Skip to content
Opens in a new window
Listen to this chapter • 7:59

[1] ಅಮ್ಮೋನ್ಯರನ್ನು ಕುರಿತು ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿಗೆ ಮಕ್ಕಳಿಲ್ಲವೋ? ಬಾಧ್ಯನು ಇಲ್ಲವೋ? ಮಲ್ಕಾಮ್ ದೇವತೆಯು ಗಾದಿನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಿರುವುದೇಕೆ? ಮಲ್ಕಾಮನ ಪ್ರಜೆಗಳು ಗಾದಿನ ಪಟ್ಟಣಗಳಲ್ಲಿ ಏಕೆ ವಾಸಿಸುತ್ತಾರೆ?

[2] ಆದುದರಿಂದ ಇಗೋ, ಶತ್ರುಗಳು ನನ್ನ ಅಪ್ಪಣೆಯ ಮೇರೆಗೆ ರಬ್ಬಾ ಎಂಬ ಅಮ್ಮೋನ್ಯರ ಪಟ್ಟಣದ ಮೇಲೆ ಬಿದ್ದು, ಯುದ್ಧ ಘೋಷಿಸುವ ದಿನಗಳು ಬರುವವು; ಆ ಪಟ್ಟಣವು ಹಾಳುದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವವು; ಆಗ ಇಸ್ರಾಯೇಲು ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಯೆಹೋವನ ನುಡಿ.”

[3] “ಹೆಷ್ಬೋನಿನವರೇ, ಗೋಳಾಡಿರಿ; ‘ಆಯಿ’ ಎಂಬ ಊರು ಹಾಳಾಯಿತು, ರಬ್ಬಾ ಪಟ್ಟಣಕ್ಕೆ ಸೇರಿದ ಗ್ರಾಮಗಳವರೇ, ಕಿರಿಚಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಪ್ರಲಾಪಿಸಿರಿ, ಹಟ್ಟಿಗಳಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆಯು, ಅದರ ಯಾಜಕರೂ ಮತ್ತು ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.

[4] ‘ನನ್ನ ಮೇಲೆ ಯಾರು ತಾನೆ ಬಿದ್ದಾರು?’ ಎಂದು ಸ್ವಂತ ಆಸ್ತಿಪಾಸ್ತಿಯಲ್ಲಿ ಭರವಸೆ ಇಟ್ಟಿರುವ ಭ್ರಷ್ಟದೇಶವೇ, ‘ನನ್ನ ತಗ್ಗುಗಳಲ್ಲಿ ತುಂಬಾ ನೀರು ಹರಿಯುತ್ತದೆಂದು’ ಏಕೆ ಕೊಚ್ಚಿಕೊಳ್ಳುತ್ತೀ?

[5] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, ಇಗೋ, ನಿನ್ನ ನೆರೆಹೊರೆಯವರೆಲ್ಲರೂ ನಿನಗೆ ಭಯಾಸ್ಪದರಾಗುವಂತೆ ಮಾಡುವೆನು, ನಿನ್ನವರಲ್ಲಿ ಪ್ರತಿಯೊಬ್ಬನು ನಿಂತಮುಖವಾಗಿಯೇ ಅಟ್ಟಲ್ಪಡುವನು; ಚದುರಿದವರನ್ನು ಒಟ್ಟು ಸೇರಿಸುವುದಕ್ಕೆ ಯಾರೂ ಇಲ್ಲದಂತಾಗುವುದು.

[6] ಆದರೂ ಕಾಲಾಂತರದಲ್ಲಿ ಅಮ್ಮೋನ್ಯರ ದುರವಸ್ಥೆಯನ್ನು ತಪ್ಪಿಸುವೆನು. ಇದು ಯೆಹೋವನ ನುಡಿ.”

[7] ಎದೋಮನ್ನು ಕುರಿತು ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ತೇಮಾನ್ ಸೀಮೆಗೆ ಬುದ್ಧಿಯು ಇನ್ನಿಲ್ಲವೋ? ವಿವೇಕಿಗಳ ಆಲೋಚನಾಶಕ್ತಿಯು ಅಳಿಯಿತೋ? ಅವರ ಜ್ಞಾನವು ಮಾಯವಾಯಿತೋ?

[8] ದೆದಾನಿನವರೇ, ಹಿಂದಿರುಗಿರಿ, ಓಡಿಹೋಗಿರಿ; ಒಳಪ್ರಾಂತ್ಯದಲ್ಲಿ ವಾಸಿಸಿರಿ; ಏಕೆಂದರೆ ನಾನು ಎದೋಮನ್ನು ದಂಡಿಸುವ ಕಾಲದಲ್ಲಿ ಏಸಾವನಿಗೆ ವಿಧಿಸಿದ ಆಪತ್ತನ್ನು ಅದರ ಮೇಲೆ ಬರಮಾಡುವೆನು.

[9] ದ್ರಾಕ್ಷಿಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ ಹಕ್ಕಲನ್ನೂ ಉಳಿಸುವುದಿಲ್ಲ; ಕಳ್ಳರು ರಾತ್ರಿವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಹಾಳುಮಾಡುವರು.

[10] ನಾನೇ ಏಸಾವನ ಆಸರೆಯನ್ನು ಕಿತ್ತಿದ್ದೇನೆ, ಅವನ ಗುಪ್ತಸ್ಥಳಗಳನ್ನು ಬಟ್ಟಬಯಲುಮಾಡಿದ್ದೇನೆ, ಅಡಗಿಕೊಳ್ಳಲಾರನು; ಅವನ ಸಂತಾನದವರೂ, ಸಹೋದರರೂ ಮತ್ತು ನೆರೆಹೊರೆಯವರೂ ಹಾಳಾದರು, ಅವನೂ ಇಲ್ಲವಾದನು.

[11] ನೀನು ನಿನ್ನ ಅನಾಥರನ್ನು ಬಿಡು, ನಾನೇ ಅವರನ್ನು ಉಳಿಸುವೆನು; ನಿನ್ನ ವಿಧವೆಯರು ನನ್ನಲ್ಲಿ ಭರವಸೆಯಿಡಲಿ.

[12] ಯೆಹೋವನು ಇಂತೆನ್ನುತ್ತಾನೆ, ಪಾತ್ರೆಯಲ್ಲಿ ಕುಡಿಯುವುದು ಯಾರ ಪಾಲಿಗೆ ಬರಲಿಲ್ಲವೋ, ಅವರೇ ಖಂಡಿತ ಕುಡಿಯಬೇಕಾಗಿರುವಲ್ಲಿ ನೀನು ಅದಕ್ಕೆ ತಪ್ಪಿಸಿಕೊಂಡೀಯಾ? ಆಗುವುದೇ ಇಲ್ಲ, ನೀನು ಕುಡಿದೇ ಕುಡಿಯುವಿ.

[13] ಬೊಚ್ರವು ಹಾಳುಬಿದ್ದು ಪರಿಹಾಸ್ಯಕ್ಕೂ, ನಿಂದೆಗೂ ಶಾಪಕ್ಕೂ ಗುರಿಯಾಗಿದೆ. ಅದಕ್ಕೆ ಸೇರಿದ ಊರುಗಳೆಲ್ಲಾ ನಿತ್ಯನಾಶವನ್ನು ಹೊಂದುವವು ಎಂದು ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಇದು ಯೆಹೋವನ ನುಡಿ.”

[14] ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇನೆ; ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾನೆ, “ನೀವು ಕೂಡಿಕೊಂಡು ಯುದ್ಧಕ್ಕೆ ಹೊರಟು ಎದೋಮಿನ ಮೇಲೆ ಬೀಳಿರಿ.

[15] ಇಗೋ ಎದೋಮೇ, ನೀನು ಜನಾಂಗಗಳಲ್ಲಿ ಹೀನವಾಗಿ ಜನರ ತಾತ್ಸಾರಕ್ಕೆ ಈಡಾಗುವಂತೆ ಮಾಡಿದ್ದೇನೆ.

[16] ಆಹಾ, ನಿನ್ನ ಭೀಕರತ್ವವೆಲ್ಲಿ! ಪರ್ವತಾಗ್ರದಲ್ಲಿ ನೆಲೆಗೊಂಡು ಬಂಡೆಯ ಬಿರುಕುಗಳಲ್ಲಿ ವಾಸಿಸುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ; ನೀನು ಹದ್ದಿನಂತೆ ನಿನ್ನ ಗೂಡನ್ನು ಉನ್ನತಸ್ಥಾನದಲ್ಲಿ ಕಟ್ಟಿಕೊಂಡರೂ, ನಿನ್ನನ್ನು ಅಲ್ಲಿಂದ ಇಳಿಸಿಬಿಡುವೆನು. ಇದು ಯೆಹೋವನ ನುಡಿ.”

[17] ಎದೋಮು ಪರಿಹಾಸ್ಯಕ್ಕೆ ಗುರಿಯಾಗುವುದು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳಿಗೆ ಬೆರಗಾಗಿ ಸಿಳ್ಳುಹಾಕುವರು.

[18] ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ, ಸುತ್ತಣ ಊರುಗಳಲ್ಲಿಯೂ ಹೇಗೋ ಹಾಗೆಯೇ ಎದೋಮಿನಲ್ಲಿಯೂ ಯಾರೂ ವಾಸಿಸುವುದಿಲ್ಲ, ಯಾವ ನರಪ್ರಾಣಿಯೂ ಇಳಿದುಕೊಳ್ಳುವುದಿಲ್ಲ.

[19] ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟ ಅಡವಿಯಿಂದ ಎದೋಮ್ಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲರು?

[20] ಹೀಗಿರಲು ಯೆಹೋವನು ಎದೋಮಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ, ಆತನು ತೇಮಾನ್ಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ; ಮೃಗಗಳು ಖಂಡಿತವಾಗಿ ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವವು; ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.

[21] ಎದೋಮ್ಯರು ಧಡಮ್ಮನೆ ಬೀಳಲು ಭೂಮಿಯು ಕಂಪಿಸುವುದು; ಅದರ ಗೋಳು ಕೆಂಪು ಸಮುದ್ರದವರೆಗೂ ಕೇಳಿಸುವುದು!

[22] ಇಗೋ, ಬೊಚ್ರದ ಮೇಲೆ ಎರಗಬೇಕೆಂದು ಶತ್ರುವು ರಣಹದ್ದಿನಂತೆ ತನ್ನ ರೆಕ್ಕೆಗಳನ್ನು ಹರಡಿ ಹಾರಿ ಏರುವನು; ಆ ದಿನದಲ್ಲಿ ಎದೋಮಿನ ಶೂರರ ಎದೆಯು ಹೆರುವ ಹೆಂಗಸಿನ ಎದೆಯಂತೆ ಅದರುವುದು.

[23] ದಮಸ್ಕವನ್ನು ಕುರಿತದ್ದು, “ಹಮಾತಿಗೂ ಮತ್ತು ಅರ್ಪಾದಿಗೂ ಆಶಾಭಂಗವಾಯಿತು; ಅವು ಅಶುಭ ಸಮಾಚಾರವನ್ನು ಕೇಳಿ ಕರಗಿ ಹೋಗಿವೆ; ಸಮುದ್ರಕ್ಕೆ ತಲ್ಲಣ ಹತ್ತಿದೆ, ಸುಮ್ಮನಿರಲಾರದು.

[24] ದಮಸ್ಕವು ಕುಂದಿದೆ, ಓಡಿಹೋಗಲು ಹಿಂದಿರುಗಿದೆ; ಅದಕ್ಕೆ ನಡುಕ ಹಿಡಿದಿದೆ, ಪ್ರಸವವೇದನೆಯಂತಿರುವ ಯಾತನೆ ಮತ್ತು ವ್ಯಥೆಗಳಿಗೆ ಒಳಗಾಗಿದೆ.

[25] ಅಯ್ಯೋ, ಹೆಸರುವಾಸಿ ಪಟ್ಟಣವು, ನನ್ನ ಇಷ್ಟದ ಪುರವು ಏಕೆ ವಲಸೆಹೋಗಲಿಲ್ಲ!

[26] ಅದರ ದುರ್ಗತಿಯಿಂದ ಆ ದಿನದಲ್ಲಿ ಅಲ್ಲಿನ ಯೌವನಸ್ಥರು ಚೌಕಗಳಲ್ಲಿ ಬಿದ್ದುಬಿಡುವರು, ಯುದ್ಧವೀರರೆಲ್ಲಾ ಸುಮ್ಮನಾಗುವರು.

[27] ಆಗ ನಾನು ದಮಸ್ಕದ ಕೋಟೆಯಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಬೆನ್ ಹದದನ ಅರಮನೆಗಳನ್ನು ದಹಿಸಿಬಿಡುವುದು” ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.

[28] ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆದ ಕೇದಾರನ್ನೂ ಹಾಚೋರಿನ ರಾಷ್ಟ್ರಗಳನ್ನೂ ಕುರಿತದ್ದು. “ಏಳಿರಿ, ಕೇದಾರಿಗೆ ಹೋಗಿ ಪೂರ್ವ ದಿಕ್ಕಿನ ದೇಶದವರನ್ನು ಹಾಳುಮಾಡಿರಿ” ಎಂದು ಯೆಹೋವನು ಶತ್ರುಗಳಿಗೆ ಅಪ್ಪಣೆಮಾಡಿದ್ದಾನೆ.

[29] “ಶತ್ರುಗಳು ಅವರ ಗುಡಾರಗಳನ್ನೂ ಮತ್ತು ಹಿಂಡುಗಳನ್ನೂ ಅಪಹರಿಸಿಕೊಳ್ಳುವರು. ಅವರ ಪರದೆಗಳನ್ನೂ ಸಮಸ್ತ ಸಾಮಗ್ರಿಗಳನ್ನೂ, ಒಂಟೆಗಳನ್ನೂ ತೆಗೆದುಕೊಂಡು ಹೋಗುವರು, ‘ಸುತ್ತಮುತ್ತಲು ದಿಗಿಲು’ ಎಂಬುದಾಗಿ ಅವರ ಕಡೆಗೆ ಕೂಗುವರು.”

[30] ಯೆಹೋವನು ಇಂತೆನ್ನುತ್ತಾನೆ, “ಹಾಚೋರಿನವರೇ, ಓಡಿಹೋಗಿರಿ, ದೂರ ಅಲೆದಾಡಿರಿ, ಒಳಪ್ರಾಂತ್ಯದಲ್ಲಿ ವಾಸಿಸಿರಿ, ಏಕೆಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ಕೇಡನ್ನು ಬಗೆದು ನಿಮ್ಮ ನಾಶಕ್ಕೆ ಉಪಾಯವನ್ನು ಕಲ್ಪಿಸಿಕೊಂಡಿದ್ದಾನೆ.

[31] ಬಾಬೆಲಿನವರೇ, ಏಳಿರಿ. ಅಗುಳಿಯೂ, ಬಾಗಿಲೂ ಬೇಕೆನ್ನದೆ ನೆಮ್ಮದಿಯಿಂದ ನಿರ್ಭಯವಾಗಿ ಪ್ರತ್ಯೇಕವಾಗಿ ವಾಸಿಸುವ ಜನಾಂಗದ ಮೇಲೆ ಬೀಳಿರಿ!

[32] ಅವರ ಒಂಟೆಗಳು ಕೊಳ್ಳೆಯಾಗುವವು, ಅವರ ಲೆಕ್ಕವಿಲ್ಲದ ದನಕುರಿಗಳು ಸೂರೆಹೋಗುವವು; ಚಂಡಿಕೆಬಿಟ್ಟುಕೊಂಡಿರುವ ಜನರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು; ಎಲ್ಲಾ ಕಡೆಯಿಂದಲೂ ವಿಪತ್ತನ್ನು ಅವರ ಮೇಲೆ ಬರಮಾಡುವೆನು.

[33] ಆಗ ಹಾಚೋರು ಸದಾ ಹಾಳುಬಿದ್ದು ನರಿಗಳಿಗೆ ಹಕ್ಕೆಯಾಗುವುದು; ಅಲ್ಲಿ ಯಾರೂ ವಾಸಿಸರು, ಯಾವ ನರಮನುಷ್ಯನೂ ಇಳುಕೊಳ್ಳನು, ಇದು ಯೆಹೋವನ ನುಡಿ.”

[34] ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಪ್ರಾರಂಭದಲ್ಲಿ ಯೆಹೋವನು ಏಲಾಮಿನ ವಿಷಯವಾದ ಈ ವಾಕ್ಯವನ್ನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದನು.

[35] “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಏಲಾಮಿನ ಬಲವಾದ ಮುಖ್ಯ ಬಿಲ್ಲನ್ನು ಮುರಿದುಬಿಡುವೆನು.

[36] ನಾನು ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ, ಅವರನ್ನು ಆಯಾ ಗಾಳಿಗಳಿಗೆ ತೂರಿಬಿಡುವೆನು; ಏಲಾಮು ದೇಶಭ್ರಷ್ಟರಾದವರನ್ನು ಸೇರದೆ ಇರುವ ರಾಜ್ಯವೇ ಇರುವುದಿಲ್ಲ.

[37] ಏಲಾಮ್ಯರು ತಮ್ಮ ಪ್ರಾಣಹುಡುಕುವ ಶತ್ರುಗಳಿಂದ ಕಂಗೆಡುವಂತೆ ಮಾಡುವೆನು; ನನ್ನ ರೋಷಾಗ್ನಿಯ ವಿಪತ್ತನ್ನು ಅವರ ಮೇಲೆ ಬರಮಾಡುವೆನು; ಇದು ಯೆಹೋವನ ನುಡಿ; ಅವರು ನಿರ್ಮೂಲವಾಗುವ ತನಕ ಅವರ ಹಿಂದೆ ಖಡ್ಗವನ್ನು ಅಟ್ಟುವೆನು;

[38] ನನ್ನ ಸಿಂಹಾಸನವನ್ನು ಏಲಾಮಿನಲ್ಲಿ ಸ್ಥಾಪಿಸಿ ಆ ದೇಶದ ಅರಸನನ್ನೂ, ಪ್ರಧಾನರನ್ನೂ ಅಳಿಸಿಬಿಡುವೆನು.

[39] ಇದು ಯೆಹೋವನ ನುಡಿ. ಆದರೂ ಕಟ್ಟಕಡೆಯಲ್ಲಿ ಏಲಾಮಿನ ದುರವಸ್ಥೆಯನ್ನು ತಪ್ಪಿಸುವೆನು. ಇದು ಯೆಹೋವನ ನುಡಿ.”

ಯೆರೆಮೀಯನು — Chapters