[1] ಬರಗಾಲದ ವಿಷಯವಾಗಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ನುಡಿ:
[2] ಯೆಹೂದವು ದುಃಖಿಸುತ್ತದೆ, ಅಲ್ಲಿಯ ಜನರು ಕಂಗೆಟ್ಟು ಕರ್ರಗಾಗಿ ನೆಲದ ಮೇಲೆ ಬಿದ್ದಿದ್ದಾರೆ, ಯೆರೂಸಲೇಮಿನವರ ಗೋಳಾಟವು ಕೇಳಿಸುತ್ತದೆ.
[3] ಅವರಲ್ಲಿನ ಶ್ರೀಮಂತರು ತಮ್ಮ ಕೈಕೆಳಗಿನವರನ್ನು ನೀರು ತರಲು ಕಳುಹಿಸುತ್ತಾರೆ. ಅವರು ಕೊಳಗಳಿಗೆ ಹೋದಾಗ ನೀರು ಕಾಣುವುದಿಲ್ಲ, ಬರೀ ಪಾತ್ರೆಗಳನ್ನು ತೆಗೆದುಕೊಂಡು ಹಿಂದಕ್ಕೆ ಬರುತ್ತಾರೆ. ಆಶೆಗೆಟ್ಟು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ.
[4] ದೇಶದಲ್ಲಿ ಮಳೆಯಿಲ್ಲದೆ ಭೂಮಿಯು ಬಿರುಕುಬಿಟ್ಟಿರುವುದರಿಂದ ರೈತರು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ.
[5] ಇದಲ್ಲದೆ ಹೆಣ್ಣು ಜಿಂಕೆಯು ಕಾಡಿನಲ್ಲಿ ಈದು, ಹುಲ್ಲಿಲ್ಲದ ಕಾರಣ ತನ್ನ ಮರಿಯನ್ನು ಬಿಟ್ಟುಬಿಡುತ್ತದೆ.
[6] ಕಾಡುಕತ್ತೆಗಳು ಬೋಳುಗುಡ್ಡಗಳಲ್ಲಿ ನಿಂತುಕೊಂಡು ನರಿಗಳಂತೆ ನಿಟ್ಟುಸಿರುಬಿಟ್ಟು ಗಾಳಿಯನ್ನು ಹಾರೈಸುತ್ತವೆ, ಸೊಪ್ಪುಸದೆಯಿಲ್ಲದೆ ಕಂಗೆಡುತ್ತವೆ.
[7] ಯೆಹೋವನೇ, ನಮ್ಮ ಅಪರಾಧಗಳು ನಮಗೆ ವಿರುದ್ಧವಾಗಿ ಸಾಕ್ಷಿಕೊಟ್ಟರೂ, ನಿನ್ನ ಹೆಸರಿನ ನಿಮಿತ್ತ ಕಾರ್ಯವನ್ನು ಸಾಧಿಸು. ನಮ್ಮ ದ್ರೋಹಗಳು ಬಹಳ, ನಿನ್ನ ವಿರುದ್ಧವಾಗಿ ಪಾಪವನ್ನು ಮಾಡಿದ್ದೇವೆ.
[8] ಇಸ್ರಾಯೇಲರ ನಿರೀಕ್ಷೆಯೇ, ಇಕ್ಕಟ್ಟಿನಲ್ಲಿ ಅವರಿಗೆ ರಕ್ಷಕನೇ, ಏಕೆ ಸ್ವದೇಶದಲ್ಲಿ ಪರದೇಶಿಯಂತೆಯೂ, ಇಳಿದುಕೊಳ್ಳುವುದಕ್ಕೆ ಗುಡಾರಹಾಕಿಕೊಳ್ಳುವ ಪ್ರಯಾಣಿಕನ ಹಾಗೂ ಇದ್ದೀ?
[9] ಏಕೆ ಸ್ತಬ್ಧನಂತೆಯೂ, ರಕ್ಷಿಸಲಾರದ ಶೂರನ ಹಾಗೆಯೂ ಇದ್ದೀ? ಆದರೂ ಯೆಹೋವನೇ, ನೀನು ನಮ್ಮ ಮಧ್ಯದಲ್ಲಿರುತ್ತಿ. ನಾವು ನಿನ್ನ ಹೆಸರಿನವರು, ನಮ್ಮನ್ನು ಕೈಬಿಡಬೇಡ.
[10] ಯೆಹೋವನು ಈ ಜನರನ್ನು ಕುರಿತು, “ಇವರು ಪ್ರಯಾಣಿಕನ ಹಾಗೆ ಅಲೆಯುವುದಕ್ಕೆ ಇಷ್ಟಪಟ್ಟಿದ್ದಾರೆ, ಕಾಲನ್ನು ಹಿಂದೆಗೆಯಲಿಲ್ಲ. ಆದಕಾರಣ ಯೆಹೋವನಾದ ನಾನು ಇವರನ್ನು ಕಟಾಕ್ಷಿಸೆನು; ಈಗಲೇ ಇವರ ಅಪರಾಧವನ್ನು ಮನಸ್ಸಿಗೆ ತಂದುಕೊಂಡು ಇವರ ಪಾಪಗಳಿಗೆ ದಂಡನೆಯನ್ನು ವಿಧಿಸುವೆನು” ಎಂದು ಹೇಳಿದ್ದಾನೆ.
[11] ಮತ್ತು ಯೆಹೋವನು ನನಗೆ, “ಈ ಜನರ ಹಿತವನ್ನು ಬಯಸಿ ಇವರಿಗೋಸ್ಕರ ಪ್ರಾರ್ಥನೆ ಮಾಡಬೇಡ.
[12] ಇವರು ಉಪವಾಸಮಾಡುವಾಗ ಇವರ ಮೊರೆಯನ್ನು ಕೇಳೆನು. ಹೋಮನೈವೇದ್ಯಗಳನ್ನು ಅರ್ಪಿಸಲು ಸ್ವೀಕರಿಸೆನು. ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಇವರನ್ನು ನಿರ್ಮೂಲಮಾಡುವೆನು” ಎಂದು ಹೇಳಿದನು.
[13] ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ಇಗೋ ಪ್ರವಾದಿಗಳು ಈ ಜನರಿಗೆ, ‘ಖಡ್ಗವು ನಿಮ್ಮ ಕಣ್ಣಿಗೆ ಕಾಣದು, ಕ್ಷಾಮವು ನಿಮಗೆ ಸಂಭವಿಸದು; ಯೆಹೋವನು ಈ ಸ್ಥಳದಲ್ಲಿ ತಾನು ಪ್ರಮಾಣ ಮಾಡಿದಂತೆ ಸಮಾಧಾನವನ್ನು ನಿಮಗೆ ಕೊಡುವನು ಎಂದು ನುಡಿಯುತ್ತಾರೆ’” ಎಂಬುದಾಗಿ ಹೇಳಿದೆನು.
[14] ಆಗ ಯೆಹೋವನು ನನಗೆ ಹೀಗೆ ನುಡಿದನು, “ಈ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳಾಗಿ ಪ್ರವಾದಿಸುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಅವರಿಗೆ ಅಪ್ಪಣೆಕೊಡಲಿಲ್ಲ, ಏನೂ ಹೇಳಲಿಲ್ಲ. ಅವರು ಸುಳ್ಳಾದ ದರ್ಶನವನ್ನೂ, ಕಣಿಯನ್ನೂ, ಮಾಯಾತಂತ್ರವನ್ನೂ, ಸ್ವಕಲ್ಪಿತ ಮೋಸವನ್ನೂ ನಿಮಗೆ ಪ್ರಕಟಿಸುತ್ತಾರೆ.
[15] ಆದಕಾರಣ ನನ್ನ ಅಪ್ಪಣೆಯಿಲ್ಲದೆ ನನ್ನ ಹೆಸರಿನಿಂದ ಪ್ರವಾದಿಸುತ್ತಾ ಖಡ್ಗವೂ, ಕ್ಷಾಮವೂ ಈ ದೇಶಕ್ಕೆ ಬಾರವು ಎಂದು ಬೋಧಿಸುವ ಪ್ರವಾದಿಗಳ ವಿಷಯದಲ್ಲಿ ಯೆಹೋವನಾದ ನಾನು, ‘ಖಡ್ಗದಿಂದಲೂ, ಕ್ಷಾಮದಿಂದಲೂ ಈ ಪ್ರವಾದಿಗಳು ನಿರ್ಮೂಲರಾಗುವರು’” ಎಂದು ಹೇಳುತ್ತೇನೆ.
[16] ಮತ್ತು ಇವರ ಪ್ರವಾದನೆಯನ್ನು ಕೇಳುವ ಜನರು ಕ್ಷಾಮ ಮತ್ತು ಖಡ್ಗಗಳ ದೆಸೆಯಿಂದ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಅವರ ಹೆಂಡತಿ ಮತ್ತು ಮಕ್ಕಳನ್ನೂ ಹೂಣಿಡುವುದಕ್ಕೆ ಯಾರೂ ಇರುವುದಿಲ್ಲ; ನಾನು ಅವರ ದುಷ್ಟತನವನ್ನೇ ಅವರ ಮೇಲೆ ಹೊಯ್ದುಬಿಡುವೆನು.
[17] ನೀನು ಅವರಿಗೆ, “ನನ್ನ ಕಣ್ಣೀರು ರಾತ್ರಿ ಹಗಲು ನಿರಂತರ ಸುರಿಯಲಿ; ಏಕೆಂದರೆ ನನ್ನ ಜನವೆಂಬ ಯುವತಿಗೆ ದೊಡ್ಡ ಗಾಯವಾಯಿತು, ಹೌದು ಗಡುಸಾದ ಪೆಟ್ಟು ಬಿತ್ತು.
[18] ನಾನು ಊರ ಹೊರಗೆ ಹೋದರೆ ಇಗೋ, ಖಡ್ಗದಿಂದ ಹತರಾದವರು, ಊರೊಳಗೆ ಬಂದರೆ ಇಗೋ, ಕ್ಷಾಮದಿಂದ ಕೊರಗುವವರು! ಪ್ರವಾದಿಗಳೂ ಯಾಜಕರೂ ತಮಗೆ ಗೊತ್ತಿಲ್ಲದ ದೇಶಕ್ಕೆ ಗಡೀಪಾರಾಗಿದ್ದಾರೆ ಎಂಬ ಮಾತುಗಳನ್ನು ಹೇಳು” ಎಂದನು.
[19] ನೀನು ಯೆಹೂದವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ? ಚೀಯೋನನ್ನು ಮನಃಪೂರ್ವಕವಾಗಿ ಅಸಹ್ಯಪಟ್ಟಿದ್ದಿಯೋ? ನಮಗೆ ಗುಣವಾಗದಂತೆ ಏಕೆ ಪೆಟ್ಟುಹೊಡೆದಿ? ಸುಖವನ್ನು ನಿರೀಕ್ಷಿಸಿದೆವು, ಯಾವ ಮೇಲೂ ಆಗಲಿಲ್ಲ; ಕ್ಷೇಮ ಕಾಲವನ್ನೂ ಎದುರುನೋಡಿದೆವು, ಹಾ, ಅಂಜಿಕೆಯೇ!
[20] ಯೆಹೋವನೇ, ನಮ್ಮ ದುಷ್ಟತನವನ್ನೂ ಒಪ್ಪಿಕೊಳ್ಳುತ್ತೇವೆ, ನಮ್ಮ ಪೂರ್ವಿಕರ ದುರಾಚಾರವನ್ನೂ ತಿಳಿದುಕೊಂಡಿದ್ದೇವೆ; ನಾವು ನಿನಗೇ ಪಾಪಮಾಡಿದ್ದೇವೆ.
[21] ನಿನ್ನ ನಾಮದ ಮೇಲೆ ದೃಷ್ಟಿಯಿಡು, ನಿನ್ನ ಮಹಿಮೆಯ ಸಿಂಹಾಸನವನ್ನು ಅಸಡ್ಡೆಮಾಡಬೇಡ. ಅವಮಾನಪಡಿಸಬೇಡ; ನೀನು ನಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೋ, ಅದನ್ನು ಭಂಗಪಡಿಸದಿರು.
[22] ಜನಾಂಗಗಳ ವ್ಯರ್ಥವಾದ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದಮಳೆಗಳನ್ನು ಕೊಟ್ಟೀತೇ? ನಮ್ಮ ದೇವರಾದ ಯೆಹೋವನೇ, ನೀನೇ ವೃಷ್ಟಿಪ್ರದನು; ನಾವು ನಿನ್ನನ್ನೇ ನಿರೀಕ್ಷಿಸುವೆವು. ನೀನು ಇವುಗಳನ್ನೆಲ್ಲಾ ನಡೆಸುವವನಾಗಿದ್ದೀಯಷ್ಟೆ.