿದುಹೋಗುವುದಕ್ಕೆ ಅವರ ದುರ್ಬೋಧನೆಯು ಆಸ್ಪದವಾಗುವುದು.’”
[16] ಇದಲ್ಲದೆ ನಾನು ಯಾಜಕರಿಗೂ ಈ ಸಕಲಜನರಿಗೂ ಹೀಗೆ ನುಡಿದೆನು, “ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಯೆಹೋವನ ಆಲಯದ ಉಪಕರಣಗಳು ಬೇಗನೆ ಬಾಬೆಲಿನಿಂದ ಹಿಂದಕ್ಕೆ ತರಲ್ಪಡುವವು’ ಎಂಬುದಾಗಿ ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ; ನಿಮಗೆ ಸುಳ್ಳನ್ನು ಸಾರುತ್ತಾರೆ.
[17] ಅವರ ಕಡೆಗೆ ಕಿವಿಗೊಡಲೇ ಬಾರದು; ಬಾಬೆಲಿನ ಅರಸನ ಅಡಿಯಾಳಾಗಿರಿ, ಬದುಕುವಿರಿ.
[18] ಈ ಪಟ್ಟಣವು ಏಕೆ ಹಾಳಾಗಬೇಕು? ಅವರು ಪ್ರವಾದಿಗಳಾಗಿದ್ದು ಯೆಹೋವನ ವಾಕ್ಯಕ್ಕೆ ನೆಲೆಯಾಗಿದ್ದರೆ, ಈಗ ಸೇನಾಧೀಶ್ವರನಾದ ಯೆಹೋವನಿಗೆ ವಿಜ್ಞಾಪನೆ ಮಾಡಿ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ ಯೆರೂಸಲೇಮಿನಲ್ಲಿಯೂ ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಬೇಡಿಕೊಳ್ಳಲಿ.
[19] ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಸಮಸ್ತ ಪ್ರಧಾನರನ್ನೂ ಯೆರೂಸಲೇಮಿನ ಸಮಸ್ತ ಪ್ರಧಾನರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ ಕೆಲವು ಉಪಕರಣಗಳನ್ನು ತೆಗೆದುಕೊಳ್ಳಲಿಲ್ಲವಲ್ಲಾ.
[20] ಆ ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಪೀಠಗಳು, ಈ ಪಟ್ಟಣದಲ್ಲಿ ನಿಂತಿರುವ ಉಪಕರಣಗಳು, ಇವುಗಳ ವಿಷಯವಾಗಿ, ಅಂದರೆ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ,
[21] ಯೆರೂಸಲೇಮಿನಲ್ಲಿಯೂ ಉಳಿದಿರುವ ಉಪಕರಣಗಳ ವಿಷಯವಾಗಿ ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ,
[22] ‘ಅವು ಬಾಬಿಲೋನಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಉದ್ಧರಿಸುವ ದಿನದ ತನಕ ಅಲ್ಲೇ ಇರುವವು; ಆಗ ನಾನು ಅವುಗಳನ್ನು ಪುನಃ ತಂದು ಈ ಸ್ಥಳಕ್ಕೆ ಸೇರಿಸುವೆನು. ಇದು ಯೆಹೋವನ ನುಡಿ.’”