[1] ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ, ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ,
[2] ಪ್ರವಾದಿಯಾದ ಯೆರೆಮೀಯನು ಯೆಹೂದ್ಯರೆಲ್ಲರ ವಿಷಯವಾಗಿ ತನಗೆ ಉಂಟಾದ ಈ ದೈವೋಕ್ತಿಯನ್ನು ಸಕಲ ಯೆಹೂದ್ಯರಿಗೂ ಸಮಸ್ತ ಯೆರೂಸಲೇಮಿನವರಿಗೂ ಸಾರಿದನು.
[3] ಆತನು, “ಆಮೋನನ ಮಗನೂ ಯೆಹೂದದ ಅರಸನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಿಂದ ಈ ದಿನದವರೆಗೆ, ಇಪ್ಪತ್ತಮೂರು ವರ್ಷಗಳಿಂದಲೂ ಯೆಹೋವನು ತನ್ನ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ; ಅದನ್ನು ನಿಮಗೆ ಪ್ರಕಟಿಸುತ್ತಲೇ ಬಂದಿದ್ದೇನೆ; ಆದರೆ ನೀವು ಅದಕ್ಕೆ ಕಿವಿಗೊಡಲಿಲ್ಲ.
[4] ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ತಪ್ಪದೆ ಕಳುಹಿಸುತ್ತಿದ್ದರೂ ನೀವು ಕೇಳಲಿಲ್ಲ, ಕಿವಿಗೊಡಲೂ ಇಲ್ಲ.
[5] ಆತನು ನಿಮಗೆ ಹೇಳಿದ ಮಾತೇನೆಂದರೆ, ‘ನೀವೆಲ್ಲರು ನಿಮ್ಮ ನಿಮ್ಮ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ಹಿಂದಿರುಗಿರಿ. ನಿಮಗೆ ಶಾಶ್ವತ ಸ್ವತ್ತಾಗಿರಲಿ ಎಂದು ಯೆಹೋವನು ಪುರಾತನ ಕಾಲದಲ್ಲಿ ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗೆ ನೆಲೆಗೊಳ್ಳಿರಿ.
[6] ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸಬೇಡಿರಿ; ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸಬೇಡಿರಿ; ಹೀಗಾದರೆ ನಾನು ನಿಮಗೆ ಯಾವ ಕೇಡನ್ನೂ ಮಾಡುವುದಿಲ್ಲ’ ಎಂಬುದೇ.
[7] ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ, ನಿಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ಕೆಣಕಿ ನಿಮಗೆ ನೀವೇ ಕೇಡನ್ನು ತಂದುಕೊಂಡಿದ್ದೀರಿ” ಎಂದು ಹೇಳಿದನು.
[8] ಹೀಗಿರಲು ಸೇನಾಧೀಶ್ವರನಾದ ಯೆಹೋವನ ಈ ನುಡಿಯನ್ನು ಕೇಳಿರಿ, “ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ,
[9] ನಾನು ಉತ್ತರ ದಿಕ್ಕಿನ ಜನಾಂಗಗಳನ್ನೆಲ್ಲಾ ಕರೆಯಿಸಿ, ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡುವೆನು. ಇವರೆಲ್ಲರನ್ನು ಈ ದೇಶದ ಮೇಲೂ, ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ, ಅವುಗಳನ್ನು ತುಂಬಾ ಹಾಳುಗೈದು, ಪರಿಹಾಸ್ಯಕ್ಕೂ, ನಿತ್ಯನಾಶನಕ್ಕೂ ಈಡುಮಾಡುವೆನು.
[10] ಇದಲ್ಲದೆ ನಾನು ಅವುಗಳಲ್ಲಿ ಹರ್ಷಸಂಭ್ರಮಗಳ ಧ್ವನಿಯನ್ನೂ, ವಧೂವರರ ಸ್ವರವನ್ನೂ, ಬೀಸುವ ಕಲ್ಲಿನ ಶಬ್ದವನ್ನೂ, ದೀಪದ ಬೆಳಕನ್ನೂ ನಿಲ್ಲಿಸಿಬಿಡುವೆನು.
[11] ಈ ದೇಶವೆಲ್ಲಾ ಹಾಳಾಗಿ ಬೆರಗಿಗೆ ಈಡಾಗುವುದು; ಮತ್ತು ಈ ಜನಾಂಗಗಳು ಎಪ್ಪತ್ತು ವರ್ಷ ಬಾಬೆಲಿನ ಅರಸನ ಅಡಿಯಾಳಾಗಿ ಬಿದ್ದಿರುವವು.
[12] ಎಪ್ಪತ್ತು ವರ್ಷಗಳ ತರುವಾಯ ನಾನು ಬಾಬೆಲಿನ ಅರಸನನ್ನೂ, ಕಸ್ದೀಯರ ದೇಶವನ್ನೂ, ಆ ಜನಾಂಗದವರನ್ನೂ ಅವರ ದ್ರೋಹಕ್ಕಾಗಿ ದಂಡಿಸಿ, ಆ ದೇಶವನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ಇದು ಯೆಹೋವನ ನುಡಿ.
[13] ನಾನು ಆ ದೇಶದ ವಿಷಯದಲ್ಲಿ ನುಡಿದದ್ದನ್ನೆಲ್ಲಾ ಅಂದರೆ ಯೆರೆಮೀಯನು ಸಕಲ ಜನಾಂಗಗಳ ವಿಷಯವಾಗಿ ಮಾಡಿರುವ ಈ ಪ್ರವಾದನೆಗಳ ಗ್ರಂಥದಲ್ಲಿ ಬರೆದದ್ದನ್ನೆಲ್ಲಾ ಅದರ ಮೇಲೆ ಬರಮಾಡುವೆನು.
[14] ಅನೇಕ ಜನಾಂಗಗಳೂ ಮತ್ತು ಮಹಾರಾಜರೂ ಅವರನ್ನೇ ಅಡಿಯಾಳಾಗಿ ಮಾಡಿಕೊಳ್ಳುವರು; ಅವರ ಕೃತ್ಯಗಳಿಗೂ ಮತ್ತು ಕೈಕೆಲಸಗಳಿಗೂ ತಕ್ಕಂತೆ ಅವರಿಗೆ ಮುಯ್ಯಿತೀರಿಸುವೆನು” ಎಂಬುದೇ.
[15] ಇಸ್ರಾಯೇಲರ ದೇವರಾದ ಯೆಹೋವನು ನನಗೆ, “ರೋಷರೂಪ ಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು.
[16] ನಾನು ಅವರಲ್ಲಿಗೆ ಖಡ್ಗವನ್ನು ಕಳುಹಿಸುವೆನು. ಆ ನನ್ನ ರೋಷವನ್ನು ಅವರು ಕುಡಿದು ಓಲಾಡುವರು, ಹುಚ್ಚುಚ್ಚಾಗುವರು” ಎಂದು ಅಪ್ಪಣೆಕೊಟ್ಟನು.
[17] ಆಗ ನಾನು ಯೆಹೋವನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡು ಯೆಹೋವನು ಯಾವ ಜನಾಂಗಗಳ ಬಳಿಗೆ ನನ್ನನ್ನು ಕಳುಹಿಸಿದನೋ, ಆ ಸಕಲ ಜನಾಂಗಗಳು ಅದರಲ್ಲಿ ಕುಡಿಯುವಂತೆ ಮಾಡಿದೆನು.
[18] ಅದನ್ನು ಯೆರೂಸಲೇಮಿಗೂ, ಯೆಹೂದದ ಪಟ್ಟಣಗಳಿಗೂ, ಅರಸರಿಗೂ ಮತ್ತು ಪ್ರಧಾನರಿಗೂ ಕುಡಿಸಿದೆನು. ಇದರಿಂದ ಅವರು ಹಾಳಾಗಿ ಪರಿಹಾಸ್ಯಕ್ಕೂ ಮತ್ತು ಶಾಪಕ್ಕೂ ಗುರಿಯಾಗುವುದಕ್ಕೆ ಆಸ್ಪದವಾಯಿತು.
[19] ಅದು ಈ ದಿನ ನೆರವೇರಿದೆ. ಇದರೊಂದಿಗೆ ಐಗುಪ್ತದ ಅರಸನಾದ ಫರೋಹನು, ಅವನ ಸೇವಕರು, ಪ್ರಧಾನರು, ಅವನ ಎಲ್ಲಾ ಜನರು,
[20] ಬಗೆಬಗೆಯ ಎಲ್ಲಾ ವಿದೇಶೀಯರು, ಊಚ್ ದೇಶದ ಎಲ್ಲಾ ಅರಸರು, ಫಿಲಿಷ್ಟಿಯ ದೇಶದ ಎಲ್ಲಾ ಅರಸರು, ಅಷ್ಕೆಲೋನ್, ಗಾಜಾ, ಎಕ್ರೋನ್, ಹಾಳಾಗದೆ ಉಳಿದ ಸ್ವಲ್ಪ ಅಷ್ಡೋದ್,
[21] ಎದೋಮ್ಯರು, ಮೋವಾಬ್ಯರು, ಅಮ್ಮೋನ್ಯರು,
[22] ತೂರಿನ ಎಲ್ಲಾ ಅರಸರು, ಚೀದೋನಿನ ಎಲ್ಲಾ ಅರಸರು, ಸಮುದ್ರದ ಆಚೆಯ ಕರಾವಳಿಯ ಅರಸರು,
[23] ದೆದಾನ್ಯರು, ತೇಮಾ ದೇಶದವರು, ಬೂಜ್ ದೇಶದವರು, ಚಂಡಿಕೆ ಬಿಟ್ಟುಕೊಂಡಿರುವವರೆಲ್ಲರು,
[24] ಅರಬಿಯದ ಎಲ್ಲಾ ಅರಸರು, ಅರಣ್ಯವಾಸಿಗಳಾದ ಮಿಶ್ರಜಾತಿಯವರ ಎಲ್ಲಾ ಅರಸರು,
[25] ಜಿಮ್ರಿಯ ಎಲ್ಲಾ ಅರಸರು, ಏಲಾಮಿನ ಎಲ್ಲಾ ಅರಸರು, ಮೇದ್ಯರ ಎಲ್ಲಾ ಅರಸರು,
[26] ದೂರ ಮತ್ತು ಸಮೀಪವಿರುವ ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ ಎಂಬುದೇ ನನಗಾದ ಅಪ್ಪಣೆ.
[27] ಇದಲ್ಲದೆ ನನಗೆ ಈ ಅಪ್ಪಣೆಯಾಯಿತು, ನೀನು ಅವರಿಗೆ ನುಡಿಯತಕ್ಕದ್ದೇನೆಂದರೆ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಾನು ನಿಮ್ಮಲ್ಲಿಗೆ ಖಡ್ಗವನ್ನು ಕಳುಹಿಸುವೆನು; ಆ ನನ್ನ ರೋಷವನ್ನು ಕುಡಿದು ಅಮಲೇರಿದವರಾಗಿ ಕಕ್ಕಿ ಬಿದ್ದು ಏಳದಿರಿ.”
[28] ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ, ಕುಡಿಯಲಿಕ್ಕೂ ಕೇಳದಿದ್ದರೆ ನೀನು ಅವರಿಗೆ ಹೀಗೆ ಹೇಳು, “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನೀವು ಕುಡಿಯಲೇ ಬೇಕು.
[29] ಇಗೋ, ನನ್ನ ಹೆಸರುಗೊಂಡಿರುವ ಪಟ್ಟಣದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಂಡೀರೋ? ಆಗುವುದೇ ಇಲ್ಲ. ಖಡ್ಗವೇ, ಭೂನಿವಾಸಿಗಳನ್ನೆಲ್ಲ ಸಂಹರಿಸಲಿಕ್ಕೆ ಬಾ” ಎಂದು ಕೂಗುವೆನು. ಇದು ಸೇನಾಧೀಶ್ವರನಾದ ಯೆಹೋವನೆಂಬ ನನ್ನ ನುಡಿ.
[30] ಇಂತಿರಲು ನೀನು ಪ್ರವಾದಿಸುತ್ತಾ ಈ ಮಾತುಗಳನ್ನೆಲ್ಲಾ ಅವರಿಗೆ ಹೇಳು, “ಯೆಹೋವನು ಉನ್ನತಲೋಕದಿಂದ ಗರ್ಜಿಸುವನು, ತನ್ನ ಘನನಿವಾಸದಿಂದ ಧ್ವನಿಗೈಯುವನು. ಆತನು ಗಟ್ಟಿಯಾಗಿ ಗರ್ಜಿಸಿ, ತನ್ನ ಹುಲ್ಗಾವಲಿನ ಮಂದೆಯನ್ನು ಬೆದರಿಸುವನು. ದ್ರಾಕ್ಷಿಯ ಹಣ್ಣನ್ನು ತುಳಿಯುವವರು ಕೂಗಾಡುವಂತೆ ಭೂನಿವಾಸಿಗಳೆಲ್ಲರಿಗೂ ಭಯಂಕರನಾಗಿ ಕೂಗುವನು.
[31] ಆ ಶಬ್ದವು ಭೂಮಿಯ ಕಟ್ಟಕಡೆಯವರೆಗೆ ವ್ಯಾಪಿಸುವುದು, ಯೆಹೋವನಿಗೂ ಜನಾಂಗಗಳಿಗೂ ವ್ಯಾಜ್ಯವುಂಟಷ್ಟೆ, ಅವನು ನರಜನ್ಮದವರೆಲ್ಲರ ಸಂಗಡ ನ್ಯಾಯಕ್ಕೆ ನಿಲ್ಲುವನು, ದುಷ್ಟರನ್ನು ಖಡ್ಗಕ್ಕೆ ಗುರಿಮಾಡುವನು” ಇದು ಯೆಹೋವನ ನುಡಿ.
[32] ಸೇನಾಧೀಶ್ವರನಾದ ಯೆಹೋವನು, “ಆಹಾ, ಕೇಡು ಜನಾಂಗದಿಂದ ಜನಾಂಗಕ್ಕೆ ಹರಡುವುದು; ದೊಡ್ಡ ಬಿರುಗಾಳಿಯು ಲೋಕದ ಕಟ್ಟಕಡೆಯಿಂದ ಎದ್ದು ಬರುವುದು.
[33] ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೂ ಬಿದ್ದಿರುವರು; ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಒಟ್ಟುಗೂಡಿಸುವುದಿಲ್ಲ, ಯಾರು ಹೂಣಿಡುವುದಿಲ್ಲ, ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
[34] ಕುರುಬರೇ, ಅರಚಿ ಗೋಳಾಡಿರಿ! ಮಂದೆಯಲ್ಲಿನ ಹಿರಿಯ ನಾಯಕರೇ, ಬೂದಿಯಲ್ಲಿ ಬಿದ್ದು ಹೊರಳಾಡಿರಿ! ನಿಮ್ಮನ್ನು ವಧಿಸುವ ಕಾಲವು ಬಂದಿದೆ; ನಾನು ನಿಮ್ಮನ್ನು ಭಂಗಪಡಿಸುವೆನು; ನೀವು ಬಿದ್ದು ಒಡೆದುಹೋದ ಅಂದವಾದ ಪಾತ್ರೆಯಂತೆ ಚೂರುಚೂರಾಗುವಿರಿ.
[35] ಕುರುಬರು ಓಡಿಹೋಗುವುದಕ್ಕೆ ಮಾರ್ಗವು ಸಿಕ್ಕದು, ಮಂದೆಯ ಹಿರಿಯ ನಾಯಕರು ತಪ್ಪಿಸಿಕೊಳ್ಳುವುದಕ್ಕೆ ಆಸ್ಪದ ದೊರೆಯದು.
[36] ಆಹಾ, ಕುರುಬರ ಕೂಗಾಟ! ಮಂದೆಯ ಹಿರಿಯ ನಾಯಕರ ಅರಚಾಟ! ಯೆಹೋವನು ಆ ಹುಲ್ಗಾವಲನ್ನು ಹಾಳುಮಾಡುತ್ತಿದ್ದಾನಲ್ಲಾ.
[37] ನೆಮ್ಮದಿಯ ಗೋಮಾಳಗಳು ಯೆಹೋವನ ರೋಷಾಗ್ನಿಯಿಂದ ನಿಶ್ಯಬ್ದವಾಗಿವೆ.
[38] ಆತನು ಸಿಂಹದಂತೆ ತನ್ನ ಗವಿಯನ್ನು ಬಿಟ್ಟು ಬಂದಿದ್ದಾನೆ. ಹಿಂಸಿಸುವ ಖಡ್ಗದಿಂದಲೂ ಆತನ ರೋಷಾಗ್ನಿಯಿಂದಲೂ ಅವರ ದೇಶವು ಬೆರಗಿಗೆ ಈಡಾಗಿದೆ” ಎಂದು ನುಡಿಯುತ್ತಾನೆ.