Skip to content
Opens in a new window
Listen to this chapter • 6:56

[1] ಪ್ರವಾದಿಯಾದ ಯೆರೆಮೀಯನು ಸೆರೆಹೋಗಿದ್ದ ಹಿರಿಯರಲ್ಲಿ ಉಳಿದವರಿಗೂ, ಯಾಜಕರಿಗೂ, ಪ್ರವಾದಿಗಳಿಗೂ ಅಂತು ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಿದ್ದ ಸಕಲ ಜನರಿಗೂ ಯೆರೂಸಲೇಮಿನಿಂದ ಬರೆದು ರವಾನಿಸಿದ ಕಾಗದದ ಮಾತುಗಳು.

[2] ಇದು ಅರಸನಾದ ಯೆಕೊನ್ಯನು, ರಾಜಮಾತೆಯು, ಕಂಚುಕಿಗಳು, ಯೆಹೂದದ ಮತ್ತು ಯೆರೂಸಲೇಮಿನ ಸರದಾರರು, ಶಿಲ್ಪಿಗಳು, ಕಮ್ಮಾರರು ಇವರು ಯೆರೂಸಲೇಮಿನಿಂದ ತೊಲಗಿದ ಮೇಲೆ ನಡೆದ ಸಂಗತಿಗಳು.

[3] ಯೆಹೂದದ ಅರಸನಾದ ಚಿದ್ಕೀಯನಿಂದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ರಾಯಭಾರಿಗಳಾಗಿ ಬಾಬಿಲೋನಿಗೆ ಕಳುಹಿಸಲ್ಪಟ್ಟ ಶಾಫಾನನ ಮಗನಾದ ಎಲ್ಲಾಸ, ಹಿಲ್ಕೀಯನ ಮಗನಾದ ಗೆಮರ್ಯ ಇವರ ಕೈಯಲ್ಲಿ ಅದನ್ನು ಕಳುಹಿಸಿದನು.

[4] ಅದರಲ್ಲಿ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ,

[5] ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ.

[6] ಸಂಸಾರಿಗಳಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳನ್ನು ಕೊಡಿರಿ; ಅವರೂ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕೊರತೆ ಅನುಭವಿಸದಿರಿ.

[7] ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ, ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.

[8] ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ, ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡಬೇಡಿರಿ.

[9] ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಸಾರುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಇದು ಯೆಹೋವನ ನುಡಿ” ಎಂದು ಬರೆಯಲ್ಪಟ್ಟಿತು.

[10] ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ರಾಜ್ಯವು ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ, ಈ ಸ್ಥಳಕ್ಕೆ ತಿರುಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು.

[11] ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.

[12] ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.

[13] ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ.

[14] ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ, ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತ ದೇಶಗಳಿಂದಲೂ, ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದೆನೋ ಅಲ್ಲಿಗೆ ತಿರುಗಿ ಬರಮಾಡುವೆನು, ಇದು ಯೆಹೋವನ ನುಡಿ” ಎಂಬುದೇ.

[15] ನೀವೋ, “ಯೆಹೋವನು ನಮಗಾಗಿ ಬಾಬೆಲಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾನಲ್ಲಾ” ಅಂದುಕೊಂಡಿದ್ದೀರಿ.

[16] ಸೇನಾಧೀಶ್ವರನಾದ ಯೆಹೋವನು ದಾವೀದನ ಸಿಂಹಾಸನಾರೂಢನಾದ ಅರಸನ ವಿಷಯವಾಗಿಯೂ, ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸಹೋದರರಾದ ಈ ಪಟ್ಟಣದ ಸಕಲ ನಿವಾಸಿಗಳ ವಿಷಯವಾಗಿಯೂ ಇಂತೆನ್ನುತ್ತಾನೆ,

[17] “ಆಹಾ, ನಾನು ಅವರ ಮೇಲೆ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಬರಮಾಡಿ ಯಾರೂ ತಿನ್ನದ ಹಾಗೆ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಅವರನ್ನು ತರುವೆನು.

[18] ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ, ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆಯೂ, ನಾನು ಅವರನ್ನು ಅಟ್ಟಿಬಿಟ್ಟಿರುವ ಸಕಲ ಜನಾಂಗಗಳಲ್ಲಿ ಶಾಪ, ಪರಿಹಾಸ್ಯ, ದೂಷಣೆ, ಇವುಗಳಿಗೆ ಗುರಿಯಾಗುವಂತೆಯೂ ಮಾಡುವೆನು.

[19] ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ತಪ್ಪದೆ ಕಳುಹಿಸಿ ಎಚ್ಚರಿಸುತ್ತಾ ಬಂದರೂ ಅವರು ಕೇಳಲೊಲ್ಲದೆ ಹೋದರು ಇದು ಯೆಹೋವನ ನುಡಿ.”

[20] ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೇ, ನೀವೆಲ್ಲರೂ ಯೆಹೋವನ ವಾಕ್ಯವನ್ನು ಕೇಳಿರಿ.

[21] ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತನ್ನ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗನಾದ ಅಹಾಬ, ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಇಂತೆನ್ನುತ್ತಾನೆ, “ಇಗೋ, ನಾನು ಇವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಕೊಡುವೆನು; ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು.

[22] ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ‘ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ’ ಎಂದು ಶಪಿಸುವರು.

[23] ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡೆಸಿ, ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರಮಾಡಿ, ನಾನು ಆಜ್ಞಾಪಿಸದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದಿರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ” ಎಂಬುದೇ.

[24] ಆಮೇಲೆ ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು, ನೀನು ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕು,

[25] ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಯೆರೂಸಲೇಮಿನಲ್ಲಿರುವ ಎಲ್ಲಾ, ಜನರಿಗೂ ಯಾಜಕನಾದ ಮಾಸೇಯನ ಮಗನಾಗಿರುವ ಚೆಫನ್ಯನಿಗೂ ಮತ್ತು ಸಮಸ್ತ ಯಾಜಕರಿಗೂ ನಿನ್ನ ಹೆಸರಿಗೆ ಕಳುಹಿಸಿದ ಕಾಗದದಲ್ಲಿ,

[26] “ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿ, ಯಾರು ತನ್ನನ್ನು ತಾನೇ ಪ್ರವಾದಿಯಂತೆ ನಟಿಸುತ್ತಾನೋ ಅವನನ್ನು ಕೋಳಕ್ಕೆ ಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ತನ್ನ ಆಲಯದಲ್ಲಿ ನಿನಗೆ ವಹಿಸಿದ್ದಾನಲ್ಲಾ.

[27] ಹೀಗಿರಲು ನಿಮ್ಮ ಮಧ್ಯದಲ್ಲಿ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಖಂಡಿಸಲಿಲ್ಲ?

[28] ಇವನು, ‘ಪರದೇಶ ವಾಸವು ನಿಮಗೆ ದೀರ್ಘವಾಗುವುದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ’ ಎಂದು ಬಾಬೆಲಿನಲ್ಲಿರುವ ನಮಗೆ ಹೇಳಿ ಕಳುಹಿಸಿದ್ದಾನೆ ನೋಡು ಎಂಬುದಾಗಿ ಬರೆದ ಕಾರಣ ನಾನು ನಿನ್ನನ್ನು ದಂಡಿಸುವುದು ಖಂಡಿತ.”

[29] ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು.

[30] ಅನಂತರ ಯೆರೆಮೀಯನಿಗೆ ಯೆಹೋವನು ಈ ಮಾತುಗಳನ್ನು ತಿಳಿಸಿದನು.

[31] ನೀನು ಸೆರೆಯವರೆಲ್ಲರಿಗೆ ಹೀಗೆ ಹೇಳಿ ಕಳುಹಿಸು, “ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ನಾನು ಕಳುಹಿಸದೆ ಹೋದರೂ ಶೆಮಾಯನು ನಿಮಗೆ ಪ್ರವಾದನೆಮಾಡಿ ಸುಳ್ಳಿನಲ್ಲಿ ನಂಬಿಕೆಯನ್ನು ಹುಟ್ಟಿಸಿದ ಕಾರಣ ಇಗೋ,

[32] ನಾನು ಆ ನೆಹೆಲಾಮ್ಯನಾದ ಶೆಮಾಯನನ್ನೂ ಮತ್ತು ಅವನ ಸಂತತಿಯವರನ್ನೂ ದಂಡಿಸುವೆನು; ಅವನು ಯೆಹೋವನಾದ ನನ್ನ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಈ ಜನರ ಮಧ್ಯದಲ್ಲಿ ವಾಸಿಸಲು ಅವನಿಗೆ ಯಾವ ಸಂತಾನವೂ ಇರದು; ನಾನು ನನ್ನ ಜನರಿಗೆ ಉಂಟುಮಾಡಬೇಕೆಂದಿರುವ ಮೇಲನ್ನು ಅವನು ನೋಡದೆ ಹೋಗುವನು; ಇದು ಯೆಹೋವನ ನುಡಿ” ಎಂಬುದೇ.

ಯೆರೆಮೀಯನು — Chapters