Skip to content
Opens in a new window
Listen to this chapter • 4:38

[1] ಇಸ್ರಾಯೇಲ್ ವಂಶದವರೇ, ಯೆಹೋವನು ನಿಮಗೆ ನುಡಿಯುವ ಮಾತನ್ನು ಕೇಳಿರಿ;

[2] ಯೆಹೋವನು, “ಜನಾಂಗಗಳ ಆಚರಣೆಯನ್ನು ಅಭ್ಯಾಸ ಮಾಡಿಕೊಳ್ಳಬೇಡಿರಿ, ಜನಾಂಗಗಳು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿರಿ.

[3] ಜನಾಂಗಗಳ ಕಟ್ಟಳೆಗಳು ಬರಿದೇ; ಅರಣ್ಯದ ಮರವನ್ನು ಕತ್ತರಿಸುವರು, ಬಡಗಿಯು ಅದನ್ನು ಕೈಯಿಂದ, ಉಳಿಯಿಂದ ರೂಪಿಸುವನು.

[4] ಅದನ್ನು ಬೆಳ್ಳಿ, ಬಂಗಾರಗಳಿಂದ ಭೂಷಿಸುತ್ತಾರೆ, ಅಲುಗದಂತೆ ಮೊಳೆಗಳಿಂದ, ಸುತ್ತಿಗೆಯಿಂದ ಭದ್ರಪಡಿಸುತ್ತಾರೆ.

[5] ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಮಾತನಾಡಲಾರವು; ಹೊತ್ತುಕೊಂಡು ಹೋಗಬೇಕು, ನಡೆಯಲಾರವು. ಅವುಗಳಿಗೆ ಹೆದರಬೇಡಿರಿ, ಕೇಡುಮಾಡಲಾರವು; ಒಳ್ಳೆಯದನ್ನು ಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ” ಎಂದು ಹೇಳುತ್ತಾನೆ

[6] ಯೆಹೋವನೇ, ನಿನ್ನ ಸಮಾನನು ಯಾರು ಇಲ್ಲ; ನೀನು ಮಹೋನ್ನತನು, ನಿನ್ನ ನಾಮವು ಸಾಮರ್ಥ್ಯದಿಂದ ಕೂಡಿ ಮಹೋನ್ನತವಾಗಿದೆ.

[7] ಜನಾಂಗಗಳ ಅರಸನೇ, ಯಾರು ನಿನಗೆ ಹೆದರದೆ ಇದ್ದಾರು? ಇದು ನಿನಗೆ ತಕ್ಕದ್ದು; ಜನಾಂಗಗಳ ಜ್ಞಾನಿಗಳಲ್ಲಿಯೂ, ರಾಜಪರಂಪರೆಯಲ್ಲಿಯೂ ನಿನಗೆ ಸಮಾನನು ಯಾರೂ ಇಲ್ಲವಷ್ಟೆ.

[8] ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.

[9] ಬೆಳ್ಳಿಯ ತಗಡುಗಳು ತಾರ್ಷೀಷಿನಿಂದಲೂ, ಕೆತ್ತನೆಗಾರನ ಮತ್ತು ಎರಕದವನ ಕೈಕೆಲಸವಾದ ಚಿನ್ನವೂ ಊಫಜಿನಿಂದಲೂ ಸಾಗಿಬರುತ್ತವೆ. ನೀಲಧೂಮ್ರ ವಸ್ತ್ರಗಳು ಅವುಗಳ ಉಡುಪಾಗಿವೆ, ಇವೆಲ್ಲಾ ಕುಶಲಕರ್ಮಿಗಳ ಕೌಶಲ್ಯ.

[10] ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಮತ್ತು ಶಾಶ್ವತ ರಾಜನೂ ಆಗಿದ್ದಾನೆ. ಆತನ ಕೋಪಕ್ಕೆ ಭೂಲೋಕವು ನಡುಗುತ್ತದೆ, ಜನಾಂಗಗಳು ಆತನ ರೋಷವನ್ನು ತಾಳಲಾರವು.

[11] ನೀವು ಅವುಗಳಿಗೆ, “ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂಮಿಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು” ಎಂದು ಹೇಳಿರಿ.

[12] ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.

[13] ಆತನ ಗರ್ಜನೆಗೆ ಆಕಾಶದಲ್ಲಿ ನೀರು ಭೋರ್ಗರೆಯುವಂತೆ; ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ. ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾನೆ.

[14] ಎಲ್ಲರೂ ತಿಳಿವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು. ಅವನು ಎರಕ ಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ.

[15] ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ; ದಂಡನೆಯಾಗುವಾಗ ಅಳಿದುಹೋಗುವವು.

[16] ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು. ಇಸ್ರಾಯೇಲ್ ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದು ಆತನ ನಾಮಧೇಯ.

[17] ಮುತ್ತಿಗೆಗೆ ಈಡಾದ ಜನವೇ, ಗಂಟುಕಟ್ಟಿಕೊಂಡು ದೇಶದೊಳಗಿಂದ ನಡೆ.

[18] “ಇಗೋ, ನಾನು ಈ ಸಾರಿ ದೇಶನಿವಾಸಿಗಳನ್ನು ಎಸೆದೇ ಬಿಡುವೆನು, ಅವರಿಗೆ ಬುದ್ಧಿ ಬರಲೆಂದು ಅವರನ್ನು ಬಾಧಿಸುವೆನು” ಎಂದು ಯೆಹೋವನು ನುಡಿಯುತ್ತಾನೆ.

[19] ಅಯ್ಯೋ, ನನ್ನ ಗಾಯ! ನನಗೆ ಬಿದ್ದ ಪೆಟ್ಟು ಭೀಕರ! ಆದರೂ ನಾನು, “ಇದು ನನಗೆ ವ್ಯಾಧಿಯೇ ಸರಿ, ಸಹಿಸಬೇಕು” ಅಂದುಕೊಂಡಿದ್ದೇನೆ.

[20] ನನ್ನ ಗುಡಾರವು ಹಾಳಾಗಿದೆ, ಹಗ್ಗಗಳು ಹರಿದುಹೋಗಿವೆ, ಮಕ್ಕಳು ನನ್ನೊಳಗಿಂದ ತೊಲಗಿ ಇಲ್ಲವಾಗಿದ್ದಾರೆ. ನನ್ನ ಗುಡಾರವನ್ನು ಹಾಕುವುದಕ್ಕೂ, ನನ್ನ ಪರದೆಗಳನ್ನು ಬಿಗಿಯುವುದಕ್ಕೂ ಇನ್ನು ಯಾರೂ ಇರುವುದಿಲ್ಲ.

[21] ಏಕೆಂದರೆ ಪಾಲಕರು ಪಶುಪ್ರಾಯರಾಗಿ ಯೆಹೋವನ ಕಡೆಗೆ ನೋಡದೆ ಇದ್ದಾರೆ. ಆದಕಾರಣ ಅವರ ಕಾರ್ಯವು ಸಾರ್ಥಕವಾಗಲಿಲ್ಲ, ಅವರ ಹಿಂಡುಗಳು ಚದರಿಹೋದವು.

[22] ಇಗೋ, ಒಂದು ಸದ್ದು! ಆಹಾ, ಬರುತ್ತಿದೆ! ಯೆಹೂದದ ಪಟ್ಟಣಗಳನ್ನು ನಾಶಪಡಿಸಿ ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೆ ಉತ್ತರದೇಶದಿಂದ ಮಹಾಕಂಪನವು ಸಂಭವಿಸುತ್ತದೆ.

[23] ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿ ಇಲ್ಲವೆಂದು ನನಗೆ ಗೊತ್ತು. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನು ಇಡಲಾರನು.

[24] ಯೆಹೋವನೇ, ನನ್ನನ್ನು ಶಿಕ್ಷಿಸು, ಆದರೆ ಮಿತಿಮೀರ ಬೇಡ. ರೋಷದಿಂದ ದಂಡಿಸದಿರು. ನಾನು ಕೇವಲ ಕ್ಷೀಣನಾದೇನು.

[25] ನಿನ್ನನ್ನು ಅರಿಯದ ಅನ್ಯಜನಾಂಗಗಳ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ವಂಶಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು. ಅವರು ಯಾಕೋಬ್ಯರನ್ನು ನುಂಗಿ ಹೌದು, ಪೂರಾ ನುಂಗಿಬಿಟ್ಟು ಅವರ ವಾಸಸ್ಥಳವನ್ನು ಹಾಳುಮಾಡಿದ್ದಾರಲ್ಲಾ.

ಯೆರೆಮೀಯನು — Chapters