Skip to content
Opens in a new window
Listen to this chapter • 9:18

[1] ಯೆಹೋವನು ಪ್ರವಾದಿಯಾದ ಯೆರೆಮೀಯನ ಮೂಲಕ ಕಸ್ದೀಯರ ದೇಶವಾದ ಬಾಬೆಲಿನ ವಿಷಯವಾಗಿ ಪ್ರಕಟಿಸಿದ ವಾಕ್ಯ.

[2] “ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವೆತ್ತಿ ಪ್ರಕಟಿಸಿರಿ, ಮರೆಮಾಡದೆ ಹೀಗೆ ಸಾರಿರಿ, ‘ಬಾಬೆಲ್ ಶತ್ರುವಶವಾಯಿತು, ಬೇಲ್ ದೇವತೆಯು ನಾಚಿಕೆಗೊಂಡಿದೆ, ಮೆರೋದಾಕ್ ದೇವತೆಯು ಬೆಚ್ಚಿಬಿದ್ದಿದೆ, ಅದರ ಮೂರ್ತಿಗಳು ಅವಮಾನಕ್ಕೆ ಗುರಿಯಾಗಿವೆ, ಅದರ ಬೊಂಬೆಗಳು ಚೂರುಚೂರಾಗಿವೆ.

[3] ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬರುತ್ತಿದೆ, ಅದು ಬಾಬೆಲ್ ದೇಶವನ್ನು ಹಾಳುಮಾಡುವುದು, ಅಲ್ಲಿ ಯಾರೂ ವಾಸಿಸರು, ಪಶುಗಳೂ ಜನರೂ ಓಡಿಹೋಗಿದ್ದಾರೆ, ತೊಲಗಿಬಿಟ್ಟಿದ್ದಾರೆ.

[4] ಯೆಹೋವನು ಇಂತೆನ್ನುತ್ತಾನೆ, ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಾಯೇಲರೂ ಮತ್ತು ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ದಾರಿಯುದ್ದಕ್ಕೂ ಅಳುತ್ತಾ ಬಂದು, ತಮ್ಮ ದೇವರಾದ ಯೆಹೋವನಲ್ಲಿ ಮೊರೆಹೋಗುವರು.

[5] ಚೀಯೋನಿಗೆ ಅಭಿಮುಖರಾಗಿ ಮಾರ್ಗವನ್ನು ವಿಚಾರಿಸಿ, ಬನ್ನಿರಿ, ಯೆಹೋವನನ್ನು ಆಶ್ರಯಿಸಿ, ಎಂದಿಗೂ ಮರೆಯದ ಶಾಶ್ವತವಾದ ಒಡಂಬಡಿಕೆಯನ್ನು ಆತನೊಂದಿಗೆ ಮಾಡಿಕೊಳ್ಳೋಣ’ ಎಂದು ಹೇಳುವರು.

[6] ನನ್ನ ಜನರು ತಪ್ಪಿಸಿಕೊಂಡ ಕುರಿಗಳು; ಪಾಲಕರು ಅವರನ್ನು ದಾರಿತಪ್ಪಿಸಿ ಪರ್ವತಗಳಲ್ಲಿ ಅಲೆದಾಡಿಸಿದ್ದಾರೆ; ನನ್ನ ಜನರು ತಮ್ಮ ಹಕ್ಕೆಯನ್ನು ಮರೆತು ಬೆಟ್ಟಗುಡ್ಡಗಳಲ್ಲಿ ತಿರುಗಾಡುತ್ತಲಿದ್ದಾರೆ.

[7] ಕಂಡಕಂಡವರೆಲ್ಲರೂ ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ವಿರೋಧಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ, ಅವರು ಸತ್ಯಸ್ವರೂಪನಾದ ಯೆಹೋವನಿಗೆ, ಹೌದು, ತಮ್ಮ ಪೂರ್ವಿಕರ ನಿರೀಕ್ಷೆಯಾದ ಯೆಹೋವನಿಗೆ ಪಾಪ ಮಾಡಿದರಲ್ಲಾ’ ಅಂದುಕೊಂಡರು.

[8] ಬಾಬೆಲ್ ದೇಶದೊಳಗಿಂದ ಓಡಿಹೋಗಿರಿ, ಕಸ್ದೀಯರ ಸೀಮೆಯಿಂದ ಹೊರಡಿರಿ; ಹಿಂಡುಗಳ ಮುಂದೆ ಹೋಗುವ ಹೋತಗಳಂತಿರಿ.

[9] ಇಗೋ, ನಾನು ಮಹಾ ಜನಾಂಗಗಳ ಸಮೂಹವನ್ನು ಎಬ್ಬಿಸಿ ಉತ್ತರ ದಿಕ್ಕಿನಿಂದ ಬಾಬೆಲಿನ ಮೇಲೆ ಬೀಳಮಾಡುವೆನು; ಅವು ಬಾಬಿಲೋನಿಗೆ ವಿರುದ್ಧವಾಗಿ ವ್ಯೂಹಕಟ್ಟಿ ಅದನ್ನು ಅದರ ಸ್ಥಳದೊಳಗಿಂದ ನಿರ್ಮೂಲಮಾಡುವವು; ಅವುಗಳ ಬಾಣಗಳು ಸುಮ್ಮನೆ ಹಿಂದಿರುಗದ ಯುದ್ಧಪ್ರವೀಣರಾದ ಶೂರನಂತಿರುವವು.

[10] ಕಸ್ದೀಯ ರಾಜ್ಯವು ಸೂರೆಯಾಗುವುದು; ಸೂರೆಗಾರರೆಲ್ಲರೂ ತೃಪ್ತಿಗೊಳ್ಳವರು, ಇದು ಯೆಹೋವನ ನುಡಿ” ಎಂಬುದೇ.

[11] “ನನ್ನ ಸ್ವತ್ತನ್ನು ಕೊಳ್ಳೆಹೊಡೆಯುವವರೇ, ನೀವು ಹರ್ಷಿಸಿ ಉಲ್ಲಾಸಿಸುವವರೂ, ಕಣತುಳಿಯುವ ಕಡಸಿನ ಹಾಗೆ ಕುಣಿದಾಡುವವರೂ, ಕೊಬ್ಬಿದ ಕುದುರೆಗಳಂತೆ ಹೇಕರಿಸುವವರೂ ಆಗಿರುವುದರಿಂದ

[12] ನಿಮ್ಮ ಮಾತೃಭೂಮಿಯು ಮಾನಭಂಗಕ್ಕೆ ಈಡಾಗುವುದು, ನಿಮ್ಮನ್ನು ಹೆತ್ತ ರಾಜ್ಯವು ನಾಚಿಕೊಳ್ಳುವುದು; ಆಹಾ, ಅದು ಕಾಡು, ಕಗ್ಗಾಡು, ಬೆಗ್ಗಾಡು, ಜನಾಂಗಗಳಲ್ಲಿ ಕನಿಷ್ಠವೂ ಆಗುವುದು.

[13] ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವುದು; ಬಾಬೆಲನ್ನು ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಪರಿಹಾಸ್ಯ ಮಾಡುವರು.

[14] ಬಿಲ್ಲುಗಾರರೇ, ನೀವೆಲ್ಲರೂ ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆ ಹಾಕಿರಿ, ಬಾಣಗಳನ್ನು ಉಳಿಸದೆ ಎಸೆಯಿರಿ; ಅದು ಯೆಹೋವನಿಗೆ ಪಾಪ ಮಾಡಿತಲ್ಲಾ.

[15] ಅದರ ಸುತ್ತಲು ಜಯಘೋಷಮಾಡಿರಿ, ಅಧೀನವಾಯಿತು, ಅದರ ಕೊತ್ತಲುಗಳು ಬಿದ್ದವು, ಅದರ ಪೌಳಿಗೋಡೆಯು ಕೆಡವಲ್ಪಟ್ಟಿತು. ಯೆಹೋವನು ಅದಕ್ಕೆ ಮುಯ್ಯಿತೀರಿಸಿದ್ದಾನೆ; ಮುಯ್ಯಿತೀರಿಸಿರಿ; ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ.

[16] ಬೀಜ ಬಿತ್ತುವವನನ್ನೂ ಮತ್ತು ಸುಗ್ಗಿಯಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನಿಂದ ನಿರ್ಮೂಲಮಾಡಿರಿ; ಪ್ರತಿಯೊಬ್ಬ ವಿದೇಶೀಯನು ಹಿಂಸೆಯ ಖಡ್ಗದ ದೆಸೆಯಿಂದ ಸ್ವಜನರ ಕಡೆಗೆ ತಿರುಗಿಕೊಂಡು ಸ್ವದೇಶಕ್ಕೆ ಓಡಿಹೋಗುವನು.

[17] ಇಸ್ರಾಯೇಲು ಚದರಿಹೋದ ಕುರಿ ಹಿಂಡು; ಸಿಂಹಗಳು ಅದನ್ನು ಓಡಿಸಿಬಿಟ್ಟಿವೆ; ಮೊಟ್ಟಮೊದಲು ಅಶ್ಶೂರದ ಅರಸನು ಅದನ್ನು ತಿಂದನು, ಕಟ್ಟಕಡೆಗೆ ಈಗ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅದರ ಎಲುಬುಗಳನ್ನು ಕಡಿದುಬಿಟ್ಟನು.

[18] ಹೀಗಿರಲು ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ಅಶ್ಶೂರದ ಅರಸನನ್ನು ದಂಡಿಸಿದಂತೆ ಬಾಬೆಲಿನ ಅರಸನನ್ನೂ ಮತ್ತು ಅವನ ದೇಶವನ್ನೂ ದಂಡಿಸುವೆನು.

[19] ಇಸ್ರಾಯೇಲನ್ನು ಪುನಃ ಅದರ ಹುಲ್ಗಾವಲಿಗೆ ಸೇರಿಸುವೆನು; ಅದು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವುದು; ಎಫ್ರಾಯೀಮಿನ ಮತ್ತು ಗಿಲ್ಯಾದಿನ ಬೆಟ್ಟಗಳಲ್ಲಿ ತೃಪ್ತಿಗೊಳ್ಳುವುದು.

[20] ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಾಯೇಲಿನ ಅಧರ್ಮವನ್ನು ಎಲ್ಲಿ ಹುಡುಕಿದರೂ ಇರುವುದೇ ಇಲ್ಲ; ಯೆಹೂದದ ಪಾಪವನ್ನು ಎಲ್ಲಿ ಹುಡುಕಿದರೂ ಸಿಕ್ಕುವುದೇ ಇಲ್ಲ; ನಾನು ಉಳಿಸುವ ಜನಶೇಷವನ್ನು ಕ್ಷಮಿಸುವೆನಲ್ಲವೆ. ಇದು ಯೆಹೋವನ ನುಡಿ.”

[21] ಯೆಹೋವನು ಇಂತೆನ್ನುತ್ತಾನೆ, “ಮೆರಾಥಯಿಮ್ ದೇಶಕ್ಕೂ ಮತ್ತು ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ, ಅವರನ್ನು ಸಂಹರಿಸಿ, ಅನಂತರ ದೇಶವನ್ನು ತೀರಾ ಹಾಳುಮಾಡಿ, ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.

[22] ಯುದ್ಧದ ಆರ್ಭಟವೂ ಮಹಾನಾಶನದ ಶಬ್ದವೂ ದೇಶದೊಳಗೆ ಕೇಳಿಸುತ್ತವೆ.

[23] ಆಹಾ, ಲೋಕವನ್ನೆಲ್ಲಾ ಹೊಡೆದ ಚಮಟಿಗೆಯು ಮುರಿದು ತುಂಡುತುಂಡಾಯಿತು! ಬಾಬೆಲ್ ರಾಜ್ಯವು ಜನಾಂಗಗಳ ನಡುವೆ ಹಾಳಾಯಿತಲ್ಲಾ!

[24] ಬಾಬೆಲೇ, ನಾನು ನಿನಗೆ ಉರುಲೊಡ್ಡಿದೆನು; ನೀನು ತಿಳಿಯದೆ ಸಿಕ್ಕಿಕೊಂಡಿ; ನೀನು ಯೆಹೋವನೊಂದಿಗೆ ಹೋರಾಡಿದ್ದರಿಂದ ಬೋನಿಗೆ ಬಿದ್ದು ವಶವಾದಿ.

[25] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕಸ್ದೀಯರ ದೇಶದಲ್ಲಿ ನಿರ್ವಹಿಸಬೇಕಾದ ಕಾರ್ಯವೊಂದುಂಟು; ಅದಕ್ಕಾಗಿ ಯೆಹೋವನು ತನ್ನ ಆಯುಧ ಶಾಲೆಯನ್ನು ತೆರೆದು ತನ್ನ ರೋಷದ ಅಸ್ತ್ರಶಸ್ತ್ರಗಳನ್ನು ಹೊರಗೆ ತೆಗೆದಿದ್ದಾನೆ.

[26] ಲೋಕದ ಕಟ್ಟಕಡೆಯಿಂದ ಬಾಬಿಲೋನಿಗೆ ಬನ್ನಿರಿ, ಅದರ ಕಣಜಗಳನ್ನು ತೆರೆಯಿರಿ; ಪಟ್ಟಣವನ್ನು ಹಾಳುದಿಬ್ಬಗಳಾಗಿ ಮಾಡಿ ಪೂರ್ಣವಾಗಿ ನಾಶಪಡಿಸಿರಿ; ಏನೂ ಉಳಿಯದಿರಲಿ.

[27] ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ; ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.

[28] ಓಹೋ, ಬಾಬೆಲಿನಿಂದ ತಪ್ಪಿಸಿಕೊಂಡು ಓಡಿಹೋಗುವವರ ಶಬ್ದ! ನಮ್ಮ ದೇವರಾದ ಯೆಹೋವನು ತನ್ನ ಆಲಯವನ್ನು ನಾಶ ಮಾಡಿದವರಿಗೆ ಮುಯ್ಯಿತೀರಿಸಿದ್ದಾನೆ ಎಂಬ ಸಮಾಚಾರವನ್ನು ಚೀಯೋನಿನಲ್ಲಿ ಪ್ರಕಟಿಸುವುದಕ್ಕೆ ಹೋಗುತ್ತಾರಲ್ಲಾ.

[29] ಬಿಲ್ಲನ್ನು ಬೊಗ್ಗಿಸಿ, ಬಾಣಬಿಡುವವರನ್ನೆಲ್ಲಾ ಬಾಬಿಲೋನಿಗೆ ಕರೆಯಿರಿ; ಅದರ ಸುತ್ತಲು ದಂಡಿಳಿಸಿರಿ; ಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ; ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿ; ಅದು ಮಾಡಿದಂತೆಯೇ ಅದಕ್ಕೆ ಮಾಡಿರಿ; ಅದು ಸೊಕ್ಕೇರಿ ಇಸ್ರಾಯೇಲರ ಸದಮಲಸ್ವಾಮಿಯಾದ ಯೆಹೋವನನ್ನು ಅಸಡ್ಡೆ ಮಾಡಿತಲ್ಲಾ.

[30] ಆದಕಾರಣ ಆ ದಿನದಲ್ಲಿ ಅಲ್ಲಿನ ಯೌವನಸ್ಥರು ಚೌಕಗಳಲ್ಲಿ ಬಿದ್ದುಬಿಡುವರು, ಯುದ್ಧವೀರರೆಲ್ಲಾ ಸುಮ್ಮನಾಗುವರು; ಇದು ಯೆಹೋವನ ನುಡಿ” ಎಂಬುದೇ.

[31] ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಇಂತೆನ್ನುತ್ತಾನೆ, “ಆಹಾ, ಸೊಕ್ಕಿನ ರಾಜ್ಯವೇ! ನಾನು ನಿನ್ನ ವಿರುದ್ಧವಾಗಿದ್ದೇನೆ; ನಿನಗೆ ಹೊತ್ತು ಬಂದಿದೆ, ನಿನ್ನನ್ನು ದಂಡಿಸತಕ್ಕ ಕಾಲ ಸಂಭವಿಸಿದೆ.

[32] ಸೊಕ್ಕಿನ ರಾಜ್ಯವು ಎಡವಿ ಬೀಳುವುದು, ಅದನ್ನು ಯಾರೂ ಎತ್ತರು; ಅದರ ಪಟ್ಟಣಗಳಿಗೆ ಬೆಂಕಿಹೊತ್ತಿಸುವೆನು, ಅದು ಸುತ್ತಲಿರುವುದನ್ನು ನುಂಗಿಬಿಡುವುದು.”

[33] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲರು ಮತ್ತು ಯೆಹೂದ್ಯರು ಉಭಯರೂ ಹಿಂಸೆಗೆ ಗುರಿಯಾಗಿದ್ದಾರೆ; ಅವರನ್ನು ಸೆರೆ ಒಯ್ದವರೆಲ್ಲರೂ ಅವರನ್ನು ಬಿಡಿಸಲೊಲ್ಲದೆ ಬಿಗಿಹಿಡಿದಿದ್ದಾರೆ.

[34] ಅವರ ರಕ್ಷಕನು ಬಲಿಷ್ಠನು; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ನಾಮಧೇಯ; ಆತನು ಅವರ ವ್ಯಾಜ್ಯವನ್ನು ಜಯಿಸಿ, ಲೋಕವನ್ನು ವಿಶ್ರಾಂತಿಗೊಳಿಸಿ ಬಾಬೆಲಿನವರನ್ನು ಕಳವಳಪಡಿಸುವನು.”

[35] ಯೆಹೋವನು ಇಂತೆನ್ನುತ್ತಾನೆ, “ಖಡ್ಗವು ಕಸ್ದೀಯರ ಮೇಲೆ ಬೀಳಲಿ! ಬಾಬೆಲಿನ ಸಾಮಾನ್ಯ ಜನರು, ಪ್ರಧಾನರು, ಪಂಡಿತರು, ಇವರನ್ನೆಲ್ಲಾ ಹತಿಸಲಿ!

[36] ಖಡ್ಗವು ಕೊಚ್ಚಿಕೊಳ್ಳುವವರನ್ನು ಇರಿಯಲಿ! ಅವರ ಬುದ್ಧಿಹೀನತೆಯು ಬಯಲಿಗೆ ಬರುವುದು. ಖಡ್ಗವು ಬಾಬೆಲಿನ ಶೂರರನ್ನು ಸಂಹರಿಸಲಿ! ಅವರು ಬೆಚ್ಚಿಬೀಳುವರು.

[37] ಖಡ್ಗವು ಅವರ ಅಶ್ವಗಳನ್ನೂ, ರಥಗಳನ್ನೂ, ಬಾಬೆಲಿನಲ್ಲಿರುವ ಬಗೆಬಗೆಯ ವಿದೇಶೀಯರನ್ನೆಲ್ಲ ಹೊಡೆಯಲಿ! ಅವರು ಹೆಂಗಸರಂತೆ ಬೆದರುವರು, ಖಡ್ಗವು ಅವರ ಸಂಪತ್ತನ್ನು ನುಂಗಲಿ! ಅವರು ಸೂರೆಗೆ ಈಡಾಗುವರು.

[38] ಬರಗಾಲವು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವುದು. ಅದು ಬೊಂಬೆಗಳಿಂದ ತುಂಬಿದ ದೇಶ, ಅದರ ಜನರು ತಮ್ಮ ಭಯಂಕರವಾದ ವಿಗ್ರಹಗಳ ಪೂಜೆಯಿಂದ ಮದವೇರಿಸಿಕೊಳ್ಳುತ್ತಾರಷ್ಟೆ;

[39] ಆದಕಾರಣ ತೋಳ ಮುಂತಾದ ಕಾಡುಮೃಗಗಳು ಅಲ್ಲಿ ಬೀಡು ಮಾಡಿಕೊಳ್ಳುವವು, ಉಷ್ಟ್ರಪಕ್ಷಿಗಳು ತಂಗುವವು; ಅದು ಎಂದಿಗೂ ವಾಸಸ್ಥಳವಾಗದು, ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಇರುವುದಿಲ್ಲ.

[40] ದೇವರು ಕೆಡವಿದ ಸೊದೋಮ್, ಗೊಮೋರ ಪಟ್ಟಣಗಳಲ್ಲಿಯೂ ಮತ್ತು ಸುತ್ತಣ ಊರುಗಳಲ್ಲಿಯೂ ಹೇಗೋ, ಹಾಗೆಯೇ ಬಾಬೆಲಿನಲ್ಲಿಯೂ ಯಾರೂ ವಾಸಿಸರು, ಯಾವ ನರಪ್ರಾಣಿಯೂ ನೆಲೆ ನಿಲ್ಲುವುದಿಲ್ಲ.

[41] ಆಹಾ, ಉತ್ತರ ದಿಕ್ಕಿನಿಂದ ಒಂದು ಜನಾಂಗವು ಬರುತ್ತೆ, ಮಹಾ ಜನವೂ, ಬಹು ಮಂದಿ ಅರಸರೂ ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಬರುತ್ತಾರೆ.

[42] ಬಿಲ್ಲನ್ನೂ ಮತ್ತು ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಮೊರೆಯುತ್ತದೆ, ಕುದುರೆ ಹತ್ತಿದ್ದಾರೆ; ಬಾಬೆಲ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ಅನ್ನುತ್ತಾನೆ.

[43] ಬಾಬೆಲಿನ ಅರಸನು ಅದರ ಸುದ್ದಿಯನ್ನು ಕೇಳಿದನು, ಅವನ ಕೈಗಳು ಜೋಲುಬಿದ್ದವು, ಪ್ರಸವವೇದನೆಯಂತಿರುವ ಯಾತನೆಯು ಅವನನ್ನು ಹಿಡಿದಿದೆ.

[44] ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟಡವಿಯಿಂದ ಕಸ್ದೀಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿ ಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲನು?

[45] ಹೀಗಿರಲು ಯೆಹೋವನು ಬಾಬೆಲಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ, ಆತನು ಕಸ್ದೀಯರ ದೇಶವನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ, ಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವವು; ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶಕ್ಕೆ ಬೆದರುವುದು.

[46] ಬಾಬೆಲು ಶತ್ರುವಶವಾಯಿತೆಂಬ ಕೋಲಾಹಲಕ್ಕೆ ಭೂಮಿಯು ಕಂಪಿಸುತ್ತದೆ, ಅದರ ಮೊರೆಯು ಜನಾಂಗಗಳಲ್ಲಿ ಕೇಳಿಸುತ್ತದೆ.

ಯೆರೆಮೀಯನು — Chapters