[1] ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
[2] “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ನೀನು ಗ್ರಂಥವಾಗಿ ಬರೆ.
[3] ಇಗೋ, ನಾನು ನನ್ನ ಜನರಾದ ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪೂರ್ವಿಕರಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ” ಎಂಬುದೇ.
[4] ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು,
[5] “ಯೆಹೋವನು ಇಂತೆನ್ನುತ್ತಾನೆ, ಭೀತಿಯಿಂದಾಗುವ ಶಬ್ದವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ;
[6] ವಿಚಾರಿಸಿ ನೋಡಿರಿ, ಗಂಡಸು ಪ್ರಸವವೇದನೆ ಪಡುವುದುಂಟೆ? ಪ್ರತಿಯೊಬ್ಬನು ಹೆರುವವಳಂತೆ ಸೊಂಟವನ್ನು ಹಿಸಕಿಕೊಳ್ಳುವುದು, ಎಲ್ಲಾ ಮುಖಗಳು ಬಿಳಿಚಿಕೊಂಡಿರುವುದು, ಇವು ಏಕೆ ನನ್ನ ಕಣ್ಣಿಗೆ ಬೀಳುತ್ತವೆ?
[7] ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.”
[8] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಆ ದಿನದಲ್ಲಿ ಅವರ ಮೇಲೆ ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು, ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು.
[9] ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ, ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.”
[10] ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು. ಯಾಕೋಬನು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.”
[11] ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ರಕ್ಷಿಸಲು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಓಡಿಸಿಬಿಟ್ಟು ಚದರಿಸಿದೆನೋ, ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು. ನಿನ್ನನ್ನೋ ನಿರ್ಮೂಲಮಾಡೆನು; ನಿನ್ನನ್ನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡುವುದಿಲ್ಲ.”
[12] ಯೆಹೋವನು ಇಂತೆನ್ನುತ್ತಾನೆ, “ನಿನ್ನ ಗಾಯವು ಗುಣಹೊಂದುವುದಿಲ್ಲ, ನಿನ್ನ ಬಾಸುಂಡೆಯು ಘೋರವಾಗಿದೆ.
[13] ನಿನ್ನ ಪಾಲಿಗೆ ಯಾರೂ ಇಲ್ಲ, ನಿನ್ನ ಹುಣ್ಣಿಗೆ ಔಷಧವಿಲ್ಲ, ನಿನಗೆ ವಾಸಿಯಾಗುವುದಿಲ್ಲ.
[14] ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು.
[15] ಅಯ್ಯೋ, ನೋವು ನಿಲ್ಲದು ಎಂದು ನಿನ್ನ ಪೆಟ್ಟಿಗಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.
[16] ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳಲ್ಲಿ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.”
[17] ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.”
[18] ಯೆಹೋವನು ಹೀಗೆನ್ನುತ್ತಾನೆ, “ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ, ಅದರ ನಿವಾಸಗಳನ್ನು ಕರುಣಿಸುವೆನು. ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವುದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವುದು.
[19] ಅವುಗಳೊಳಗಿಂದ ಸ್ತೋತ್ರವೂ ಮತ್ತು ಸಂತೋಷದಿಂದ ನಲಿಯುವ ಧ್ವನಿಯೂ ಕೇಳಿಸುವವು. ನಾನು ಆ ಜನರನ್ನು ಹೆಚ್ಚಿಸುವೆನು, ಅವರು ಇನ್ನು ಅಲ್ಪರಾಗಿರರು, ಅವರನ್ನು ಘನಪಡಿಸುವೆನು, ಅವರು ಇನ್ನು ಹೀನರಾಗಿರರು.
[20] ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವುದು, ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವುದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು.
[21] ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು. ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು. ನನ್ನನ್ನು ಸಮೀಪಿಸುವುದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.”
[22] ನೀವು ನನ್ನ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
[23] ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
[24] ಯೆಹೋವನು ತನ್ನ ಹೃದಯಾಲೋಚನೆಯನ್ನು ಕಾರ್ಯಗತಗೊಳಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು, ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.