Skip to content
Opens in a new window
Listen to this chapter • 4:44

[1] ಯೆಹೋವನು ನನಗೆ ಹೀಗೆ ಹೇಳಿದನು, “ಮೋಶೆಯು ಮತ್ತು ಸಮುವೇಲನು ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗುವುದಿಲ್ಲ. ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿ ಹೋಗಲಿ!

[2] ಅವರು, ‘ನಾವು ಎಲ್ಲಿಗೆ ಹೋಗೋಣ?’ ಎಂದು ನಿನ್ನನ್ನು ಕೇಳಲು ನೀನು ಅವರಿಗೆ, ‘ಮರಣ ವ್ಯಾಧಿಗೆ ನೇಮಿತರಾದವರು ಮರಣವ್ಯಾಧಿಗೆ, ಖಡ್ಗಕ್ಕೆ ನೇಮಿತರಾದವರು ಖಡ್ಗಕ್ಕೆ ಬಲಿಯಾಗಲಿ. ಕ್ಷಾಮಕ್ಕೆ ನೇಮಿತರಾದವರು ಕ್ಷಾಮಕ್ಕೆ, ಸೆರೆಗೆ ನೇಮಿತರಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ’” ಎಂದು ಹೇಳು.

[3] “ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.

[4] “ಹಿಜ್ಕೀಯನ ಮಗನೂ ಯೆಹೂದದ ಅರಸನೂ ಆದ ಮನಸ್ಸೆಯು ಯೆರೂಸಲೇಮಿನಲ್ಲಿ ನಡೆಸಿದ್ದಕ್ಕೆ ಪ್ರತಿಯಾಗಿ, ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.

[5] ಯೆರೂಸಲೇಮೇ, ಯಾರು ನಿನ್ನನ್ನು ಕರುಣಿಸುವರು? ನಿನಗಾಗಿ ಯಾರು ಪ್ರಲಾಪಿಸುವರು? ನಿನ್ನ ಕ್ಷೇಮವನ್ನು ವಿಚಾರಿಸಲು ಯಾರು ನಿನ್ನ ಕಡೆಗೆ ತಿರುಗುವರು?

[6] ಯೆಹೋವನ ಈ ಮಾತನ್ನು ಕೇಳು, ‘ನೀನು ನನ್ನನ್ನು ಅಲ್ಲಗಳೆದು ಹಿಂದಿರುಗಿದ್ದಿ. ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ನಾಶಮಾಡುವೆನು; ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಯಿತು.

[7] ನನ್ನ ಜನರನ್ನು ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸುವೆನು; ಅವರು ಹೋದ ದಾರಿಯಿಂದ ಹಿಂದಿರುಗರು.

[8] ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು.

[9] ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಳುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ. ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು’” ಇದು ಯೆಹೋವನ ನುಡಿ.

[10] ನನ್ನ ತಾಯೀ, ನನ್ನ ಗತಿಯನ್ನು ಏನು ಹೇಳಲಿ! ನಿನ್ನ ಗರ್ಭದಿಂದ ಬಂದ ನಾನು ಲೋಕದವರೆಲ್ಲರಿಗೆ ಜಗಳಗಂಟಿಗನೂ, ವ್ಯಾಜ್ಯಗಾರನೂ ಆಗಿದ್ದೇನಲ್ಲಾ. ನಾನು ಹಣವನ್ನು ಬಡ್ಡಿಗೆ ಕೊಟ್ಟವನಲ್ಲ, ತೆಗೆದುಕೊಂಡವನಲ್ಲ, ಆದರೂ ನನ್ನನ್ನು ಎಲ್ಲರೂ ನಿಂದಿಸುತ್ತಾರೆ.

[11] ಇದಕ್ಕೆ ಯೆಹೋವನು, “ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. ನಿಜನಿಜವಾಗಿ ನಿನ್ನ ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ಶತ್ರುವನ್ನು ನಿನಗೆ ಶರಣಾಗತನನ್ನಾಗಿ ಮಾಡುವೆನು.

[12] ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ತಾಮ್ರವನ್ನು ಮುರಿಯುವುದು ಯಾರಿಂದಾದೀತು?” ಎಂದು ಹೇಳಿದನು.

[13] “ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಮತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ,

[14] ಅವುಗಳನ್ನು ನಿನ್ನ ಶತ್ರುಗಳ ಕೈಗೆ ಕೊಟ್ಟು, ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.”

[15] ಅದಕ್ಕೆ ನಾನು, “ಯೆಹೋವನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕಕ್ಕೆ ತಂದು ಕಟಾಕ್ಷಿಸು; ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿತೀರಿಸು. ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ. ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಜ್ಞಾಪಕಕ್ಕೆ ತಂದುಕೋ.

[16] ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ!

[17] ನಾನು ವಿನೋದಗಾರರ ಕೂಟದಲ್ಲಿ ಕುಳಿತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ. ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕುಳಿತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ.

[18] ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣಹೊಂದದೆ ಇರುವುದು ಏಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ?” ಎಂದು ಅರಿಕೆಮಾಡಿಕೊಂಡೆನು.

[19] ಇದರಿಂದ ಯೆಹೋವನು, “ನೀನು ನನ್ನ ಕಡೆಗೆ ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು. ನೀನು ತುಚ್ಛವಾದದ್ದನ್ನು ನಿರಾಕರಿಸಿ, ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ.

[20] ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು.

[21] ನಾನು ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಹೌದು, ಕ್ರೂರರ ಕೈಯಿಂದ ರಕ್ಷಿಸುವೆನು” ಎಂದಿದ್ದಾನೆ.

ಯೆರೆಮೀಯನು — Chapters