Skip to content
Opens in a new window
Listen to this chapter • 3:47

[1] ಯೆಹೋವನೇ, ನೀನು ಧರ್ಮಸ್ವರೂಪನಾಗಿರುವುದರಿಂದ ನಾನು ನಿನ್ನೊಡನೆ ವ್ಯಾಜ್ಯವಾಡಲಾರೆನು. ಆದರೂ ನಿನ್ನ ಸಂಗಡ ನ್ಯಾಯವನ್ನು ಚರ್ಚಿಸುವೆನು. ದುಷ್ಟರ ನಡತೆ ಏಕೆ ಸಫಲವಾಗುತ್ತದೆ?

[2] ದ್ರೋಹಿಗಳೆಲ್ಲರೂ ನೆಮ್ಮದಿಯಾಗಿರುವುದೇಕೆ? ನೀನು ಅವರನ್ನು ನೆಟ್ಟಿದ್ದಿ, ಅವರು ಬೇರೂರಿ ಬೆಳೆದು ಹಣ್ಣು ಬಿಟ್ಟಿದ್ದಾರೆ. ನೀನು ಅವರ ಬಾಯಿಗೆ ಸಮೀಪ, ಅಂತರಿಂದ್ರಿಯಕ್ಕೆ ದೂರ.

[3] ಯೆಹೋವನೇ, ನೀನು ನನ್ನನ್ನು ತಿಳಿದಿದ್ದಿ, ನನ್ನನ್ನು ನೋಡುತ್ತಾ ನಿನ್ನೊಂದಿಗೆ ಅನ್ಯೋನ್ಯವಾಗಿರುವ ನನ್ನ ಹೃದಯವನ್ನು ಪರೀಕ್ಷಿಸುತ್ತಿ. ಅವರನ್ನು ಕುರಿಗಳನ್ನೋ ಎಂಬಂತೆ ಕೊಲೆಗೆ ಎಳೆದು ವಧೆಯ ದಿನಕ್ಕೆ ಗೊತ್ತುಮಾಡು.

[4] ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲುಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಹಾಗು ಪಕ್ಷಿಗಳು ಬಡಿದುಕೊಂಡು ಹೋಗಿವೆ. “ಆಹಾ, ಅವನು ನಮ್ಮ ಅಂತ್ಯಗತಿಯನ್ನು ನೋಡುವುದೇ ಇಲ್ಲ” ಎಂದು ಹೇಳಿದ್ದಾರಷ್ಟೆ.

[5] ಇಂತೆನ್ನುವ ಯೆಹೋವನು ನನಗೆ, “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವಿ? ಅಪಾಯವಿಲ್ಲದ ದೇಶದಲ್ಲಿ ನೀನು ನಿರ್ಭಯವಾಗಿದ್ದರೂ ಯೊರ್ದನಿನ ದಟ್ಟಡವಿಯಲ್ಲಿ ಏನು ಮಾಡುವಿ?

[6] ನಿನ್ನ ಸಹೋದರರೂ, ನಿನ್ನ ತಂದೆಯ ಮನೆಯವರೂ ನಿನಗೆ ದ್ರೋಹಮಾಡಿದ್ದಾರೆ. ಇವರೇ ನಿನ್ನ ಬೆನ್ನಟ್ಟುತ್ತಾ ಕೂಗುತ್ತಾರೆ; ಒಳ್ಳೆಯ ಮಾತನಾಡಿದರೂ ಇವರನ್ನು ನಂಬಬೇಡ” ಎಂದು ಹೇಳಿದ್ದಾನೆ.

[7] ನಾನು ನನ್ನ ಮನೆಯನ್ನು ತೊರೆದು ನನ್ನ ಸ್ವತ್ತನ್ನು ನಿರಾಕರಿಸಿದ್ದೇನೆ; ನನ್ನ ಪ್ರಾಣಪ್ರಿಯಳನ್ನು ಅವಳ ಶತ್ರುಗಳ ಕೈಗೆ ಒಪ್ಪಿಸಿದ್ದೇನೆ.

[8] ನನ್ನ ಸ್ವಾಸ್ತ್ಯವಾದ ಜನವು ನನ್ನ ಪಾಲಿಗೆ ಅರಣ್ಯದಲ್ಲಿರುವ ಸಿಂಹದಂತಿದೆ; ಅದು ನನ್ನ ಮೇಲೆ ಗರ್ಜಿಸಿದೆ; ಆದಕಾರಣ ಅದನ್ನು ಹಗೆಮಾಡಿದ್ದೇನೆ.

[9] ನನ್ನ ಸ್ವಾಸ್ತ್ಯವಾದ ಜನವು ನನ್ನ ದೃಷ್ಟಿಗೆ ಬೇಟೆಯ ಹಕ್ಕಿಯಂತಿದೆ, ಹದ್ದುಗಳು ಅದರ ಸುತ್ತಲೂ ವಿರುದ್ಧವಾಗಿ ಕುಳಿತಿವೆಯೋ? ಹೋಗಿರಿ, ಅದನ್ನು ತಿಂದುಬಿಡುವುದಕ್ಕೆ ಎಲ್ಲಾ ಕಾಡುಮೃಗಗಳನ್ನು ಕರೆತನ್ನಿರಿ.

[10] ಬಹು ಮಂದಿ ಮಂದೆಗಾರರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಸ್ವತ್ತನ್ನು ತುಳಿದು ನನಗೆ ಇಷ್ಟವಾದ ಆ ಸೊತ್ತನ್ನು ಹಾಳು ಕಾಡನ್ನಾಗಿ ಮಾಡಿದ್ದಾರೆ.

[11] ಹೌದು, ಹಾಳುಮಾಡಿದ್ದಾರೆ, ಅದು ಹಾಳಾಗಿ ನನಗೆ ಗೋಳಿಡುತ್ತದೆ; ಯಾರೂ ಗಮನಿಸದೆ ಇರುವುದರಿಂದ ದೇಶವೆಲ್ಲಾ ಹಾಳುಬಿದ್ದಿದೆ.

[12] ಕೊಳ್ಳೆಗಾರರು ಅರಣ್ಯದ ಎಲ್ಲಾ ಬೋಳುಗುಡ್ಡಗಳಲ್ಲಿಯೂ ಜಡಾಡುತ್ತಿರುವುದು ಕಂಡು ಬರುತ್ತಿದೆ; ಯೆಹೋವನ ಖಡ್ಗವು ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ನುಂಗಿಬಿಡುತ್ತಿದೆ; ಯಾರಿಗೂ ನೆಮ್ಮದಿಯಿಲ್ಲ.

[13] ಗೋದಿಯನ್ನು ಬಿತ್ತಿ ಮುಳ್ಳನ್ನು ಕೊಯ್ದಿದ್ದಾರೆ; ಕ್ಷೇಮಕೆಡುವಷ್ಟು ಪ್ರಯಾಸಪಟ್ಟರೂ ಯಾವ ಲಾಭವನ್ನೂ ಹೊಂದಲಿಲ್ಲ. ಯೆಹೋವನ ರೋಷಾಗ್ನಿಯ ನಿಮಿತ್ತ ನಿಮ್ಮ ಬೆಳೆಯ ವಿಷಯವಾಗಿ ನಿಮಗೆ ನಾಚಿಕೆಯಾಗುವುದು.

[14] ಯೆಹೋವನು ತನ್ನ ಜನರಾದ ಇಸ್ರಾಯೇಲರಿಗೆ ದಯಪಾಲಿಸಿದ ಸ್ವತ್ತಿಗೆ ಕೈಹಾಕುವ ತನ್ನ ಕೆಟ್ಟ ನೆರೆಯವರ ವಿಷಯದಲ್ಲಿ, “ಆಹಾ, ಅವರನ್ನು ಅವರವರ ಸೀಮೆಗಳೊಳಗಿಂದ ಕಿತ್ತುಹಾಕಿ, ಅವರ ಮಧ್ಯದಲ್ಲಿನ ಯೆಹೂದ ವಂಶವನ್ನೂ ಕಿತ್ತುಹಾಕುವೆನು.

[15] ನೋಡಿರಿ, ನಾನು ಅವರನ್ನು ಕಿತ್ತುಹಾಕಿದ ಮೇಲೆ ತಿರುಗಿ ಅವರ ಮೇಲೆ ಕನಿಕರಪಟ್ಟು ಪ್ರತಿಯೊಬ್ಬನನ್ನೂ ಅವನವನ ಸ್ವತ್ತಿಗೂ, ಅವನವನ ದೇಶಕ್ಕೂ ಪುನಃ ಬರಮಾಡುವೆನು.

[16] ಇವರು ಮೊದಲು ಬಾಳನ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ನನ್ನ ಜನರಿಗೆ ಕಲಿಸಿಕೊಟ್ಟ ಪ್ರಕಾರ, ಈಗ ನನ್ನ ಹೆಸರನ್ನೆತ್ತಿ ‘ಯೆಹೋವನ ಜೀವದಾಣೆ’ ಎಂದು ಪ್ರಮಾಣಮಾಡುವ ನನ್ನ ಜನರ ಅಭ್ಯಾಸವನ್ನು ಮಾಡಿಕೊಂಡರೆ ನನ್ನ ಜನರ ಮಧ್ಯದಲ್ಲಿ ನೆಲೆಗೊಂಡು ವೃದ್ಧಿಯಾಗುವರು.

[17] ಆದರೆ ಯಾವ ಜನಾಂಗವು ಕೇಳುವುದಿಲ್ಲವೋ ಅದನ್ನು ನಾನು ಕಿತ್ತುಹಾಕುವೆನು, ಹೌದು, ಕಿತ್ತುಹಾಕಿ ನಾಶ ಮಾಡುವೆನು ಎಂಬುದು ಯೆಹೋವನ ನುಡಿ” ಎಂದು ಹೇಳುತ್ತಾನೆ.

ಯೆರೆಮೀಯನು — Chapters