[1] ಯೆರೆಮೀಯನು ಈ ಪ್ರವಾದನೆ ಮಾಡುವುದನ್ನು ಯಾಜಕನಾದ ಇಮ್ಮೇರನ ಮಗನೂ ಯೆಹೋವನ ಆಲಯದ ಮುಖ್ಯಾಧಿಕಾರಿಯೂ ಆದ ಪಷ್ಹೂರನು ಕೇಳಿದನು.
[2] ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ, ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲಲ್ಲಿದ್ದ ಕೋಳಕ್ಕೆ ಹಾಕಿಸಿದನು.
[3] ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ ಹೀಗೆ ಹೇಳಿದನು, “ಯೆಹೋವನು ನಿನ್ನ ಹೆಸರನ್ನು ಪಷ್ಹೂರ್ ಎಂದು ಹೇಳದೆ ಮಾಗೋರ್ ಮಿಸ್ಸಾಬೀಬ್ ಎಂದು ಹೇಳಿದ್ದಾನೆ.
[4] ಏಕೆಂದರೆ, ಇಗೋ, ನಾನು ನಿನ್ನನ್ನು ನಿನಗೂ ಮತ್ತು ನಿನ್ನ ಎಲ್ಲಾ ಸ್ನೇಹಿತರಿಗೂ ದಿಗಿಲಿಗಿ ಆಸ್ಪದನನ್ನಾಗಿ ಮಾಡುವೆನು; ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು, ನೀನು ಅದನ್ನು ಕಣ್ಣಾರೆ ಕಾಣುವಿ. ನಾನು ಯೆಹೂದ್ಯರನ್ನೆಲ್ಲಾ ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದು ಕತ್ತಿಯಿಂದ ಕಡಿಯುವನು.
[5] ಈ ಪಟ್ಟಣದ ಎಲ್ಲಾ ಆಸ್ತಿಯನ್ನೂ, ಆದಾಯವನ್ನೂ ಮತ್ತು ಸಂಪತ್ತನ್ನೂ ಯೆಹೂದದ ಅರಸರ ಸಕಲ ನಿಧಿ, ನಿಕ್ಷೇಪಗಳನ್ನೂ ಅವರ ಶತ್ರುಗಳ ಕೈವಶಮಾಡುವೆನು; ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.
[6] ಪಷ್ಹೂರನೇ, ನೀನೋ ನಿನ್ನ ಮನೆಯವರೆಲ್ಲರೊಡನೆ ಸೆರೆಗೆ ಹೋಗುವಿ. ನೀನೂ ಮತ್ತು ನಿನ್ನ ಮಿಥ್ಯಾ ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಸ್ನೇಹಿತರೂ ಬಾಬಿಲೋನಿಗೆ ಸೇರಿ ಅಲ್ಲೇ ಸತ್ತು ಮಣ್ಣಾಗುವಿರಿ” ಎಂದು ನುಡಿದಿದ್ದಾನೆ.
[7] ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.
[8] ನಾನು ಮಾತನಾಡುವುದೆಲ್ಲಾ ಅರಚಾಟವೇ. “ಬಲಾತ್ಕಾರ, ಕೊಳ್ಳೆ” ಎಂದೇ ಕೂಗಿಕೊಳ್ಳುತ್ತೇನೆ. ನಾನು ಸಾರುವ ಯೆಹೋವನ ವಾಕ್ಯವು ನನ್ನನ್ನು ಜನರ ದೂಷಣೆಗೂ ಪರಿಹಾಸ್ಯಕ್ಕೂ ಗುರಿಮಾಡಿದೆ.
[9] “ನಾನು ಯೆಹೋವನ ವಿಷಯವನ್ನು ಪ್ರಕಟಿಸುವುದಿಲ್ಲ, ಆತನ ಹೆಸರಿನಲ್ಲಿ ಇನ್ನು ಮಾತನಾಡುವುದಿಲ್ಲ” ಎಂದುಕೊಂಡರೆ, ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ, ಸಹಿಸಿ ಸಹಿಸಿ ಆಯಾಸಗೊಂಡಿದ್ದೇನೆ, ಇನ್ನು ಸಹಿಸಲಾರೆ.
[10] “ಇವನ ಮೇಲೆ ದೂರು ಹೇಳಿರಿ, ನಾವೂ ಹೇಳುವೆವು” ಎಂದು ಬಹು ಜನರು ಗುಸುಗುಟ್ಟುವುದನ್ನು ಕೇಳಿದ್ದೇನೆ. ಸುತ್ತುಮುತ್ತಲೂ ದಿಗಿಲು; ನನ್ನ ಆಪ್ತ ಸ್ನೇಹಿತರೆಲ್ಲರೂ “ಇವನು ಎಡವಿ ಬೀಳಲಿ” ಎಂದು ನನ್ನನ್ನು ಹೊಂಚಿನೋಡುತ್ತಾ, “ಒಂದು ವೇಳೆ ಸಿಕ್ಕಿಬಿದ್ದಾನು, ಇವನನ್ನು ಗೆದ್ದು ಮುಯ್ಯಿತೀರಿಸಿಕೊಳ್ಳುವೆವು” ಎಂದು ತಮ್ಮತಮ್ಮೊಳಗೆ ಅಂದುಕೊಳ್ಳುತ್ತಿದ್ದಾರೆ.
[11] ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ. ಆದುದರಿಂದ ನನ್ನ ಹಿಂಸಕರು ಗೆಲ್ಲದೆ ಮುಗ್ಗರಿಸುವರು. ತಮ್ಮ ಇಷ್ಟಾರ್ಥವು ನೆರವೇರದ ಕಾರಣ ದೊಡ್ಡ ನಾಚಿಕೆಗೆ ಈಡಾಗುವರು, ಎಂದಿಗೂ ಮರೆಯದ ಶಾಶ್ವತ ಅವಮಾನಕ್ಕೆ ಒಳಗಾಗುವರು.
[12] ಹೃದಯವನ್ನೂ ಮತ್ತು ಅಂತರಿಂದ್ರಿಯವನ್ನೂ ಪರೀಕ್ಷಿಸಿ ಶಿಷ್ಟರನ್ನು ಶೋಧಿಸುವ ಸೇನಾಧೀಶ್ವರನಾದ ಯೆಹೋವನೇ, ನೀನು ನನ್ನ ಹಿಂಸಕರಿಗೆ ಕೊಡುವ ಪ್ರತಿಫಲವನ್ನು ನನ್ನ ಕಣ್ಣು ನೋಡಲಿ; ನಿನಗೇ ನನ್ನ ವ್ಯಾಜ್ಯವನ್ನು ಅರಿಕೆಮಾಡಿದ್ದೇನಷ್ಟೆ.
[13] ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ; ಆತನು ಕೆಡುಕರ ಕೈಯಿಂದ ದೀನನ ಪ್ರಾಣವನ್ನು ರಕ್ಷಿಸಿದ್ದಾನೆ.
[14] ನಾನು ಹುಟ್ಟಿದ ದಿನ ಶಾಪಗ್ರಸ್ತವಾಗಲಿ, ತಾಯಿಯು ನನ್ನನ್ನು ಹೆತ್ತ ದಿನವು ಅಶುಭವೆನ್ನಿಸಿಕೊಳ್ಳಲಿ!
[15] “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ ಅವನಿಗೆ ಕೇವಲ ಆನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ!
[16] ಯೆಹೋವನು ಕನಿಕರಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ. ಮುಂಜಾನೆಯಲ್ಲಿ ಅರಚಾಟವು, ಮಧ್ಯಾಹ್ನದಲ್ಲಿ ಕೂಗಾಟವು ಅವನ ಕಿವಿಗೆ ಬೀಳಲಿ!
[17] ಅವನು ನನ್ನನ್ನು ಗರ್ಭದಲ್ಲೇ ಕೊಲ್ಲಲಿಲ್ಲವಲ್ಲಾ; ಹೀಗೆ ಮಾಡಿದ್ದರೆ ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು, ಆಕೆಯ ಗರ್ಭವು ಯಾವಾಗಲೂ ಬಸುರಾಗಿಯೇ ಇರುತ್ತಿತ್ತು.
[18] ನಾನು ಶ್ರಮದುಃಖಗಳನ್ನು ನೋಡುವುದಕ್ಕೂ, ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವುದಕ್ಕೂ ಗರ್ಭದಿಂದ ಏಕೆ ಹೊರಟು ಬಂದೆನು?