[1] ಯೆಹೋವನು ನನಗೆ ಹೀಗೆ ಅಪ್ಪಣೆಕೊಟ್ಟನು, “ನೀನು ಯೆಹೂದದ ಅರಸನ ಮನೆಗೆ ಇಳಿದು ಹೋಗಿ ಈ ಮಾತನ್ನು ಅಲ್ಲಿ ಹೇಳು,
[2] ದಾವೀದನ ಸಿಂಹಾಸನರೂಢನಾದ ಯೆಹೂದದ ಅರಸನೇ, ಯೆಹೋವನ ಮಾತನ್ನು ಕೇಳು; ನಿನ್ನ ಸೇವಕರೂ ಮತ್ತು ಈ ಬಾಗಿಲುಗಳಲ್ಲಿ ಸೇರುವ ನಿನ್ನ ಪ್ರಜೆಗಳೂ ಕೇಳಲಿ.
[3] ಯೆಹೋವನು, ನೀತಿ, ನ್ಯಾಯಗಳನ್ನು ಆಚರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ. ವಿದೇಶಿ, ಅನಾಥ, ವಿಧವೆ ಇವರಿಗೆ ಯಾವ ಅನ್ಯಾಯವನ್ನೂ ಮತ್ತು ಹಿಂಸೆಯನ್ನೂ ಮಾಡಬೇಡಿರಿ; ನಿರ್ದೋಷಿಯ ರಕ್ತವನ್ನು ಈ ಸ್ಥಳದಲ್ಲಿ ಸುರಿಸಬೇಡಿರಿ” ಎಂದು ಹೇಳುತ್ತಾನೆ.
[4] “ನೀವು ಈ ಆಜ್ಞೆಗಳನ್ನು ಮನಃಪೂರ್ವಕವಾಗಿ ಕೈಗೊಂಡರೆ ದಾವೀದನ ಸಿಂಹಾಸನಾರೂಢರಾದ ಅರಸರು ರಥಾಶ್ವಗಳನ್ನೇರಿದವರಾಗಿ ತಮ್ಮ ಸೇವಕರೊಡನೆಯೂ, ಪ್ರಜೆಗಳೊಡನೆಯೂ ಈ ಅರಮನೆಯ ಬಾಗಿಲುಗಳಲ್ಲಿ ಪ್ರವೇಶಿಸುವರು.
[5] ನೀವು ಈ ಮಾತುಗಳನ್ನು ಕೇಳದಿದ್ದರೆ ಈ ಅರಮನೆಯು ಹಾಳುಬೀಳುವುದು ಎಂದು ನನ್ನ ಮೇಲೆ ಆಣೆಯಿಡುತ್ತೇನೆ ಇದು ಯೆಹೋವನ ನುಡಿ” ಎಂಬುದೇ.
[6] ಯೆಹೋವನು ಯೆಹೂದದ ಅರಸನ ಮನೆತನವನ್ನು ಕುರಿತು ಹೀಗೆನ್ನುತ್ತಾನೆ, “ನೀನು ನನ್ನ ದೃಷ್ಟಿಯಲ್ಲಿ ಗಿಲ್ಯಾದಿನಂತೆಯೂ, ಲೆಬನೋನಿನ ಶಿಖರದ ಹಾಗೂ ಇದ್ದಿ, ಆದರೂ ನಾನು ನಿನ್ನನ್ನು ಮರುಭೂಮಿಯನ್ನಾಗಿಯೂ ಮತ್ತು ನಿರ್ಜನ ಪಟ್ಟಣವನ್ನಾಗಿಯೂ ಮಾಡುವುದು ಖಂಡಿತ.
[7] ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನ್ನ ವಿರುದ್ಧವಾಗಿ ಸಿದ್ಧಪಡಿಸುವೆನು; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.
[8] ಅನೇಕ ಜನಾಂಗಗಳವರು ಈ ಪಟ್ಟಣದ ಮಾರ್ಗವಾಗಿ ಹೋಗುತ್ತಾ, ‘ಯೆಹೋವನು ಈ ಮಹಾ ಪಟ್ಟಣಕ್ಕೆ ಏಕೆ ಹೀಗೆ ಮಾಡಿದನು?’ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ,
[9] ‘ಈ ಪಟ್ಟಣದವರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯನ್ನು ನಿರಾಕರಿಸಿ, ಅನ್ಯದೇವತೆಗಳನ್ನು ಪೂಜಿಸಿ ಸೇವಿಸಿದ್ದರಿಂದಲೇ ಇದಕ್ಕೆ ಈ ಗತಿಯಾಯಿತು’ ಎಂದು ಅಂದುಕೊಳ್ಳುವರು.”
[10] ಸತ್ತವನಿಗಾಗಿ ಅಳಬೇಡಿರಿ, ಗೋಳಾಡಬೇಡಿರಿ; ಸೆರೆಯಾದವನಿಗಾಗಿ ಬಿಕ್ಕಿಬಿಕ್ಕಿ ಅಳಿರಿ; ಅವನು ಇನ್ನು ಹಿಂದಿರುಗನು, ಜನ್ಮಭೂಮಿಯನ್ನು ನೋಡನು.
[11] ಯೆಹೂದದ ಅರಸನಾದ ಯೋಷೀಯನ ತರುವಾಯ ಪಟ್ಟಕ್ಕೆ ಬಂದವನೂ ಇಲ್ಲಿಂದ ಸೆರೆಯಾಗಿ ಹೋದವನೂ ಆದ ಶಲ್ಲೂಮನ ವಿಷಯವಾಗಿ ಯೆಹೋವನು ಹೇಳುವುದೇನೆಂದರೆ, “ಅವನು ಇಲ್ಲಿಗೆ ಇನ್ನು ಹಿಂದಿರುಗಿ ಬಾರನು.
[12] ಅವನನ್ನು ಎಲ್ಲಿಗೆ ಸೆರೆಯೊಯ್ದರೋ ಅಲ್ಲೇ ಸಾಯುವನು, ಈ ದೇಶವನ್ನು ಇನ್ನು ಕಾಣನು” ಎಂಬುದೇ.
[13] ತನ್ನ ಅರಮನೆಯನ್ನು ದುರ್ನೀತಿಯಿಂದಲೂ, ಮಹಡಿಗಳನ್ನು ಅನ್ಯಾಯದಿಂದಲೂ ಕಟ್ಟಿಸಿಕೊಳ್ಳುವವನ ಗತಿಯನ್ನು ಏನು ಹೇಳಲಿ! ಕೂಲಿಕೊಡದೆ ನೆರೆಯವನಿಂದ ಬಿಟ್ಟಿಕೆಲಸವನ್ನು ಮಾಡಿಸಿ,
[14] ಆಹಾ, “ನಾನು ವಿಸ್ತಾರವಾದ ಅರಮನೆಯನ್ನೂ ವಿಶಾಲವಾದ ಮಹಡಿಗಳನ್ನೂ ಕಟ್ಟಿಸಿಕೊಳ್ಳುವೆನು” ಎಂದು ಹೇಳಿ, ಅಗಲಗಲವಾದ ಕಿಟಕಿಗಳನ್ನಿಡಿಸಿ, ಒಳಗೆ ಗೋಡೆಗೆಲ್ಲಾ ದೇವದಾರಿನ ಹಲಗೆಗಳನ್ನು ಹೊದಿಸಿ, ಕಿರಿಮಂಜಿಯ ಬಣ್ಣವನ್ನು ಬಳಿಸಿಕೊಳ್ಳುವವನ ಪಾಡನ್ನು ಏನು ಹೇಳಲಿ!
[15] ನೀನು ದೇವದಾರುವಿನ ಕೆಲಸದಲ್ಲಿ ಸ್ಪರ್ಧಿಸುವುದರಿಂದಲೇ ಆಳತಕ್ಕವನಾಗಿದ್ದೀಯೋ? ನಿನ್ನ ತಂದೆಯು ಎಷ್ಟೇ ಉಂಡು ಕುಡಿದರೂ ನೀತಿ ನ್ಯಾಯಗಳನ್ನಂತು ಕೈಕೊಳ್ಳುತ್ತಿದ್ದನು; ಆಗ ಅವನಿಗೆ ನೆಮ್ಮದಿಯಾಗಿತ್ತು.
[16] ದೀನದರಿದ್ರರ ವ್ಯಾಜ್ಯವನ್ನು ತೀರಿಸುತ್ತಿದ್ದನು; ಆಗ ಸುಖವಾಗಿತ್ತು. ನನ್ನನ್ನು ಅರಿಯುವುದೆಂದರೆ ಇದೇ ಎಂಬುದು ಯೆಹೋವನ ನುಡಿ.
[17] ಆದರೆ ನಿರ್ದೋಷಿಗಳ ರಕ್ತವನ್ನು ಸುರಿಸುವುದು, ದೋಚಿಕೊಳ್ಳುವುದು, ಹಿಂಸಿಸುವುದು, ಜಜ್ಜುವುದು, ಇವುಗಳನ್ನು ಮಾಡುವುದರಲ್ಲಿಯೇ ನಿನ್ನ ದೃಷ್ಟಿಯೂ, ನಿನ್ನ ಮನಸ್ಸೂ ನೆಲೆಗೊಂಡಿವೆ.
[18] ಆದಕಾರಣ ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ವಿಷಯವಾಗಿ ಯೆಹೋವನು. “ಅಯ್ಯೋ ಅಣ್ಣಾ, ಅಯ್ಯೋ ಅಕ್ಕಾ ಎಂದು ಗೋಳಾಡುವಂತೆ ಇವನಿಗಾಗಿ ಯಾರೂ ಗೋಳಾಡುವುದಿಲ್ಲ; ಅಯ್ಯೋ ನಮ್ಮೊಡೆಯಾ, ಅಯ್ಯೋ, ದೊರೆಯ ಮಹಿಮೆಯೇ ಎಂದು ಇವನಿಗಾಗಿ ಯಾರೂ ಪ್ರಲಾಪಿಸರು.
[19] ಇವನನ್ನು ಯೆರೂಸಲೇಮಿನ ಬಾಗಿಲುಗಳ ಹೊರಗೆ ಕತ್ತೆಯಂತೆ ಎಳೆದು ಬಿಸಾಡಿ ಮಣ್ಣುಪಾಲು ಮಾಡುವರು” ಎನ್ನುತ್ತಾನೆ.
[20] ಚೀಯೋನ್ ಯುವತಿಯೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೋ! ಬಾಷಾನಿನಲ್ಲಿ ಮೊರೆಯಿಡು, ಅಬಾರೀಮಿನಲ್ಲಿ ಅರಚಿಕೋ! ನಿನ್ನೊಂದಿಗೆ ವ್ಯಭಿಚಾರ ಮಾಡಿದವರೆಲ್ಲಾ ಹಾಳಾಗಿ ಹೋದರಲ್ಲಾ.
[21] ನಾನು ನೆಮ್ಮದಿಯಲ್ಲಿ ನಿನ್ನೊಡನೆ ಮಾತನಾಡಿದಾಗ “ನಾನು ಕೇಳುವುದಿಲ್ಲ” ಎಂದು ನೀನು ಹೇಳಿದಿ. ನನ್ನ ಮಾತನ್ನು ಕೇಳದಿರುವುದು ನಿನಗೆ ಬಾಲ್ಯದಿಂದಲೇ ಅಭ್ಯಾಸ.
[22] ನಿನ್ನನ್ನು ಅಟ್ಟಿಕೊಂಡು ಹೋಗುವ ಕುರುಬರನ್ನು ಗಾಳಿಯು ಅಟ್ಟಿಬಿಡುವುದು. ನಿನ್ನೊಂದಿಗೆ ವ್ಯಭಿಚಾರ ಮಾಡಿದವರು ಸೆರೆಹೋಗುವರು; ಆಗ ನಿನ್ನ ಸಕಲ ದುಷ್ಕೃತ್ಯಗಳ ನಿಮಿತ್ತ ನೀನು ಆಶಾಭಂಗಪಟ್ಟು ಅವಮಾನಕ್ಕೀಡಾಗುವುದು ಖಂಡಿತ.
[23] ಲೆಬನೋನಿನಲ್ಲಿ ವಾಸಿಸುವವಳೇ, ದೇವದಾರುಗಳಲ್ಲಿ ಗೂಡು ಮಾಡಿಕೊಂಡಿರುವವಳೇ, ಪ್ರಸವವೇದನೆಯಂತಿರುವ ಸಂಕಟವು ನಿನಗೆ ಸಂಭವಿಸುವಾಗ ನಿನ್ನ ಸ್ಥಿತಿಯು ಎಷ್ಟೋ ದುಃಖಕರವಾಗಿರುವುದು!
[24] ಯೆಹೋವನು ಹೀಗೆನ್ನುತ್ತಾನೆ, “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಕೊನ್ಯನೆಂಬ ನೀನು ನನ್ನ ಬಲಗೈಯ ಮುದ್ರೆಯುಂಗರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆನು!
[25] ನಿನ್ನ ಪ್ರಾಣವನ್ನು ಹುಡುಕಿ ನಿನ್ನಲ್ಲಿ ಭಯವನ್ನು ಹುಟ್ಟಿಸುವವರ ಕೈಗೆ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು.
[26] ನಿನ್ನನ್ನೂ ಮತ್ತು ನಿನ್ನ ಹೆತ್ತ ತಾಯಿಯನ್ನೂ ಜನ್ಮಭೂಮಿಯಲ್ಲದ ಅನ್ಯದೇಶಕ್ಕೆ ಎಸೆದುಬಿಡುವೆನು; ಅಲ್ಲೇ ಸಾಯುವಿರಿ.
[27] ಹಿಂದಿರುಗಬೇಕೆಂದು ಹಂಬಲಿಸುವ ದೇಶಕ್ಕೆ ಅವರು ಹಿಂದಿರುಗುವುದೇ ಇಲ್ಲ” ಎಂಬುದೇ.
[28] ಕೊನ್ಯನೆಂಬ ಈ ಮನುಷ್ಯನು ಬಿಸಾಡಿದ ಒಡಕು ಕುಡಿಕೆಯೋ? ಯಾರಿಗೂ ಇಷ್ಟವಿಲ್ಲದ ಮಣ್ಣಿನ ಮಡಿಕೆಯೋ? ಎಂಬಂತೆ, ಅವನೂ ಅವನ ಸಂತತಿಯವರೂ ಏಕೆ ಬಿಸಾಡಲ್ಪಟ್ಟಿದ್ದಾರೆ? ನೋಡದ ದೇಶಕ್ಕೆ ಏಕೆ ಎಸೆಯಲ್ಪಟ್ಟಿದ್ದಾರೆ?
[29] ದೇಶವೇ, ದೇಶವೇ, ದೇಶವೇ ಯೆಹೋವನ ಮಾತನ್ನು ಕೇಳು!
[30] ಯೆಹೋವನು, “ಇವನನ್ನು ಮಕ್ಕಳಿಲ್ಲದವನು, ವ್ಯರ್ಥಜನ್ಮದವನು ಎಂದು ಪಟ್ಟಿಯಲ್ಲಿ ಬರೆಯಿರಿ; ಇವನ ಸಂತಾನದಲ್ಲಿ ಇನ್ನು ಮೇಲೆ ಯಾರೂ ದಾವೀದನ ಸಿಂಹಾಸನದಲ್ಲಿ ಕುಳಿತು ಯೆಹೂದವನ್ನು ಆಳಿ ಬಾಳನು” ಎಂದು ಹೇಳುತ್ತಾನೆ.