Skip to content
Opens in a new window
Listen to this chapter • 5:43

[1] ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ಹಾಗೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ. ಅದು ಅವರ ಹೃದಯದ ಹಲಗೆಯಲ್ಲಿಯೂ, ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ.

[2] ಅವರ ಮಕ್ಕಳು ಸೊಂಪಾಗಿ ಬೆಳೆದಿರುವ ಮರಗಳನ್ನು ಎತ್ತರವಾದ ಗುಡ್ಡಗಳನ್ನು ಕಂಡಾಗೆಲ್ಲಾ, ಅವರ ಯಜ್ಞವೇದಿಗಳನ್ನು ಮತ್ತು ಅಶೇರ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುವರು.

[3] ಬಯಲಿನ ನನ್ನ ಪರ್ವತದ ಜನರೇ, ನಿಮ್ಮ ಸಕಲ ಪ್ರಾಂತ್ಯಗಳಲ್ಲಿ ನೀವು ಮಾಡಿದ ಪಾಪದ ನಿಮಿತ್ತ, ನಾನು ನಿಮ್ಮ ಎಲ್ಲಾ ಸೊತ್ತು ಸಂಪತ್ತುಗಳನ್ನು ಹಾಗು ಪೂಜಾಸ್ಥಳಗಳನ್ನು ಸೂರೆಗೆ ಈಡು ಮಾಡುವೆನು.

[4] ನಾನು ನಿಮಗೆ ದಯಪಾಲಿಸಿದ ಸ್ವತ್ತನ್ನು ನಿಮ್ಮ ದೋಷದಿಂದಲೇ ಕಳೆದುಕೊಳ್ಳುವಿರಿ. ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು. ನೀವು ನನ್ನ ರೋಷಾಗ್ನಿಯನ್ನು ಹೆಚ್ಚಿಸಿದ್ದೀರಿ, ಅದು ನಿತ್ಯವೂ ಉರಿಯುತ್ತಿರುವುದು.

[5] ಯೆಹೋವನು ಹೀಗೆನ್ನುತ್ತಾನೆ, “ಮಾನವ ಮಾತ್ರದವರಲ್ಲಿ ಭರವಸವಿಟ್ಟು, ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ಥನು.

[6] ಇವನು ಅಡವಿಯಲ್ಲಿನ ಜಾಲಿಗೆ ಸಮಾನನು; ಶುಭ ಸಂಭವಿಸಿದರೂ ಅವನು ಅದನ್ನು ಕಾಣನು. ಯಾರೂ ವಾಸಿಸದ ಚೌಳು ನೆಲವಾಗಿರುವ ಅರಣ್ಯದ ಬೆಗ್ಗಾಡಿನಲ್ಲಿ ವಾಸಿಸುವ ಸ್ಥಿತಿಯೇ ಅವನದು.

[7] ಯಾರು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾರೋ, ಯಾರಿಗೆ ಯೆಹೋವನು ಭರವಸೆಯಾಗಿದ್ದಾನೋ ಅವರೇ ಧನ್ಯರು.

[8] ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ, ಧಗೆಗೆ ಭಯಪಡದೆ, ಹಸುರೆಲೆಯನ್ನು ಚಿಗುರಿಸುತ್ತಾ, ಕ್ಷಾಮದ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಅವರು ಸಮಾನವಾಗಿರುವರು.”

[9] ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು?

[10] ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು, ಹೃದಯವನ್ನು ಪರೀಕ್ಷಿಸುವವನೂ, ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.

[11] ಆಸ್ತಿಪಾಸ್ತಿಗಳನ್ನು ಅನ್ಯಾಯವಾಗಿ ಸಂಪಾದಿಸಿಕೊಂಡವನು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನನು. ಅವನ ಮಧ್ಯಪ್ರಾಯದಲ್ಲಿ ಅವು ಅವನಿಂದ ತೊಲಗಿಹೋಗುವವು; ಅವನು ತನ್ನ ಅಂತ್ಯಕಾಲದಲ್ಲಿ ಹುಚ್ಚನಾಗಿ ಕಂಡುಬರುವನು.

[12] ನಮ್ಮ ಪವಿತ್ರಾಲಯಸ್ಥಾನವು ಆದಿಯಿಂದಲೂ ಉನ್ನತವಾದ ಮಹಿಮೆಯ ಸಿಂಹಾಸನವಾಗಿದೆ.

[13] ಯೆಹೋವನೇ, ಇಸ್ರಾಯೇಲರ ನಿರೀಕ್ಷೆಯೇ, ನಿನ್ನನ್ನು ಬಿಟ್ಟುಹೋಗುವವರು ಆಶಾಭಂಗಪಡುವರು. ಯೆಹೋವನಾದ ನಿನ್ನನ್ನು ತೊರೆದವರು ಜೀವಜಲದ ಬುಗ್ಗೆಯನ್ನು ತೊರೆದವರಾಗಿದ್ದಾರೆ; ಅವರ ಹೆಸರು ಧೂಳಿನಲ್ಲಿ ಬರೆಯಲ್ಪಡುವುದು.

[14] ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನಗೆ ಸ್ತುತ್ಯನು.

[15] ಆಹಾ, ಜನರು ನನಗೆ, “ಯೆಹೋವನ ಮಾತೆಲ್ಲಿ? ಅದು ಈಗಲೇ ನೆರವೇರಲಿ” ಎಂದು ಹೇಳುತ್ತಾರೆ.

[16] ನಾನಾದರೋ ಸಭಾಪಾಲನೆಯಲ್ಲಿ ನಿನ್ನನ್ನು ಹಿಂಬಾಲಿಸುವುದನ್ನು ತಪ್ಪಿಸಲು ಆತುರಪಡಲಿಲ್ಲ. ವಿಪತ್ತಿನ ಅನಿವಾರ್ಯ ದಿನವನ್ನು ಅಪೇಕ್ಷಿಸಲಿಲ್ಲ; ಅದನ್ನು ನೀನೇ ಬಲ್ಲೆ. ನಿನ್ನ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.

[17] ನನ್ನ ಹೆದರಿಕೆಗೆ ಕಾರಣನಾಗಬೇಡ; ಕೇಡಿನ ಕಾಲದಲ್ಲಿ ನನಗೆ ಆಶ್ರಯವಾಗಿದ್ದಿ.

[18] ನನ್ನ ಹಿಂಸಕರಿಗೆ ಅವಮಾನವಾಗಲಿ, ನನಗಾಗದಿರಲಿ. ಭಯಭ್ರಾಂತಿಯು ಅವರನ್ನು ಹಿಡಿಯಲಿ, ನನ್ನನ್ನಲ್ಲ. ಅವರಿಗೆ ಕೇಡುಗಾಲವನ್ನು ಬರಮಾಡಿ ವಿಪರೀತ ಕೇಡಿನಿಂದ ಅವರನ್ನು ನಾಶಪಡಿಸು.

[19] ಯೆಹೋವನು ನನಗೆ ಇಂತೆಂದನು, “ನೀನು ಹೊರಟು ಯೆಹೂದದ ಅರಸರು ಹೋಗಿ ಬರುವ ಸಾಮಾನ್ಯ ಜನರ ಬಾಗಿಲಿನಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು ಅವರಿಗೆ ಹೀಗೆ ಸಾರು,

[20] ‘ಈ ಬಾಗಿಲುಗಳಲ್ಲಿ ಸೇರುವ ಯೆಹೂದದ ಅರಸರೇ, ಎಲ್ಲಾ ಯೆಹೂದ್ಯರೇ, ಯೆರೂಸಲೇಮಿನ ಸಕಲ ನಿವಾಸಿಗಳೇ, ಯೆಹೋವನ ಮಾತನ್ನು ಕೇಳಿರಿ.

[21] ಮನಮುಟ್ಟಿ ಗಮನಿಸಿರಿ, ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿರಿ, ಅದನ್ನು ಯೆರೂಸಲೇಮಿನ ಬಾಗಿಲುಗಳಲ್ಲಿ ತರಲೇಬೇಡಿರಿ.

[22] ಆ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ, ಯಾವ ಕೆಲಸವನ್ನೂ ಮಾಡದಿರಿ. ಸಬ್ಬತ್ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿರಿ; ನಿಮ್ಮ ಪೂರ್ವಿಕರಿಗೆ ನಾನು ಹೀಗೆ ಆಜ್ಞೆಮಾಡಿದೆನಲ್ಲಾ.

[23] ಅವರಾದರೋ ಕಿವಿಗೊಟ್ಟು ಕೇಳಲಿಲ್ಲ, ಕೇಳಲಿಕ್ಕಾಗಲಿ ಉಪದೇಶ ಹೊಂದಲಿಕ್ಕಾಗಲಿ ಒಪ್ಪಲಿಲ್ಲ.

[24] ಯೆಹೋವನಾದ ನನ್ನ ನುಡಿ ಇದೇ, ನೀನು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು, ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ, ಯಾವ ಕೆಲಸವನ್ನೂ ಮಾಡದೆ, ಆ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸಿದರೆ,

[25] ಆಗ ದಾವೀದನ ಸಿಂಹಾಸನಾರೂಢರಾದ ಅರಸರೂ, ಪ್ರಭುಗಳೂ ರಥಾಶ್ವಗಳನ್ನು ಏರಿದವರಾಗಿ ಈ ಪಟ್ಟಣದ ಬಾಗಿಲುಗಳನ್ನು ಪ್ರವೇಶಿಸುವರು. ಇವರು, ಇವರ ಪ್ರಧಾನರು, ಯೆಹೂದದ ಜನರು, ಯೆರೂಸಲೇಮಿನ ನಿವಾಸಿಗಳು, ಎಲ್ಲರೂ ಇಲ್ಲಿ ಸೇರುವರು. ಈ ಪಟ್ಟಣವು ನಿತ್ಯವೂ ನೆಲೆಯಾಗಿರುವುದು.

[26] ಯೆಹೂದದ ಪಟ್ಟಣಗಳು, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಬೆನ್ಯಾಮೀನ್ ಸೀಮೆ, ಇಳಕಲಿನ ಪ್ರದೇಶ, ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ್ಯ ಈ ಎಲ್ಲಾ ಸ್ಥಳಗಳಿಂದಲೂ ಸರ್ವಾಂಗಹೋಮಪಶು, ಯಜ್ಞಪಶು, ನೈವೇದ್ಯ, ಧೂಪ ಎಂಬ ಕೃತಜ್ಞತಾ ಅರ್ಪಣೆಗಳನ್ನು ಯೆಹೋವನ ಆಲಯಕ್ಕೆ ಜನರು ತೆಗೆದುಕೊಂಡು ಬರುವರು.

[27] ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತು ಯೆರೂಸಲೇಮಿನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಕೊಳ್ಳದೆ, ಆ ದಿನವನ್ನು ನನ್ನ ಪರಿಶುದ್ಧ ದಿನವೆಂದು ಆಚರಿಸದೆ ಇದ್ದರೆ ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಯೆರೂಸಲೇಮಿನ ಉಪ್ಪರಿಗೆಗಳನ್ನು ದಹಿಸಿಬಿಡುವುದು, ಆರುವುದೇ ಇಲ್ಲ’” ಎಂದು ಹೇಳಿದನು.

ಯೆರೆಮೀಯನು — Chapters