Skip to content
Opens in a new window
Listen to this chapter • 3:25

[1] ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸಕಲ ಸೈನ್ಯಸಹಿತ ಬಂದು ಯೆರೂಸಲೇಮನ್ನು ಮುತ್ತಿದನು.

[2] ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನದಲ್ಲಿ ಪೌಳಿಗೋಡೆ ಒಡಕು ಬಿದ್ದು ಯೆರೂಸಲೇಮ್ ಪಟ್ಟಣವು ಶತ್ರುವಶವಾಯಿತು.

[3] ಆಗ ನೇರ್ಗಲ್ ಸರೆಚರ್, ಸಮ್ಗರ್ ನೆಬೋ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಕಲ ಸರದಾರರೂ ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಆಸೀನರಾದರು.

[4] ಯೆಹೂದದ ಅರಸನಾದ ಚಿದ್ಕೀಯನೂ ಮತ್ತು ಸಮಸ್ತ ಸೈನಿಕರೂ ಇವರನ್ನು ನೋಡಿ ಅದೇ ರಾತ್ರಿಯಲ್ಲಿ ಹೊರಟು ಅರಸನ ಉದ್ಯಾನದ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ಪಟ್ಟಣವನ್ನು ಬಿಟ್ಟು ಅರಾಬಾ ಎಂಬ ತಗ್ಗಾದ ಪ್ರದೇಶದ ಕಡೆಗೆ ಪಲಾಯನ ಮಾಡಿದರು.

[5] ಕಸ್ದೀಯರ ಸೈನಿಕರು ಅವರನ್ನು ಹಿಂದಟ್ಟುತ್ತಾ ಯೆರಿಕೋವಿನ ಬಯಲಿನಲ್ಲಿ ಚಿದ್ಕೀಯನನ್ನು ಹಿಡಿದು ಹಮಾತ್ ಸೀಮೆಯ ರಿಬ್ಲದಲ್ಲಿದ್ದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಬಂದರು.

[6] ಆ ಬಾಬೆಲಿನ ಅರಸನು ಅಲ್ಲಿ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ರಿಬ್ಲದಲ್ಲಿ ಅಲ್ಲೇ ಅವನ ಕಣ್ಣೆದುರಿಗೆ ವಧಿಸಿ ಯೆಹೂದದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು.

[7] ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ ಅವನನ್ನು ಬಾಬಿಲೋನಿಗೆ ಸಾಗಿಸಬೇಕೆಂದು ಬೇಡಿಹಾಕಿಸಿದನು.

[8] ಮತ್ತು ಕಸ್ದೀಯರು ಅರಮನೆಯನ್ನೂ, ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು, ಯೆರೂಸಲೇಮಿನ ಸುತ್ತಣ ಗೋಡೆಗಳನ್ನು ಕೆಡವಿದರು.

[9] ಆಗ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆಹೊಕ್ಕವರನ್ನೂ, ಇತರ ಸಮಸ್ತ ಜನರನ್ನೂ ಬಾಬಿಲೋನಿಗೆ ಸೆರೆಯೊಯ್ದನು.

[10] ಆದರೆ ಏನೂ ಇಲ್ಲದ ಕೆಲವು ಬಡ ಜನರನ್ನು ಯೆಹೂದ ದೇಶದಲ್ಲಿ ಬಿಟ್ಟು ಆಗಲೇ ಅವರಿಗೆ ಹೊಲ ಮತ್ತು ದ್ರಾಕ್ಷಿತೋಟಗಳನ್ನು ಕೊಟ್ಟನು.

[11] ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೆಮೀಯನ ವಿಷಯವಾಗಿ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನಿಗೆ,

[12] “ಅವನನ್ನು ಕರೆಯಿಸಿಕೊಂಡು ಏನೂ ಕೇಡುಮಾಡದೆ ಅವನು ಬೇಡುವುದನ್ನೆಲ್ಲಾ ನೆರವೇರಿಸಿ ಕಟಾಕ್ಷಿಸು” ಎಂದು ಅಪ್ಪಣೆಕೊಟ್ಟನು.

[13] ಅದಕ್ಕೆ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನ್, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳು,

[14] ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಕರೆತರಿಸಿ, ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ಎಂದಿನಂತೆ ಜನರ ಮಧ್ಯದಲ್ಲಿ ವಾಸಿಸಿದನು.

[15] ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಯೆಹೋವನು ಅವನಿಗೆ ಈ ಮಾತನ್ನು ದಯಪಾಲಿಸಿದನು,

[16] “ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನಿಗೆ ಹೀಗೆ ಹೇಳು, ‘ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನುಡಿದ ಮೇಲನ್ನಲ್ಲ, ನುಡಿದ ಕೇಡನ್ನೇ ಈ ಪಟ್ಟಣದ ಮೇಲೆ ಬರಮಾಡುವೆನು; ಅದು ಆ ದಿನದಲ್ಲಿ ನಿನ್ನ ಕಣ್ಣೆದುರಿಗೆ ಆಗುವುದು.

[17] ಯೆಹೋವನು ಇಂತೆನ್ನುತ್ತಾನೆ, ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವ ಮನುಷ್ಯರ ಕೈಗೆ ಸಿಕ್ಕುವುದಿಲ್ಲ.

[18] ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು; ನೀನು ಖಡ್ಗಕ್ಕೆ ತುತ್ತಾಗದೆ ಅದರ ಬಾಯೊಳಗಿಂದ ನಿನ್ನ ಪ್ರಾಣವನ್ನು ಸೆಳೆದುಕೊಂಡು ಹೋಗುವಿ; ಇದು ಯೆಹೋವನ ನುಡಿ’” ಎಂಬುದೇ.

ಯೆರೆಮೀಯನು — Chapters