[1] ಯೋಷೀಯನ ಮಗನಾದ ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಪಟ್ಟಕ್ಕೆ ತರಲ್ಪಟ್ಟು ಯೆಹೋಯಾಕೀಮನ ಮಗನಾದ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು.
[2] ಆಗ ಅವನಾಗಲಿ, ಅವನ ಸೇವಕರಾಗಲಿ ಅಥವಾ ದೇಶದ ಜನರಾಗಲಿ ಯೆಹೋವನು ಪ್ರವಾದಿಯಾದ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆ ಹೋದರು.
[3] ಹೀಗಿರುವಲ್ಲಿ ಅರಸನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲ, ಯಾಜಕ ಮಾಸೇಯನ ಮಗನಾದ ಚೆಫನ್ಯ ಇವರ ಮೂಲಕ, “ದಯಮಾಡಿ ನಮಗಾಗಿ ನಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸು” ಎಂದು ಪ್ರವಾದಿಯಾದ ಯೆರೆಮೀಯನಿಗೆ ಹೇಳಿಕಳುಹಿಸಿದನು.
[4] ಆ ಕಾಲದಲ್ಲಿ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ; ಜನರಲ್ಲಿ ಹೋಗುತ್ತಾ ಬರುತ್ತಾ ಇದ್ದನು.
[5] ಆಗ ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತ್ತು; ಇದನ್ನು ಕೇಳಿ ಯೆರೂಸಲೇಮನ್ನು ಮುತ್ತಿದ್ದ ಕಸ್ದೀಯರು ಬಿಟ್ಟು ಹೋಗಿದ್ದರು.
[6] ಹೀಗಿರಲು ಯೆಹೋವನು ಪ್ರವಾದಿಯಾದ ಯೆರೆಮೀಯನಿಗೆ ಈ ವಾಕ್ಯವನ್ನು ದಯಪಾಲಿಸಿದನು.
[7] “ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನನ್ನನ್ನು ವಿಚಾರಿಸುವುದಕ್ಕೆ ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದ ಯೆಹೂದದ ಅರಸನಿಗೆ ಹೀಗೆ ಹೇಳಿರಿ, ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶವಾದ ಐಗುಪ್ತಕ್ಕೆ ಹಿಂದಿರುಗುವುದು.
[8] ಕಸ್ದೀಯರು ಪುನಃ ಬಂದು ಈ ಪಟ್ಟಣದ ವಿರುದ್ಧವಾಗಿ ಹೋರಾಡಿ, ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಡುವರು’” ಎಂಬುದು.
[9] ಯೆಹೋವನು ಇಂತೆನ್ನುತ್ತಾನೆ, “ಕಸ್ದೀಯರು ನಮ್ಮಿಂದ ತೊಲಗಿ ಹೋಗುವುದು ಖಂಡಿತ ಎಂದು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ; ಅವರು ತೊಲಗುವುದೇ ಇಲ್ಲ.
[10] ನಿಮ್ಮನ್ನು ಪ್ರತಿಭಟಿಸುವ ಕಸ್ದೀಯರಲ್ಲಿ ಗಾಯಪಟ್ಟವರು ಮಾತ್ರ ಉಳಿಯುವಂತೆ ನೀವು ಆ ಸೈನ್ಯವನ್ನೆಲ್ಲಾ ಒಂದು ವೇಳೆ ಹೊಡೆದಿದ್ದರೂ ಆ ಗಾಯಪಟ್ಟವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದು ಬಂದು ಈ ಪಟ್ಟಣವನ್ನು ಬೆಂಕಿಯಿಂದ ಸುಟ್ಟು ಬಿಡುತ್ತಿದ್ದರು.”
[11] ಕಸ್ದೀಯರ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಯೆರೂಸಲೇಮನ್ನು ಬಿಟ್ಟುಹೋದರು.
[12] ಆಮೇಲೆ ಯೆರೆಮೀಯನು ಬೆನ್ಯಾಮೀನ್ ಸೀಮೆಯಲ್ಲಿ ತನಗೆ ಬರಬೇಕಾದ ಸ್ವತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಯೆರೂಸಲೇಮಿನಿಂದ ಹೊರಟನು.
[13] ಅವನು ಬೆನ್ಯಾಮೀನಿನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆಯ ವಿಚಾರಕನಾಗಿದ್ದು ಪ್ರವಾದಿಯಾದ ಯೆರೆಮೀಯನನ್ನು ಹಿಡಿದು, “ನೀನು ಕಸ್ದೀಯರಲ್ಲಿ ಮೊರೆಹೋಗಲು ಹೋಗುತ್ತಿದ್ದಿ” ಎಂದು ಹೇಳಿದನು.
[14] ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಕಸ್ದೀಯರಲ್ಲಿ ಮೊರೆಹೋಗುವವನಲ್ಲ” ಎನ್ನಲು ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಹಿಡಿದು ಪ್ರಧಾನರ ಬಳಿಗೆ ಕರೆತಂದನು.
[15] ಆ ಪ್ರಧಾನರು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕನಾದ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು.
[16] ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿನಗಳು ಇದ್ದನು.
[17] ಆಮೇಲೆ ಅರಸನಾದ ಚಿದ್ಕೀಯನು ಅವನನ್ನು ಕರೆಕಳುಹಿಸಿ, “ಯೆಹೋವನಿಂದ ದೈವೋಕ್ತಿಯು ದೊರೆಯಿತೋ?” ಎಂದು ತನ್ನ ಮನೆಯಲ್ಲಿ ರಹಸ್ಯವಾಗಿ ವಿಚಾರಿಸಲು ಯೆರೆಮೀಯನು, “ಹೌದು, ದೊರೆಯಿತು, ನೀನು ಬಾಬೆಲಿನ ಅರಸನ ಕೈಯಲ್ಲಿ ಸಿಕ್ಕಿಬೀಳುವಿ” ಅಂದನು.
[18] ಅಲ್ಲದೆ ಯೆರೆಮೀಯನು ಅರಸನಾದ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿಸಿದ್ದಕ್ಕೆ ನಾನು ನಿನಗಾಗಲಿ, ನಿನ್ನ ಸೇವಕರಿಗಾಗಲಿ ಅಥವಾ ಈ ಜನರಿಗಾಗಲಿ ಯಾವ ಅಪರಾಧವನ್ನು ಮಾಡಿದೆನು?
[19] ಬಾಬೆಲಿನ ಅರಸನು ನಿಮಗೂ ಈ ದೇಶಕ್ಕೂ ವಿರುದ್ಧವಾಗಿ ಬರುವುದಿಲ್ಲ ಎಂದು ನಿಮಗೆ ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?
[20] ಎನ್ನೊಡೆಯನೇ, ಅರಸನೇ, ಈಗ ದಯಮಾಡಿ ಲಾಲಿಸು; ಲೇಖಕನಾದ ಯೆಹೋನಾಥಾನನ ಮನೆಗೆ ನನ್ನನ್ನು ತಿರುಗಿ ಸೇರಿಸಬೇಡ, ಅಲ್ಲೇ ಸತ್ತೇನು, ನನ್ನ ಬಿನ್ನಹವು ನಿನಗೆ ಮುಟ್ಟಲಿ” ಎಂದು ಅರಿಕೆಮಾಡಿದನು.
[21] ಅರಸನಾದ ಚಿದ್ಕೀಯನು ಇದನ್ನು ಕೇಳಿ ಅಪ್ಪಣೆ ಕೊಡಲು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಟ್ಟು, ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡುತ್ತಿದ್ದರು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.