Skip to content
Opens in a new window
Listen to this chapter • 5:01

[1] ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆಹೋವನಿಂದ ಯೆರೆಮೀಯನಿಗೆ ಈ ಅಪ್ಪಣೆಯಾಯಿತು.

[2] “ಯೆಹೋವನು ಇಂತೆನ್ನುತ್ತಾನೆ, ನೀನು ಯೆಹೋವನ ಆಲಯದ ಪ್ರಾಕಾರದಲ್ಲಿ ನಿಂತು ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಯೆಹೂದದ ಎಲ್ಲಾ ಊರಿನವರಿಗೆ ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದು ಮಾತನ್ನೂ ಬಿಡಬೇಡ.

[3] ಅವರು ಒಂದು ವೇಳೆ ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಹಾಗೆ ಮಾಡಿದರೆ ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರಿಗೆ ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು.

[4] ನೀನು ಅವರಿಗೆ, ‘ಯೆಹೋವನು ಇಂತೆನ್ನುತ್ತಾನೆ, ನೀವು ನನ್ನ ಕಡೆಗೆ ಕಿವಿಗೊಡದೆ ನಾನು ನಿಮ್ಮ ಮುಂದೆ ಇಟ್ಟಿರುವ ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯಬೇಕೆಂಬ ಮಾತನ್ನು ಕೇಳದೆ,

[5] ನಿಮ್ಮ ಬಳಿಗೆ ನಾನು ತಪ್ಪದೆ ಕಳುಹಿಸುತ್ತಾ ಬಂದಿರುವ ನನ್ನ ಸೇವಕರಾದ ಪ್ರವಾದಿಗಳ ಮಾತುಗಳನ್ನು ಕೇಳದೆಯೂ ಇದ್ದರೆ,

[6] ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ತಂದು, ಈ ಪಟ್ಟಣವು ಲೋಕದ ಸಮಸ್ತ ಜನಾಂಗಗಳಲ್ಲಿ ಶಾಪದ ಮಾತಾಗುವಂತೆ ಮಾಡುವೆನು’” ಎಂದು ಹೇಳು ಎಂದನು.

[7] ಯೆರೆಮೀಯನು ಯೆಹೋವನ ಆಲಯದಲ್ಲಿ ಹೀಗೆ ಮಾತನಾಡುವುದನ್ನು ಯಾಜಕರೂ, ಪ್ರವಾದಿಗಳು ಮತ್ತು ಸಕಲ ಜನರೂ ಕೇಳಿದರು.

[8] ಸಮಸ್ತಜನರಿಗೆ ಹೇಳಬೇಕೆಂದು ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಯೆರೆಮೀಯನು ಹೇಳಿ ಮುಗಿಸಿದ ಮೇಲೆ ಯಾಜಕರೂ, ಪ್ರವಾದಿಗಳೂ ಎಲ್ಲಾ ಜನರೂ ಅವನನ್ನು ಹಿಡಿದು, “ನೀನು ಸಾಯಲೇಬೇಕು!

[9] ನೀನು ಯೆಹೋವನ ಹೆಸರೆತ್ತಿ ಪ್ರವಾದಿಸುತ್ತಾ, ‘ಈ ಆಲಯವು ಶಿಲೋವಿನ ಗತಿಗೆ ಬರುವುದು, ಈ ಪಟ್ಟಣವು ಒಕ್ಕಲಿಲ್ಲದೆ ಹಾಳುಬೀಳುವುದು’ ಎಂದು ಏಕೆ ಹೇಳಿದೆ” ಎಂದರು. ಆಗ ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನ ಸುತ್ತಲು ಸುತ್ತಿಕೊಂಡಿದ್ದರು.

[10] ಯೆಹೂದದ ಸರದಾರರು ಈ ವರ್ತಮಾನವನ್ನು ಕೇಳಿ ಅರಮನೆಯಿಂದ ಯೆಹೋವನ ಆಲಯಕ್ಕೆ ಬಂದು ಆ ಮಂದಿರದ ಹೊಸ ಬಾಗಿಲಿನಲ್ಲಿ ಕುಳಿತುಕೊಂಡರು.

[11] ಆಗ ಯಾಜಕರೂ ಮತ್ತು ಪ್ರವಾದಿಗಳೂ, “ಇವನು ಮರಣದಂಡನೆಗೆ ತಕ್ಕವನು; ಇವನು ಈ ಪಟ್ಟಣಕ್ಕೆ ಅಹಿತ ನುಡಿದದ್ದನ್ನು ನೀವು ಕಿವಿಯಾರೆ ಕೇಳಿದಿರೀ” ಎಂದು ಸರದಾರರಿಗೂ ಎಲ್ಲಾ ಜನರಿಗೂ ಹೇಳಿದರು.

[12] ಆಗ ಯೆರೆಮೀಯನು ಸಕಲ ಸರದಾರರಿಗೂ ಸಮಸ್ತ ಜನರಿಗೂ, “ನೀವು ಕೇಳಿದ ಮಾತುಗಳನ್ನೆಲ್ಲಾ ಈ ಆಲಯಕ್ಕೂ ಈ ಪಟ್ಟಣಕ್ಕೂ ಪ್ರತಿಕೂಲವಾಗಿ ನುಡಿಯಬೇಕೆಂದು ಯೆಹೋವನು ನನ್ನನ್ನು ಕಳುಹಿಸಿದನು.

[13] ಈಗಲೇ ನಿಮ್ಮ ಮಾರ್ಗಗಳನ್ನೂ ಕೃತ್ಯಗಳನ್ನೂ ತಿದ್ದಿಕೊಂಡು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡಿರಿ; ಹಾಗೆ ಮಾಡಿದರೆ ಯೆಹೋವನು ನಿಮ್ಮ ವಿಷಯವಾಗಿ ನುಡಿದಿರುವ ಕೇಡನ್ನು ಮನಮರುಗಿ ಮಾಡದಿರುವನು.

[14] ನಾನೋ ನಿಮ್ಮ ಕೈಯಲ್ಲಿದ್ದೇನಲ್ಲಾ; ನಿಮಗೆ ಒಳ್ಳೆಯದಾಗಿಯೂ, ನ್ಯಾಯವಾಗಿಯೂ ತೋರುವುದನ್ನು ನನಗೆ ಮಾಡಿರಿ.

[15] ಆದರೆ ನೀವು ನನ್ನನ್ನು ಕೊಂದು ಹಾಕಿದ ಪಕ್ಷಕ್ಕೆ, ನೀವೂ, ಈ ಪಟ್ಟಣವೂ ಮತ್ತು ಇದರ ನಿವಾಸಿಗಳೂ ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ಪಾತ್ರರಾಗುವಿರಿ ಎಂದು ನಿಶ್ಚಯವಾಗಿ ತಿಳಿದುಕೊಳ್ಳಿರಿ. ಈ ಮಾತುಗಳನ್ನೆಲ್ಲಾ ನಿಮ್ಮ ಕಿವಿಗೆ ಮುಟ್ಟಿಸುವಂತೆ ಯೆಹೋವನು ನನ್ನನ್ನು ಕಳುಹಿಸಿರುವುದು ಖಂಡಿತ” ಎಂದು ಹೇಳಿದನು.

[16] ಇದನ್ನು ಕೇಳಿ ಸರದಾರರೂ ಸಕಲ ಜನರೂ ಯಾಜಕ ಪ್ರವಾದಿಗಳಿಗೆ, “ಇವನು ಮರಣ ದಂಡನೆಗೆ ತಕ್ಕವನಲ್ಲ; ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಇದನ್ನು ನಮಗೆ ನುಡಿದಿದ್ದಾನಷ್ಟೆ” ಎಂದು ಹೇಳಿದರು.

[17] ತರುವಾಯ ದೇಶದ ಹಿರಿಯರಲ್ಲಿ ಕೆಲವರು ಎದ್ದು ನಿಂತು,

[18] “ಯೆಹೂದದ ಅರಸನಾದ ಹಿಜ್ಕೀಯನ ಕಾಲದಲ್ಲಿ ಮೋರೆಷೆತ್ ಊರಿನವನಾದ ಮೀಕಾಯನು ಯೆಹೂದ್ಯರೆಲ್ಲರಿಗೆ, ‘ಸೇನಾಧೀಶ್ವರನಾದ ಯೆಹೋವನ ಮಾತನ್ನು ಕೇಳಿರಿ, ಚೀಯೋನ್ ಪಟ್ಟಣವು ಹೊಲದಂತೆ ಉಳಲಾಗುವುದು, ಯೆರೂಸಲೇಮು ಹಾಳುದಿಬ್ಬಗಳಾಗಿ ಬೀಳುವುದು, ಯೆಹೋವನ ಆಲಯದ ಪರ್ವತವು ಕಾಡು ಗುಡ್ಡಗಳಂತಾಗುವುದು’ ಎಂದು ಹೇಳಲಾಗಿ

[19] ಯೆಹೂದದ ಅರಸನಾದ ಹಿಜ್ಕೀಯನೂ ಎಲ್ಲಾ ಯೆಹೂದ್ಯರೂ ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಆ ಅರಸನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ದಯೆಯನ್ನು ಬೇಡಿಕೊಳ್ಳಲು ಯೆಹೋವನು ಅವರ ವಿಷಯವಾಗಿ ನುಡಿದಿದ್ದ ಕೇಡನ್ನು ಮನಮರುಗಿ ಮಾಡದೆ ಬಿಟ್ಟನಲ್ಲಾ. ನಾವಾದರೋ ಇವನನ್ನು ಕೊಂದು ಹಾಕಿ ನಮಗೆ ದೊಡ್ಡ ಕೇಡನ್ನು ಉಂಟು ಮಾಡಿಕೊಳ್ಳುವವರಾಗಿದ್ದೇವೆ” ಎಂಬುದಾಗಿ ಸಕಲಜನ ಸಮೂಹಕ್ಕೆ ಹೇಳಿದರು.

[20] ಅದೇ ಸಮಯದಲ್ಲಿ ಶಮಾಯನ ಮಗನೂ ಕಿರ್ಯತ್ ಯಾರೀಮ್ ಊರಿನವನೂ ಆದ ಊರೀಯನೆಂಬ ಒಬ್ಬ ಮನುಷ್ಯನು ಯೆಹೋವನ ಹೆಸರಿನಲ್ಲಿ ಪ್ರವಾದಿಸುವವನಾಗಿದ್ದು ಯೆರೆಮೀಯನು ನುಡಿದಂತೆಯೇ ಈ ಪಟ್ಟಣಕ್ಕೂ ಈ ದೇಶಕ್ಕೂ ಅಹಿತವನ್ನು ನುಡಿಯುತ್ತಿದ್ದನು.

[21] ಅರಸನಾದ ಯೆಹೋಯಾಕೀಮನೂ, ಅವನ ಎಲ್ಲಾ ಪ್ರಸಿದ್ಧ ಶೂರರೂ ಮತ್ತು ಸರದಾರರೂ ಇವನ ಮಾತುಗಳನ್ನು ಕೇಳಿದಾಗ ಅರಸನು ಇವನನ್ನು ಕೊಂದುಹಾಕಲು ಮನಸ್ಸು ಮಾಡಿದನು; ಆದರೆ ಊರೀಯನು ಆ ಸುದ್ದಿಯನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತವನ್ನು ಸೇರಿಕೊಂಡನು.

[22] ಆಗ ಅರಸನಾದ ಯೆಹೋಯಾಕೀಮನು ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನು ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.

[23] ಅವರು ಊರೀಯನನ್ನು ಐಗುಪ್ತದಿಂದ ಎಳೆದು ಅರಸನಾದ ಯೆಹೋಯಾಕೀಮನ ಬಳಿಗೆ ತರಲು ಅವನು ಇವನನ್ನು ಕತ್ತಿಯಿಂದ ಕಡಿಸಿ, ಶವವನ್ನು ಸಾಧಾರಣ ಜನರ ಗೋರಿಗಳ ನಡುವೆ ಹಾಕಿಸಿದನು.

[24] ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸದ ಹಾಗೆ ಶಾಫಾನನ ಮಗನಾದ ಅಹೀಕಾಮನ ಸಹಾಯವು ಅವನಿಗೆ ಒದಗಿತು.

ಯೆರೆಮೀಯನು — Chapters