Skip to content
Opens in a new window
Listen to this chapter • 4:35

[1] ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.

[2] ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ, ಆಕಾಶದ ಎಲ್ಲಾ ಪಕ್ಷಿಗಳೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ, ಸಮುದ್ರದ ಮೀನುಗಳೂ ನಿಮಗೆ ಹೆದರುವವು. ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ.

[3] ಭೂಮಿಯ ಮೇಲೆ ಚಲಿಸುವ ಎಲ್ಲಾ ಕ್ರಿಮಿಕೀಟಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಹಸಿರುಪಲ್ಯಗಳನ್ನು ನಿಮಗೆ ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ.

[4] ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ.

[5] ಇದಲ್ಲದೆ ನಿಮ್ಮ ರಕ್ತ ಸುರಿಸಿ ಜೀವ ತೆಗೆಯುವವನಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ, ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. ನರಹತ್ಯವು ಸಹೋದರ ಹತ್ಯವಲ್ಲವೇ?

[6] ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.

[7] ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ” ಎಂದು ಹೇಳಿದನು.

[8] ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ,

[9] “ಕೇಳಿರಿ ನಾನು ನಿಮ್ಮೊಂದಿಗೂ, ನಿಮ್ಮ ತರುವಾಯ ನಿಮ್ಮ ಸಂತತಿಯವರೊಂದಿಗೂ, ಒಡಂಬಡಿಕೆ ಮಾಡಿಕೊಳ್ಳುವೆನು.

[10] ನಿಮ್ಮೊಂದಿಗೆ ನಾವೆಯಿಂದ ಹೊರಟು ಬಂದ ಪಶು ಪಕ್ಷಿ, ಮೃಗ, ಸಕಲ ಭೂಜಂತುಗಳೊಂದಿಗೂ ನನ್ನ ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ.

[11] ಆ ಒಡಂಬಡಿಕೆ ಯಾವುದೆಂದರೆ, ಇನ್ನು ಮೇಲೆ ಯಾವ ಪ್ರಾಣಿಗಳೂ ಜಲಪ್ರಳಯದಿಂದ ನಾಶವಾಗುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಜಲಪ್ರಳಯವು ಬರುವುದೇ ಇಲ್ಲ” ಎಂದು ಹೇಳಿದನು.

[12] ದೇವರು ಪುನಃ ಹೇಳಿದ್ದೇನಂದರೆ, “ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಲ್ಲಿಯೂ ಮಾಡುವ ಈ ಒಡಂಬಡಿಕೆಗೆ ಮೇಘಗಳಲ್ಲಿ ನಾನು ಇಟ್ಟಿರುವ ಈ ಕಾಮನಬಿಲ್ಲೇ ಗುರುತಾಗಿರುವುದು.

[13] ನನಗೂ ಭೂಜೀವಿಗಳಿಗೂ ಮಾಡಿಕೊಂಡ ಒಡಂಬಡಿಕೆಗೆ ಇದೇ ಗುರುತಾಗಿರಲಿ.

[14] ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಕಾಮನಬಿಲ್ಲು ಮೇಘಗಳಲ್ಲಿ ಕಂಡುಬರುವುದು.

[15] ಆಗ ನಾನು ನಿಮ್ಮನ್ನೂ, ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಜೀವಿಗಳನ್ನು ಹಾಳುಮಾಡುವ ಪ್ರಳಯವಾಗುವುದಿಲ್ಲ.

[16] ಆ ಕಾಮನಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು” ಅಂದನು.

[17] ಮತ್ತು ದೇವರು ನೋಹನಿಗೆ, “ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು” ಎಂದು ಹೇಳಿದನು.

[18] ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಯಾರೆಂದರೆ ಶೇಮ್, ಹಾಮ್, ಯೆಫೆತ್. ಹಾಮನು ಕಾನಾನನ ತಂದೆಯು.

[19] ಈ ಮೂವರು ನೋಹನ ಮಕ್ಕಳು. ಇವರಿಂದಲೇ ಜನರು ಉತ್ಪತ್ತಿಯಾಗಿ ಭೂಮಿಯಲ್ಲೆಲ್ಲಾ ಹರಡಿಕೊಂಡರು.

[20] ನೋಹನು ವ್ಯವಸಾಯಗಾರನಾಗಿದ್ದನು; ದ್ರಾಕ್ಷಿ ತೋಟ ಮಾಡುವುದನ್ನು ಮೊದಲು ಪ್ರಾರಂಭಿಸಿದವನು ಇವನೇ.

[21] ಒಂದು ದಿನ ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು.

[22] ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು, ಹೊರಗಿದ್ದ ತನ್ನ ಸಹೋದರರಾದ ಶೇಮ್ ಮತ್ತು ಯೆಫೆತರಿಗೆ ತಿಳಿಸಿದನು.

[23] ಆಗ ಶೇಮ್ ಮತ್ತು ಯೆಫೆತರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂಭಾಗವಾಗಿ ನಡೆದು ತಂದೆಗೆ ಹೊದಿಸಿ ಅವನ ಬೆತ್ತಲೆತನವನ್ನು ಮುಚ್ಚಿದರು. ಅವರು ಹಿಮ್ಮುಖರಾಗಿದ್ದುದ್ದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ.

[24] ನೋಹನು ದ್ರಾಕ್ಷಾರಸದ ಅಮಲಿನಿಂದ ಎಚ್ಚೆತ್ತು ಕಿರಿಯ ಮಗನು ಮಾಡಿದ್ದನ್ನು ತಿಳಿದು,

[25] “ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ” ಎಂದನು.

[26] ಅವನು ಇನ್ನೂ ನುಡಿದದ್ದೇನೆಂದರೆ, “ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಕಾನಾನನು ಅವರಿಗೆ ದಾಸನಾಗಿರಲಿ.

[27] ಯೆಫೆತನ ಮೇರೆಯನ್ನು ದೇವರು ವಿಸ್ತರಿಸಲಿ, ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ, ಕಾನಾನನು ಅವರಿಗೆ ದಾಸನಾಗಿರಲಿ” ಎಂದನು.

[28] ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರ್ಷ ಬದುಕಿದನು.

[29] ನೋಹನು ಒಂಭೈನೂರ ಐವತ್ತು ವರ್ಷ ಬದುಕಿ ಸತ್ತನು.

ಆದಿಕಾಂಡ — Chapters