Skip to content
Opens in a new window
Listen to this chapter • 5:16

[1] ಯೆಹೋವನು ನನಗೆ, “ನೀನು ಹೋಗಿ ನಾರಿನ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ, ನೀರಿನಲ್ಲಿ ನೆನಸಿಡಬೇಡ” ಎಂದು ಅಪ್ಪಣೆಕೊಟ್ಟನು.

[2] ಆಗ ನಾನು ಯೆಹೋವನ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆನು.

[3] ಆ ಮೇಲೆ ಯೆಹೋವನ ಮಾತು ಎರಡನೆಯ ಬಾರಿ ನನಗೆ ಕೇಳಿ ಬಂತು.

[4] ಅವನು ನನಗೆ, “ನೀನು ಕೊಂಡುಕೊಂಡು ಸೊಂಟಕ್ಕೆ ಬಿಗಿದ ನಡುಕಟ್ಟನ್ನು ತೆಗೆದುಕೊಂಡು ಹೊರಟು ಯೂಫ್ರೆಟಿಸ್ ನದಿಗೆ ಹೋಗಿ, ಅದನ್ನು ಅಲ್ಲಿ ಬಂಡೆಯ ಸಂದಿನೊಳಗೆ ಬಚ್ಚಿಡು” ಎಂಬುದಾಗಿ ನುಡಿದನು.

[5] ಆಗ ಯೆಹೋವನ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆನು.

[6] ಬಹು ದಿನಗಳ ಮೇಲೆ ಯೆಹೋವನು ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ” ಎಂದು ಹೇಳಿದನು.

[7] ನಾನು ಯೂಫ್ರೆಟಿಸ್ ನದಿಗೆ ಹೋಗಿ ಅಗೆದು, ನಾನು ಬಚ್ಚಿಟ್ಟ ಸ್ಥಳದೊಳಗಿಂದ ನಡುಕಟ್ಟನ್ನು ತೆಗೆದೆನು, ಆಹಾ, ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.

[8] ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[9] “ಇದು ಯೆಹೋವನಾದ ನನ್ನ ನುಡಿ, ಈ ನಡುಕಟ್ಟಿನಂತೆ ನಾನು ಯೆಹೂದದ ದೊಡ್ಡಸ್ತಿಕೆಯನ್ನೂ ಮತ್ತು ಯೆರೂಸಲೇಮಿನ ಬಲು ದೊಡ್ಡಸ್ತಿಕೆಯನ್ನೂ ಕೆಡಿಸಿಬಿಡುವೆನು.

[10] ನನ್ನ ಮಾತುಗಳನ್ನು ಕೇಳದೆ ತಮ್ಮ ಹೃದಯದ ಹಟದಂತೆ ನಡೆದು, ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸುತ್ತಿರುವ ಈ ದುಷ್ಟ ಜನರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಮಾನವಾಗಿರುವರು.

[11] ಸಮಸ್ತ ಇಸ್ರಾಯೇಲ್ ವಂಶವೂ ಮತ್ತು ಸಕಲ ಯೆಹೂದ ವಂಶವೂ ನನ್ನ ಪ್ರಜೆಯಾಗಿದ್ದು ನನಗೆ ಹೆಸರೂ, ಸ್ತೋತ್ರವೂ, ಮಹಿಮೆಯೂ ಆಗಿರಲೆಂದು ನಡುಕಟ್ಟನ್ನು ಸೊಂಟಕ್ಕೆ ಬಿಗಿದಿರುವಂತೆ ಇವರನ್ನು ಬಿಗಿದುಕೊಂಡಿದ್ದೇನೆ; ಆದರೂ ಇವರು ಕೇಳದೆ ಹೋದರು ಎಂದು ಯೆಹೋವನು ನುಡಿಯುತ್ತಾನೆ” ಎಂಬುದೇ.

[12] “ಹೀಗಿರಲು ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು” ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ಹೇಳುವ ಮಾತನ್ನು ಕೇಳಿರಿ ಎಂದು ನೀನು ಅವರಿಗೆ ಸಾರು; ಆಗ ಅವರು ನಿನಗೆ, “ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು ನಮಗೆ ಗೊತ್ತಿಲ್ಲವೋ” ಎಂದು ಹೇಳುವರು.

[13] ಆಗ ನೀನು ಅವರಿಗೆ, “ಯೆಹೋವನ ಈ ಮಾತನ್ನು ಕೇಳಿರಿ, ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ಸಕಲ ನಿವಾಸಿಗಳನ್ನೂ ಅಂತು ದೇಶದ ಜನರೆಲ್ಲರನ್ನೂ,

[14] ನಾನು ಅಮಲಿನಿಂದ ತುಂಬಿಸಿ ಹಿರಿಕಿರಿಯರಾದ ಸಮಸ್ತರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ನಾನು ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ನಾಶಮಾಡದೆ ಬಿಡೆನು” ಇದು ಯೆಹೋವನ ನುಡಿ.

[15] ಕಿವಿಗೊಟ್ಟು ಕೇಳಿರಿ, ಹೆಮ್ಮೆಪಡಬೇಡಿರಿ; ಯೆಹೋವನೇ ಮಾತನಾಡಿದ್ದಾನೆ.

[16] ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಿರಿ; ಇಲ್ಲದಿದ್ದರೆ ಸ್ವಲ್ಪ ಕಾಲದೊಳಗೆ ಆತನು ಕತ್ತಲನ್ನು ಉಂಟುಮಾಡುವನು. ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವವು; ನೀವು ಬೆಳಕನ್ನು ನಿರೀಕ್ಷಿಸುತ್ತಿರುವಾಗ ಆತನು ಅದನ್ನು ಮರಣಾಂಧಕಾರದ ಕಾರ್ಗತ್ತಲನ್ನಾಗಿ ಮಾಡುವನು.

[17] ನೀವು ಕೇಳದಿದ್ದರೆ ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿಮಿತ್ತ ಗೋಳಾಡುವುದು. ಯೆಹೋವನ ಮಂದೆಯು ಸೆರೆಯಾಗಿ ಹೋದುದರಿಂದ ಬಹಳವಾಗಿ ಅಳುವೆನು, ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವುದು.

[18] ರಾಜನಿಗೂ ಮತ್ತು ರಾಜಮಾತೆಗೂ, “ನೆಲದಲ್ಲಿ ಕುಳಿತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ” ಎಂದು ಹೇಳಿರಿ.

[19] ದಕ್ಷಿಣ ಯೆಹೂದ ದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ; ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ.

[20] ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡೂ ಎಲ್ಲಿ?

[21] ನಿನ್ನೊಡನೆ ಗೆಳೆಯರಂತೆ ಬಾಳಲು ನೀನು ಅಭ್ಯಾಸಮಾಡಿಸಿದವರನ್ನು ಯೆಹೋವನು ನಿನಗೆ ತಲೆಯಾಗಿ ನೇಮಿಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳನ್ನೋ ಎಂಬಂತೆ ಹಿಡಿಯುವುದಲ್ಲವೇ.

[22] “ಇವು ನನಗೆ ಏಕೆ ಸಂಭವಿಸಿದವು” ಎಂದು ನೀನು ಮನದೊಳಗೆ ಅಂದುಕೊಂಡರೆ, ನಿನ್ನ ಉಡುಗೆಯು ಕೀಳಲ್ಪಟ್ಟು, ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದುದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವುದು.

[23] ಕೂಷ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸಲು ಸಾಧ್ಯವೇ? ಹೀಗಾದರೆ ದುಷ್ಟತನದಲ್ಲಿ ಶಿಕ್ಷಿತರಾದ ನೀವು ಶಿಷ್ಟತನದಲ್ಲಿ ನಡೆಯಬಹುದು.

[24] ಆದಕಾರಣ ಬಿರುಗಾಳಿಯು ಬಡಿದುಕೊಂಡು ಹೋಗುವ ಒಣ ಹುಲ್ಲನ್ನೋ ಎಂಬಂತೆ ನಾನು ಅವರನ್ನು ಚದರಿಸಿಬಿಡುವೆನು.

[25] ನೀನು ನನ್ನನ್ನು ಮರೆತು ಸುಳ್ಳನ್ನು ನಂಬಿದ್ದರಿಂದ ಇದೇ ನಿನ್ನ ಪಾಲು, ಇದೇ ನಾನು ನಿನಗೆ ಅಳೆದುಕೊಟ್ಟ ಭಾಗ ಎಂದು ಯೆಹೋವನು ನುಡಿಯುತ್ತಾನೆ.

[26] ನಿನ್ನ ಉಡುಗೆಯನ್ನು ನಿನ್ನ ಕಣ್ಣಮುಂದೆಯೇ ಕೀಳಿಸುವೆನು, ನಿನಗೆ ಅವಮಾನವಾಗುವುದು.

[27] ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಹೇಕಾರಗಳನ್ನು, ನಿನ್ನ ವ್ಯಭಿಚಾರದ ನಡತೆಯನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲ ಬೇಕು?

ಯೆರೆಮೀಯನು — Chapters