Skip to content
Opens in a new window
Listen to this chapter • 9:00

[1] ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ, ಅಂದರೆ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಯೆಹೋವನು ಯೆರೆಮೀಯನಿಗೆ ತನ್ನ ವಾಕ್ಯವನ್ನು ದಯಪಾಲಿಸಿದನು.

[2] ಆ ಕಾಲದಲ್ಲಿ ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮನ್ನು ಮುತ್ತಿತು ಮತ್ತು ಪ್ರವಾದಿಯಾದ ಯೆರೆಮೀಯನು ಯೆಹೂದದ ರಾಜನ ಮನೆಗೆ ಸೇರಿದ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು.

[3] ಯೆಹೂದದ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವನು ಇಂತೆನ್ನುತ್ತಾನೆ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರಮಿಸುವನು.

[4] ಮತ್ತು ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಯಿಂದ ತಪ್ಪಿಸಿಕೊಳ್ಳಲಾರದೆ ಬಾಬೆಲಿನ ಅರಸನ ವಶವಾಗುವುದು ಖಂಡಿತ, ಅವನಿಗೆ ಸಾಕ್ಷಾತ್ತಾಗಿ ನಿಂತು ಎದುರೆದುರಾಗಿ ಮಾತನಾಡುವನು.

[5] ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು, ನಾನು ಅವನಿಗೆ ದಯೆತೋರಿಸುವ ತನಕ ಅಲ್ಲೇ ಇರುವನು. ನೀವು ಕಸ್ದೀಯರೊಡನೆ ಯುದ್ಧಮಾಡಿದರೂ ನಿಮಗೆ ಜಯವಾಗದು; ಇದು ಯೆಹೋವನ ನುಡಿ ಎಂಬುದಾಗಿ ಏಕೆ ನುಡಿಯುತ್ತೀ?’” ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದ್ದನು.

[6] ಅದಕ್ಕೆ ಯೆರೆಮೀಯನು, “ಯೆಹೋವನು ನನಗೆ ಈ ವಾಕ್ಯವನ್ನು ದಯಪಾಲಿಸಿದನು,

[7] ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ನಿನ್ನ ಬಳಿಗೆ ಬಂದು ‘ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೋ; ಪರಾಧೀನವಾಗದಂತೆ ಅದನ್ನು ಕೊಂಡುಕೊಳ್ಳುವ ಹಕ್ಕು ನಿನ್ನದೇ ಎಂದು ಹೇಳುವನು’” ಎಂದು ತಿಳಿಸಿದನು.

[8] ಬಳಿಕ ಯೆಹೋವನ ವಾಕ್ಯಾನುಸಾರ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿ ನನ್ನ ಬಳಿಗೆ ಬಂದು, “ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ದಯಮಾಡಿ ಕೊಂಡುಕೋ, ಅದಕ್ಕೆ ನೀನೇ ಬಾಧ್ಯನು. ಪರಾಧೀನವಾಗದಂತೆ ಕೊಂಡುಕೊಳ್ಳುವ ಹಕ್ಕೂ ನಿನ್ನದೇ; ನಿನಗಾಗಿಯೇ ಕೊಂಡುಕೋ” ಎಂದು ಹೇಳಿದನು. ಕೂಡಲೆ ಇದು ಯೆಹೋವನ ನುಡಿ ಎಂದು ನನಗೆ ಗೊತ್ತಾಯಿತು.

[9] ಆಗ ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿರುವ ಹೊಲವನ್ನು ನಾನು ಕೊಂಡುಕೊಂಡು ಅದರ ಕ್ರಯವಾಗಿ ಹದಿನೇಳು ತೊಲಾ ಬೆಳ್ಳಿಯನ್ನು ತೂಕಮಾಡಿ ಅವನಿಗೆ ಕೊಟ್ಟೆನು.

[10] ಪತ್ರಕ್ಕೆ ಸಹಿ ಹಾಕಿ ಮುಚ್ಚಿ ಆ ಮುಚ್ಚಳಕ್ಕೆ ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು.

[11] ಆ ಮೇಲೆ ನಾನು ಕ್ರಯಪತ್ರವನ್ನು ಅಂದರೆ ನಿಯಮ ಮತ್ತು ಷರತ್ತುಗಳಿಂದ ಮುಚ್ಚಿದ್ದ ಪತ್ರವನ್ನೂ ಹಾಗು ಮುಚ್ಚಳದ ಪತ್ರವನ್ನೂ ತೆಗೆದುಕೊಂಡೆನು.

[12] ಅದನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ಸಹಿಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ, ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು.

[13] ಅವರೆಲ್ಲರ ಮುಂದೆ ನಾನು ಬಾರೂಕನಿಗೆ,

[14] “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮತ್ತು ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಬಹು ದಿನ ಇರುವ ಹಾಗೆ ಅದನ್ನು ಮಡಿಕೆಯಲ್ಲಿ ಬಚ್ಚಿಡು.

[15] ಈ ದೇಶದಲ್ಲಿ ಜನರು ಮನೆ, ಹೊಲ ಮತ್ತು ದ್ರಾಕ್ಷಿತೋಟಗಳನ್ನು ಪುನಃ ಕೊಂಡುಕೊಳ್ಳುವರು, ಕೊಡುವರು. ಇದು ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿ’” ಎಂದು ಖಂಡಿತವಾಗಿ ಹೇಳಿದೆನು.

[16] ಕ್ರಯಪತ್ರವನ್ನು ನೇರೀಯನ ಮಗನಾದ ಬಾರೂಕನ ಕೈಗೆ ಕೊಟ್ಟ ಮೇಲೆ ನಾನು ಯೆಹೋವನಿಗೆ,

[17] “ಆಹಾ! ಕರ್ತನಾದ ಯೆಹೋವನೇ! ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದಿ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ.

[18] ನೀನು ಸಾವಿರಾರು ತಲೆಗಳವರೆಗೆ ದಯೆತೋರಿಸುವವನೂ, ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವನೂ ಆಗಿದ್ದೀ. ನೀನು ಮಹಾ ಪರಾಕ್ರಮಿಯಾದ ದೇವರು; ಸೇನಾಧೀಶ್ವರನಾದ ಯೆಹೋವನೆಂಬುದು ನಿನ್ನ ಹೆಸರಾಗಿದೆ.

[19] ನೀನು ಆಲೋಚನೆಯಲ್ಲಿ ಶ್ರೇಷ್ಠನು, ಕಾರ್ಯದಲ್ಲಿ ಸಮರ್ಥನು; ನೀನು ಪ್ರತಿಯೊಬ್ಬನಿಗೂ ಅವನವನ ಕರ್ಮಕ್ಕೂ ನಡತೆಗೂ ತಕ್ಕ ಪ್ರತಿಫಲವನ್ನು ಕೊಡಬೇಕೆಂದು ನರಜನ್ಮದವರ ಮಾರ್ಗಗಳನ್ನೆಲ್ಲಾ ಕಣ್ಣಾರೆ ನೋಡುತ್ತೀ.

[20] ನೀನು ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ ಈ ದಿನದವರೆಗೆ ಇಸ್ರಾಯೇಲರಲ್ಲಿಯೂ ಮತ್ತು ಇತರ ಜನರಲ್ಲಿಯೂ ಅವುಗಳನ್ನು ಮಾಡುತ್ತಾ ಬಂದು ಹೆಸರನ್ನು ಪಡೆದುಕೊಂಡಿದ್ದಿ.

[21] ಅದು ಈಗಲೂ ಸ್ಥಿರವಾಗಿದೆ; ನೀನು ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ, ಭುಜಪರಾಕ್ರಮವನ್ನು ತೋರಿಸಿ, ಶಿಕ್ಷಾಹಸ್ತವನ್ನು ಎತ್ತಿ, ಮಹಾ ಭೀತಿಯನ್ನುಂಟುಮಾಡಿ ನಿನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಬರಮಾಡಿದಿ.

[22] ಅವರ ಪೂರ್ವಿಕರಿಗೆ ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಈ ದೇಶವನ್ನು ಅವರಿಗೆ ಅನುಗ್ರಹಿಸಿದಿ.

[23] ಅವರು ಅದನ್ನು ಸೇರಿ ಅನುಭವಿಸಿದರೂ ನಿನ್ನ ಮಾತಿಗೆ ಕಿವಿಗೊಡಲಿಲ್ಲ, ನಿನ್ನ ಧರ್ಮಾನುಸಾರ ನಡೆಯಲಿಲ್ಲ; ನೀನು ಆಜ್ಞಾಪಿಸಿದವುಗಳಲ್ಲೆಲ್ಲಾ ಒಂದನ್ನೂ ಮಾಡಲಿಲ್ಲ. ಆದಕಾರಣ ನೀನು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಿ.

[24] ಇಗೋ, ಮುತ್ತಿಗೆಯ ದಿಬ್ಬಗಳು ಪಟ್ಟಣವನ್ನು ಆಕ್ರಮಿಸುವುದಕ್ಕೆ ಬಂದಿದ್ದಾರೆ; ಪಟ್ಟಣವು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ವಿರೋಧಿಗಳಾದ ಕಸ್ದೀಯರ ಕೈಗೆ ಸಿಕ್ಕಿದೆ; ನೀನು ನುಡಿದದ್ದು ನೆರವೇರಿದೆ, ಇಗೋ, ನೋಡುತ್ತಿದ್ದಿ.

[25] ಕರ್ತನಾದ ಯೆಹೋವನೇ, ನೀನು ನನಗೆ, ‘ಸಾಕ್ಷಿಗಳನ್ನು ಕರೆಯಿಸಿ ಕ್ರಯಕೊಟ್ಟು ಹೊಲವನ್ನು ಕೊಂಡುಕೋ’ ಎಂದು ಅಪ್ಪಣೆಕೊಟ್ಟೆ; ನೋಡು, ಪಟ್ಟಣವು ಕಸ್ದೀಯರ ಕೈಸೇರಿದೆಯಲ್ಲಾ” ಎಂದು ವಿಜ್ಞಾಪನೆ ಮಾಡಿದೆನು.

[26] ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,

[27] “ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

[28] ಆದಕಾರಣ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ವಶಕ್ಕೆ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರಮಿಸುವನು.

[29] ಈ ಪಟ್ಟಣಕ್ಕೆ ಪ್ರತಿಭಟಿಸುವ ಕಸ್ದೀಯರು ಇದರೊಳಗೆ ನುಗ್ಗಿ ಬೆಂಕಿಹಚ್ಚಿ ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳನಿಗೆ ಧೂಪಹಾಕಿ, ಅನ್ಯದೇವತೆಗಳಿಗೆ ಪಾನವನ್ನು ನೈವೇದ್ಯವಾಗಿ ಅರ್ಪಿಸಿ ನನ್ನನ್ನು ಕೆಣಕಿದ್ದಾರೋ, ಆ ಮನೆಗಳಿರುವ ಈ ಪಟ್ಟಣವನ್ನು ಸುಟ್ಟುಬಿಡುವರು.

[30] ಇಸ್ರಾಯೇಲ್ ವಂಶವೂ ಮತ್ತು ಯೆಹೂದ ವಂಶವೂ ಚಿಕ್ಕಂದಿನಿಂದ ನನ್ನ ಚಿತ್ತಕ್ಕೆ ವಿರುದ್ಧವಾಗಿಯೇ ನಡೆಯುತ್ತಾ ಬಂದಿವೆ. ಹೌದು, ಇಸ್ರಾಯೇಲ್ ವಂಶದವರು ತಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸುತ್ತಲೇ ಬಂದಿದ್ದಾರೆ, ಇದು ಯೆಹೋವನ ನುಡಿ.

[31] ಈ ಪಟ್ಟಣವು ಕಟ್ಟಿದಂದಿನಿಂದ ಇಂದಿನವರೆಗೂ ನನ್ನ ಕೋಪರೋಷಗಳಿಗೆ ಆಸ್ಪದವಾಗಿದೆ.

[32] ಅರಸರು, ಪ್ರಧಾನರು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಯೆರೂಸಲೇಮಿನ ನಿವಾಸಿಗಳು, ಅಂತು ಎಲ್ಲಾ ಇಸ್ರಾಯೇಲರೂ ಮತ್ತು ಯೆಹೂದ್ಯರೂ ನನ್ನನ್ನು ರೇಗಿಸತಕ್ಕ ಅಧರ್ಮವನ್ನು ತುಂಬಾ ಮಾಡಿದ್ದರಿಂದ ನಾನು ಈ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂತು.

[33] ಅವರು ನನಗೆ ಮುಖಕೊಡದೆ ಬೆನ್ನುಮಾಡಿದ್ದಾರೆ; ನಾನು ಎಡೆಬಿಡದೆ ಅವರಿಗೆ ಬೋಧಿಸುತ್ತಾ ಬಂದರೂ ಅವರು ಉಪದೇಶವನ್ನು ಹೊಂದಲಿಲ್ಲ ಮತ್ತು ನನಗೆ ಕಿವಿಗೊಡಲೇ ಇಲ್ಲ.

[34] ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ತಮ್ಮ ಅಸಹ್ಯ ವಸ್ತುಗಳನ್ನು ಇಟ್ಟು ಹೊಲೆ ಮಾಡಿದ್ದಾರೆ.

[35] ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿ ಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ಬಾಳನ ಪೂಜಾಸ್ಥಳಗಳನ್ನು ಕಟ್ಟಿ, ಯೆಹೂದವನ್ನು ಪಾಪಕ್ಕೆ ಸಿಕ್ಕಿಸಿದ್ದಾರೆ; ನಾನು ಇಂಥ ಅಸಹ್ಯಕಾರ್ಯವನ್ನು ವಿಧಿಸಲಿಲ್ಲ, ಅದರ ಸಂಕಲ್ಪವೂ ನನ್ನ ಮನಸ್ಸಿನಲ್ಲಿ ಹುಟ್ಟಲಿಲ್ಲ” ಎಂಬುದೇ.

[36] ಹೀಗಿರಲು “ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ಬಾಬೆಲಿನ ಅರಸನ ಕೈವಶವಾಗಿದೆ ಎಂದು ನೀವು ಹೇಳುವ ಈ ಪಟ್ಟಣದ ವಿಷಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ಈಗ ಇಂತೆನ್ನುತ್ತಾನೆ,

[37] ‘ಇಗೋ, ನಾನು ಕೋಪ, ರೋಷ, ಮಹಾಕ್ರೋಧಭರಿತನಾಗಿ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಸಕಲ ದೇಶಗಳಿಂದ ಈ ಸ್ಥಳಕ್ಕೆ ಪುನಃ ಕರೆದುಕೊಂಡು ಬಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.

[38] ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು.

[39] ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು.

[40] ನಾನು ನಿಮಗೆ ಹಿತ ಮಾಡುವುದನ್ನು ಬಿಟ್ಟು ವಿಮುಖನಾಗೆನು’ ಎಂಬುವ ಶಾಶ್ವತವಾದ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳುವೆನು; ಅವರು ನನ್ನಿಂದಗಲದಂತೆ ಅವರ ಹೃದಯದೊಳಗೆ ನನ್ನ ಮೇಲಣ ಭಯಭಕ್ತಿಯನ್ನು ನೆಲೆಗೊಳಿಸುವೆನು.

[41] ನಾನು ಅವರ ಹಿತವನ್ನು ಬಯಸುತ್ತಾ ಅವರಲ್ಲಿ ಆನಂದಿಸುವೆನು, ನಿಶ್ಚಯವಾಗಿ ಅವರನ್ನು ಈ ದೇಶದಲ್ಲಿ ನನ್ನ ಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ಸ್ಥಾಪಿಸುವೆನು.”

[42] ಯೆಹೋವನು ಇಂತೆನ್ನುತ್ತಾನೆ, “ನಾನು ಈ ಜನರಿಗೆ ಇಷ್ಟು ದೊಡ್ಡ ಕೇಡನ್ನು ಬರಮಾಡಿದಂತೆ ವಾಗ್ದಾನ ಮಾಡಿದ ಎಲ್ಲಾ ಮೇಲನ್ನೂ ಬರಮಾಡುವೆನು.

[43] ಜನ ಮತ್ತು ಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಂಡುಕೊಳ್ಳುವರು, ಕೊಡುವರು.

[44] ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣಪ್ರಾಂತ್ಯದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಜನರು ಹೊಲ ಗದ್ದೆಗಳಿಗೆ ಕ್ರಯಕೊಟ್ಟು, ಪತ್ರಕ್ಕೆ ಸಹಿಹಾಕಿ ಮುಚ್ಚಿ, ಸಾಕ್ಷಿಗಳನ್ನು ಹಾಕಿಸಿ ಕೊಂಡುಕೊಳ್ಳುವರು; ನಾನು ನನ್ನ ಜನರ ಗುಲಾಮಗಿರಿಯ ದುರವಸ್ಥೆಯನ್ನು ತಪ್ಪಿಸಿ ಬರಮಾಡುವೆನು.” ಇದು ಯೆಹೋವನ ನುಡಿ.

ಯೆರೆಮೀಯನು — Chapters