Skip to content
Opens in a new window
Listen to this chapter • 7:57

[1] “ನನ್ನ ಕಾವಲಿನ ಕುರಿಗಳನ್ನು ಚದುರಿಸಿ ಹಾಳು ಮಾಡುವ ಕುರುಬರ ಗತಿಯನ್ನು ಏನೆಂದು ಹೇಳಲಿ” ಎಂಬುದು ಯೆಹೋವನ ನುಡಿ.

[2] ಇಸ್ರಾಯೇಲರ ದೇವರಾದ ಯೆಹೋವನು ತನ್ನ ಜನರೆಂಬ ಕುರಿಗಳನ್ನು ಮೇಯಿಸುವ ಕುರುಬರ ದ್ರೋಹವನ್ನು ಕಂಡು ಅವರನ್ನು ಕುರಿತು ಇಂತೆನ್ನುತ್ತಾನೆ, “ನೀವು ನನ್ನ ಮಂದೆಯನ್ನು ಚದರಿಸಿ ಅಟ್ಟಿಬಿಟ್ಟಿದ್ದೀರಿ, ವಿಚಾರಿಸಲೇ ಇಲ್ಲ. ಆಹಾ, ನಿಮ್ಮ ದುಷ್ಕೃತ್ಯಗಳ ನಿಮಿತ್ತ ನಾನು ನಿಮ್ಮನ್ನು ವಿಚಾರಿಸುವೆನು.

[3] ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು.

[4] ನಾನು ಅವುಗಳ ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು. ಅವು ಇನ್ನು ಕಳವಳಗೊಳ್ಳುವುದಿಲ್ಲ, ಭಯಪಡುವುದಿಲ್ಲ ಮತ್ತು ಅವುಗಳಲ್ಲಿ ಒಂದೂ ಕಡಿಮೆಯಾಗುವುದಿಲ್ಲ; ಇದು ಯೆಹೋವನ ನುಡಿ” ಎಂಬುದೇ.

[5] ಯೆಹೋವನು, “ಇಗೋ, ನಾನು ಮುಂದಿನ ಕಾಲದಲ್ಲಿ ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯನ್ನು ಚಿಗುರಿಸುವೆನು. ಅವನು ರಾಜನಾಗಿ ಆಳುತ್ತಾ, ವಿವೇಕದಿಂದ ಕಾರ್ಯವನ್ನು ಸಾಧಿಸುತ್ತಾ, ದೇಶದಲ್ಲಿ ನೀತಿ, ನ್ಯಾಯಗಳನ್ನು ನಿರ್ವಹಿಸುವನು.

[6] ಅವನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತರಾಗಿರುವರು, ಇಸ್ರಾಯೇಲರು ನೆಮ್ಮದಿಯಾಗಿ ವಾಸಿಸುವರು; ‘ಯೆಹೋವ ಚಿದ್ಕೇನು’ ಅಂದರೆ ಯೆಹೋವನೇ ನಮ್ಮ ಸದ್ಧರ್ಮ ಎಂಬ ಹೆಸರು ಅವನಿಗಾಗುವುದು” ಎಂದು ನುಡಿಯುತ್ತಾನೆ.

[7] ಆಹಾ, ಮುಂದಿನ ಕಾಲದಲ್ಲಿ ಜನರು, “ಇಸ್ರಾಯೇಲರನ್ನು ಐಗುಪ್ತ ದೇಶದೊಳಗಿಂದ ಉದ್ಧರಿಸಿದ ಯೆಹೋವನ ಜೀವದಾಣೆ ಎಂಬುದಾಗಿ ಪ್ರಮಾಣ ಮಾಡುವುದನ್ನು ಬಿಟ್ಟು,

[8] ಇಸ್ರಾಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ದಿಕ್ಕಿನ ದೇಶದಿಂದಲೂ, ತಾನು ಅವರನ್ನು ತಳ್ಳಿಬಿಟ್ಟಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ, ಉದ್ಧರಿಸಿದ ಯೆಹೋವನ ಜೀವದಾಣೆ ಎಂದು ಪ್ರಮಾಣಮಾಡುವರು. ಅವರು ಸ್ವದೇಶದಲ್ಲಿ ಸುಖವಾಸಿಗಳಾಗುವರು.” ಇದು ಯೆಹೋವನ ನುಡಿ.

[9] ಪ್ರವಾದಿಗಳ ವಿಷಯ: ನನ್ನ ಹೃದಯವು ನನ್ನೊಳಗೆ ಒಡೆದುಹೋಗಿದೆ; ನನ್ನ ಎಲುಬುಗಳೆಲ್ಲಾ ಕರಗಿಹೋಗಿವೆ. ನಾನು ಯೆಹೋವನಿಗೂ ಆತನ ಪರಿಶುದ್ಧ ವಾಕ್ಯಗಳಿಗೂ ವಶನಾಗಿ ಅಮಲೇರಿದವನಂತಿದ್ದೇನೆ. ಹೌದು, ದ್ರಾಕ್ಷಾರಸಕ್ಕೆ ಸೋತವನ ಹಾಗಿದ್ದೇನೆ.

[10] ಸೀಮೆಯು ವ್ಯಭಿಚಾರಿಗಳಿಂದ ತುಂಬಿದೆ, ದೈವಶಾಪದ ನಿಮಿತ್ತ ದೇಶವು ದುಃಖಿಸುತ್ತದೆ. ಅಡವಿಯ ಹುಲ್ಗಾವಲು ಬಾಡಿದೆ; ದೇಶದವರು ತ್ವರೆಪಡುವ ಮಾರ್ಗವು ದುರ್ಮಾರ್ಗ, ಅವನ ಶೌರ್ಯವು ಅನ್ಯಾಯಸಾಧಕ.

[11] ಪ್ರವಾದಿಗಳು ಭ್ರಷ್ಟರು, ಯಾಜಕರೂ ಭ್ರಷ್ಟರು. ಹೌದು ನನ್ನ ಆಲಯದಲ್ಲಿಯೇ ಅವರ ಕೆಟ್ಟತನವನ್ನು ಕಂಡಿದ್ದೇನೆ ಎಂದು ಯೆಹೋವನು ಅನ್ನುತ್ತಾನೆ.

[12] ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು. ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರ್ಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ.

[13] ನಾನು ಸಮಾರ್ಯದ ಪ್ರವಾದಿಗಳಲ್ಲಿ ಅನೈತಿಕತೆಯನ್ನು ನೋಡಿದ್ದೇನೆ; ಅವರು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ, ಇಸ್ರಾಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದ್ದಾರೆ.

[14] ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ. ಅವರು ವ್ಯಭಿಚಾರಮಾಡಿ, ಮೋಸದಲ್ಲಿ ನಡೆದು, ದುಷ್ಟರಲ್ಲಿ ಯಾರೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ. ಅವರೆಲ್ಲರು ಸೊದೋಮಿನಂತೆ, ಆ ಪಟ್ಟಣದ ನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.

[15] ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ, “ಆಹಾ, ನಾನು ಇವರಿಗೆ ಕಹಿಯಾದ ಆಹಾರ ಮತ್ತು ಪಾನಗಳನ್ನು ಕೊಡುವೆನು; ಯೆರೂಸಲೇಮಿನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ” ಎಂದು ನುಡಿಯುತ್ತಾನೆ.

[16] ಸೇನಾಧೀಶ್ವರನಾದ ಯೆಹೋವನು, “ನಿಮಗೆ ಪ್ರವಾದಿಸುವ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಅವರು ನಿಮ್ಮಲ್ಲಿ ವ್ಯರ್ಥ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ; ಯೆಹೋವನ ಬಾಯಿಂದ ಹೊರಟದ್ದನ್ನು ನುಡಿಯದೆ ಸ್ವಂತ ಮನಸ್ಸಿಗೆ ಬಂದದ್ದನ್ನೇ ಹೇಳುತ್ತಾರೆ.

[17] ನನ್ನನ್ನು ಅಸಡ್ಡೆಮಾಡುವವರಿಗೆ, ‘ನಿಮಗೆ ಶುಭವಾಗುವುದು ಎಂಬುದಾಗಿ ಯೆಹೋವನು ನುಡಿದಿದ್ದಾನೆ’ ಎಂದು ಹೇಳುತ್ತಲೇ ಇದ್ದಾರೆ. ಸ್ವಂತ ಹೃದಯದ ಹಟದಂತೆ ನಡೆಯುವವರೆಲ್ಲರಿಗೂ, ‘ನಿಮಗೆ ಯಾವ ಕೇಡೂ ಸಂಭವಿಸದು’ ಎಂದು ನುಡಿಯುತ್ತಾರೆ.

[18] ಅವರಲ್ಲಿ ಯಾರು ಯೆಹೋವನ ಆಲೋಚನಾಸಭೆಯಲ್ಲಿ ನಿಂತು ಆತನ ಮಾತನ್ನು ಕೇಳಿ ತಿಳಿದುಕೊಂಡಿದ್ದಾರೆ? ಯಾರು ಆತನ ನುಡಿಗೆ ಕಿವಿಗೊಟ್ಟು ಗಮನಿಸಿದ್ದಾರೆ?

[19] ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಸುಂಟರಗಾಳಿಯು ಹೊರಟಿದೆ. ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.

[20] ಯೆಹೋವನು ತನ್ನ ಹೃದಯದ ಆಲೋಚನೆಗಳನ್ನು ಸಾಧಿಸಿ, ನೆರವೇರಿಸುವ ತನಕ ಆತನ ರೋಷವು ತಣ್ಣಗಾಗುವುದಿಲ್ಲ. ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಸ್ಪಷ್ಟವಾಗಿ ಗ್ರಹಿಸುವಿರಿ.

[21] ನಾನು ಈ ಪ್ರವಾದಿಗಳನ್ನು ಕಳುಹಿಸಲಿಲ್ಲ, ತಾವೇ ಆತುರಗೊಂಡರು; ನಾನು ಇವರಿಗೆ ಏನೂ ಹೇಳಲಿಲ್ಲ, ಅವರೇ ಪ್ರವಾದಿಸಿದರು.

[22] ಇವರು ಆಲೋಚನಾಸಭೆಯಲ್ಲಿ ನಿಂತಿದ್ದರೆ, ನನ್ನ ಮಾತುಗಳನ್ನು ನನ್ನ ಜನರ ಕಿವಿಗೆ ಮುಟ್ಟಿಸಿ, ಅವರನ್ನು ಅವರ ದುರ್ಮಾರ್ಗದಿಂದಲೂ ಮತ್ತು ದುಷ್ಕೃತ್ಯಗಳಿಂದಲೂ ತಪ್ಪಿಸುತ್ತಿದ್ದರು” ಎಂದು ಹೇಳುತ್ತಾನೆ.

[23] ಯೆಹೋವನು ಇಂತೆನ್ನುತ್ತಾನೆ, “ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ?

[24] ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ? ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”

[25] ನನಗೆ ಕನಸು ಬಿತ್ತು, ಕನಸು ಬಿತ್ತು ಎಂದು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುವ ಪ್ರವಾದಿಗಳ ನುಡಿಯನ್ನು ಕೇಳಿದ್ದೇನೆ.

[26] ಇವರ ಪೂರ್ವಿಕರು ಬಾಳನನ್ನು ಪೂಜಿಸಿ, ನನ್ನ ಹೆಸರನ್ನು ಮರೆತ ಪ್ರಕಾರ ಈ ಪ್ರವಾದಿಗಳು ಸ್ವಹೃದಯಕಲ್ಪಿತ ಮೋಸವನ್ನು ಪ್ರಕಟಿಸುತ್ತಾ, ತಾವು ಕನಸುಗಳ ಮೂಲಕ ನನ್ನ ಜನರು ನನ್ನ ಹೆಸರನ್ನು ಮರೆಯುವಂತೆ ಮಾಡಬೇಕೆಂದು ಆಲೋಚಿಸಿಕೊಂಡಿದ್ದಾರಲ್ಲಾ.

[27] ಇಂಥಾ ಯೋಚನೆಯು ಸುಳ್ಳಾಗಿ ಪ್ರವಾದಿಸುವ ಈ ಪ್ರವಾದಿಗಳ ಹೃದಯದಲ್ಲಿ ಎಂದಿನವರೆಗೆ ಇರುವುದು?

[28] ಕನಸು ಕಂಡ ಪ್ರವಾದಿಯು ಕನಸನ್ನು ತಿಳಿಸಿದರೆ ತಿಳಿಸಲಿ. ನನ್ನ ಮಾತನ್ನು ಕೇಳಿದವನೋ ನನ್ನ ಮಾತನ್ನು ಯಥಾರ್ಥವಾಗಿ ನುಡಿಯಲಿ.

[29] ಹೊಟ್ಟೆಲ್ಲಿ? ಕಾಳೆಲ್ಲಿ? ನನ್ನ ವಾಕ್ಯವು ಬೆಂಕಿಗೂ, ಬಂಡೆಯನ್ನು ಒಡೆದುಬಿಡುವ ಚಮಟಿಗೆಗೂ ಸಮಾನವಾಗಿದೆಯಲ್ಲಾ. ಯೆಹೋವನೇ ಇದನ್ನು ನುಡಿದಿದ್ದಾನೆ.

[30] ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ.

[31] ಆಹಾ, ತಮ್ಮ ನಾಲಿಗೆಗಳನ್ನು ಚಾಚಿ “ಯೆಹೋವನು ನುಡಿಯುತ್ತಾನೆ” ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.

[32] ಆಹಾ, ಸುಳ್ಳು ಕನಸುಗಳನ್ನು ಪ್ರಕಟಿಸಿ, ವಿವರಿಸಿ ತಮ್ಮ ಸುಳ್ಳು ಮಾತುಗಳಿಂದಲೂ, ನಿರ್ಲಕ್ಷದಿಂದಲೂ ನನ್ನ ಜನರಿಗೆ ದಾರಿತಪ್ಪಿಸುವ ಪ್ರವಾದಿಗಳನ್ನು ಎದುರಿಸುವವನಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಆಜ್ಞಾಪಿಸಲಿಲ್ಲ. ಅವರಿಂದ ಈ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇದು ಯೆಹೋವನ ನುಡಿ.

[33] ಪ್ರವಾದಿಯಾಗಲಿ ಅಥವಾ ಯಾಜಕನಾಗಲಿ ಈ ಜನರಲ್ಲಿ ಯಾರೇ ಆಗಲಿ “ಯೆಹೋವನು ದಯಪಾಲಿಸಿರುವ ವಾಕ್ಯದ ಆಧಾರವೇನು?” ಎಂದು ನಿನ್ನನ್ನು ಕೇಳಿದರೆ ನೀನು ಅವರಿಗೆ ಹೀಗೆ ಹೇಳು, “ಯೆಹೋವನು ಇಂತೆನ್ನುತ್ತಾನೆ, ನೀವೇ ನನ್ನ ಹೊರೆ, ನಾನು ನಿಮ್ಮನ್ನು ಎಸೆದುಬಿಡುವೆನು.

[34] ಪ್ರವಾದಿ, ಯಾಜಕ, ಸಾಧಾರಣ ಜನ, ಇವರಲ್ಲಿ ಯಾರೂ, ‘ಯೆಹೋವನ ಹೊರೆ’ ಎಂದು ಉಚ್ಚರಿಸುವನೋ ಅವನನ್ನೂ ಅವನ ಮನೆಯವರನ್ನೂ ದಂಡಿಸುವೆನು.

[35] ನೀವು ನಿಮ್ಮ ನಿಮ್ಮ ನೆರೆಹೊರೆಯವರನ್ನೂ ಮತ್ತು ಅಣ್ಣತಮ್ಮಂದಿರನ್ನೂ, ‘ಯೆಹೋವನ ಉತ್ತರವೇನು, ಯೆಹೋವನು ಏನು ನುಡಿದಿದ್ದಾನೆ?’

[36] ಎಂದು ಕೇಳಬೇಕೇ ಹೊರತು ಯೆಹೋವನ ಹೊರೆ ಎಂಬ ಮಾತನ್ನು ಇನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿಯೇ ಅವನವನಿಗೆ ಹೊರೆಯಾಗಿರುವುದು; ಜೀವಸ್ವರೂಪನಾದ ದೇವರ ನುಡಿಗಳನ್ನು, ಹೌದು, ನಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿಗಳನ್ನು ತಲೆ ಕೆಳಗೆ ಮಾಡಿದ್ದೀರಷ್ಟೆ.

[37] ನೀವು ‘ಯೆಹೋವನಿಂದ ನಿನಗೆ ಯಾವ ಉತ್ತರವಾಯಿತು, ಯೆಹೋವನು ಏನು ನುಡಿದಿದ್ದಾನೆ’ ಎಂದು ಪ್ರವಾದಿಯನ್ನು ಕೇಳಿರಿ.

[38] ಒಂದು ವೇಳೆ ನೀವು ‘ಯೆಹೋವನ ಹೊರೆ’ ಎಂದು ಉಚ್ಚರಿಸಿದರೆ ಯೆಹೋವನು ಇಂತೆನ್ನುತ್ತಾನೆ, ‘ನಾನು ನಿಮಗೆ ಯೆಹೋವನ ಹೊರೆ ಎಂಬ ಮಾತನ್ನು ಎತ್ತಲೇ ಕೂಡದು ಎಂದು ಹೇಳಿಕಳುಹಿಸಿರುವಲ್ಲಿ ನೀವು ಯೆಹೋವನ ಹೊರೆ ಎಂದು ಹೇಳಿದ ಕಾರಣ ಇಗೋ,

[39] ಖಂಡಿತವಾಗಿ ನಿಮ್ಮನ್ನೂ ನಾನು ನಿಮಗೆ ಮತ್ತು ನಿಮ್ಮ ಪೂರ್ವಿಕರಿಗೆ ದಯಪಾಲಿಸಿದ ಪಟ್ಟಣವನ್ನೂ ಹೊರೆಯೆಂದು ಎತ್ತಿ ನನ್ನೆದುರಿನಿಂದ ಎಸೆದುಬಿಡುವೆನು.

[40] ಮತ್ತು ನಾನು ನಿತ್ಯನಿಂದೆಯನ್ನೂ ಎಂದಿಗೂ ಮರೆಯದ ಶಾಶ್ವತ ಅವಮಾನವನ್ನು ನಿಮಗೆ ಬರಮಾಡುವೆನು.’”

ಯೆರೆಮೀಯನು — Chapters