[1] “ಬೆನ್ಯಾಮೀನ್ ಕುಲದವರೇ, ಯೆರೂಸಲೇಮಿನೊಳಗಿಂದ ವಲಸೆ ಹೋಗಿರಿ, ತೆಕೋವದಲ್ಲಿ ಕೊಂಬನ್ನೂದಿರಿ, ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ, ಏಕೆಂದರೆ ಉತ್ತರ ದಿಕ್ಕಿನಿಂದ ಅತಿನಾಶಕರವಾದ ವಿಪತ್ತು ತಲೆದೋರುತ್ತಿದೆ.
[2] ಚೀಯೋನ್ ನಗರಿಯು ಸೊಂಪಾದ ಹಸುರುಗಾವಲಿಗೆ ಸಮಾನವಾಗಿ ನನಗೆ ಕಾಣುತ್ತದೆ.
[3] ಕುರುಬರು ತಮ್ಮ ಹಿಂಡುಗಳೊಡನೆ ಅಲ್ಲಿಗೆ ಬಂದು ಅದರೆದುರಿಗೆ ಸುತ್ತಲೂ ತಮ್ಮ ಗುಡಾರಗಳನ್ನು ಹಾಕುವರು; ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಮೇಯಿಸಿಬಿಡುವನು.
[4] ಇವರು, ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ, ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು ಅನ್ನುವರು.
[5] ಎದ್ದು ರಾತ್ರಿಯಲ್ಲಿ ಅದರ ಮೇಲೆ ಬಿದ್ದು ಅಲ್ಲಿನ ಅರಮನೆಗಳನ್ನು ಹಾಳುಮಾಡೋಣ ಅಂದುಕೊಳ್ಳುವರು.
[6] ಸೇನಾಧೀಶ್ವರನಾದ ಯೆಹೋವನು, ಮರಗಳನ್ನು ಕಡಿದುಬಿಡಿರಿ, ಯೆರೂಸಲೇಮಿನ ಎದುರಿಗೆ ದಿಬ್ಬಹಾಕಿರಿ. ಇದೇ ನೀವು ದಂಡಿಸತಕ್ಕ ಪಟ್ಟಣ; ಅದರೊಳಗೆ ಬರೀ ದಬ್ಬಾಳಿಕೆಯೇ ತುಂಬಿದೆ.
[7] ತೊಟ್ಟಿಯು ತನ್ನಲ್ಲಿನ ನೀರನ್ನು ತಿಳಿಯಾಗಿ ಇಟ್ಟುಕೊಳ್ಳುವಂತೆ ಈ ಪಟ್ಟಣವು ತನ್ನಲ್ಲಿನ ದುಷ್ಟತನವನ್ನು ನಿಚ್ಚಳವಾಗಿ ಇಟ್ಟುಕೊಂಡಿದೆ. ಅಲ್ಲಿ ಬಲಾತ್ಕಾರದ ಮತ್ತು ಕೊಳ್ಳೆಯ ಸುದ್ದಿಯೇ ಕೇಳಿಬರುತ್ತದೆ; ರೋಗಗಳೂ, ಗಾಯಗಳೂ ಸದಾ ನನ್ನ ಕಣ್ಣಿಗೆ ಬೀಳುತ್ತವೆ.
[8] ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿರ್ಜನ ದೇಶವನ್ನಾಗಿ ಮಾಡದಂತೆ ರಕ್ಷಿಸಿಕೊಳ್ಳಲು ಶಿಕ್ಷಣವನ್ನು ಹೊಂದು ಎಂದು ಹೇಳಿದ್ದಾನೆ.
[9] ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿಯ ಹಕ್ಕಲನ್ನೋ ಎಂಬಂತೆ ಆಯಬೇಕು; ದ್ರಾಕ್ಷಿಯ ಹಣ್ಣನ್ನು ಕೀಳುವವನಂತೆ ನೀನು ನಿನ್ನ ಕೈಯನ್ನು ತಿರುಗಿ ರೆಂಬೆಗಳಲ್ಲಿ ಹಾಕು ಎಂದು ಹೇಳುತ್ತಾನೆ.
[10] ನಾನು, ಯಾರ ಸಂಗಡ ಮಾತನಾಡಿ ಅವರು ಗಮನಿಸುವಂತೆ ಸಾಕ್ಷಿಕೊಡಲಿ? ಇಗೋ, ಅವರ ಕಿವಿ ಮುಚ್ಚಲ್ಪಟ್ಟಿವೆ. ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ, ಅದರಲ್ಲಿ ಅವರಿಗೆ ಆನಂದವೇ ಇಲ್ಲ.
[11] ಆದಕಾರಣ ಯೆಹೋವನ ರೋಷವು ನನ್ನಲ್ಲಿ ತುಂಬಿ ತುಳುಕುತ್ತದೆ; ತಡೆದು ತಡೆದು ನನಗೆ ಸಾಕಾಯಿತು. ಬೀದಿಯಲ್ಲಿನ ಮಕ್ಕಳ ಮೇಲೂ, ಯುವಕರ ಸಂಘದ ಮೇಲೂ ಅದನ್ನು ಹೊಯ್ದು ಬಿಡಬೇಕು. ಗಂಡನೂ, ಹೆಂಡತಿಯೂ, ಮುದುಕನೂ, ಮುಪ್ಪಿನ ಮುದುಕನೂ ಅಂತು ಎಲ್ಲರೂ ಅಪಹರಿಸಲ್ಪಡುವರು.
[12] ಅವರ ಹೆಂಡತಿ, ಮನೆ, ಹೊಲ ಮತ್ತು ಗದ್ದೆ ಇವೆಲ್ಲವುಗಳು ಅನ್ಯರ ಪಾಲಾಗುವವು. ದೇಶದ ನಿವಾಸಿಗಳ ಮೇಲೆ ಕೈಮಾಡುವೆನಷ್ಟೆ ಎಂದು ಯೆಹೋವನು ಹೇಳಿದ್ದಾನೆ.
[13] ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲುಗೊಂಡು ಯಾಜಕರವರೆಗೆ ಸಕಲರು ಮೋಸಮಾಡುತ್ತಾರೆ.
[14] ಸಮಾಧಾನವಿಲ್ಲದಿದ್ದರೂ, ಸಮಾಧಾನ ಎಂದು ಹೇಳಿ ನನ್ನ ಜನರ ಗಾಯವನ್ನು ಮೇಲೆ ಮೇಲೆ ವಾಸಿಮಾಡಿದ್ದಾರೆ.
[15] ಅಸಹ್ಯಕಾರ್ಯಗಳನ್ನು ಮಾಡಿ ಅವಮಾನಕ್ಕೆ ಗುರಿಯಾದರೂ ಎಳ್ಳಷ್ಟೂ ನಾಚಿಕೆಪಡಲಿಲ್ಲ, ಲಜ್ಜೆಯ ಗಂಧವನ್ನೂ ತಿಳಿಯಲಿಲ್ಲ. ಆದಕಾರಣ ನಾನು ದಂಡಿಸುವ ಸಮಯದಲ್ಲಿ ಅವರು ಮುಗ್ಗರಿಸುವರು, ಬೀಳುವವರ ಸಂಗಡ ಬಿದ್ದೇ ಹೋಗುವರು” ಎಂದು ಯೆಹೋವನು ನುಡಿಯುತ್ತಾನೆ.
[16] ಯೆಹೋವನು, “ದಾರಿಗಳು ಕೂಡುವ ಸ್ಥಳದಲ್ಲಿ ನಿಂತುಕೊಂಡು ನೋಡಿ ಪುರಾತನ ಮಾರ್ಗಗಳು ಯಾವುವು. ಆ ಸನ್ಮಾರ್ಗವು ಎಲ್ಲಿ? ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ; ಇದರಿಂದ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು ಎಂದು ಅಪ್ಪಣೆಕೊಟ್ಟಾಗ ಅವರು ‘ಅದರಲ್ಲಿ ನಾವು ನಡೆಯುವುದೇ ಇಲ್ಲ’ ಎಂದರು.
[17] ‘ತುತ್ತೂರಿಯ ಶಬ್ದವನ್ನು ಕೇಳಿರಿ’ ಎಂದು ನಾನು ಅವರ ಮೇಲೆ ಕಾವಲುಗಾರರನ್ನು ನೇಮಿಸಲು, ‘ನಾವು ಕೇಳುವುದಿಲ್ಲ’ ಎಂದು ಹೇಳಿದರು.
[18] ಆದಕಾರಣ, ಜನಾಂಗಗಳೇ, ಕೇಳಿರಿ! ಜನಸಮೂಹವೇ, ಅವರಲ್ಲಿ ನಡೆದದ್ದನ್ನು ಮನಸ್ಸಿಗೆ ತಂದುಕೋ!
[19] ಭೂಲೋಕವೇ, ಕೇಳು! ಆಹಾ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದರಿಂದ ಇವರ ಆಲೋಚನೆಗಳ ಫಲವಾದ ಕೇಡನ್ನು ಇವರ ಮೇಲೆ ಬರಮಾಡುವೆನು.
[20] ನೀವು ಶೆಬದ ಧೂಪವನ್ನು ಮತ್ತು ದೂರ ದೇಶದ ಒಳ್ಳೆಯ ಬಜೆಯನ್ನು ನನಗೆ ಅರ್ಪಿಸುವುದರಿಂದ ಏನು ಪ್ರಯೋಜನ? ನಿಮ್ಮ ಹೋಮಗಳು ನನಗೆ ಮೆಚ್ಚಿಕೆಯಲ್ಲ, ನಿಮ್ಮ ಯಜ್ಞಗಳು ನನಗೆ ಇಷ್ಟವಿಲ್ಲ.
[21] ಆದಕಾರಣ ಇಗೋ, ನಾನು ಈ ಜನರ ಮುಂದೆ ಅಡ್ಡಿಆತಂಕಗಳನ್ನು ಒಡ್ಡುವೆನು. ತಂದೆ ಮಕ್ಕಳು ಅವುಗಳನ್ನೂ ಎಡವುವರು, ನೆರೆಹೊರೆಯವರೂ ನಾಶವಾಗುವರು ಇದೇ ಯೆಹೋವನಾದ ನನ್ನ ಮಾತು” ಎಂದು ನುಡಿಯುತ್ತಾನೆ.
[22] “ಆಹಾ, ಉತ್ತರ ದಿಕ್ಕಿನಿಂದ ಜನಸಮೂಹ ಬರುತ್ತದೆ, ಮಹಾ ಜನಾಂಗವು ಎಬ್ಬಿಸಲ್ಪಟ್ಟು ಲೋಕದ ಕಟ್ಟಕಡೆಯಿಂದ ಹೊರಡುತ್ತದೆ.
[23] ಬಿಲ್ಲನ್ನೂ, ಈಟಿಯನ್ನೂ ಹಿಡಿದುಕೊಂಡಿದ್ದಾರೆ, ಅವರು ಕ್ರೂರರು, ನಿಷ್ಕರುಣಿಗಳು; ಅವರ ಧ್ವನಿಯು ಸಮುದ್ರದಂತೆ ಬೋರ್ಗರೆಯುತ್ತದೆ, ಕುದುರೆಗಳನ್ನು ಹತ್ತಿದ್ದಾರೆ. ಚೀಯೋನ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ” ಎಂದು ಯೆಹೋವನು ನುಡಿಯುತ್ತಾನೆ.
[24] ನಾವು ಅದರ ಸುದ್ದಿಯನ್ನು ಕೇಳಿದೆವು, ನಮ್ಮ ಕೈಗಳು ಜೋಲುಬಿದ್ದವು, ಪ್ರಸವವೇದನೆಯಂತಿರುವ ಯಾತನೆಯು ನಮ್ಮನ್ನು ಹಿಡಿದಿದೆ.
[25] ಊರ ಹೊರಗೆ ಹೋಗಬೇಡಿರಿ, ದಾರಿಯಲ್ಲಿ ನಡೆಯಬೇಡಿರಿ; ಶತ್ರುವಿನ ಕತ್ತಿಯಿದೆ, ಸುತ್ತುಮುತ್ತಲು ದಿಗಿಲು.
[26] ನನ್ನ ಪ್ರಜೆಯೆಂಬ ಯುವತಿಯೇ, ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯಲ್ಲಿ ಬಿದ್ದು ಹೊರಳಾಡು. ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ದುಃಖಪಟ್ಟು ಘೋರಪ್ರಲಾಪ ಮಾಡು; ಕೊಳ್ಳೆಗಾರನು ತಟ್ಟನೆ ನಮ್ಮ ಮೇಲೆ ಬೀಳುವನಷ್ಟೆ.
[27] ಯೆಹೋವನು ನನಗೆ, “ನಾನು ನಿನ್ನನ್ನು ನನ್ನ ಜನವೆಂಬ ಅದಿರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ; ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು.
[28] ಅವರೆಲ್ಲರೂ ಕೇವಲ ದ್ರೋಹಿಗಳು, ಚಾಡಿ ಹೇಳುತ್ತಾ ತಿರುಗಾಡುವವರು. ಅವರು ತಾಮ್ರ ಮತ್ತು ಕಬ್ಬಿಣ, ಅವರೆಲ್ಲರೂ ಭ್ರಷ್ಟರೇ.
[29] ತಿದಿಯು (ಶ್ವಾಸಕೋಶ) ಬುಸುಬುಸುಗುಟ್ಟುತ್ತದೆ, ಸೀಸವು ಉರಿಯಿಂದ ಸುಟ್ಟುಹೋಗುತ್ತದೆ. ಅಕ್ಕಸಾಲಿಗನು ಎಷ್ಟು ಶೋಧಿಸಿದರೂ ನಿಷ್ಪ್ರಯೋಜನ, ಕಲ್ಮಷವು ತೆಗೆಯಲ್ಪಡುವುದಿಲ್ಲ.
[30] ಯೆಹೋವನಾದ ನಾನು ಇವರನ್ನು ನೂಕಿಬಿಟ್ಟಿದ್ದರಿಂದ ಇವರು ‘ಕಂದು ಬೆಳ್ಳಿ’ ಎನಿಸಿಕೊಳ್ಳುವರು” ಎಂದು ಹೇಳಿದ್ದಾನೆ.