[1] ಯೆರೆಮೀಯನು ಸಮಸ್ತ ಜನರನ್ನು ಸಂಬೋಧಿಸಿ ಅವರ ದೇವರಾದ ಯೆಹೋವನು ತನ್ನ ಮೂಲಕ ಅವರಿಗೆ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ತಿಳಿಸಿದನು.
[2] ಆಮೇಲೆ ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಸೊಕ್ಕೇರಿದವರೆಲ್ಲರೂ ಅವನಿಗೆ, “ನಿನ್ನ ಮಾತು ಸುಳ್ಳು, ‘ಐಗುಪ್ತಕ್ಕೆ ಹೋಗಿ ವಾಸಮಾಡಬಾರದು’ ಎಂದು ತಿಳಿಸುವಂತೆ ನಮ್ಮ ದೇವರಾದ ಯೆಹೋವನು ನಿನ್ನನ್ನು ಕಳುಹಿಸಲಿಲ್ಲ.
[3] ಕಸ್ದೀಯರು ನಮ್ಮನ್ನು ಕೊಲ್ಲುವುದಕ್ಕೋ, ಬಾಬಿಲೋನಿಗೆ ಸೆರೆ ಒಯ್ಯುವುದಕ್ಕೋ ನಮ್ಮನ್ನು ಅವರ ಕೈಗೆ ಸಿಕ್ಕಿಸಬೇಕೆಂದು ನೇರೀಯನ ಮಗನಾದ ಬಾರೂಕನೇ ನಿನ್ನನ್ನು ನಮ್ಮ ಮೇಲೆ ನೂಕಿದ್ದಾನೆ” ಎಂದು ಹೇಳಿದರು.
[4] ಹೀಗೆ ಯೆಹೂದ ದೇಶದಲ್ಲಿಯೇ ವಾಸಮಾಡಿರಿ ಎನ್ನುವ ಯೆಹೋವನ ಮಾತನ್ನು ಕಾರೇಹನ ಮಗನಾದ ಯೋಹಾನಾನನೂ, ಸಮಸ್ತ ಸೇನಾಧಿಪತಿಗಳೂ ಮತ್ತು ಸಕಲಜನರೂ ಕೇಳದೆಹೋದರು.
[5] ಆಗ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ ಜನರು, ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಯೆಹೂದದಲ್ಲಿ ವಾಸಿಸುವುದಕ್ಕೆ ಹಿಂದಿರುಗಿ ಬಂದಿದ್ದ ಯೆಹೂದದ ಉಳಿದ ಜನರು, ಪ್ರವಾದಿಯಾದ ಯೆರೆಮೀಯನು,
[6] ನೇರೀಯನ ಮಗನಾದ ಬಾರೂಕನು, ರಾಜಕುಮಾರ್ತೆಯರು ಅಂತು ಗಂಡಸರು, ಹೆಂಗಸರು, ಮಕ್ಕಳು,
[7] ಇವರೆಲ್ಲರನ್ನೂ ಕಾರೇಹನ ಮಗನಾದ ಯೋಹಾನಾನನೂ, ಸಕಲ ಸೇನಾಧಿಪತಿಗಳೂ ಕರೆದುಕೊಂಡು ಐಗುಪ್ತಕ್ಕೆ ಹೋಗಿ ತಹಪನೇಸ್ ಊರಿಗೆ ಸೇರಿದರು. ಯೆಹೋವನ ಮಾತನ್ನು ಕೇಳಲೇ ಇಲ್ಲ.
[8] ಯೆರೆಮೀಯನು ತಹಪನೇಸಿನಲ್ಲಿರುವಾಗ ಯೆಹೋವನು ಈ ವಾಕ್ಯವನ್ನು ಅವನಿಗೆ ದಯಪಾಲಿಸಿದನು.
[9] ಆತನು, “ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಯೆಹೂದ್ಯರ ಕಣ್ಣೆದುರಿಗೆ ನೆಲಗಟ್ಟಿನ ಕೆಳಗೆ ಇಟ್ಟು ಗಾರೆಯಿಂದ ಮುಚ್ಚಿ ಬಿಟ್ಟು ಅವರಿಗೆ ಹೀಗೆ ಹೇಳು,
[10] ‘ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಬಾಬೆಲಿನ ಅರಸನೂ, ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಮರೆಮಾಡಿಸಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಹಾಕಿಸುವೆನು; ಅವನು ಈ ಕಲ್ಲುಗಳ ಮೇಲೆಯೇ ತನ್ನ ರತ್ನಗಂಬಳಿಯನ್ನು ಹಾಸುವನು.
[11] ಅವನು ಬಂದು ಐಗುಪ್ತ ದೇಶವನ್ನು ಹೊಡೆಯುವನು. ಮರಣಕ್ಕೆ ನೇಮಕವಾದವರು ಮರಣಕ್ಕೆ, ಸೆರೆಗೆ ನೇಮಕವಾದವರು ಸೆರೆಗೆ, ಖಡ್ಗಕ್ಕೆ ನೇಮಕವಾದವರು ಖಡ್ಗಕ್ಕೆ ಗುರಿಯಾಗುವರು.
[12] ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತ ದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು.
[13] ಐಗುಪ್ತ ದೇಶದಲ್ಲಿರುವ ಸೂರ್ಯಪುರಿಯ ಸ್ತಂಭಗಳನ್ನು ಒಡೆದುಹಾಕಿ, ಐಗುಪ್ತದ ದೇವಾಲಯಗಳನ್ನು ಬೆಂಕಿಯಿಂದ ಸುಟ್ಟುಬಿಡುವನು.’”