Skip to content
Opens in a new window
Listen to this chapter • 4:29

[1] ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,

[2] “ನೀನು ಮದುವೆಯಾಗಬೇಡ, ಗಂಡು ಮತ್ತು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ಹುಟ್ಟದಿರಲಿ.

[3] ಏಕೆಂದರೆ ಈ ಸ್ಥಳದಲ್ಲಿ ಹುಟ್ಟುವ ಗಂಡು ಹೆಣ್ಣು ಮಕ್ಕಳು, ಅವರನ್ನು ಹೆತ್ತ ತಾಯಿಯರು, ಅವರನ್ನು ಈ ದೇಶದಲ್ಲಿ ಪಡೆದ ತಂದೆಯಂದಿರಿಗೆ, ಇವರೆಲ್ಲರ ವಿಷಯವಾಗಿ ಯೆಹೋವನು ಹೀಗೆ ನುಡಿದಿದ್ದಾನೆ,

[4] ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.

[5] ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ.

[6] ಈ ದೇಶದಲ್ಲಿನ ದೊಡ್ಡವರೂ. ಅಲ್ಪರೂ ಸಾಯುವರು. ಅವರನ್ನು ಯಾರೂ ಹೂಣಿಡುವುದಿಲ್ಲ, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಗಾಯಮಾಡಿಕೊಳ್ಳುವುದಿಲ್ಲ, ತಲೆಬೋಳಿಸಿಕೊಳ್ಳುವುದಿಲ್ಲ.

[7] ಸತ್ತವನಿಗೋಸ್ಕರ ದುಃಖಪಡುವವರನ್ನು ಸಂತೈಸುವುದಕ್ಕಾಗಿ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ ತಾಯಿಯನ್ನಾಗಲಿ ಕಳಕೊಂಡವರಿಗೆ ಯಾರೂ ಸಮಾಧಾನದಾಯಕ ಪಾನಪಾತ್ರೆಯನ್ನು ನೀಡುವುದಿಲ್ಲ.

[8] ಔತಣದ ಮನೆಯಲ್ಲಿಯೂ ಸೇರಬೇಡ, ಅಲ್ಲಿನವರೊಂದಿಗೆ ಕುಳಿತು ತಿನ್ನಬೇಡ, ಕುಡಿಯಬೇಡ.

[9] ಇಸ್ರಾಯೇಲಿನ ದೇವರೂ ಸೇನಾಧೀಶ್ವರನಾದ ಯೆಹೋವನೂ ಆಗಿರುವಾತನು ಹೀಗೆಂದಿದ್ದಾನೆ, ‘ಇಗೋ, ನಿಮ್ಮ ಕಾಲದಲ್ಲಿ ನಿಮ್ಮ ಕಣ್ಣೆದುರಿಗೆ ಹರ್ಷಸಂಭ್ರಮಗಳ ಧ್ವನಿಯನ್ನೂ ಮತ್ತು ವಧೂವರರ ಸ್ವರವನ್ನೂ ಈ ಸ್ಥಳದೊಳಗೆ ನಿಲ್ಲಿಸಿಬಿಡುವೆನು.’

[10] ಈ ಮಾತುಗಳನ್ನೆಲ್ಲಾ ಈ ಜನರಿಗೆ ತಿಳಿಸುತ್ತಿರುವ ನಿನಗೆ ಪ್ರತ್ಯುತ್ತರವಾಗಿ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ವಿಧಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಕೇಳುವಾಗ,

[11] ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನ ಮಾತನ್ನು ಕೇಳಿರಿ, ನಿಮ್ಮ ಪೂರ್ವಿಕರು ನನ್ನನ್ನು ತೊರೆದು ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ, ಪೂಜಿಸಿ ನನ್ನನ್ನು ಬಿಟ್ಟು, ನನ್ನ ಧರ್ಮವಿಧಿಗಳನ್ನು ಮೀರಿದ್ದರಿಂದಲೂ,

[12] ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ,

[13] ನೀವಾಗಲಿ ಅಥವಾ ನಿಮ್ಮ ಪೂರ್ವಿಕರಾಗಲಿ ನೋಡದ ದೇಶಕ್ಕೆ ನಿಮ್ಮನ್ನು ಈ ದೇಶದೊಳಗಿಂದ ಎಸೆದುಬಿಡುವೆನು; ಅಲ್ಲಿ ಹಗಲಿರುಳೂ ಅನ್ಯದೇವತೆಗಳನ್ನು ಸೇವಿಸುವಿರಿ; ನಾನು ನಿಮಗೆ ದಯೆತೋರಿಸುವುದಿಲ್ಲ’” ಎಂದು ಹೇಳಿದನು.

[14] “ಇಗೋ, ಮುಂದಿನ ಕಾಲದಲ್ಲಿ ಜನರು, ‘ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂಬುದಾಗಿ ಪ್ರಮಾಣಮಾಡುವುದನ್ನು ಬಿಟ್ಟು,

[15] ‘ಇಸ್ರಾಯೇಲರನ್ನು ಬಡಗಣ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಉದ್ಧರಿಸಿದ ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವರು; ನಾನು ಅವರ ಪೂರ್ವಿಕರಿಗೆ ದಯಪಾಲಿಸಿದ ದೇಶಕ್ಕೆ ಅವರನ್ನು ಹಿಂದಿರುಗಿಸುವೆನಷ್ಟೆ” ಎಂದು ಯೆಹೋವನು ಘೋಷಿಸುತ್ತಾನೆ.

[16] ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು.

[17] ನಾನು ಅವರ ನಡತೆಯನ್ನೆಲ್ಲಾ ದೃಷ್ಟಿಸುತ್ತೇನೆ, ಅದು ನನ್ನ ಮುಖಕ್ಕೆ ಮರೆಯಾಗಿಲ್ಲ; ಅವರ ಅಧರ್ಮವು ನನಗೆ ಗುಟ್ಟಾಗಿ ಇಲ್ಲ, ಪ್ರತ್ಯಕ್ಷವಾಗೇ ಇದೆ.

[18] ಅವರ ಅಧರ್ಮಕ್ಕೂ, ಪಾಪಕ್ಕೂ ಎರಡರಷ್ಟು ಶಿಕ್ಷೆಯನ್ನು ಮೊದಲು ಕೊಡುವೆನು; ಹೆಣಗಳಂತಿರುವ ತಮ್ಮ ಹೇಯವಿಗ್ರಹಗಳಿಂದ ನನ್ನ ದೇಶವನ್ನು ಹೊಲಸುಮಾಡಿ, ನನ್ನ ಸ್ವತ್ತನ್ನು ತಮ್ಮ ಅಸಹ್ಯ ವಸ್ತುಗಳಿಂದ ತುಂಬಿಸಿದ್ದಾರಷ್ಟೆ.”

[19] ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು.

[20] ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ.

[21] ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.

ಯೆರೆಮೀಯನು — Chapters