[1] ಅದೇ ವರ್ಷದಲ್ಲಿ, ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಆರಂಭದಲ್ಲಿ, ಅಂದರೆ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ, ಪ್ರವಾದಿಯಾದ ಅಜ್ಜೂರನ ಮಗನೂ ಗಿಬ್ಯೋನ್ ಊರಿನವನೂ ಆದ ಹನನ್ಯನು ಯೆಹೋವನ ಆಲಯದೊಳಗೆ ಯಾಜಕರ ಮತ್ತು ಸಕಲಜನರ ಎದುರಿನಲ್ಲಿ ನನಗೆ ಹೀಗೆ ಹೇಳಿದನು,
[2] “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ಬಾಬೆಲಿನ ಅರಸರು ನಿಮಗೆ ಹೇರಿರುವ ನೊಗವನ್ನು ಮುರಿದುಬಿಟ್ಟಿದ್ದೇನೆ.
[3] ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ತೆಗೆದು ಬಾಬಿಲೋನಿಗೆ ಒಯ್ದ ಯೆಹೋವನ ಆಲಯದ ಸಕಲ ಉಪಕರಣಗಳನ್ನು ಎರಡು ವರ್ಷಗಳೊಳಗಾಗಿ ನಾನು ಪುನಃ ಈ ಸ್ಥಳಕ್ಕೆ ಸೇರಿಸುವೆನು.
[4] “‘ಮತ್ತು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ ಬಾಬಿಲೋನಿಗೆ ಸೆರೆಹೋದ ಎಲ್ಲಾ ಯೆಹೂದ್ಯರನ್ನೂ ಈ ಸ್ಥಳಕ್ಕೆ ತಿರುಗಿ ಬರಮಾಡುವೆನು. ಬಾಬೆಲಿನ ಅರಸನು ನಿಮಗೆ ಹೇರಿರುವ ನೊಗವನ್ನು ನಾನು ಮುರಿದುಬಿಡುವೆನು. ಇದು ಯೆಹೋವನ ನುಡಿ.’”
[5] ಆಗ ಪ್ರವಾದಿಯಾದ ಯೆರೆಮೀಯನು ಯೆಹೋವನ ಆಲಯದೊಳಗೆ ನಿಂತಿದ್ದ ಯಾಜಕರ ಮತ್ತು ಸಕಲಜನರ ಎದುರಿನಲ್ಲಿ ಪ್ರವಾದಿಯಾದ ಹನನ್ಯನಿಗೆ,
[6] “ಹಾಗೆಯೇ ಆಗಲಿ, ಯೆಹೋವನು ಹಾಗೆಯೇ ಮಾಡಲಿ! ಯೆಹೋವನು ತನ್ನ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬೆಲಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಿ ನೀನು ನುಡಿದ ಮಾತುಗಳನ್ನು ನೆರವೇರಿಸಲಿ!
[7] ಆದರೆ ನಾನು ನಿನ್ನ ಮತ್ತು ಸಕಲ ಜನರ ಕಿವಿಗೆ ಬೀಳುವಂತೆ ನುಡಿಯುವ ಈ ಮಾತನ್ನು ಕೇಳು,
[8] ನನಗೂ ನಿನಗೂ ಮುಂಚೆ ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ವಿಪತ್ತು, ವ್ಯಾಧಿ, ಇವುಗಳ ವಿಷಯವಾಗಿ ಸಾರುತ್ತಿದ್ದರಷ್ಟೆ.
[9] ಹಿತ ಸಮಾಚಾರವನ್ನು ಸಾರುವ ಪ್ರವಾದಿಯೋ ಯೆಹೋವನಿಂದ ನಿಜವಾಗಿ ಕಳುಹಿಸಲ್ಪಟ್ಟವನೆಂದು ಅವನ ಮಾತು ಕೈಗೂಡಿದ ಮೇಲೇ ತಿಳಿಯತಕ್ಕದ್ದು” ಎಂದು ಹೇಳಿದನು.
[10] ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದುಹಾಕಿ ಎಲ್ಲಾ ಜನರ ಎದುರಿಗೆ,
[11] “ಯೆಹೋವನು ಹೇಳಿರುವುದೇನೆಂದರೆ, ನಾನು ಹೀಗೆಯೇ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರ್ಷದೊಳಗಾಗಿ ಸಮಸ್ತ ಜನಾಂಗಗಳ ಹೆಗಲಿನಿಂದ ತೆಗೆದು ಮುರಿದು ಹಾಕುವೆನು” ಎಂದು ಹೇಳಿದನು. ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅಲ್ಲಿಂದ ಹೊರಟುಹೋದನು.
[12] ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದ ಮೇಲೆ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು.
[13] “ನೀನು ಹೋಗಿ ಹನನ್ಯನಿಗೆ, ಯೆಹೋವನು ಹೀಗೆ ಹೇಳುತ್ತಾನೆ, ‘ನೀನು ಮರದ ನೊಗಗಳನ್ನು ಮುರಿದುಬಿಟ್ಟೆ, ಅವುಗಳಿಗೆ ಬದಲಾಗಿ
[14] ಕಬ್ಬಿಣದ ನೊಗಗಳನ್ನು ಮಾಡು, ಏಕೆಂದರೆ ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ಈ ಎಲ್ಲಾ ಜನಾಂಗಗಳು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ಸೇವಿಸಲೆಂದು ನಾನು ಅವುಗಳ ಹೆಗಲಿಗೆ ಕಬ್ಬಿಣದ ನೊಗವನ್ನು ಹೇರಿದ್ದೇನೆ, ಅವು ಅವನನ್ನು ಪೂಜಿಸುವವು; ಇದಲ್ಲದೆ ಭೂಜಂತುಗಳನ್ನೂ ಅವನಿಗೆ ಕೊಟ್ಟಿದ್ದೇನೆ’ ಎಂದು ಹೇಳು” ಎಂಬುದೇ.
[15] ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ, “ಹನನ್ಯನೇ, ಕೇಳು, ಯೆಹೋವನು ನಿನ್ನನ್ನು ಕಳುಹಿಸಲಿಲ್ಲ; ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತೀ.
[16] ಆದಕಾರಣ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ನಿನ್ನನ್ನು ಭೂಮಿಯ ಮೇಲಿಂದ ತೊಲಗಿಸುವೆನು; ನೀನು ಯೆಹೋವನಾದ ನನ್ನ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಇದೇ ವರ್ಷ ಸಾಯುವಿ” ಎಂದು ಹೇಳಿದನು.
[17] ಅದರಂತೆ ಪ್ರವಾದಿಯಾದ ಹನನ್ಯನು ಅದೇ ವರ್ಷ ಏಳನೆಯ ತಿಂಗಳಲ್ಲಿ ಸತ್ತನು.